More

    ಕೊನೆಗೌಡರಿಗೆ ಜೀವ ವಿಮೆ ಸೌಲಭ್ಯ

    ಶಿರಸಿ: ಜನರ ಸೇವೆ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯದ ಕೆಲಸ. ಅದರಲ್ಲೂ ಸಮಾಜದ ಕಟ್ಟಕಡೆಯ ರೈತರಿಗೆ ಬೆನ್ನೆಲುಬಾಗಿ, ಜೀವ ಲೆಕ್ಕಿಸದೇ ಅಡಕೆ ಕೊನೆ ಕೊಯ್ಲು ಮಾಡುವ ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.


    ಶಿರಸಿ ತಾಲೂಕಿನ ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೊನೆಗೌಡರಿಗೆ 10 ಲಕ್ಷ ರೂ. ಜೀವ ವಿಮೆ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ರೈತರು ನಮ್ಮ ದೇಶದ ಬೆನ್ನೆಲುಬು, ವಾಣಿಜ್ಯ ಬೆಳೆಯಾದ ಅಡಕೆಯ ಕೊನೆ ಕೊಯ್ಲು ಮಾಡಿ, ಅವರಿಗೆ ನೆರವಾಗುವ ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ಸಿಕ್ಕಿದ್ದು ನನ್ನ ಭಾಗ್ಯ. ಸಮಾಜದಲ್ಲಿ ಎಲ್ಲರೂ ಸುಖವಾಗಿರಲಿ ಎಂದು ನಾವೇ ವಿಮೆಯ ಕಂತನ್ನು ಪಾವತಿಸಿ, ಪಾಲಿಸಿ ಪ್ರಾರಂಭ ಮಾಡಿದ್ದೇವೆ. ನನ್ನ ಆದಾಯದ ಒಂದು ಭಾಗ ಹಣವನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇನೆ. ಸಮಾಜದಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಬೇಕು. ಅನಾಹುತವಾದರೆ ಯಾವುದೇ ಕಾರಣಕ್ಕೂ ಕೊನೆ ಗೌಡರ ಕುಟುಂಬ ಬೀದಿಗೆ ಬರಬಾರದು, ಎಂಬ ಉದ್ದೇಶದಿಂದ ವಿಮೆ ಮಾಡಿಸಿದ್ದೇವೆ. ಮುಂದೆ ಎಲ್ಲ ಕೊನೆಗೌಡರಿಗೂ ಜೀವ ವಿಮೆ ಮಾಡಿಸುವ ಉದ್ದೇಶ ನನ್ನದು ಎಂದರು.


    ಮುಂಡಗನಮನೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಮಾತನಾಡಿ, ಇದೊಂದು ಮಹತ್ವದ ಕಾರ್ಯ, ಇಂತಹ ಮಹತ್ವದ ಕಾರ್ಯ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.


    ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಸಂಘದ ಸಲಹೆಗಾರ ವಿ.ಆರ್. ಹೆಗಡೆ, ಕಾರ್ಯದರ್ಶಿ ಕೇಶವ ಹೆಗಡೆ, ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ಸೇರಿ ನೂರಾರು ಕೊನೆಗೌಡರು ಉಪಸ್ಥಿತರಿದ್ದರು.


    ಸಾಲ್ಕಣಿ ಹಾಗೂ ಉಂಚಳ್ಳಿ ಸೇವಾ ಸಹಕಾರಿ ಸಂಘಗಳಲ್ಲೂ ಕೊನೆಗೌಡರಿಗೆ 10 ಲಕ್ಷ ರೂ. ಜೀವವಿಮೆ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts