More

    ಎಲ್‌ಐಸಿ ನೌಕರರಿಂದ ಮುಷ್ಕರ ; ಖಾಸಗೀಕರಣ ಮಾಡುವ ನಿರ್ಧಾರದ ವಿರುದ್ಧ ಆಕ್ರೋಶ

    ತುಮಕೂರು: ಭಾರತೀಯ ಜೀವ ವಿಮಾ ನಿಗಮ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಎಲ್‌ಐಸಿ ನೌಕರರು ನಗರದಲ್ಲಿ ಮುಷ್ಕರ ನಡೆಸಿದರು.

    ನಗರದ ಗಾಂಧಿನಗರದಲ್ಲಿ ಎಲ್‌ಐಸಿ ಕಚೇರಿ, ಬಿ.ಎಚ್.ರಸ್ತೆಯ ಎಲ್‌ಐಸಿ ಕಚೇರಿಗಳನ್ನು ಬಂದ್ ಮಾಡಿ ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಎಲ್‌ಐಸಿ ಅಧಿಕಾರಿ ಮತ್ತು ನೌಕರರು ಪ್ರತಿಭಟನೆ ನಡೆಸಿ ಖಾಸಗೀಕರಣ ನಿರ್ಧಾರ ಕೈ ಬಿಡುವಂತೆ ಆಗ್ರಹಿಸಿದರು.

    ಎಲ್‌ಐಸಿ ನೌಕರರ ಸಂಘಟನೆ ಕಾರ್ಯದರ್ಶಿ ಸದಾಶಿವಯ್ಯ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮ ಲಾಭದಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಷೇರುಗಳನ್ನು ಮಾರಾಟ ಮಾಡಲು ಹೊರಟಿರುವುದು ದುರಾದೃಷ್ಟಕರ, ಇದರಿಂದ ಪಾಲಿಸಿದಾರರು ಮತ್ತು ನೌಕರರಿಗೆ ತೀವ್ರ ತೊಂದರೆಯಾಗಲಿದೆ ಎಂದರು.

    ಎಲ್‌ಐಸಿ ಲಾಭದಲ್ಲಿದ್ದರೂ ಖಾಸಗೀಕರಣ ಮಾಡುವ ಪ್ರಸ್ತಾಪವನ್ನು ಎತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ, ಅನೇಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಲ್‌ಐಸಿ ಹಣ ಬಳಸಿಕೊಂಡಿದೆ. ಎಲ್‌ಐಸಿ ಅಂದರೆ ಸಾರ್ವಜನಿಕ ಸಂಸ್ಥೆ, ಈ ಸಂಸ್ಥೆಯ ಹಣ ಸಾರ್ವಜನಿಕರದ್ದು ಆದರೂ, ಕೇಂದ್ರ ಸರ್ಕಾರ ತನ್ನ ಯೋಜನೆಗಳಿಗೆ ಇದರ ಹಣವನ್ನು ಉಪಯೋಗಿಸಿಕೊಳ್ಳುತ್ತದೆ ಎಂದರು.

    1951ರಲ್ಲಿ ಸಂಘಟನೆ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಕಾರ್ಮಿಕರು, ಪಾಲಿಸಿದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಾ ಬಂದಿದೆ. ಈ ಹಿಂದೆಯೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಖಾಸಗೀಕರಣ ವಿಚಾರ ಬಂದಾಗ ಹೋರಾಟ ಮಾಡಿ ತಡೆ ಹಾಕಿದ್ದೆವು. ಆದರೆ ಈಗ ಈ ವಿಚಾರ ಬಂದಿರುವುದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.

    ಸಿಐಟಿಯು ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ, ದೇಶದ ನವರತ್ನ ಸಂಸ್ಥೆಗಳಲ್ಲಿ ಎಲ್‌ಐಸಿಯೂ ಒಂದು. ಹಳ್ಳಿಹಳ್ಳಿಗೂ ಎಲ್‌ಐಸಿ ಗೊತ್ತಿದೆ. ಎಲ್‌ಐಸಿ ಪಾಲಿಸಿದಾರರ ಉಳಿವಿಗಾಗಿ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಎಲ್‌ಐಸಿ ನೌಕರರಾದ ನಂಜುಂಡಸ್ವಾಮಿ, ಸ್ನೇಹಲತಾ, ನಾಗಲಕ್ಷ್ಮಿ, ಗಿರೀಶ್, ಮಧು ಇದ್ದರು.

    ನಿರ್ಧಾರ ಹಿಂಪಡೆಯಲಿ: ವಿಮಾ ವಲಯದ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ವಿಮಾ ನೌಕರರು, ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಎಲ್‌ಐಸಿ ಅತ್ಯುತ್ತಮವಾದ ಕಾರ್ಯಾಚರಣೆ ಹೊಂದಿದ್ದು, ಶೇ.99 ಕ್ಲೈಂ ಅರ್ಜಿಗಳನ್ನು ಇತ್ಯರ್ಥಪಡಿಸುತ್ತಿದ್ದು, ಇದು ನಂಬಿಕೆಗೆ ಅರ್ಹವಾದ ಕಂಪೆನಿ. ಆದ್ದರಿಂದ ಖಾಸಗೀಕರಣ ವಿಚಾರವನ್ನು ಕೇಂದ್ರ ಸರ್ಕಾರ ಕೈ ಬಿಡಲೇಬೇಕು ಎಂದು ಸಿಐಟಿಯು ಸೈಯದ್ ಮುಜೀಬ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts