More

    ಖಾತೆಗೆ ಬಂದ ಹಣ ಹಿಂತಿರುಗಿಸಲು ಪತ್ರ

    ಹಾನಗಲ್ಲ: ಬೆಳೆಹಾನಿ ಪರಿಹಾರದ ಕುರಿತು ರೈತರು ದೂರು ದಾಖಲಿಸಲು ಮುಂದಾಗುತ್ತಿದ್ದಂತೆ ತಮ್ಮ ಖಾತೆಗೆ ಬಂದಿರುವ ಹಣವನ್ನು ಕಂದಾಯ ಇಲಾಖೆಗೆ ಮರಳಿಸುವುದಾಗಿ ತಾಲೂಕಿನ ಶಿರಗೋಡ ಗ್ರಾಮದ ಕೆಲವರು ತಹಸೀಲ್ದಾರರಿಗೆ ಮನವಿ ಮಾಡಿದ್ದು, ‘ನೆರವಿಗೆ ಕನ್ನ’ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

    ಖಾತೆಗೆ ಬಂದ ಹಣ ಹಿಂತಿರುಗಿಸಲು ಪತ್ರದಿನೇದಿನೆ ಹೊಸ ಹೊಸ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಇದರಲ್ಲಿ ಭಾಗಿಯಾದವರ ಮೇಲೆ ತನಿಖೆ ನಡೆಸಲು ನಿರ್ಧರಿಸಿದೆ. ಸಿಎಂ ಕೂಡ ತನಿಖೆಗೆ ಆದೇಶಿಸಿದ್ದಾರೆ. ಆದರೀಗ ಕೆಲವರು ತಮ್ಮ ಖಾತೆಗೆ ಯಾರದ್ದೋ ಪರಿಹಾರದ ಹಣ ಜಮೆ ಆಗಿದ್ದು, ಅದನ್ನು ಫಲಾನುಭವಿಗೆ ಮರಳಿಸಲು ಸಿದ್ಧರಿದ್ದೇವೆ ಎಂದು ಲಿಖಿತ ಮನವಿ ಸಲ್ಲಿಸಿದ್ದಾರೆ.

    ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ಕೆಂಪವ್ವ ಶಿವನಗೌಡ ಪುರುಷನಗೌಡ್ರ, ಉಮಾ ಪುರುಷನಗೌಡ್ರ, ಲಿಂಗನಗೌಡ ಶಿವನಗೌಡ ಪುರುಷನಗೌಡ್ರ, ದೀಪಾ ಬಸವರಾಜ ಚಿಂದಿ, ಭಾವನಾ ಬಸವರಾಜ ಚಿಂದಿ ಐವರು ಹಣ ಮರಳಿಸುವುದಾಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾರ ಹಣವನ್ನೂ ತಾಲೂಕು ಆಡಳಿತ ಮರಳಿ ಪಡೆಯುವ ಭರವಸೆ ನೀಡಿಲ್ಲ. ಇದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಹಣ ಹಾಕಿರುವ ಸಂಸ್ಥೆಯ ತಪ್ಪೊ? ಅಥವಾ ಬೇಕೆಂದೇ ಸಿಬ್ಬಂದಿ ಇತರರ ಖಾತೆ ಸಂಖ್ಯೆ ಅಪ್​ಲೋಡ್ ಮಾಡಿದ್ದಾರೋ ಎಂಬುದು ಸ್ಪಷ್ಟವಾಗಬೇಕಿದೆ. ಅಲ್ಲಿಯವರೆಗೆ ತಹಸೀಲ್ದಾರರು ಈ ಹಣವನ್ನು ಮರಳಿ ಪಡೆಯಬಹುದೇ? ಒಂದು ವೇಳೆ ಪಡೆದರೆ ಅದನ್ನು ಯಾವ ಖಾತೆಯಲ್ಲಿರಿಸಬೇಕು? ನಿಜವಾದ ತಪ್ಪಿತಸ್ಥರು ಯಾರು? ಗ್ರಾಮಲೆಕ್ಕಾಧಿಕಾರಿಯ ಯೂಸರ್ ನೇಮ್ ಪಾಸ್​ವರ್ಡ್ ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಫಲಾನುಭವಿಗಳ ಪಟ್ಟಿಯನ್ನು ಇಲಾಖೆ ಪೂರೈಸಿದ್ದರೂ ಅದನ್ನು ಗ್ರಾಮಲೆಕ್ಕಾಧಿಕಾರಿಗಳು ಗ್ರಾಪಂ ಕಚೇರಿಯಲ್ಲಿ ಪ್ರಕಟಿಸದಿರುವುದು ಅವ್ಯವಹಾರಕ್ಕೆ ಪೂರಕವಾಗಿದೆಯೇ ಎಂಬ ಶಂಕೆ ಮೂಡಿದೆ.

    ಹಾನಗಲ್ಲ ಪ್ರಕರಣಗಳೇ ಬೇರೆ: ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ಪ್ರಕರಣಗಳಲ್ಲಿ ಪರಿಹಾರದ ಹಣ ಸಿಬ್ಬಂದಿ ಕಣ್ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹೋದವುಗಳೇ ಹೆಚ್ಚು. ಆಸ್ತಿಗಳು ಪೋಡಿಯಾಗದ್ದರಿಂದ ಗ್ರಾಮಲೆಕ್ಕಾಧಿಕಾರಿಗಳು ಅವರ ಸಂಬಂಧಿಕರ ಖಾತೆಗೆ ಹಾಕಿಸಿ ನಂತರ ಹಣ ಕೊಡಿಸಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಆದರೆ, ಹಾನಗಲ್ಲದಲ್ಲಿ ಪರಿಹಾರ ಹಣ ಕೆಲವು ನಿರ್ದಿಷ್ಟ ಕುಟುಂಬದವರ ಬ್ಯಾಂಕ್ ಖಾತೆಗಳಿಗೇ ಹೋಗಿರುವುದು ಹಲವು ಸಂಶಯ ಹುಟ್ಟುಹಾಕಿದೆ. ಇದರಿಂದ ಪಾರಾಗಲು ಕೆಲವರು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಿರುವ ಫಲಾನುಭವಿಗೆ ಹಣ ಮರಳಿಸಿ ರಾಜಿ ಸೂತ್ರ ನಡೆಸುತ್ತಿರುವ ಘಟನೆಗಳೂ ಗುಟ್ಟಾಗಿ ಉಳಿದಿಲ್ಲ.

    ಹಣ ಮರಳಿಸುವುದರೊಂದಿಗೆ ಒಂದಷ್ಟು ದಂಡವನ್ನೂ ಸೇರಿಸಿ ಕೊಟ್ಟಿದ್ದುಂಟು. ಹೀಗೆ ಪ್ರಕರಣಗಳನ್ನು ಹೊರಗಿಂದಲೇ ಮುಚ್ಚಿ ಹಾಕುವ ಪ್ರಕ್ರಿಯೆಗಳೂ ಚಾಲ್ತಿಯಲ್ಲಿ ಇವೆ. ಇದಕ್ಕೆಲ್ಲ ಅಧಿಕಾರಿಗಳು ಸಮ್ಮತಿಸಬಾರದು ಎಂಬ ಮಾತು ಕೇಳಿಬರುತ್ತಿದೆ.

    ಕೈಗೆ ಸಂತ್ರಸ್ತರ ಮನವಿ

    ನೆರೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸಮಸ್ಯೆಯನ್ನು ವಿಧಾನಸಭೆಯಲ್ಲಿ ಗಮನ ಸೆಳೆದು ನ್ಯಾಯಕೊಡಿಸಿ ಎಂದು ನೆರೆ ಪೀಡಿತ ಪ್ರದೇಶದ ಸಂತ್ರಸ್ತರು ಪ್ರತಿಪಕ್ಷ ಕಾಂಗ್ರೆಸ್​ಗೆ ಮನವಿ ಮಾಡಿದ್ದಾರೆ.

    ಗಿರೀಶ ದೇಶಪಾಂಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts