More

    ನೆರೆ ಪರಿಹಾರದಲ್ಲಿ ತಾರತಮ್ಯ ಆರೋಪ

    ಕಾರವಾರ: ಅಂಕೋಲಾ ಭಾಗದಲ್ಲಿ ಕಳೆದ ಬಾರಿ ನೆರೆಯಿಂದ ಹಾನಿಗೊಳಗಾದವರನ್ನು ಈ ಬಾರಿಯ ಪರಿಹಾರದ ವ್ಯಾಪ್ತಿಯಲ್ಲಿ ಕೈಬಿಟ್ಟ ಆರೋಪ ಕೇಳಿಬಂದಿದೆ.

    ಕಳೆದ ಆಗಸ್ಟ್ 4 ರಿಂದ 7ರವರೆಗೆ ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಹಾಗೂ ಗುಂಡಬಾಳ ನದಿ ಪಾತ್ರಗಳಲ್ಲಿ ಪ್ರವಾಹ ಬಂದಿತ್ತು. ಒಟ್ಟು 37 ಗ್ರಾಮಗಳ ನೂರಾರು ಮನೆಗಳು ಮುಳುಗಿದ್ದವು. 33 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಅಲ್ಲಿ 1850 ಜನ ವಾಸ್ತವ್ಯ ಪಡೆದಿದ್ದರು.

    ಎರಡು ದಿನಕ್ಕೂ ಅಧಿಕ ನೀರು ನಿಂತಿದ್ದರಿಂದ ಮನೆಯಲ್ಲಿನ ಅಕ್ಕಿ, ಪಾತ್ರೆ, ಬಟ್ಟೆಗಳಿಗೆ ಹಾನಿಯಾಗಿತ್ತು.

    ತಾಲೂಕು ಆಡಳಿತವು ನೆರೆ ಇಳಿದ ತಕ್ಷಣ ಸಮೀಕ್ಷೆ ನಡೆಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್​ಡಿಆರ್​ಎಫ್) ನಿಯಮಾವಳಿಯಂತೆ ನೆರೆ ಪೀಡಿತರಿಗೆ ತುರ್ತು ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ನೀಡಿದೆ. ಅಂಕೋಲಾದ 480, ಹೊನ್ನಾವರದ 833 ಕುಮಟಾದ 90 ಹಾಗೂ ಕಾರವಾರದ 1 ಕುಟುಂಬಕ್ಕೆ ತುರ್ತು ಪರಿಹಾರ ನೀಡಲಾಗಿದೆ.

    ಆದರೆ, ಕಳೆದ ವರ್ಷ ನೆರೆ ಬಂದು ಮನೆ ಕಳೆದುಕೊಂಡು, ಅಲ್ಪಸ್ವಲ್ಪ ಪರಿಹಾರ ಪಡೆದ ಹಲವರನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ?: ನೆರೆ ಇಳಿದ ಮರುದಿನ ಕೆಲವರಿಗೆ ಪರಿಹಾರ ನೀಡಿದ್ದನ್ನು ನೋಡಿ, ಮನೆಗೆ ನೀರು ನುಗ್ಗಿದ ಇನ್ನೂ ಹಲವರು ತಹಸೀಲ್ದಾರ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ಪರಿಹಾರದ ವೆಬ್​ಸೈಟ್​ನಲ್ಲಿ ಅದಕ್ಕೆ ಅವಕಾಶವಿಲ್ಲ. ಕಂಪ್ಯೂಟರ್ ಸ್ವೀಕರಿಸುತ್ತಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಸಂತ್ರಸ್ತರನ್ನು ಸಾಗಹಾಕುತ್ತಿದ್ದಾರೆ ಎನ್ನಲಾಗಿದೆ.

    ಕಳೆದ ಬಾರಿ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಅದಕ್ಕೆ ಪರಿಹಾರ ಸಿಕ್ಕಿದ್ದು ನಿಜ. ಮನೆಯೂ ಹಾಳಾಗಿತ್ತು. ಬೇರೆಡೆ ಮನೆ ಕಟ್ಟಿಕೊಳ್ಳಲು ಸರ್ಕಾರ ಅರ್ಧ ಸಹಾಯಧನ ನೀಡಿದೆ. ಇನ್ನೂ ಪರಿಹಾರ ನೀಡಿಕೆ ಬಾಕಿ ಇದೆ. ಮನೆ ನಿರ್ವಣವೂ ಆಗಿಲ್ಲ. ಆದರೆ, ಅಷ್ಟರೊಳಗೆ ಮತ್ತೆ ನೆರೆ ಒಕ್ಕರಿಸಿಕೊಂಡು ನೀರು ತುಂಬಿ ಹಾನಿಯಾಗಿದೆ. ನಾವು ಮನೆ ನಿರ್ವಣಕ್ಕೆ ಪರಿಹಾರ ಕೇಳುತ್ತಿಲ್ಲ. ನೀರು ನಿಂತು ಬಟ್ಟೆ, ಅಕ್ಕಿ, ಮುಂತಾದ ವಸ್ತುಗಳು ಬಳಿದು ಹೋಗಿವೆ. ಅದಕ್ಕೆ ಪರಿಹಾರ ನೀಡಿಕೆಯಲ್ಲಿ ತಾಲೂಕು ಆಡಳಿತ ತಾರತಮ್ಯ ಮಾಡಿದೆ ಎಂಬುದು ಸಂತ್ರಸ್ತರ ಗೋಳು.

    ನೆರೆಯಿಂದ ಹಾನಿಗೊಳಗಾದವರಿಗೆ ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಪರಿಹಾರವನ್ನು ಈಗಾಗಲೇ ವಿತರಿಸಲಾಗಿದೆ. ಕಳೆದ ಬಾರಿ ನೆರೆ ಪರಿಹಾರ ಪಡೆದವರಿಗೂ ಈ ಬಾರಿ ವಿತರಿಸಲಾಗಿದೆ. ಸಮೀಕ್ಷೆಯಲ್ಲಿ ಹಾಗೊಮ್ಮೆ ಕೆಲವು ಮನೆ ಬಿಟ್ಟು ಹೋಗಿದ್ದರೆ ಪರಿಶೀಲಿಸಬಹುದು.

    | ಕೃಷ್ಣಮೂರ್ತಿ ಎಚ್.ಕೆ.

    ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಅಂಕೋಲಾದಲ್ಲಿ ನೆರೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಆಗಿದೆ ಎಂಬ ದೂರು ಕೇಳಿಬಂದಿದೆ. ಈ ಕುರಿತು ತಹಸೀಲ್ದಾರರಿಗೆ ಮರು ಸಮೀಕ್ಷೆ ನಡೆಸಿ ಎಲ್ಲ ಅರ್ಹರಿಗೆ ಪರಿಹಾರ ನೀಡಲು ಸೂಚಿಸಿದ್ದೇವೆ.

    | ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts