More

    ಶೇ. 25ಕ್ಕೂ ಅಧಿಕ ಹಣ ಅನರ್ಹರ ಪಾಲು

    ಹಾವೇರಿ: ನೆರವು ಕನ್ನ ಬಗೆದಷ್ಟು ಆಳವಾಗುತ್ತಿದ್ದು, ಜಿಲ್ಲೆಗೆ ಬಿಡುಗಡೆಗೊಂಡಿದ್ದ 202 ಕೋಟಿ ಬೆಳೆ ಹಾನಿ ಪರಿಹಾರದಲ್ಲಿ 55 ಕೋಟಿಗೂ ಅಧಿಕ ಹಣ ಅನರ್ಹರ ಪಾಲಾಗಿರುವುದು ಬೆಳಕಿಗೆ ಬಂದಿದೆ.

    ಆರ್​ಟಿಸಿಯಲ್ಲಿರುವ ಫಲಾನುಭವಿಯನ್ನು ಬಿಟ್ಟು ಬೇರೆಯವರಿಗೆ ಹಣ ಹಾಕಿರುವ 23,468 ಪ್ರಕರಣಗಳಲ್ಲಿ 36.49 ಕೋಟಿ ರೂ.ಗಳು ಅನರ್ಹರ ಪಾಲಾಗಿರುವುದು ಕಂಡುಬಂದಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿಯ ಪ್ರಕಾರ ಒಬ್ಬ ಫಲಾನುಭವಿ ಎಷ್ಟೇ ಜಮೀನಿದ್ದರೂ 4.38 ಎಕರೆಗೆ ಮಾತ್ರ ಪರಿಹಾರ ಕೊಡಬೇಕೆಂದಿದೆ. ಇದನ್ನು ಮೀರಿ ಜಿಲ್ಲೆಯಲ್ಲಿ 6,501 ಫಲಾನುಭವಿಗಳಿಗೆ 18.48 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ.

    ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಹೆಚ್ಚು ಅಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರ ಶಿಗ್ಗಾಂವಿ-ಸವಣೂರ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಕ್ರಮ ನಡೆದಿದೆ. ಶಿಗ್ಗಾಂವಿ ತಾಲೂಕಿನಲ್ಲಿ ಆರ್​ಟಿಸಿ ಫಲಾನುಭವಿಯ ಬದಲು ಬೇರೆಯವರಿಗೆ ಹಣ ಹಾಕಿರುವ 4,411 ಪ್ರಕರಣಗಳಲ್ಲಿ 7.96 ಕೋಟಿ, 4.38 ಎಕರೆಗಿಂತ ಹೆಚ್ಚಿನ ಜಮೀನಿಗೆ ಪರಿಹಾರ ಕೊಟ್ಟ 1,872 ಪ್ರಕರಣಗಳಲ್ಲಿ 5.11 ಕೋಟಿ, ಕ್ರಮವಾಗಿ ಸವಣೂರ ತಾಲೂಕಿನಲ್ಲಿ 3,409ಪ್ರಕರಣಗಳಲ್ಲಿ 5.50 ಕೋಟಿ, 1,724 ಪ್ರಕರಣಗಳಲ್ಲಿ 4.59 ಕೋಟಿ ರೂ.ಗಳು ಅನರ್ಹರ ಪಾಲಾಗಿದೆ. ಒಟ್ಟಾರೆ ಶಿಗ್ಗಾಂವಿ ಹಾಗೂ ಸವಣೂರ ತಾಲೂಕುಗಳಲ್ಲಿ 23.16 ಕೋಟಿ ರೂ.ಗಳಷ್ಟು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಹಾವೇರಿ ತಾಲೂಕಿನಲ್ಲಿ 11.89 ಕೋಟಿ, ಹಾನಗಲ್ಲ 9.26, ರಾಣೆಬೆನ್ನೂರ 7.33 ಕೋಟಿ, ಬ್ಯಾಡಗಿ 1.61 ಕೋಟಿ, ರಟ್ಟಿಹಳ್ಳಿ 93.96 ಲಕ್ಷ, ಹಿರೇಕೆರೂರ ತಾಲೂಕಿನಲ್ಲಿ 72.61 ಲಕ್ಷ ರೂ.ಗಳ ಅಕ್ರಮ ನಡೆದಿರುವುದು ಪೊಲೀಸ್ ಹಾಗೂ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಅವರು ಈವರೆಗೆ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಬೆಳೆ ಹಾನಿ ಸಮೀಕ್ಷಾ ವರದಿಯಲ್ಲಿಯೂ ಅಕ್ರಮದ ವಾಸನೆ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿಯಲ್ಲಿ ಹಾನಿಯಾದ ಬೆಳೆಗಳ ಸಮೀಕ್ಷಾ ವರದಿಯಲ್ಲಿ ಒಟ್ಟಾರೆ ಬಿತ್ತನೆಯಾದ ಪ್ರದೇಶದಲ್ಲಿ ಶೇ. 83.60ರಷ್ಟು ಪ್ರದೇಶದಲ್ಲಿ ಬೆಳೆ ಹಾನಿ ತೋರಿಸಲಾಗಿದೆ. ಅದರಲ್ಲಿಯೂ ಶಿಗ್ಗಾಂವಿ ತಾಲೂಕಿನಲ್ಲಿ ಶೇ. 97.33, ಹಾವೇರಿ ಶೇ. 93.46, ರಾಣೆಬೆನ್ನೂರ 81.51, ಹಾನಗಲ್ಲ 80.62, ಸವಣೂರ 77.98, ರಟ್ಟಿಹಳ್ಳಿ 64.38, ಬ್ಯಾಡಗಿ 62.23, ಹಿರೇಕೆರೂರ 56.73ರಷ್ಟು ಹಾನಿ ತೋರಿಸಲಾಗಿದೆ. ಇದನ್ನು ಗಮನಿಸಿದರೆ ಪರಿಹಾರದ ಹಣ ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಅನರ್ಹರ ಖಾತೆ ಸೇರಿದೆಯೋ ಆಯಾ ತಾಲೂಕಿನಲ್ಲಿಯ ಬೆಳೆಹಾನಿ ಸಮೀಕ್ಷಾ ವರದಿಯೂ ಪೂರಕವಾಗಿತ್ತೇ ಎಂಬ ಸಂಶಯ ಕಂಡುಬರತೊಡಗಿದೆ. ಕೃಷಿ ಇಲಾಖೆ ನೀಡಿದ ಸಮೀಕ್ಷಾ ವರದಿಯ ಸತ್ಯಾಸತ್ಯತೆಯ ತನಿಖೆಯೂ ನಡೆಯಬೇಕು ಎಂಬ ಒತ್ತಾಯ ರೈತರದ್ದಾಗಿದೆ.

    11 ಜನರ ಬಂಧನ…

    ನೆರೆವು ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 11 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಐವರು ಗ್ರಾಮಲೆಕ್ಕಾಧಿಕಾರಿಗಳು, ಮೂವರು ಗ್ರಾಮ ಸೇವಕರು, ಅಕ್ರಮದಲ್ಲಿ ಭಾಗಿಯಾದ ಇತರ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. 9 ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇಲ್ನೋಟಕ್ಕೆ 55 ಕೋಟಿ ಗೂ ಅಧಿಕ ಹಣ ಅನರ್ಹರ ಪಾಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪರಿಹಾರ ಜಮೆ ಮಾಡುವ ಸಮಯದಲ್ಲಿ ಕಾರ್ಯದೊತ್ತಡ ಹೆಚ್ಚಿದ್ದರಿಂದ ಈವರೆಗೆ ತಹಸೀಲ್ದಾರ್​ಗಳ ಮೇಲೆ ಕ್ರಮ ಜರುಗಿಸಿಲ್ಲ. ಪೊಲೀಸ್ ತನಿಖೆಯ ವೇಳೆ ಅವರು ತಪ್ಪು ಮಾಡಿರುವುದು ಕಂಡುಬಂದರೆ ಕ್ರಮ ನಿಶ್ಚಿತವಾಗಿದೆ.

    | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts