More

    ಮಾರ್ಜಕಗಳ ಮಾಯಾಜಾಲದಲ್ಲಿ ಸಿಲುಕದಿರೋಣ; ತೇಜಸ್ವಿನಿ ಅನಂತಕುಮಾರ್ ಅವರ ಅಂಕಣ

    ಮಾರ್ಜಕಗಳ ಮಾಯಾಜಾಲದಲ್ಲಿ ಸಿಲುಕದಿರೋಣ; ತೇಜಸ್ವಿನಿ ಅನಂತಕುಮಾರ್ ಅವರ ಅಂಕಣಮುಂಚೆಲ್ಲ ನೈಸರ್ಗಿಕ ವಿಧಾನಗಳ ಮೂಲಕವೇ ಸ್ವಚ್ಛತೆ ಕಾಯ್ದುಕೊಳ್ಳಲಾಗುತ್ತಿತ್ತು. ಸಿಗೇಕಾಯಿ, ಅಂಟುವಾಳ ಕಾಯಿಯನ್ನು ಈಗಲೂ ಬಳಸುತ್ತಾರಾದರೂ ಪ್ರಮಾಣ ಕಡಿಮೆಯಾಗಿದೆ. ನಮ್ಮ ಆರೋಗ್ಯಕ್ಕೂ, ಪರಿಸರದ ಸ್ವಾಸ್ಥ್ಯಕ್ಕೂ ಹಾನಿ ಮಾಡುವಂಥ ರಾಸಾಯನಿಕಗಳ ಬಳಕೆ ಕೈಬಿಟ್ಟು, ನೈಸರ್ಗಿಕ ವಿಧಾನಗಳತ್ತ ಮರಳುವುದು ಉತ್ತಮ ಪರಿಹಾರ.

    ಲಾಕ್​ಡೌನ್ ಅವಧಿ ಮತ್ತು ಆ ಬಳಿಕವೂ ಕರೊನಾ ಸೋಂಕಿನ ಹಾವಳಿ ತೀವ್ರವಾಗಿದ್ದ ಸಮಯದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯವಾಗಿತ್ತು. ಮನೆಗೆಲಸವನ್ನೂ (ಬಟ್ಟೆ, ಪಾತ್ರೆ ತೊಳೆಯುವುದು) ತಾವೇ ಮಾಡಿಕೊಂಡರು. ಹೊರಗಿನವರನ್ನು ಸೇರಿಸುವುದು ಬೇಡ ಎಂದು ಮನೆಗೆಲಸದವರು ಬಾರದ್ದರಿಂದ ಅದು ಅನಿವಾರ್ಯವೂ ಆಗಿತ್ತೆನ್ನಿ. ನಮ್ಮ ಮನೆಯಲ್ಲೂ ಕೆಲ ತಿಂಗಳು ಹೀಗೆ ನಡೆಯಿತು. ಕರೊನಾ ಸ್ವಲ್ಪ ತಗ್ಗಿದ ಬಳಿಕ, ಮೊದಲಿನ ಕೆಲಸದಾಕೆ ಬೆಂಗಳೂರು ಬಿಟ್ಟು ಹೋಗಿದ್ದರಿಂದ ಕೆಲಸದಾಕೆಯ ಶೋಧ ಆರಂಭವಾಯಿತು. ಒಬ್ಬ ಮಹಿಳೆ ಕೆಲಸಕ್ಕೆ ಬಂದಳಾದರೂ ಎರಡೇ ದಿನದಲ್ಲಿ ನಾಪತ್ತೆ! ಆಗ ಗೆಳತಿಗೆ ಫೋನ್ ಮಾಡಿ, ‘ಮನೆಗೆಲಸದವರು ಇದ್ದರೆ ಕಳಿಸು ಮಾರಾಯ್ತಿ’ ಎಂದೆ. ಅವಳು ಒಬ್ಬ ಕೆಲಸದಾಕೆಯನ್ನು ಕಳಿಸಿದರೂ, ಆಕೆ ಕೆಲ ದಿನಗಳ ನಂತರ ಬರಲೇ ಇಲ್ಲ. ಮತ್ತೆ ಸ್ನೇಹಿತೆಗೆ ಫೋನ್ ಮಾಡಿದಾಗ ಅವಳು, ‘ನೀನು ತಪು್ಪ ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳ್ತೇನೆ. ನಿಮ್ಮ ಮನೆಯಲ್ಲಿ ಒಳ್ಳೆಯ ಸೋಪು, ಡಿಟರ್ಜಂಟ್ ಪೌಡರ್ ಕೊಡುವುದಿಲ್ಲವಂತೆ. ಅಂದಮೇಲೆ, ಬಟ್ಟೆ, ಪಾತ್ರೆ ಸ್ವಚ್ಛಗೊಳ್ಳುವುದು ಹೇಗೆ? ಹಾಗಾಗಿ, ಅವರಿಗೆ ಕೆಲಸ ಮಾಡಲು ಆಗದೆ ಬಿಡುತ್ತಿದ್ದಾರೆ’ ಎಂದು ವರದಿ ಒಪ್ಪಿಸಿದಳು.

    ಅಂದರೆ ಸಮಸ್ಯೆ ಸಂಬಳದ್ದಲ್ಲ, ಬೇರೆಯದ್ದೇ ಇದೆ ಎಂದು ನನಗೆ ಆಗ ಅರ್ಥವಾಯಿತು. ಡಾ.ರಾಜೇಂದ್ರ ಹೆಗಡೆಯವರ ಬ್ರಿಕ್ಸ್ ಕಂಪನಿ ನೈಸರ್ಗಿಕ ವಿಧಾನದಲ್ಲಿ ತಯಾರಿಸುವ ಸಾಬೂನುಗಳನ್ನು ನಮ್ಮ ಮನೆಯಲ್ಲಿ ಬಳಸುತ್ತೇವೆ. ಇದರಲ್ಲಿ ಯಾವುದೇ ರಾಸಾಯನಿಕಗಳು, ವಿಷಯುಕ್ತ ಅಂಶಗಳು ಇಲ್ಲ. ತಯಾರಿಕೆಗೆ ಸಸ್ಯಜನ್ಯ ವಸ್ತುಗಳನ್ನು ಬಳಸುತ್ತಾರೆ. ಹಾಗಾಗಿ, ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಉಣಿಸಬಹುದು. ಬೇರೆ ಸಾಬೂನುಗಳಿಗಿಂತ ಬೆಲೆ ಸ್ವಲ್ಪ ಜಾಸ್ತಿ ಇದ್ದರೂ ವಿಪರೀತ ವಾಸನೆ, ನೊರೆ ಬರಲ್ಲ. ಆದರೆ ಕೈಗೆ ಹಿತಕರವಾಗಿದೆ. ಸಾಬೂನು ಮಾರ್ಜಕ (ಅದು ಸ್ನಾನ, ಬಟ್ಟೆ ಅಥವಾ ಪಾತ್ರೆಗೆ ಬಳಸುವ) ಸುವಾಸನೆ ಭರಿತವಾಗಿರಬೇಕು, ಹೆಚ್ಚೆಚ್ಚು ನೊರೆ ಬರಬೇಕು ಎಂಬ ನಿರೀಕ್ಷೆ ಮನೆಕೆಲಸದವರಲ್ಲೂ ಇರುತ್ತದೆ. ಇಂಥವು ಇಲ್ಲದ ಸಾಬೂನು ಅವರ ದೃಷ್ಟಿಯಲ್ಲಿ ‘ಅನುಪಯುಕ್ತ’. ಆದರೆ, ನಮಗೆ ಗೊತ್ತಿಲ್ಲದಂತೆಯೇ, ಈ ಮಾರ್ಜಕಗಳ ಮಾಯಾ ಜಾಲದಲ್ಲಿ ಸಿಲುಕಿ ಬಿಟ್ಟಿದ್ದೇವೆಯೇ ಎಂದೆನಿಸುತ್ತದೆ.

    ಸ್ನಾನಕ್ಕಾಗಿ, ಬಟ್ಟೆ, ಪಾತ್ರೆ ತೊಳೆಯಲು ಹೆಚ್ಚೆಚ್ಚು ರಾಸಾಯನಿಕಗಳಿರುವ ಸಾಬೂನು, ಶಾಂಪೂ, ಡಿಟರ್ಜೆಂಟ್ ಪೌಡರ್​ಗಳನ್ನು ಬಳಸುತ್ತಿದ್ದೇವೆ. ಆದರೆ, ಇದರಿಂದ ನಮ್ಮ ಆರೋಗ್ಯಕ್ಕೆ, ಪ್ರಕೃತಿಗೆ ಏನೆಲ್ಲ ಹಾನಿ ಆಗುತ್ತಿದೆ ಎಂದು ಯೋಚಿಸುವ ಗೊಡವೆಗೆ ಹೋಗಿಲ್ಲ. ಈ ಸಮಸ್ಯೆ ಗೊತ್ತಿರಲೇ ಇಲ್ಲ ಅಂತೇನಲ್ಲ. ಆದರೆ, ಬೆಂಗಳೂರಿನ ಬೆಳ್ಳಂದೂರು ಕೆರೆಯ ನೊರೆಯನ್ನು, ಅದರಿಂದ ಒದಗಿದ ದುಸ್ಥಿತಿಯನ್ನು ನೋಡಿದಾಗ ಸಮಸ್ಯೆಯ ತೀವ್ರತೆ ಅರ್ಥವಾಯಿತು.

    ಅನಂತಕುಮಾರ್ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಸಂದರ್ಭದಲ್ಲಿ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಪರಿಸರ ವಿಜ್ಞಾನ ವಿಭಾಗದ ವಿಜ್ಞಾನಿಗಳು ಬೆಳ್ಳಂದೂರು ಕೆರೆಯ ದುಸ್ಥಿತಿಯ ಕಾರಣಗಳನ್ನು ಅವರಿಗೆ ವಿವರಿಸಿದ್ದರು. ಅಲ್ಲಿಯವರೇ ಕಾರ್ಖಾನೆಗಳ ತ್ಯಾಜ್ಯವನ್ನು ಸರಿಯಾಗಿ ಪರಿಷ್ಕರಣೆ ಮಾಡದೆ ನೀರಿಗೆ ಬಿಡುವುದರಿಂದ ಬೆಳ್ಳಂದೂರು ಕೆರೆ ಹಾಗಾಗಿದೆ ಅಂದುಕೊಂಡಿದ್ದೆ. ಈ ಅಂಶವೂ ಕಾರಣ ಎಂಬುದು ನಿಜವೇ. ಆದರೆ, ಮಾರ್ಜಕಗಳ ಅತಿಯಾದ ಬಳಕೆಯಿಂದ ಅವುಗಳಲ್ಲಿನ ರಾಸಾಯನಿಕಗಳು ಮತ್ತು ನೊರೆ ಕೆರೆ ಒಡಲನ್ನು ಸೇರಿ ನೀರಲ್ಲಿ ಬೆಂಕಿ ಬರುವಷ್ಟರ ಮಟ್ಟಿಗೆ ಹಾನಿ ಮಾಡಿದವು. ಇದರಿಂದ ಸುತ್ತಮುತ್ತಲಿನ ಅಂತರ್ಜಲವೂ ಕಲುಷಿತವಾಗಿದೆ. ಈ ನೀರನ್ನು ಬಳಸಿ ಬೆಳೆಯುವ ಆಹಾರಧಾನ್ಯ, ತರಕಾರಿ ವಿಷಯುಕ್ತವಾಗಿವೆ. ಜಲಚರಗಳು ಅಸುನೀಗಿವೆ. ಇಷ್ಟೆಲ್ಲ ಹಾನಿ ಆಗುತ್ತಿದ್ದರೂ ಅವುಗಳ ಅರಿವಿಲ್ಲದೆ, ನಾವು ಏನನ್ನೂ ಬದಲಾವಣೆ ಮಾಡಿಕೊಳ್ಳದೆ ಮುಂದೆ ಸಾಗುತ್ತಿದ್ದೇವೆ!

    ಸಾಬೂನು, ಶಾಂಪೂಗಳ ಬಳಕೆ ನಗರಗಳಲ್ಲಿ ಜಾಸ್ತಿ ಅಂದುಕೊಂಡಿದ್ದೆ. ಆದರೆ, ವಾಸ್ತವ ಹಾಗಿಲ್ಲ. ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಯಾವ ಗ್ರಾಮವನ್ನು ಆಯ್ಕೆ ಮಾಡಬೇಕು ಎಂದು ಅವಲೋಕಿಸಲು ಐದು ವರ್ಷಗಳ ಹಿಂದೆ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದೆವು. ಅಲ್ಲಿಯ ಜೀವನಶೈಲಿ ತಿಳಿಯುವ ಜತೆಗೆ ಯಾವೆಲ್ಲ ಉತ್ಪನ್ನ ಬಳಸುತ್ತಿದ್ದಾರೆ, ಸ್ವಚ್ಛತೆಯ ಪ್ರಜ್ಞೆ ಹೇಗಿದೆ ಎಂದು ಪರಾಮಶಿಸಲು ಒಂದು ಪ್ರಶ್ನೆಪಟ್ಟಿಯನ್ನೂ ಸಿದ್ಧಪಡಿಸಿದ್ದೆವು. ಆನೇಕಲ್ ತಾಲೂಕಿನ ಹಳ್ಳಿಗೆ ಹೋದಾಗ ಅಲ್ಲಿಯ ಮನೆಗಳಲ್ಲಿ ಪೇಸ್ಟ್, ಸೋಪು, ಶಾಂಪೂ ಬಳಸುತ್ತಿರುವುದನ್ನು ಕಂಡು ಅಚ್ಚರಿಯಾಯಿತು. ಬೆಳ್ಳಂದೂರು ಕೆರೆಯ ದುಸ್ಥಿತಿಯೇ ಈ ಹಳ್ಳಿಗಳ ಕೆರೆಗಳಿಗೆ ಬರಬಹುದೆಂಬ ಆತಂಕವೂ ಕಾಡಿತು. ಸ್ವಚ್ಛತೆಗೆ ಗ್ರಾಮಗಳು ಅನುಸರಿಸುತ್ತಿದ್ದ ಸಾಂಪ್ರದಾಯಿಕ ವಿಧಾನಗಳೆಲ್ಲ ಮರೆಯಾಗಿಬಿಟ್ಟಿವೆ.

    ಏನಿದು ಸಾಬೂನು, ಮಾರ್ಜಕ?: ಈಜಿಪ್ತ್, ಅರಬ್ ರಾಷ್ಟ್ರಗಳಲ್ಲಿ ಕ್ರಿಸ್ತಪೂರ್ವ 600ರಲ್ಲಿಯೇ ಸಾಬೂನು ಬಳಸುತ್ತಿದ್ದ ನಿದರ್ಶನಗಳಿವೆ. ಆದರೆ 1916ರಲ್ಲಿ ಬ್ರಿಟಿಷ್ ಅಧಿಕಾರಿಗಳು ಮೈಸೂರು ಮಹಾರಾಜರಿಗೆ ಸಾಬೂನು ತಂದುಕೊಟ್ಟಿದ್ದರು, ಅದರಲ್ಲಿ ಕರ್ನಾಟಕದ ಶ್ರೀಗಂಧ ಎಣ್ಣೆ ಬಳಸಲಾಗಿತ್ತಂತೆ. ಅದನ್ನು ನೋಡಿ ಇಲ್ಲಿಯೂ ಇಂಥ ಸೋಪಿನ ತಯಾರಿಕೆ ಆರಂಭಿಸಬಹುದು ಎಂಬ ಚಿಂತನೆ ನಡೆಸಿದ ಫಲವೇ ಮೈಸೂರು ಸ್ಯಾಂಡಲ್ ಸೋಪ್ ಕಂಪನಿ ಪ್ರಾರಂಭವಾಯಿತು. ಇತ್ತೀಚೆಗೆ ಸಂಸ್ಥೆ ಶತಮಾನೋತ್ಸವವನ್ನು ಆಚರಿಸಿದೆ. ಅದು ಬೇರೆ ವಿಷಯ.

    ಈ ನೂರು ವರ್ಷಗಳಲ್ಲಿ ಸಾಬೂನು, ಮಾರ್ಜಕಗಳ ಬಳಕೆ ಜೀವನಶೈಲಿಯಲ್ಲಿ ಹಾಸುಹೊಕ್ಕಾಗಿದೆ. ಆದರೆ, ಇವು ಎಷ್ಟೆಲ್ಲ ರಾಸಾಯನಿಕಗಳನ್ನು ಒಳಗೊಂಡಿವೆ ಎಂಬುದನ್ನು ನೋಡಿದರೆ ಆತಂಕವಾಗದೆ ಇರದು. ಹಿಂದೆಲ್ಲ, ನದಿನೀರಿನಲ್ಲಿ ಬಟ್ಟೆ ತೊಳೆದರೆ ಸೋಪಿನ ಅಗತ್ಯವಿಲ್ಲ ಎಂದು ಹಿರಿಯರು ಹೇಳುತ್ತಿದ್ದರು. ಏಕೆಂದರೆ ನೀರು ಮೃದುವಾಗಿದ್ದರೆ ಸ್ವಚ್ಛತೆ ತಾನಾಗಿಯೇ ಸಿದ್ಧಿಸುತ್ತದೆ ಎಂದು. ನಾವು ಬಳಸುವ ಸೋಪಿನಲ್ಲಿ ಗಡಸು ನೀರನ್ನು ಮೃದು ಮಾಡಲು ರಂಜಕವನ್ನು ಬಳಸುತ್ತಾರೆ. ಬಟ್ಟೆ ಬಿಳಿ ಮಾಡಲು ಬ್ಲಿಚ್ ಬಳಸುತ್ತಾರೆ. ನಮ್ಮಲ್ಲಿ ತುಂಬ ಜನರಿಗೆ ಬಿಳಿಬಟ್ಟೆ ಇನ್ನಷ್ಟು ಬಿಳಿಯಾಗಿ ಕಾಣಬೇಕು ಎಂಬ ಬಯಕೆ. ಇದಕ್ಕಾಗಿ ಬಳಕೆಯಾಗುತ್ತಿರುವುದು ಬ್ಲಿಚ್. ಇದನ್ನು Optical brighteners ಎಂದು ಕರೆಯುತ್ತಾರೆ. ವಾಸ್ತವದಲ್ಲಿ ಇದು ಬಟ್ಟೆಯನ್ನು ಬಿಳಿ ಮಾಡುವುದೂ ಇಲ್ಲ, ಕೊಳೆಯನ್ನೂ ತೆಗೆಯುವುದಿಲ್ಲ. ಈ ಕೆಮಿಕಲ್​ಗಳು ಸಾಮಾನ್ಯ ಕಿರಣಗಳ ಬದಲಿಗೆ ಅತಿನೆರಳೆ ಕಿರಣಗಳು ಬರುವಂತೆ ಮಾಡಿ, ಬಟ್ಟೆ ಮೇಲೆ ಕೆಮಿಕಲ್ ಪದರ ನಿರ್ವಿುಸುತ್ತವೆ. ಸಾಬೂನು, ಮಾರ್ಜಕ, ಶಾಂಪೂಗಳಿಂದ ಸುವಾಸನೆ ಬರಬೇಕು ಎಂದು ಬಯಸುತ್ತೇವೆ. ಮಲ್ಲಿಗೆ, ಗುಲಾಬಿ, ಶ್ರೀಗಂಧ… ಹೀಗೆ ಬೇರೆ ಬೇರೆ ಪರಿಮಳ ಮತ್ತು ಬಣ್ಣದ ಸಾಬೂನುಗಳನ್ನು ಕೊಂಡುಕೊಳ್ಳುತ್ತೇವೆ. ಆದರೆ, ಸುವಾಸನೆಗೂ ಸ್ವಚ್ಛತೆಗೂ ಸಂಬಂಧವಿಲ್ಲ. ಈ ಉತ್ಪನ್ನಗಳಲ್ಲಿ ಸುವಾಸನೆ ತರಲು ರಾಸಾಯನಿಕಗಳು ಬಳಕೆಯಾಗುತ್ತವೆ. ಇವು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಚರ್ಮಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

    ಮಾರ್ಜಕಗಳ ಮಾಯಾಜಾಲದಲ್ಲಿ ಸಿಲುಕದಿರೋಣ; ತೇಜಸ್ವಿನಿ ಅನಂತಕುಮಾರ್ ಅವರ ಅಂಕಣ

    ನೊರೆ ಬರಲು ವ್ಯಾಪಕವಾಗಿ ಉಪಯೋಗಿಸಲ್ಪಡುವ ರಾಸಾಯನಿಕಗಳು ಕ್ಯಾನ್ಸರ್​ಕಾರಕ ಎಂಬುದನ್ನು ವಿಜ್ಞಾನಿಗಳೇ ಸ್ಪಷ್ಟಪಡಿಸಿದ್ದಾರೆ. ಇದು ಚರ್ಮಕ್ಕೆ, ಉಸಿರಿನ ಮೂಲಕ ಒಳಗೆ ತೆಗೆದುಕೊಂಡಾಗ ಶ್ವಾಸಕೋಶಕ್ಕೂ ಹಾನಿ ಮಾಡುತ್ತದೆ. ನೊರೆ (ಫೋಮ್ ತರಲು ಬಳಸುವ ಮುಖ್ಯ ರಾಸಾಯನಿಕ ಸೋಡಿಯಂ ಲಾರೆಲ್ ಸಲ್ಪೇಟ್ (SLS, SLES). ಬ್ಲೀಚ್​ನಲ್ಲಿ ಉಪಯೋಗಿಸುವ sodium hypochlorieನಿಂದ ಕಣ್ಣಿಗೆ, ಶ್ವಾಸಕೋಶಕ್ಕೆ ಹಾನಿ. Formaldehyde ಕೂಡ ಕ್ಯಾನ್ಸರ್​ಕಾರಕ.

    ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಇರುವ ಗಡಸು ನೀರನ್ನು ಮೆದುನೀರನ್ನಾಗಿಸುತ್ತದೆ. ಫಾಸ್ಪೇಟ್ ಅಂತೂ ಕೆರೆಗಳ ನೀರಿನ ಜತೆ ಸೇರಿಕೊಂಡು ಆ ಇಡೀ ಪರಿಸರವನ್ನು ಕಲುಷಿತಗೊಳಿಸುತ್ತದೆ. ಇನ್ನೊಂದು ತಲೆಬಿಸಿ ಮಾಡುವ ರಾಸಾಯನಿಕ ನಾನಿಲ್ ಫಿನಾಲ್. ಈಗಂತೂ, ‘ಕರೊನಾ ಸಾಯಿಸಲು ಸೋಪು ಬಳಸಿ, 20 ಸೆಕೆಂಡುಗಳ ಕಾಲ ಕೈ ತೊಳೆಯಿರಿ’ ಎಂದು ಹೇಳಲಾಗುತ್ತದೆ. ಕರೊನಾ ಮಣಿಸಲು ಸದ್ಯಕ್ಕಂತೂ ಇದು ಅನಿವಾರ್ಯ ಎಂಬಂತಾಗಿದೆ. ಆದರೆ, ಇಂಥ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳ ಅತಿಯಾದ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಉಂಟು, ಪಿತ್ತಕೋಶ, ಶ್ವಾಸಕೋಶಕ್ಕೂ ತೊಂದರೆಯಾಗುತ್ತದೆ. ಪರಿಸರಕ್ಕೂ ಹಾನಿಕಾರಕ. ಸಾಬೂನು, ಮಾರ್ಜಕಗಳಲ್ಲಿ ಬಳಸುವ ಇಂಥ ಕೆಲ ಅಪಾಯಕಾರಿ ರಾಸಾಯನಿಕ ಗಳನ್ನು ಅಮೆರಿಕ, ಕೆನಡಾದಂಥ ರಾಷ್ಟ್ರಗಳು ಹಿಂದೆಯೇ ನಿಷೇಧ ಮಾಡಿವೆ.

    ನಾವೇನು ಮಾಡಬಹುದು?

    ನಾವೇನು ಮಾಡಬಹುದು?’ (ಸಮುದಾಯದ ಮಟ್ಟದಲ್ಲಿ), ‘ನಾನೇನು ಮಾಡಬಹುದು?’ (ವೈಯಕ್ತಿಕ ಮಟ್ಟದಲ್ಲಿ) ಎಂದು ಎರಡು ಹಂತದಲ್ಲಿ ಪರಿಹಾರ ಕಂಡುಕೊಳ್ಳಬಹುದು.

    • ಸಾಮಾಜಿಕ ಸಂಸ್ಥೆಗಳು ಇಂಥ ಉತ್ಪನ್ನಗಳ ಅಪಾಯದ ಬಗ್ಗೆ ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು.
    • ಈ ಉತ್ಪನ್ನಗಳನ್ನು ತಯಾರಿಸುವಾಗ ಏನು ಹಾಕಿರುತ್ತಾರೆ, ಅದರ ತಯಾರಿಕಾ ವಿಧಾನ ಹೇಗೆ ಎಂಬ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಬೇಕು.
    • ಜನಸಾಮಾನ್ಯರೂ ಆಸಕ್ತಿಯಿಂದ ಇಂಥ ವಿಷಯ, ಪ್ರಕ್ರಿಯೆಗಳನ್ನು ತಿಳಿದುಕೊಂಡರೆ, ಹಾನಿ ಮಾಡುವ ಅಂಶಗಳಿಂದ ದೂರ ಉಳಿಯಬಹುದು.
    • ಪರಿಸರಸ್ನೇಹಿ ವಿಧಾನಗಳ ಮೂಲಕ ಸ್ವಚ್ಛತೆ ಕಾಯ್ದುಕೊಳ್ಳಬಹುದು.
    • ರಾಸಾಯನಿಕಗಳನ್ನು ಹೊಂದಿದ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು.
    • ಸೋಪುಗಳ ತಯಾರಿಕೆಯಲ್ಲಿ ಪ್ರಾಣಿ ಜನ್ಯ ಕೊಬ್ಬು, ಅದರಲ್ಲೂ ಮುಖ್ಯವಾಗಿ ಟ್ಯಾಲೋ ಎಂಬ ಪದಾರ್ಥ ಬಳಸುತ್ತಾರೆ. ನಿಜವಾಗಿ ಇಂಥ ಸೋಪಿನ ಅವಶ್ಯಕತೆ ಇದೆಯಾ? ಎಂದು ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳಬೇಕು. ಭಾರತದಲ್ಲಿ ಟ್ಯಾಲೋವನ್ನು ನಿಷೇಧಿಸಿದ್ದರೂ ಬೇರೆ ಮಾರ್ಗ, ವಿಧಾನಗಳ ಮೂಲಕ ಅದು ತಲುಪುತ್ತಿದೆ.
    • ನೈಸರ್ಗಿಕವಾದ ಸೋಪುಗಳನ್ನು ಮನೆಯಲ್ಲೇ ತಯಾರು ಮಾಡಬಹುದು. ಈ ಪ್ರಕ್ರಿಯೆ ಹೆಚ್ಚೆಚ್ಚು ಮನೆಗಳಲ್ಲಿ ಆರಂಭಗೊಳ್ಳಬೇಕು.
    • ನೈಸರ್ಗಿಕ ಸೋಪುಗಳನ್ನು ಮನೆಯಲ್ಲೇ ತಯಾರಿಸುವ ಬಗ್ಗೆ ಅದಮ್ಯ ಚೇತನ ಸಂಸ್ಥೆಯಿಂದ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಮೊಸಂಬಿ, ಕಿತ್ತಳೆ, ಲಿಂಬೆಹಣ್ಣಿನ ಸಿಪ್ಪೆ, ಬೆಲ್ಲದಿಂದ ನೈಸರ್ಗಿಕವಾಗಿ ಸಾಬೂನು ತಯಾರಿಸಬಹುದು. ಸೀಗೇಕಾಯಿ, ಕಡಲೆಹಿಟ್ಟು ಮುಂತಾದವನ್ನು ಬಳಸಬಹುದು.
    • ಸ್ವಲ್ಪ ಬೆಲೆ ಜಾಸ್ತಿಯಾದರೂ, ನೈಸರ್ಗಿಕ ಸಾಬೂನು, ಮಾರ್ಜಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

    ಕೇವಲ ಬಣ್ಣ, ವಾಸನೆಗೆ ಮಾರುಹೋಗುವುದು ಬೇಡ. ಏಕೆಂದರೆ, ಅಂತರ್ಜಲ, ಜಲಚರಗಳ ರಕ್ಷಣೆ ನಮ್ಮ ಜವಾಬ್ದಾರಿ. ನೊರೆ ಹಾವಳಿಯಿಂದ ಎಷ್ಟೋ ಕೆರೆಗಳಲ್ಲಿ ಜಲಚರಗಳೇ ಇಲ್ಲ. ಹಾಗಾಗಿ, ಅತ್ಯವಶ್ಯಕವಾದರೆ ಮಾತ್ರ ರಾಸಾಯನಿಕ ಸೋಪುಗಳನ್ನು ಬಳಸೋಣ. ಆದಷ್ಟು ನೈಸರ್ಗಿಕ ವಿಧಾನಗಳತ್ತ ಮರಳೋಣ.

    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts