More

    ಆರೋಗ್ಯ ಕೆಡಿಸುವ ಚಿಂತೆಯಿಂದ ದೂರವಿರೋಣ: ಡಾ. ವೀರೇಂದ್ರ ಹೆಗ್ಗಡೆ ಅವರ ಅಂಕಣ

    ಆರೋಗ್ಯ ಕೆಡಿಸುವ ಚಿಂತೆಯಿಂದ ದೂರವಿರೋಣ: ಡಾ. ವೀರೇಂದ್ರ ಹೆಗ್ಗಡೆ ಅವರ ಅಂಕಣಚಿತೆಗೂ ಚಿಂತೆಗೂ ಬಿಂದು ಮಾತ್ರ ವ್ಯತ್ಯಾಸ ಎಂಬುದನ್ನು ಕೇಳಿದ್ದೇವೆ.

    ಚಿತಾಯಾಶ್ಚ ಚಿಂತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೆ |

    ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವನಮ್ ||

    ಚಿಂತೆಯಿಂದಲೇ ಮನುಷ್ಯನ ದೇಹ, ಇಂದ್ರಿಯ, ಮನಸ್ಸು ಮತ್ತು ಕರ್ಮ ಎಲ್ಲವೂ ಕರಗಲು ಪ್ರಾರಂಭವಾಗುತ್ತದೆ. ಚಿಂತೆಯನ್ನುಂಟು ಮಾಡುತ್ತಿರುವ ವಿಷಯದ ಬಗ್ಗೆ ನಮಗಿರುವ ಕಾಳಜಿ, ಅವಶ್ಯಕತೆ, ಪ್ರೀತಿ-ಪ್ರೇಮ ಮುಂತಾದ ಭಾವಗಳು ಈ ಚಿಂತೆಯ ಮೂಲ. ಊಹಾತ್ಮಕ ಚಿಂತೆಗಳು ಕೂಡ ಮನುಷ್ಯನನ್ನು ದಹಿಸಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವಂಥ ಸಣ್ಣಪುಟ್ಟ ಅಪಸವ್ಯ ವಿಚಾರಗಳು ಚಿಂತೆಗೆ ಕಾರಣವಾಗುತ್ತವೆ. ದಾಂಪತ್ಯದಲ್ಲಿ, ತಂದೆ-ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, ಆಪ್ತಸ್ನೇಹಿತರೊಂದಿಗೆ ಬರುವಂಥ ಸಣ್ಣಪುಟ್ಟ ವ್ಯತ್ಯಾಸಗಳು ಮತ್ತು ತಪು್ಪಗ್ರಹಿಕೆಗಳೂ ಚಿಂತೆಗೆ ಕಾರಣವಾಗುತ್ತವೆ ಮತ್ತು ದುಃಖಕ್ಕೆ ಇದೇ ಮೂಲವಾಗಬಹುದು. ಇದರಿಂದ ಮನುಷ್ಯರು ಕೊರಗಲು ಪ್ರಾರಂಭಿಸುತ್ತಾರೆ. ಹಾಗಾಗಿ ಚಿಂತಾ ವಿಷಯವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದುಕೊಳ್ಳುತ್ತದೆ.

    ಅನೇಕ ಮಂದಿ ಕ್ಷೇತ್ರದ ಬೀಡಿಗೆ ಬಂದು ಸಾಂಸಾರಿಕವಾದ ವಿಷಯಗಳನ್ನು ನನ್ನಲ್ಲಿ ಹೇಳುತ್ತಾರೆ. ‘ನಾವು ಬಂಧುಗಳು ಜೊತೆಯಾಗಿ ಇದ್ದೇವೆ. ಆದರೆ ಯಾರೋ ಒಬ್ಬ ಮನೆಯಲ್ಲಿ ಸರಿಯಾಗಿ ವರ್ತಿಸುತ್ತಿಲ್ಲ. ಕೆಲಸಗಳಲ್ಲಿ ಕೈಜೋಡಿಸುವುದಿಲ್ಲ. ಅವನಲ್ಲಿ ಪ್ರೀತಿ, ಪ್ರೇಮ, ವಿಶ್ವಾಸಗಳೆಂಬ ಅಂಶವೇ ಇಲ್ಲ. ಹಾಗಾಗಿ ಮನೆಯಲ್ಲಿ ದಿನವೂ ನೋವನ್ನು ಉಣ್ಣುತ್ತಿದ್ದೇವೆ’ ಎಂದು ಹೇಳುತ್ತಾರೆ. ಸಂಸಾರದಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಆಸ್ತಿಯಲ್ಲಿ ಪಾಲುಗಳನ್ನು ಮಾಡಿಕೊಡುವಾಗ ಸಣ್ಣಪುಟ್ಟ ಹಂತದ ವ್ಯತ್ಯಾಸಗಳು ಕೂಡ ಜೀವನದ ಹೋರಾಟಕ್ಕೆ ಕಾರಣವಾಗಬಹುದು. ಉದಾಹರಣೆಗೆ, ನಾಲ್ಕಾರು ಮಕ್ಕಳು ಹತ್ತು, ಹದಿನೈದು ಎಕರೆ ಭೂಮಿಯನ್ನು ಹಂಚಿಕೊಂಡು ಅನುಭವಿಸುವಾಗ ಆ ಭೂಮಿಯನ್ನು ಕೇಕ್ ತುಂಡರಿಸಿದ ಹಾಗೆ ಸಮನಾಗಿ ತುಂಡರಿಸಲು ಸಾಧ್ಯವಾಗುವುದಿಲ್ಲ. ಸ್ವಾಭಾವಿಕವಾಗಿ ಭೂಮಿಯ ಫಲವತ್ತತೆಯನ್ನು ಆಧಾರವಾಗಿರಿಸಿಕೊಂಡು ವಿಭಾಗಿಸಿದಾಗ ಒಬ್ಬರಿಗೆ ಒಂದೆರಡು ಗುಂಟೆ ಜಾಗ ಹೆಚ್ಚಿಗೆ ಹೋಗಬಹುದು ಅಥವಾ ಕಡಿಮೆಯಾಗಬಹುದು. ಅಥವಾ ಭೂಮಿಯ ಆಕಾರದ ಕಾರಣವಾಗಿಯೂ ಹಂಚುವಾಗ ಸ್ವಲ್ಪ ವ್ಯತ್ಯಾಸ ಆಗಬಹುದು. ಆದರೆ ಇಂಥ ವಿಷಯವನ್ನೇ ಮೂಲ ಸಮಸ್ಯೆಯಾಗಿ ಹಿಡಿದುಕೊಂಡು ಅನೇಕ ಕಡೆ ಜಗಳಗಳಾಗುತ್ತವೆ. ಕೆಲವು ಸಲ ಕೊಲೆಯಲ್ಲಿಯೂ ಅಂತ್ಯವಾಗುತವೆ. ಕೋರ್ಟುಕಚೇರಿಗಳಿಗೆ ಅಲೆದಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ರೂಪಾಯಿಯ ಆಸ್ತಿಯನ್ನು ಉಳಿಸಿಕೊಂಡವರಿದ್ದಾರೆ. ಈ ಹೋರಾಟದಲ್ಲಿ ಅವರು ಮಾಡಿರುವ ಖರ್ಚು, ಆ ಭೂಮಿಯ ಬೆಲೆಗಿಂತ ಹೆಚ್ಚಾಗಿರಬಹುದು. ಒಂದು ವೇಳೆ ಹಿಸ್ಸೆ ಮಾಡಿಕೊಳ್ಳುವಾಗ ಅವರು ಸಮನಾಗಿ ಹಂಚಿಕೊಂಡಿದ್ದರೆ ಅಥವಾ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ಅಥವಾ ಆಸ್ತಿಯ ತಾರತಮ್ಯಕ್ಕಿಂತ ನಮ್ಮ ಬಂಧುತ್ವ ದೊಡ್ಡದಾದದ್ದು ಎಂದು ಸ್ವಲ್ಪ ವಿಶಾಲ ಹೃದಯವನ್ನು ಬೆಳೆಸಿಕೊಂಡಿದ್ದರೆ, ಆಸ್ತಿಗಿಂತಲೂ ಹೆಚ್ಚಿರುವ ಹಣ ಮತ್ತು ಬಾಂಧವ್ಯ ಉಳಿಯಬಹುದಿತ್ತು. ಮುಖ್ಯವಾಗಿ, ಆರೋಗ್ಯವನ್ನು ಉಳಿಸಿಕೊಳ್ಳಬಹುದಾಗಿತ್ತು.

    ಮಕ್ಕಳಿಗೆ ಮದುವೆಯಾಗಲಿಲ್ಲ ಎಂಬಂಥ ದುಃಖ ಎಲ್ಲರಲ್ಲೂ ಕಂಡುಬರುವ ಸಹಜವಾದ ಸ್ವಭಾವ. ಆದರೆ ಆ ಪ್ರಯತ್ನಕ್ಕೆ ಎರಡೇ ದಾರಿ. ಒಂದು ಲೌಕಿಕ ಇನ್ನೊಂದು ಪಾರಲೌಕಿಕ. ಗಂಡನ್ನು ಅಥವಾ ಹೆಣ್ಣನ್ನು ಹುಡುಕುವುದು ಒಂದು ಕಾರ್ಯವಾದರೆ, ದೇವತಾಪ್ರಾರ್ಥನೆ ಅದನ್ನು ಅನುಕೂಲವಾಗುವಂತೆ ಮಾಡಿಸಿಕೊಡುತ್ತದೆ. ಜಾತಕ ಮೊದಲಾದವುಗಳಲ್ಲಿ ದೋಷವಿದ್ದರೆ ಆ ದೋಷವನ್ನು ಪರಿಮಾರ್ಜನೆ ಮಾಡಿಕೊಂಡು, ಅವರಿಗೆ ಕಂಕಣಬಲ ಕೂಡಿ ಬರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ನೆಂಟರು ಬಂದ ತಕ್ಷಣ ಮೊದಲು ಕೇಳುವುದೇ, ‘ಮದುವೆ ವಿಷಯ ಏನಾಯಿತು?’ ಎಂದು. ಈ ಒಂದು ಪ್ರಶ್ನೆ ಅವರಿಗೆ ಶೂಲವಾಗಿಬಿಡುತ್ತದೆ. ಮಕ್ಕಳ ಹೆತ್ತವರಿಗೆ ಈ ಚಿಂತೆ ಅವರ ಆರೋಗ್ಯ ಹಾನಿಗೂ ಕಾರಣವಾಗುತ್ತದೆ.

    ಇದೇ ವಿಷಯದ ಬಗ್ಗೆ ದಿನವೂ ಪ್ರಾರ್ಥನೆ ಮಾಡಿ, ದೇವರ ಮೇಲೆ ಭಾರ ಹಾಕಿ ನಮ್ಮ ಪ್ರಯತ್ನ ನಾವು ಮಾಡುತ್ತ ಹೋದರೆ ಅಥವಾ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂಬ ಭಾವನೆ ಸೃಷ್ಟಿಸಿಕೊಂಡರೆ ಆರೋಗ್ಯ ಉಳಿಯುತ್ತದೆ. ಖರ್ಚು-ವೆಚ್ಚಗಳೂ ಉಳಿಯುತ್ತವೆ ಮತ್ತು ಮಕ್ಕಳಿಗೆ ಮದುವೆ ಮಾಡುವಂಥ ಯೋಗ ಕೂಡಿಬರುತ್ತದೆ. ಇಂಥ ವಿಷಯಗಳನ್ನು ಎಷ್ಟು ಚಿಂತಿಸಿದರೂ ಫಲ ಒಂದೇ. ಕಾಲ ಪಕ್ವವಾದಾಗ ನಮ್ಮ ಊಹೆಗೂ ನಿಲುಕದಂತೆ ಕ್ಷಣದಲ್ಲಿ ಆಯಿತು ಎಂಬಂತೆ ಯಾರೋ ಬಂದರು, ನೋಡಿದರು, ಒಪ್ಪಿಗೆಯಾಯಿತು- ಹೀಗೆ ಮದುವೆ ನಿಶ್ಚಯವಾಗಿ ಮದುವೆಯೂ ಆಗಿ ಬಿಡುತ್ತದೆ. ಮದುವೆ ಆದ ನಂತರ ಮದುಮಕ್ಕಳು ಸುಖವಾಗಿರುತ್ತಾರೆ. ಆದರೆ ಈ ಹೆತ್ತವರು ಹಾಳು ಮಾಡಿಕೊಂಡ ಆರೋಗ್ಯ ಮಾತ್ರ ಸುಧಾರಿಸುವುದಿಲ್ಲ.

    ಈ ಲೇಖನ ಬರೆಯುತ್ತಿರುವಾಗಲೇ ದೂರವಾಣಿ ಕರೆ ಬಂತು. ಒಬ್ಬಾಕೆ ಮಾತನಾಡುತ್ತ, ‘ನನಗೆ ಅನೇಕ ಸಮಸ್ಯೆಗಳಿವೆ, ನನ್ನ ಪರವಾಗಿ ಶ್ರೀಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿಕೊಳ್ಳಿ’ ಎಂದಳು. ‘ನೀನೇ ದೇವರಿಗೆ ಪ್ರಾರ್ಥನೆ ಮಾಡಿಕೊಳ್ಳುವಾಗ ನನ್ನ ಮಧ್ಯಸ್ಥಿಕೆ ಯಾಕೆ?’ ಎಂದೆ. ‘ಹಾಗಲ್ಲ. ಇಲ್ಲಿ ಸಮಸ್ಯೆ ಬಿಗಡಾಯಿಸಿದೆ’ ಎಂದಳು. ‘ಏನು ಬಿಗಡಾಯಿಸಿದೆ ಹೇಳು?’ ಎಂದು ಕೇಳಿದಾಗ ಕೆಲವು ಸಮಸ್ಯೆ ಹೇಳಿದಳು- ‘ಮನೆಯಲ್ಲಿ ನಾನು ಎರಡನೇ ಸೊಸೆ. ಮೊದಲನೇ ಸೊಸೆಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ. ನನಗೀಗ ಮಗು ಒಂದಿದೆ. ಆ ದೊಡ್ಡ ಸೊಸೆ(ನನ್ನ ದೊಡ್ಡಕ್ಕ) ದಿನವೂ ಜೋರಾಗಿ ಟಿವಿ ಹಾಕುತ್ತಾಳೆ. ಹಾಗಾಗಿ ನನ್ನ ಚಿಕ್ಕ ಮಗುವಿಗೆ ಸಮಸ್ಯೆಯಾಗುತ್ತಿದೆ. ದೊಡ್ಡವಳಾದ ಆಕೆಗೆ ಹೇಳಿದರೂ, ಕೇಳಿಕೊಂಡರೂ ಒಪು್ಪವುದಿಲ್ಲ. ನನಗೂ ತುಂಬ ತೊಂದರೆಯಾಗುತ್ತಿದೆ’ ಎಂದಳು. ‘ಮನೆ ಹಿರಿಯರ ಹತ್ತಿರ ಹೇಳಿಸಬಹುದಲ್ಲ!’ ಎಂದಾಗ, ‘ಮನೆಯಲ್ಲಿ ಇರುವವರೆಲ್ಲರೂ ಆ ಹಿರಿಯ ಸೊಸೆಗೆ ಬೆಂಬಲ ಕೊಡುತ್ತಾರೆ. ಅವಳಿಗೆ ಹೆದರುತ್ತಾರೆ. ಹಾಗಾಗಿ ನನಗೆ ನಿದ್ದೆಯೂ ಇಲ್ಲ, ಮನಸ್ಸಿಗೆ ನೆಮ್ಮದಿಯೂ ಇಲ್ಲ’ ಎಂದಳು. ಇಂಥ ಘಟನೆಯ ಪರಿಣಾಮವನ್ನು ಆಲೋಚಿಸಿದರೆ, ವ್ಯಕ್ತಿ ಮೇಲೆ ಅದು ಬೀರುವ ಪರಿಣಾಮ ಮಾರಣಾಂತಿಕವಾದದ್ದು. ಇಂಥ ಘಟನೆಗಳಿಂದ ಪ್ರತಿಯೊಬ್ಬರಿಗೂ ಚಿಂತೆಯಿಂದ ನಿದ್ದೆ ಬರುವುದಿಲ್ಲ. ಆಗ ಅನೇಕ ಕಾಯಿಲೆಗಳು ಅಂಟಿಕೊಳ್ಳುತ್ತವೆ.

    ಕ್ಷೇತ್ರಕ್ಕೆ ಬಂದ ಭಕ್ತರೊಬ್ಬರು ಹೇಳಿಕೊಂಡರು- ‘ನಾನು ಮನೆ ಖರೀದಿಗಾಗಿ ಒಬ್ಬರಿಗೆ ಮುಂಗಡ ಹಣ ಕೊಟ್ಟಿದ್ದೆ. ಅವರು ಪರಿಚಿತರು ಹಾಗೂ ಸ್ನೇಹಿತರು. ಈಗ ಅವರು ಒಪ್ಪಂದದಂತೆ ಮನೆಯನ್ನು ಬಿಡುತ್ತಿಲ್ಲ. ಹಣವನ್ನೂ ಹಿಂತಿರುಗಿಸುತ್ತಿಲ್ಲ. ಕೋರ್ಟು-ಕಚೇರಿ ವಕೀಲರು ಹೀಗೆ ಅಲೆದು ನನ್ನಲ್ಲಿರುವ ಅಲ್ಪಸ್ವಲ್ಪ ಹಣವೂ ಖರ್ಚಾಗಿ ಹೋಗಿದೆ. ಇದಕ್ಕೆ ಏನಾದರೂ ಪರಿಹಾರ ದೊರಕಿಸಿಕೊಡಿ’ ಎಂದು ನಿವೇದಿಸಿಕೊಂಡರು. ಇದು ದೊಡ್ಡ ಸಮಸ್ಯೆ. ಭೂಮಿ ಇದೆ, ಆದರೆ ಅನುಭವಿಸುವಂಥ ಯೋಗ ಇಲ್ಲ. ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಾಗದಪತ್ರಗಳು ಇಲ್ಲ ಮತ್ತು ಅದರ ಸ್ವಾಧೀನವೂ ಇಲ್ಲ.

    ಇದರಲ್ಲಿ ಗಮನಿಸಬೇಕಾದದ್ದು ಏನೆಂದರೆ ಈ ಸಮಸ್ಯೆ ಆರ್ಥಿಕವಾದದ್ದೇ ಅಥವಾ ಮನೆಯದ್ದೇ ಎಂದರೆ ಎರಡೂ ಅಲ್ಲ. ಇಲ್ಲಿ ವಿಶ್ವಾಸಾರ್ಹತೆಯ ಪ್ರಶ್ನೆ ಬರುತ್ತದೆ. ಇವರು ಯಾರನ್ನು ನಂಬಿ ಮುಂಗಡ ಹಣ ಕೊಟ್ಟಿದ್ದರೋ ಆತ ಮೋಸ ಮಾಡಿದ ಎಂದಾಗ ಹಣದ ಲೆಕ್ಕಾಚಾರದಲ್ಲಿಯೂ ಮೋಸವಾಗಿದೆ. ಅದಕ್ಕಿಂತ ಮುಖ್ಯವಾಗಿ ತಾನು ಅವಮಾನಿತನಾಗಿದ್ದೇನೆ, ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ನೊಂದುಕೊಂಡಿದ್ದಾರೆ. ಅವರಿಗೆ ಆರ್ಥಿಕ ಸಮಸ್ಯೆಗಳಿಗಿಂತ, ಸಾಮಾಜಿಕವಾಗಿ ಅವರ ಸ್ಥಾನಮಾನಕ್ಕೆ ಕುಂದು ಬರುವ ಹಾಗೆ ವಿಶ್ವಾಸದ್ರೋಹ ಮಾಡಿದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

    ಅನುಗಾಲವು ಚಿಂತೆ ಜೀವಕೆ ತನ್ನ/ಮನವು ಶ್ರೀರಂಗನೊಳು ಮೆಚ್ಚುವ ತನಕ/ ಸತಿಯು ಇದ್ದರು ಚಿಂತೆ ಸತಿಯು ಇಲ್ಲದ ಚಿಂತೆ/ಮತಿಹೀನ ಸತಿಯಾದರು ಚಿಂತೆಯು/ ಪೃಥಿವಿಯೊಳಗೆ ಸತಿ ಅತಿ ಚೆಲ್ವೆಯಾದರೆ ಮಿತಿ ಮೇರೆಯಿಲ್ಲದ ಮೋಹದ ಚಿಂತೆ/ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ/ಅತ್ತು ಅನ್ನಕೆ ಕಾಡುವ ಚಿಂತೆಯು ತುತ್ತಿನ ಆಸೆಗೆ ತುರುಗಳ ಕಾಯ್ದರು ಸುತ್ತೇಳು ಕಡೆಯಿಲ್ಲದ ಚಿಂತೆಯು/ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ/ಹಿಡಿಹೊನ್ನು ಕೈಯೊಳಿದ್ದರು ಚಿಂತೆಯು/ಪೊಡವಿಯೊಳಗೆ ಸಿರಿ ಪುರಂದರ ವಿಠಲನ ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ-ಹೀಗೆ ಪುರಂದರದಾಸರು ಜೀವ ಸದಾ ಕಾಲ ಚಿಂತೆಯಿಂದ ಕೂಡಿರುತ್ತದೆ ಎಂದಿದ್ದಾರೆ.

    ಧಾರ್ವಿುಕವಾಗಿಯೂ, ಆರ್ಥಿಕವಾಗಿಯೂ ವ್ಯಕ್ತಿಗತ ನಂಬಿಕೆಗಳು ಸಾಂತ್ವನ ನೀಡುತ್ತವೆ. ನಿತ್ಯವೂ ಇಷ್ಟದೇವತಾರಾಧನೆ ಶಾಂತಿ ನೀಡಬಹುದು. ಮನೆಯಲ್ಲಿರುವ ಹಿರಿಯರೊಂದಿಗೆ ಅಥವಾ ಉತ್ತಮ ಸ್ನೇಹಿತರಿದ್ದರೆ, ಮಡದಿಯೊಂದಿಗೆ ವಿಷಯವನ್ನು ಹಂಚಿಕೊಂಡಾಗ ಚಿಂತೆ ಹಗುರವಾಗಬಹುದು. ಯೋಗ ಮತ್ತು ಪ್ರಾಣಾಯಾಮಗಳು ಸಿಟ್ಟನ್ನು, ಹತಾಶೆಯನ್ನು ಹಾಗೂ ರಕ್ತದೊತ್ತಡವನ್ನು ಹತೋಟಿಗೆ ತರಬಲ್ಲದು. ಹಾಸ್ಯ ಎಲ್ಲರಿಗೂ ಇಷ್ಟವಾದುದು. ಚಿಂತೆಯನ್ನು ದೂರಮಾಡಲು ಸಾಧ್ಯ. ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿ ಬೀರಬಲನೆಂಬ ಹಾಸ್ಯಗಾರ ಮಂತ್ರಿ, ಚಕ್ರವರ್ತಿ ಕೃಷ್ಣದೇವರಾಯನ ಆಸ್ಥಾನದಲ್ಲಿ ತೆನಾಲಿ ರಾಮಕೃಷ್ಣನಂಥ ಬುದ್ಧಿವಂತ ಹಾಸ್ಯಗಾರರಿದ್ದರು. ಕೆಲವು ಮೂಲಕಥೆಗಳು ಮತ್ತು ಅನೇಕ ದಂತಕಥೆಗಳನ್ನು ಗಮನಿಸಿದರೆ ಚಕ್ರವರ್ತಿಗಳಿಗೆ ರಾಜಕೀಯ ಮತ್ತು ವ್ಯಾವಹಾರಿಕವಾದ ಸಮಸ್ಯೆಗಳು ತೀವ್ರವಾದಾಗ ಅವರ ಮನಸ್ಸನ್ನು ಹಗುರಗೊಳಿಸುವ ಚಾಕಚಕ್ಯತೆ ಅವರಲ್ಲಿತ್ತು. ಅರಮನೆಯ ಸಮಸ್ಯೆ ಹಾಗೂ ಅಂತಃಪುರದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಈ ಮಂತ್ರಿಗಳು ಪರಿಹರಿಸುತ್ತಿದ್ದರು.

    ಮನಸ್ಸಿಗೆ ಚಿಂತೆ ತರುವಂಥ ವಿಷಯಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಮನಸ್ಸು ಸಮಸ್ಥಿತಿಯಲ್ಲಿದ್ದಾಗ ಎಂಥದ್ದೇ ಸಮಸ್ಯೆ, ಆಪತ್ತು, ದುಃಖವನ್ನೂ ಜಾಣ್ಮೆಯಿಂದ ದಾಟಬಹುದು. ಆದರೆ ಈ ಚಿತ್ತವೃತ್ತಿನಿರೋಧಕ್ಕೆ ತರಬೇತಿ ಬೇಕು. ಈ ಜೀವನವೇ ಅಂಥ ತರಬೇತಿಯನ್ನು ನೀಡುವ ಶಾಲೆ. ಅಂದರೆ ಸಣ್ಣಪುಟ್ಟ ವಿಷಯಗಳನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಬೇರೆ ಕೆಲಸಗಳಲ್ಲಿ ನಮ್ಮನ್ನು ಹರಿಯಬಿಟ್ಟಾಗ ಖಂಡಿತವಾಗಿಯೂ ಮನಸ್ಸು ಇಂಥ ಸಣ್ಣಪುಟ್ಟ ಆಘಾತಗಳನ್ನು ತಡೆದುಕೊಳ್ಳಲು ಸಮರ್ಥವಾಗುತ್ತದೆ. ಸಣ್ಣಪುಟ್ಟ ವಿಷಯಗಳನ್ನು ನೆನಪಿಸಿಕೊಂಡು ದುಃಖವನ್ನು ಮರುಕಳಿಸಿಕೊಂಡು ಬಾಳನ್ನು ಹಾಳು ಮಾಡಿಕೊಳ್ಳಬಾರದು. ಅಂಥ ಸದೃಢವಾದ ಮನಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಹಾಗೂ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಆ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಧರ್ಮ ರೂಢಿಸಿಕೊಳ್ಳಬೇಕು. ಇದರಿಂದ ನಮಗೂ ನಮ್ಮ ಕುಟುಂಬಕ್ಕೂ, ಎಲ್ಲರಿಗೂ ಒಳಿತಾಗುತ್ತದೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts