More

    ದಿಕ್ಸೂಚಿ: ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ

    ದಿಕ್ಸೂಚಿ: ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ

    ಅನಾರೋಗ್ಯವನ್ನು ಯಾರೂ ಬಯಸುವುದಿಲ್ಲ. ಆದರೆ ಅದು ಯಾರನ್ನೂ ಬಿಡುವುದಿಲ್ಲ. ಬೇರೆ ಬೇರೆ ಕಾಯಿಲೆಗಳಿಂದಾಗಿ ಪ್ರತಿವರ್ಷ ಜಗತ್ತಿನಲ್ಲಿ ಕೋಟ್ಯಂತರ ಮಂದಿ ಸಾವನ್ನಪು್ಪತ್ತಾರೆ. ಈಗ ಕರೊನಾದಿಂದಾಗಿ ಭಾರತೀಯ ಸಂಪ್ರದಾಯ, ಸಂಸ್ಕಾರಗಳ ಬಗ್ಗೆ ಉಂಟಾಗಿರುವ ಆಸಕ್ತಿ, ಕುತೂಹಲ ತಾತ್ಕಾಲಿಕವಾಗಿರದೆ ಶಾಶ್ವತವಾಗಿ ನೆಲೆಯೂರಲಿ ಎಂಬುದು ಆಶಯ.

    ಅದು ಬಿಹಾರದ ಮುಜಾಫರಾಬಾದ್ ರೈಲ್ವೆ ನಿಲ್ದಾಣ. ಒಂದು ಮಗು ತನ್ನ ತಾಯಿಯ ಹೊದಿಕೆಯನ್ನು ಎಳೆಯುತ್ತ ಆಟವಾಡುತ್ತಿತ್ತು. ಆದರೆ ಆ ತಾಯಿ ಮಾತ್ರ ಚೂರೂ ಅಲುಗಾಡುತ್ತಿಲ್ಲ. ಮಗುವನ್ನು ನೇವರಿಸುತ್ತಿಲ್ಲ. ಜೀವನೋಪಾಯಕ್ಕಾಗಿ ಗುಜರಾತಿನಲ್ಲಿ ನೆಲೆಸಿದ್ದ ಅವಳು ಕರೊನಾ ಲಾಕ್​ಡೌನ್ ಪರಿಣಾಮದಿಂದಾಗಿ ತನ್ನೂರಾದ ಬಿಹಾರದ ಕತಿಹಾರ್​ಗೆ ಹೊರಟಿದ್ದಳು. ಶ್ರಮಿಕ್ ರೈಲಿನಲ್ಲಿ ಬಂದಿದ್ದಳು. ಹಸಿವು, ನಿರ್ಜಲೀಕರಣ ಮತ್ತು ಅತಿಯಾದ ತಾಪಮಾನದಿಂದಾಗಿ ಆಕೆ ಮೃತಪಟ್ಟಿದ್ದಳು. ಪಾಪ, ಪುಟ್ಟಮಗುವಿಗೆ ಇದೆಲ್ಲ ಹೇಗೆ ತಿಳಿಯಬೇಕು? ಮಾಧ್ಯಮಗಳಲ್ಲಿ ಪ್ರಕಟವಾದ ಈ ಚಿತ್ರ ನೋಡಿ ಕಣ್ಣೀರಿಟ್ಟವರೆಷ್ಟೋ…

    ಆತ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯವ. 23 ವರ್ಷ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಕನ್​ಸ್ಟ್ರಕ್ಷನ್ ಸೈಟ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ದುಡಿದುದರಲ್ಲಿ ಅಷ್ಟಿಷ್ಟು ಹಣವನ್ನು ಊರಿಗೆ ಕಳಿಸುತ್ತಿದ್ದ. ಕರೊನಾ ಕಾರಣದಿಂದಾಗಿ ಲಾಕ್​ಡೌನ್ ಘೋಷಣೆಯಾಗಿತ್ತಲ್ಲ, ಊರಿಗೆ ವಾಪಸಾಗಲು ನಿರ್ಧರಿಸಿದ. ಹನ್ನೆರಡು ದಿನಗಳಲ್ಲಿ ಸುಮಾರು 2000 ಕಿಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಅಂತೂ ಊರು ಸೇರಿದ. ಮನೆಯವರಿಗೆ ಇದ್ದುದರಲ್ಲಿ ಸ್ವಲ್ಪ ಸಮಾಧಾನ, ಬಂದನಲ್ಲ ಎಂದು. ಆದರೆ ವಿಧಿಯಾಟ ನೋಡಿ. ಆಯಾಸ ಪರಿಹಾರಕ್ಕೆಂದು ಹೊಲಕ್ಕೆ ಹೋದ ಆತ ಅಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ.

    ಈ ಕರೊನಾ ಎಂಬ ಮಹಾಮಾರಿ ಎಂತೆಂಥ ಪ್ರಸಂಗಗಳನ್ನು, ಮಾನವೀಯ ಸಂಕಟಗಳನ್ನು ತಂದಿಟ್ಟಿದೆ! ಕೆಲಸ ಹುಡುಕಿಕೊಂಡು ಪರಸ್ಥಳಕ್ಕೆ ಬಂದವರು ನೂರಾರು ಸಾವಿರಾರು ಕಿಲೋಮೀಟರ್ ಕ್ರಮಿಸಿ ತಮ್ಮೂರಿಗೆ ವಾಪಸಾಗುವಾಗ ಅನುಭವಿಸಿದ ಸಂಕಟಗಳನ್ನು ಪದಗಳಲ್ಲಿ ಹಿಡಿದಿಡಲಾದೀತೆ? ರೈಲುಗಳಲ್ಲೇ ಪ್ರಸವಿಸಬೇಕಾಗಿ ಬಂದ ಹೆಣ್ಣುಮಕ್ಕಳೆಷ್ಟೋ? ಈ ನಡುವೆ, ಮಾನವೀಯತೆಯ ಹಲವು ಆಯಾಮಗಳೂ ತೆರೆದುಕೊಂಡಿದ್ದು ಸಂಕಟದ ನಡುವೆಯೂ ಸ್ವಲ್ಪಮಟ್ಟಿನ ಸಾಂತ್ವನ ಒದಗಿಸಿತು.

    ಜೀವ ಮುಖ್ಯವೋ ಜೀವನ ಮುಖ್ಯವೋ ಎಂಬ ಸಂದಿಗ್ಧವನ್ನು ಜಗದೆದುರು ತಂದಿದೆ ಈ ಕಾಯಿಲೆ. ಒಂದೊಮ್ಮೆ ಜೀವವೇ ಮುಖ್ಯವೆಂದು ಕಠಿಣವಾದಂತಹ ಲಾಕ್​ಡೌನ್ ಇತ್ಯಾದಿ ಕ್ರಮಗಳನ್ನು ಕೈಗೊಂಡಿರೋ ನಿತ್ಯಜನಜೀವನ ಸ್ತಬ್ಧಗೊಂಡು ಜೀವನೋಪಾಯದ ದಾರಿಗಳು ಮುಚ್ಚಿ ಜನರು ಪರದಾಡುವಂತಾಗುತ್ತದೆ. ಅದೇ ಜೀವನ ಮುಖ್ಯ ಎಂದು ಸಾರ್ವಜನಿಕ ಜೀವನದಲ್ಲಿ ವ್ಯಾಪಾರವ್ಯವಹಾರ, ಓಡಾಟ ಹೀಗೆ ಎಲ್ಲದಕ್ಕೂ ಮುಕ್ತ ಅವಕಾಶ ನೀಡಿಬಿಟ್ಟರೆ ವೈರಸ್​ಗೆ ಹಬ್ಬಲು ತಾಂಬೂಲ ನೀಡಿ ಆಮಂತ್ರಿಸಿದಂತಾಗುತ್ತದೆ. ಭಾರತದಲ್ಲಿ, ಮೊದಲು ಜೀವ ಮುಖ್ಯ, ಜೀವ ಉಳಿದರೆ ಹೇಗೋ ಮತ್ತೆ ಜೀವನ ಕಟ್ಟಿಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬಂದು ದಿಗ್ಬಂಧನ ವಿಧಿಸಲಾಯಿತು. ಇದೀಗ ಜನಜೀವನ ಹಳಿಗೆ ಮರಳುತ್ತಿದೆ. ಆದರೆ ಕರೊನಾ ಅಪಾಯ ದೂರವಾಗಿಲ್ಲ. ಬದಲಿಗೆ ಹರಡುತ್ತಲೇ ಇದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿರುವ ವ್ಯಕ್ತಿಗತ ಅಂತರ, ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಆರೋಗ್ಯಕರ ಜೀವನಶೈಲಿ ಅಳವಡಿಕೆ, ಆಹಾರವಿಹಾರದಲ್ಲಿ ನಿಯಂತ್ರಣ- ಈ ಮುಂತಾದ ಕಿವಿಮಾತನ್ನು ಗಮನದಲ್ಲಿಟ್ಟುಕೊಂಡೇ ಇನ್ನೂ ಹಲವಾರು ತಿಂಗಳು ಅಥವಾ ವರ್ಷವೇ ಇರಬಹುದು- ನಾವು ಬದುಕಬೇಕಾಗುತ್ತದೆ ಎಂಬುದು ನಿರ್ವಿವಾದ.

    ಈ ನಡುವೆ, ಕೆಲ ದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ ‘ಆತ್ಮನಿರ್ಭರ ಭಾರತ’ ಪದಪುಂಜದ ಬಗ್ಗೆ ನಾನಾ ಬಗೆಯ ವ್ಯಾಖ್ಯಾನಗಳು, ವಿಶ್ಲೇಷಣೆಗಳು ನಡೆಯುತ್ತಿವೆ. ಸ್ಥೂಲವಾಗಿ ಇದನ್ನು ‘ಸ್ವಾವಲಂಬಿ ಭಾರತ’ ಎಂದು ವ್ಯಾಖ್ಯಾನಿಸಲಾಯಿತು. ಅಂದರೆ ಭಾರತ ಎಲ್ಲ ರಂಗಗಳಲ್ಲಿ ಸ್ವಾವಲಂಬಿಯಾಗಬೇಕು, ತನ್ನ ಕಾಲಮೇಲೆ ತಾನು ನಿಲ್ಲಬೇಕು, ಸ್ವಯಂಪೂರ್ಣವಾಗಬೇಕು ಎಂದು. ಹಾಗೆನೋಡಿದರೆ ಸ್ವಾವಲಂಬಿಯಾಗುವುದು ಪ್ರತಿಯೊಬ್ಬ ಮನುಷ್ಯನ ಬಯಕೆ, ಮೂಲಗುಣ. ‘ನಾನು ಬೇರೆಯವರ ಹಂಗಿನಲ್ಲಿರಲಾರೆ’ ಎನ್ನುವುದು ಅಹಂಕಾರದ ಠೇಂಕಾರ ಅಲ್ಲ, ಸ್ವಾವಲಂಬಿತ್ವ, ಆತ್ಮಾಭಿಮಾನದ ಸೆಲೆ. ಕೆಲವೊಮ್ಮೆ ಇದು ಅಹಂಗಳ ತಿಕ್ಕಾಟವಾಗಿ ಪರಿಣಮಿಸಿ ಮಗ ಅಪ್ಪನಿಗೆ, ತಮ್ಮ ಅಣ್ಣನಿಗೆ, ಉದ್ಯೋಗಿ ಮೇಲಧಿಕಾರಿಗೆ ಸವಾಲೆಸೆಯುವುದು ಕೂಡ ನಡೆಯುತ್ತವೆ. ಅದು ಬೇರೆ ವಿಚಾರ.

    ಭಾರತ ಈಗ ಎಷ್ಟರಮಟ್ಟಿಗೆ ಸ್ವಾವಲಂಬಿಯಾಗಿದೆ, ಯಾವ್ಯಾವ ರಂಗಗಳಲ್ಲಿ ಇತರ ದೇಶಗಳನ್ನು ಅವಲಂಬಿಸಿದೆ ಎಂಬಿತ್ಯಾದಿ ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚೆಗೆ ಒಳಪಡಿಸಿಲ್ಲ. ಪ್ರಧಾನಿ ಮೋದಿ ಉಲ್ಲೇಖಿಸಿದ ‘ಆತ್ಮನಿರ್ಭರ ಭಾರತ’ ಪದವನ್ನು ನಾವು ಲೌಕಿಕದಿಂದ ಅಲೌಕಿಕ ನೆಲೆಯತ್ತಲೂ ಒಯ್ಯಬಹುದು. ಇಲ್ಲಿ ‘ಆತ್ಮನಿರ್ಭರ’ ಎಂದರೆ ಯಾರಿಗೂ ಹೊರೆಯಾಗದಂತೆ ಅಥವಾ ತನ್ನ ಆತ್ಮಕ್ಕೂ ತಾನು ಹೊರೆಯಾಗದಂತೆ ಬದುಕುವುದು ಎಂದೂ ಅನ್ವಯಿಸಬಹುದು. ಸಾವಿರಾರು, ಲಕ್ಷಾಂತರ ಎಲೆಗಳು ಸೇರಿ ಮರ ಸೊಂಪಾಗಿ ಕಾಣುತ್ತದೆ. ಎಲೆಗಳು ಹೆಚ್ಚಿದಷ್ಟು ಮರಕ್ಕೆ ಭಾರವೇನಲ್ಲ. ಬದಲಿಗೆ ಅದು ಮರದ ಫಲವಂತಿಕೆಯ ಸಂಕೇತ. ಆ ಒಂದೊಂದು ಎಲೆಯೂ ತನ್ನ ಜೀವನಕ್ರಮವನ್ನು ಪೂರೈಸಿ ಹಣ್ಣಾಗಿ ಮರದಿಂದ ಕಳಚಿಕೊಂಡು ನೆಲಕ್ಕೆ ಬಿದ್ದು ಮಣ್ಣಾಗುತ್ತದೆ. ಅಲ್ಲಿಗೆ ಅದರ ಜೀವನ ಸಾರ್ಥಕ್ಯ ಪಡೆಯುತ್ತದೆ. ಅತ್ತ ಮರದಲ್ಲಿ ಮತ್ತೆ ಹೊಸ ಚಿಗುರು, ಹಸಿರು, ಹಣ್ಣು… ಹೀಗೆ ಕಾಲಚಕ್ರ ಸಾಗುತ್ತದೆ. ಮಾನವ ಕೂಡಾ ಹಾಗೇ. ಯಾರಿಗೂ ಹೊರೆಯಾಗದಂತೆ, ಭಾರವಾಗದಂತೆ, ಸ್ವಾವಲಂಬಿಯಾಗಿ ಬಾಳಿಬದುಕಿದರೆ ಜನಸಂಖ್ಯೆ ಎಂಬುದು ಯಾವ ದೇಶಕ್ಕೂ ಸಮಸ್ಯೆಯಾಗುವುದಿಲ್ಲ, ಬದಲಿಗೆ ವರವೇ ಆಗಬಲ್ಲದು. ಇಂತಿರುವಾಗ, ತನ್ನ ಆತ್ಮಕ್ಕೂ ಹೊರೆಯಾಗದಂತೆ ಬದುಕುವುದು ಎಂದರೆ ಎಂಥ ಅದ್ಭುತ ಆಲೋಚನೆಯಲ್ಲವೆ…

    ಇನ್ನು, ಆತ್ಮದ ಬಗ್ಗೆ ನಮ್ಮಲ್ಲಿ ಅಂತ್ಯವಿಲ್ಲದಷ್ಟು ವ್ಯಾಖ್ಯಾನಗಳು, ಟಿಪ್ಪಣಿಗಳು ಬಂದಿವೆ, ಬರುತ್ತಲೇ ಇವೆ. ಭಾರತದ ಪುರಾಣೇತಿಹಾಸಗಳಲ್ಲಿ ಈ ಬಗ್ಗೆ ವಿವರಣೆ ಇದೆ. ಅಷ್ಟಕ್ಕೂ, ನಮ್ಮದು ಪಾಶ್ಚಿಮಾತ್ಯರ ಹಾಗೆ ಭೋಗ ಬದುಕಿನ ಪರಿಕಲ್ಪನೆಯಲ್ಲ. ನಮ್ಮದು ತ್ಯಾಗ, ಯೋಗದ ಆದರ್ಶ. ಹೀಗಾಗಿ ಬಹುತೇಕ ಭಾರತೀಯರ ಜೀವನದ ಆತ್ಯಂತಿಕ ಬಯಕೆ ಮೋಕ್ಷವೇ ಆಗಿರುತ್ತದೆ. ಅರಿಷಡ್ವರ್ಗಗಳೆಂಬ ವೈರಿಗಳು ಯಾರನ್ನೂ ಬಿಡುವುದಿಲ್ಲ; ಆದರೂ ಅವುಗಳನ್ನು ಮೀರುವ ಕೀಲಿಕೈಯನ್ನೂ ಪೂರ್ವಜರು ನಮಗೆ ನೀಡಿದ್ದು ಭಾಗ್ಯವಿಶೇಷವೇ ಸರಿ.

    ‘ಬುದ್ಧಿಯು ತಿಳಿದುಕೊಳ್ಳಲಾರದ್ದನ್ನು ಅರಿಯಲು ಆತ್ಮ ತನ್ನ ಕಿವಿಗಳನ್ನು ತೆರೆದಿಡುತ್ತದೆ’ ಎಂದಿದ್ದಾನೆ, ರೂಮಿ. ಎಂಥ ಅರ್ಥವತ್ತಾದ ಮಾತು.

    ‘ಕೆಲಸ ಎಷ್ಟೇ ಸಣ್ಣದಿರಲಿ, ಅದರಲ್ಲಿ ನಿಮ್ಮ ಹೃದಯ, ಮನಸ್ಸು, ಬುದ್ಧಿ ಮತ್ತು ಆತ್ಮವನ್ನೂ ಸಂಪೂರ್ಣವಾಗಿ ತೊಡಗಿಸಿ ಆ ಕೆಲಸ ಮಾಡಿ. ಆಗ ಯಶಸ್ಸು ನಿಮ್ಮ ಬಳಿಸಾರುತ್ತದೆ’ ಎಂದಿದ್ದಾರೆ ಸ್ವಾಮಿ ಶಿವಾನಂದ. ಅಂದರೆ ನಮ್ಮ ನಮ್ಮ ಕೆಲಸಗಳನ್ನು ಮೇಲುಕೀಳು ಎಂದೆಣಿಸದೆ ಆತ್ಮವತ್ತಾಗಿ ಮಾಡುವುದು.

    ಆತ್ಮದ ಉಲ್ಲೇಖದ ಮೂಲಕ ಗೆಳೆತನದ ಪರಿಯನ್ನು ಅರಿಸ್ಟಾಟಲ್ ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ. ಅವನೆನ್ನುತ್ತಾನೆ: ‘ಸ್ನೇಹ ಎಂದರೇನು? ಒಂದು ಆತ್ಮ ಎರಡು ದೇಹಗಳಲ್ಲಿ ಇರುವುದು.’

    ಭಗವಾನ್ ಕೃಷ್ಣನಂತೂ ಭಗವದ್ಗೀತೆಯಲ್ಲಿ ಆತ್ಮದ ಸ್ವರೂಪವನ್ನು ದೀರ್ಘವಾಗಿಯೇ ವಿವರಿಸಿದ್ದಾನೆ. ಗೀತೆಯ ಎರಡನೇ ಅಧ್ಯಾಯದಲ್ಲಿ ಆತ್ಮದ ಕುರಿತಾಗಿ ಅನೇಕ ಶ್ಲೋಕಗಳಿವೆ. ಈ ಬಗ್ಗೆ ನಾನಾ ವಿದ್ವಾಂಸರು ವಿವರಣೆ, ವ್ಯಾಖ್ಯಾನ ನೀಡಿದ್ದಾರೆ. ‘ದೇಹ ನಶ್ವರ. ಆದರೆ ಆತ್ಮ ಅಮರ. ಆತ್ಮಕ್ಕೆ ಆದಿ-ಅಂತ್ಯವಿಲ್ಲ. ಹುಟ್ಟು ಸಾವುಗಳಿಲ್ಲ. ಸಾವಿಗೆ ಅಂಜಬಾರದು. ಅದೊಂದು ಪರಿವರ್ತನಾ ಹಂತ’ ಎಂಬುದು ಕೃಷ್ಣನ ವಿಶ್ಲೇಷಣೆ. ‘ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿಯು ಸುಡಲಾರದು, ನೀರು ತೇವ ಮಾಡಲಾರದು ಮತ್ತು ಗಾಳಿಯು ಒಣಗಿಸಲಾರದು’ ಎನ್ನುವ ಮೂಲಕ ಆತ್ಮ ಅವಿನಾಶಿ ಎಂಬ ತತ್ತ್ವ ಸಾರುತ್ತಾನೆ ಶ್ರೀಕೃಷ್ಣ.

    ಒಂದು ದೇಶದ ಸಂಸ್ಕೃತಿಯು ಆ ದೇಶದ ಜನರ ಹೃದಯ ಮತ್ತು ಆತ್ಮದಲ್ಲಿ ಅಡಕವಾಗಿದೆ ಎಂದು ಪ್ರಾಜ್ಞರು ಹೇಳುತ್ತಾರೆ.

    ಇದೆಲ್ಲವೂ ನಿಜ. ಆದರೆ ಎಲ್ಲರಿಗೂ ಅಂಥದೊಂದು ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಸುಲಭವಲ್ಲ. ಹೀಗಿದ್ದರೂ, ಇಡೀ ಜೀವನದ ಸಾರವನ್ನು, ಗುರಿಯನ್ನು ಸರಳವಾಗಿ ಕೆಲವೇ ಪದಗಳಲ್ಲಿ ಕಟ್ಟಿಕೊಡುವ ಶ್ಲೋಕವೊಂದು ಶತಮಾನಗಳಿಂದ ಭಾರತೀಯರ ನಿತ್ಯಜೀವನದಲ್ಲಿ ಊರುಗೋಲಾಗುತ್ತ ಬಂದಿರುವುದು ವಿಶೇಷವೇ ಸರಿ.

    ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ

    ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಂ ಅಚಂಚಲಂ

    ಮರಣ ಯಾವುದೇ ತೊಂದರೆಯಿಲ್ಲದೆ, ನೋವಿಲ್ಲದೆ, ಅನಾಯಾಸವಾಗಿ ಬರಬೇಕಂತೆ. ನನ್ನ ಸಂಬಂಧಿ ಅಜ್ಜಿಯೊಬ್ಬರು ಹೇಳುತ್ತಿದ್ದರು- ‘ಕರೆಂಟ್ ಸ್ವಿಚ್ ಆಫ್ ಮಾಡಿದಾಗ ಬಲ್ಬು ಉರಿಯುವುದನ್ನು ನಿಲ್ಲಿಸುವ ಹಾಗೇ ಮಾನವನಿಗೂ ಛಕ್ಕಂತ ಸಾವು ಬರಬೇಕು’ ಎಂತ. ಇದೂ ಅನಾಯಾಸ ಮರಣದ ಕಲ್ಪನೆಯೇ ಅಲ್ಲವೆ? ದೈನ್ಯವಿಲ್ಲದ ಅಂದರೆ ಯಾರ ಹಂಗಿಗೂ ಒಳಗಾಗದೆ, ಮುಲಾಜಿಗೆ ಸಿಕ್ಕದೆ ಬದುಕುವಂತಾಗಲಿ; ಬೇರೆಯವರಿಂದ ಬೇಡಿ ದೈನ್ಯದಿಂದ ಜೀವಿಸುವ ಸಂದರ್ಭ ಬರದಿರಲಿ ಎಂಬುದು ಈ ಮೇಲಿನ ಶ್ಲೋಕದ ಮತ್ತೊಂದು ದನಿ. ಅಂದರೆ, ಸ್ವಾವಲಂಬಿ ಜೀವನ. ಹಾಗೆಯೇ, ದೇವರ ಮೇಲೆ ಅಚಂಚಲವಾದ ಭಕ್ತಿ ನೆಲೆಗೊಳ್ಳಲಿ ಎಂದೂ ಪರಮಾತ್ಮನಲ್ಲಿ ಪ್ರಾರ್ಥನೆಯಿದೆ. ಮೂರೇ ಮೂರು ವಾಕ್ಯಗಳಲ್ಲಿ ಇಡೀ ಜೀವನವನ್ನೇ ಕಟ್ಟಿಕೊಟ್ಟ ಪರಿಗೆ ನಮೋ ನಮಃ.

    ಕಾಯಿಲೆ ಕಸಾಲೆಗಳಿಲ್ಲದೆ ಆರೋಗ್ಯದಿಂದಿರಬೇಕು, ಆರೋಗ್ಯವಂತನಾಗಿ ಪೂರ್ಣಾಯುಷ್ಯ ಕಳೆಯಬೇಕು ಎಂಬುದು ಎಲ್ಲರ ಆಸೆ. ಅನಾರೋಗ್ಯವನ್ನು ಯಾರೂ ಬಯಸುವುದಿಲ್ಲ. ಆದರೆ ಅದು ಸಾಮಾನ್ಯವಾಗಿ ಯಾರನ್ನೂ ಬಿಡುವುದಿಲ್ಲ. ಈಗ ಕರೊನಾದಿಂದಾಗಿ ಆಗುತ್ತಿರುವ ಸಾವುನೋವುಗಳ ಬಗ್ಗೆ ಎಲ್ಲೆಡೆ ಕಳವಳ ನಿರ್ವಣವಾಗಿದೆ ಮತ್ತು ಚರ್ಚೆ ನಡೆಯುತ್ತಿದೆ. ಆದರೆ ಬೇರೆ ಬೇರೆ ಕಾಯಿಲೆಗಳಿಂದಾಗಿ ಪ್ರತಿವರ್ಷ ಜಗತ್ತಿನಲ್ಲಿ ಕೋಟ್ಯಂತರ ಮಂದಿ ಸಾವನ್ನಪು್ಪತ್ತಾರೆ. ಹಾಗೇ ಗಮನಿಸುವುದಾದರೆ-ಕ್ಯಾನ್ಸರ್​ನಿಂದ 96 ಲಕ್ಷ, ಹೃದಯ ಕಾಯಿಲೆಗಳಿಂದ 94 ಲಕ್ಷ, ಪಾರ್ಶ್ವವಾಯುವಿನಿಂದ 58 ಲಕ್ಷ, ಸಿಒಪಿಡಿಯಿಂದ (ಶ್ವಾಸಕೋಶ ಸಂಬಂಧಿ ಕಾಯಿಲೆ)31 ಲಕ್ಷ, ಅಲ್ಜಿಮೇರ್ ಮತ್ತು ಇತರ ಕಾಯಿಲೆಯಿಂದ 20 ಲಕ್ಷ, ಮಧುಮೇಹದಿಂದ 16 ಲಕ್ಷ, ರಸ್ತೆ ಅಪಘಾತಗಳಲ್ಲಿ 15 ಲಕ್ಷ, ಅತಿಸಾರ ಸಂಬಂಧಿ ಕಾಯಿಲೆಯಿಂದ 14 ಲಕ್ಷ ಮತ್ತು ಕ್ಷಯರೋಗದಿಂದ 13 ಲಕ್ಷ ಜನರು ಜಾಗತಿಕವಾಗಿ ಪ್ರತಿವರ್ಷ ಸಾವನ್ನಪು್ಪತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್’ ವರದಿ ತಿಳಿಸುತ್ತದೆ. 2009ರಲ್ಲಿ ಕಾಣಿಸಿಕೊಂಡ ಎಚ್1ಎನ್1 ಕಾಯಿಲೆ ಭಾರತದಲ್ಲಿಯೇ ಪ್ರತಿವರ್ಷ ಸಾವಿರಾರು ಜನರನ್ನು ಬಲಿಪಡೆಯುತ್ತದೆ.

    ಇನ್ನು ಭಾರತದಲ್ಲಿ ಪ್ರತಿವರ್ಷ ಸಂಭವಿಸುವ ಕೆಲ ಸಾವುಗಳನ್ನು ಗಮನಿಸುವುದಾದರೆ- ವಿದ್ಯುದಾಘಾತದಿಂದ 12,000, ಆಕಸ್ಮಿಕ ಅಗ್ನಿ ಅವಘಡದಿಂದ 12,700, ರಸ್ತೆ ಮತ್ತು ರೈಲು ಅಪಘಾತಗಳಲ್ಲಿ 1.7 ಲಕ್ಷ ಜನ, ನೀರಿನಲ್ಲಿ ಮುಳುಗಿ 30 ಸಾವಿರ ಜನರು ಪ್ರಾಣತೆರುತ್ತಾರೆ.

    ಸಾವಿನ ಯಾದಿಯನ್ನು ನೀಡುವುದು ಇಲ್ಲಿನ ಉದ್ದೇಶವಲ್ಲ. ಆದರೆ ಕರೊನಾ ಕಾರಣದಿಂದಾಗಿ ಉಂಟಾಗಿರುವ ಆರೋಗ್ಯ ಹೆದರಿಕೆ ಬಗ್ಗೆ ಪ್ರಸ್ತಾಪಿಸಬೇಕಾಯಿತು. ಲಸಿಕೆ ಇನ್ನೂ ಸಿದ್ಧವಾಗದಿರುವುದರಿಂದ ಕರೊನಾ ತನ್ನ ಆಟಾಟೋಪ ಮುಂದುವರಿಸಿದೆ. ಇದರ ಜತೆಗೆ, ಕರೊನಾ ಪಾಸಿಟಿವ್ ಬಂದರೆ ಚಿಕಿತ್ಸಾಕ್ರಮ ಇದೆಯಲ್ಲ ಅದು ಜನರನ್ನು ಕಂಗೆಡಿಸಿದೆ. ಸರ್ಕಾರ ವ್ಯವಸ್ಥೆಮಾಡಿರುವ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಉಳಿಯಬೇಕು ಅಥವಾ ಮನೆಯಲ್ಲೇ ಏಕಾಂತವಾಸದಲ್ಲಿರಬೇಕು. ಈ ಏಕಾಂತತೆಯನ್ನು ಭರಿಸಲಾಗದೆ ಅನೇಕರು ಮಾನಸಿಕ ಖಿನ್ನತೆಗೂ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಕರೊನಾ ಸೋಂಕಿತರು ಶೀಘ್ರ ಚೇತರಿಸಿಕೊಳ್ಳಲಿ, ಕರೊನಾ ಆತಂಕ ಆದಷ್ಟು ಬೇಗ ಮರೆಯಾಗಲಿ ಎಂದು ಆಶಿಸೋಣ..

    ಕೊನೇ ಮಾತು: ಕರೊನಾ ಕಾಲದಲ್ಲಿ ಭಾರತೀಯ ಸಂಪ್ರದಾಯ ಸಂಸ್ಕಾರಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದೆಲ್ಲ ತಾತ್ಕಾಲಿಕವಾಗಿ ಬಾಯ್ಮಾತಿಗೆ ಸೀಮಿತವಾಗದೆ ನಿಜಜೀವನದಲ್ಲಿ ಕಾಯಂ ಆದರೆ ಸಾರ್ಥಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts