More

    ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಲಿ

    ಶೃಂಗೇರಿ: ಗಟ್ಟಿತನದ ವ್ಯಕ್ತಿತ್ವ ಈಗಿನ ಮಕ್ಕಳಲ್ಲಿ ಇರುವುದಿಲ್ಲ. ಪೊಳ್ಳು ಭರವಸೆಗಳ ನಡುವೆ ಬದುಕುವ ಯುವಜನತೆಗೆ ಆತ್ಮಸ್ಥೈರ್ಯದ ಅಗತ್ಯವಿದೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು.

    ಭಾನುವಾರ ಜೆಸಿಬಿಎಂ ಕಾಲೇಜಿನಲ್ಲಿ ಜೆಸಿಐ ಸಂಸ್ಥೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸುವ ಮಾನಸಿಕ ದೃಢತೆ ಜತೆಗೆ ಹೆಜ್ಜೆ ಇರಿಸಿದಾಗ ಮಾತ್ರ ಜೀವನದಲ್ಲಿ ನಮ್ಮ ಕನಸು ನನಸಾಗಲು ಸಾಧ್ಯ ಎಂದರು.
    ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಮಾಯವಾಗಿದೆ. ಸರ್ಕಾರ ಹಾಗೂ ಸಮಾಜವನ್ನು ಕಟ್ಟುವ ನಾವು ಯಾವುದೇ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವುದೇ ಇಲ್ಲ. ನಾವು ಸವಾಲುಗಳನ್ನು ಸ್ವೀಕರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಭ್ರಷ್ಟಾಚಾರ ತಾಂಡವವಾಡುತ್ತಿದ್ದಾರೂ ನಾವು ತಣ್ಣಗೆ ಕುಳಿತುಕೊಂಡಿದ್ದೇವೆ. ಅವಮಾನಗಳನ್ನು ಎದುರಿಸಿದಾಗ ಮನುಷ್ಯನ ಅನುಭವಗಳು ಪಕ್ವವಾಗುತ್ತದೆ ಎಂದು ಹೇಳಿದರು.
    ಪತ್ರಕರ್ತರಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಬದ್ಧತೆ ಇದ್ದಾಗ ಆತ ಉತ್ತಮ ಪತ್ರಕರ್ತನಾಗಲು ಸಾಧ್ಯ. ಸತ್ಯ ಹಾಗೂ ಪ್ರಾಮಾಣಿಕ ನಡೆತೆ ನಿರ್ಭೀತ ಪತ್ರಕರ್ತನ ಆಯುಧಗಳು. ಸಮುದಾಯದಲ್ಲಿ ಸತ್ಕಾರ್ಯಗಳನ್ನು ಮಾಡಿದಾಗ ಸಮಾಜ ಅಂತಹ ಸಂಸ್ಥೆಯನ್ನು ನಿರಂತರ ನೆನಪಿನಲ್ಲಿ ಇಡುತ್ತದೆ. ವ್ಯಕ್ತಿತ್ವ ವಿಕಸನಗೊಳಿಸುವ ಸಂಸ್ಥೆ ಯುವಪೀಳಿಗೆಯತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
    ನೂತನ ಅಧ್ಯಕ್ಷ ಎಚ್.ಜೆ.ರಾಘವೇಂದ್ರ ಮಾತನಾಡಿ, ಒಂದು ಸಂಸ್ಥೆಯ ನಾಯಕತ್ವ ವಹಿಸುವುದು ಸುಲಭವಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಸಂಸ್ಥೆಯ ಶ್ರೇಯೋಭಿವೃದ್ಧಿ ಸಾಧ್ಯ. ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಅದು ನಾಯಕತ್ವದ ಶ್ರೇಷ್ಠ ಜವಾಬ್ದಾರಿ ಎಂದರು.
    ಶಿಕ್ಷಣ ತಜ್ಞ ರಾಜಶೇಖರ್ ಹೆಬ್ಬಾರ್, ಜೆಸಿಐ ವಲಯ-14ರ ಅಧ್ಯಕ್ಷೆ ಆಶಾ ಜೈನ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು. ನೂತನ ಕಾರ್ಯದರ್ಶಿ ರಮೇಶ್ ಶೂನ್ಯ, ನಿರ್ಗಮಿತ ಅಧ್ಯಕ್ಷ ಸುಜನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts