More

  ಕಾಂಗ್ರೆಸ್​ ಬೇರು ಮತ್ತಷ್ಟು ಗಟ್ಟಿಯಾಗಲಿ: ಶಾಸಕಿ ರೂಪಕಲಾ ಕರೆ

  ಬೇತಮಂಗಲ: ಕಾಂಗ್ರೆಸ್​ ಕಾರ್ಯಕರ್ತರೆಂಬ ಬೇರುಗಳು ಗಟ್ಟಿಯಾಗಿಯೇ ಇದೆ. ಆದರೆ ಚುನಾವಣಾ ಸಂದರ್ಭದಲ್ಲಿ ಮತ್ತಷ್ಟು ಗಟ್ಟಿಯಾಗಬೇಕಾಗಿದೆ ಎಂದು ಕೆಜಿಎಫ್​ ಶಾಸಕಿ ಎಂ.ರೂಪಕಲಾ ಹೇಳಿದರು.

  ಆಂಧ್ರ ಗಡಿಭಾಗದಲ್ಲಿನ ಎನ್​.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯ ತಾತೇನಹಳ್ಳಿ ಕ್ರಾಸ್​ನಲ್ಲಿ ಸೋಮವಾರ ಆಯೋಜಿಸಿದ್ದ ರಾಜೀವ್​ ಗಾಂಧಿ ವೇದಿಕೆಯಲ್ಲಿ ಬೂತ್​ ಮಟ್ಟದ ಕಾರ್ಯಕರ್ತರ ಜತೆ ಸಂವಾದ ಮತ್ತು ಚುನಾವಣೆಗೆ ಸಜ್ಜಾಗುವ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಬೂತ್​ ಮಟ್ಟದ ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದರೆ ಪಕ್ಷದ ಸಂಘಟನೆ ಬಲವಾಗಿಸಲು ಸಮಿತಿಗಳನ್ನು ಪುನರ್​ ರಚಿಸಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುವುದು. ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಗುರುತಿನ ಚೀಟಿ ವಿತರಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮತ್ತು ಅಧಿಕಾರ ಬಂದಾಗ ಸರ್ಕಾರದ ವಿವಿಧ ಸಮಿತಿಗಳಲ್ಲಿ ನೇಮಕ ಮಾಡಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಸುಮ್ಮನೆ ಹಾರ ಹಾಕಿ ಜೈಕಾರ ಕೂಗಿದರೆ ಅಂತಹವರನ್ನ ಗುರುತಿಸಲು ಸಾಧ್ಯವಿಲ್ಲ ಎಂದರು.

  ಎರಡು ವರ್ಷಗಳ ಕರೊನಾ ಕಷ್ಟದ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿತ್ತು. ಆದರೆ ಅದಕ್ಕೂ ಮುಂಚೆ ಸಮ್ಮಿಶ್ರ ಸರ್ಕಾರ ಇದ್ದಾಗ ಮತ್ತು ಕಳೆದ ಒಂದು ವರ್ಷದಿಂದ ಈಚೆಗೆ ಬರದಿಂದ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ರೂಪಕಲಾ ಹೇಳಿದರು.

  ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ನೋಟಿಗೆ ಓಟ್​ ಸಿಗುತ್ತೆ ಎಂಬ ಭಾವನೆಯನ್ನು ಕಾರ್ಯಕರ್ತರು ಮತ್ತು ಮುಖಂಡರು ಬಿಡಬೇಕು. ಕನಿಷ್ಠ 5 ಗುಂಟೆ ಜಮೀನು ಇರುವ ರೈತರಿಂದ ಹಿಡಿದು ಪ್ರತಿಯೊಬ್ಬರಿಗೂ ಬಡ್ಡಿ ರಹಿತ ಸಾಲ ಕೊಡಿಸಲು ಪ್ರತಿಗ್ರಾಮದಲ್ಲಿನ ಕಾರ್ಯಕರ್ತರು ಮತ್ತು ಮುಖಂಡರು ಪ್ರಯತ್ನಿಸಬೇಕು. ಅದೇ ರೀತಿ ಸ್ವ-ಸಹಾಯ ಗುಂಪುಗಳ ಮೂಲಕ ಸಾಲಸೌಲಭ್ಯ ಪಡೆಯದ ತಾಯಂದಿರನ್ನು ಗುರುತಿಸಿ ಸೊಸೈಟಿಗಳ ಮೂಲಕ ಬಡ್ಡಿರಹಿತ ಸಾಲ ಕೊಡಿಸಿ ನೋಟು ಇಲ್ಲದ ಓಟು ನೀಡುವಂತಹ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಕಾರ್ಯಕರ್ತರಿಂದ ಆಗಬೇಕು ಎಂದರು.

  ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೃಷ್ಣರೆಡ್ಡಿ, ನಗರಸಭೆ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ, ಮುಖಂಡರಾದ ವಿಜಯರಾವರೆಡ್ಡಿ, ಅಮು ಲಕ್ಷ್ಮಿನಾರಾಯಣ, ಅಪ್ಪಿವೆಂಕಟರಾಮರೆಡ್ಡಿ, ಬಾಲಕೃಷ್ಣ, ಕೃಷ್ಣಪ್ಪ, ಶ್ರೀಧರರೆಡ್ಡಿ, ರಾಂಬಾಬು, ಕೃಷ್ಣಮೂರ್ತಿ, ಅಣ್ಣಾಮಲೈ, ಬುಜ್ಜಿ ಮತ್ತಿತರರಿದ್ದರು.

  ಭಾವುಕರಾದ ಶಾಸಕಿ: ನಮ್ಮ ಪಕ್ಷ ಅಧಿಕಾರ ಇಲ್ಲದಿದ್ದರೂ ಸಾಕಷ್ಟು ಅಡೆ ತಡೆ, ಸುಳ್ಳು ಆರೋಪ, ಅಪಪ್ರಚಾರ, ವಿರೋಧಿಗಳು ನೀಡಿದ ಮಾನಸಿಕ ಹಿಂಸೆಗಳ ಮಧ್ಯೆಯೂ ಪ್ರಾಮಾಣಿಕವಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೋರಾಟ ಮಾಡಿದ್ದೇನೆ. ಮತದಾರರ ಮತ್ತು ಪದ ಕಾರ್ಯಕರ್ತರ ಋಣ ತೀರಿಸಲು ಶ್ರಮಿಸುವುದೇ ನನ್ನ ಗುರಿಯಾಗಿದೆ ಎಂದು ಶಾಸಕಿ ಭಾವುಕರಾಗಿ ನುಡಿದರು.

  150 ಕೋಟಿ ಆನುದಾನ: ಕಳೆದ ನಾಲ್ಕು ವರ್ಷಗಳ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ 150 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆ ಪೈಕಿ ರಸ್ತೆಗಳು, ಕುಡಿಯುವ ನೀರು, ಅಂತರ್ಜಲ ಗುಣಮಟ್ಟ ಹೆಚ್ಚಿಸಲು 200ಕ್ಕೂ ಹೆಚ್ಚು ಚೆಕ್​ ಡ್ಯಾಂಗಳು, ನೂತನ ತಾಲೂಕು ರಚನೆಯಾದ ನಂತರ ನೂತನ ತಾಲೂಕು ಕಚೇರಿಗಳ ಕಟ್ಟಡಗಳು, ಅದಕ್ಕೆ ಬೇಕಾದ ಮೂಲಸೌಕರ್ಯ ಸೇರಿ ತ್ವರಿತಗತಿಯಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಪ್ರತಿ ಹಳ್ಳಿಯಲ್ಲೂ ಆಗಬೇಕಾದ ಕೆಲಸಗಳನ್ನು ಮಾಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಶಾಸಕಿ ರೂಪಕಲಾ ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts