More

    ಕೋಟಿತೀರ್ಥ ಶುದ್ಧೀಕರಣ ದೇಶಕ್ಕೆ ಮಾದರಿಯಾಗಲಿ

    ಗೋಕರ್ಣ: ಕೋಟಿ ತೀರ್ಥವು ಪುರಾಣ ಪ್ರಸಿದ್ಧ ತಾಣವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಯಾತ್ರಿಕರು ಆಗಮಿಸುತ್ತಾರೆ ಹಾಗಾಗಿ ಇಲ್ಲಿ ನಡೆಸುವ ಕಾಮಗಾರಿಯು ದೇಶದಲ್ಲಿಯೇ ಮಾದರಿಯಾಗಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
    ಮಂಗಳವಾರ ಒಂದೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುರಾಣ ಪ್ರಸಿದ್ಧ ಪುರಾತನ ಕೋಟಿ ತೀರ್ಥ ಪುಷ್ಕರಣಿ ಶುದ್ಧೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಆರು ಎಕರೆ ವಿಶಾಲದ ಈ ತೀರ್ಥದ ಅಭಿವೃದ್ಧಿಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕ್ಷೇತ್ರದ ಹಿರಿಯ ವೈದಿಕರ, ಪುರೋಹಿತರ ಮತ್ತು ತೀರ್ಥದ ಬಗ್ಗೆ ಬಲ್ಲ ತಜ್ಞರ ಸಲಹೆ ಕೇಳಿ ಕೆಲಸ ಮಾಡುವಂತಾಗಬೇಕು. ಕೋಟಿತೀರ್ಥ ಪೂರ್ಣವಾಗಿ ಶುದ್ಧಗೊಂಡು ಯಾತ್ರಿಕರಿಗೆ ಅವಶ್ಯವಿರುವ ಏರ್ಪಾಟುಗಳನ್ನು ಮಾಡಿಕೊಡಬೇಕು. ಇದಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿದ್ದಲ್ಲಿ ಅದರ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರ ಭರವಸೆ ನೀಡಿದರು.
    ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನೆ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಈ ತೀರ್ಥದ ಪೌರಾಣಿಕ ಮಹತ್ವವನ್ನು ವಿವರಿಸಿ ಮೂರೂವರೆ ದಶಕಗಳ ನಂತರ ಇದರ ಸಂಪೂರ್ಣ ಅಭಿವೃದ್ಧಿಗೆ ಕಾರಣರಾದ ಸಚಿವ ಈಶ್ವರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈಶ್ವರಪ್ಪ ಅವರು ಕೆಲ ತಿಂಗಳ ಹಿಂದೆ ಇಲ್ಲಿಗೆ ಬಂದಾಗ ನೀಡಿದ ಭರವಸೆಯನ್ನು ಈಗ ಈಡೇರಿಸಿದ್ದಾರೆ. ಅವರು ಮಾಡಿರುವ ಈ ಅಭಿವೃದ್ಧಿ ಶಾಶ್ವತವಾಗಿ ಜನರ ಮನದಲ್ಲಿ ಉಳಿಯಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು.
    ಜಿಪಂ ಸಿಇಒ ಪ್ರಿಯಾಂಗಾ ಎಂ., ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು, ಉಪಾಧ್ಯಕ್ಷೆ ಶಾರದಾ ಮೂಡಂಗಿ, ತಾಪಂ ಸದಸ್ಯ ಮಹೇಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಹಿರಿಯ ಆಗಮಿಕ ವೇ. ಗಜಾನನ ಹಿರೇ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿ, ವಿವಿಧ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts