More

    ಸರ್ಕಾರ ರೈತರು ಬೆಳೆದ ಸಿರಿಧಾನ್ಯ ಖರೀದಿಸಲಿ

    ಕೂಡಲಸಂಗಮ : ಅನ್ನಭಾಗ್ಯ ಯೋಜನೆಗೆ ಸರ್ಕಾರ ಬೇರೆ ರಾಜ್ಯದ ಅಕ್ಕಿ ಖರೀದಿಸುವ ಬದಲು ರಾಜ್ಯದ ರೈತರು ಉತ್ಪಾದಿಸಿದ ಭತ್ತ, ರಾಗಿ, ಸಿರಿಧಾನ್ಯಗಳನ್ನು ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ಹೇಳಿದರು.

    ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಕೂಡಲಸಂಗಮ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ರೈತ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ, ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 11 ಸಾವಿರ ಕೋಟಿ ರೂ. ಕಡಿತ ಮಾಡಿದೆ. ಇದರಿಂದ ಕೃಷಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ರೈತ ಸಂಘಟನೆ ಪ್ರತಿನಿಧಿಗಳಿಗೆ ಜಾಗೃತಿ, ಶಿಸ್ತು, ಸಮಯ ಪಾಲನೆ ಮೂಡಿಸುವ ಉದ್ದೇಶದಿಂದ ಎರಡು ದಿನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಪ್ರವಾಹ ನಿರ್ವಹಣೆಗೆ ಸನ್ನದ್ದರಾಗಿ

    ರಾಜ್ಯದಲ್ಲಿ 300 ರಿಂದ 400 ರೈತ ಸಂಘಟನೆಗಳಿವೆ. ಕೆಲ ಸಂಘಟನೆಗಳು ರಾಜಕೀಯ ಪಕ್ಷಗಳ ಕೈಗೊಂಬೆಯಾಗಿವೆ. ಇದರಿಂದ ರೈತರಿಗೆ ನ್ಯಾಯ ಸಿಗಲು ಹೇಗೆ ಸಾಧ್ಯ? ರೈತರ ಶೋಷಣೆ ನಿಲ್ಲಿಸಲು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಪ್ರತಿಷ್ಠೆ, ಪ್ರಚಾರಕ್ಕಾಗಿ ಶಿಬಿರಕ್ಕೆ ಬರುವುದು ಬೇಡ. ಸಂಘಟನೆ, ಹೋರಾಟಕ್ಕೆ ಸಿದ್ಧರಿರುವರು ಮಾತ್ರ ಶಿಬಿರಕ್ಕೆ ಬನ್ನಿ ಎಂದರು.

    ಬೆಳಗಾವಿ ಸಾವಯವ ಕೃಷಿಕ ಸುರೇಶ ದೇಸಾಯಿ ಶಿಬಿರ ಉದ್ಘಾಟಿಸಿ ಮಾತನಾಡಿ, ರೈತರು ಸ್ವಾವಲಂಬಿಗಳಾಗಬೇಕು. ಸರ್ಕಾರದ ಮೇಲೆ ಅವಲಂಬಿತರಾಗಬಾರದು. ರೈತರಿಗೆ ಬೇರೆ ದೇಶದಲ್ಲಿ ಸಿಗುವಂತಹ ಪ್ರೋತ್ಸಾಹ ನಮ್ಮ ದೇಶದಲ್ಲಿ ಸಿಗುತ್ತಿಲ್ಲ. ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿ, ಆರೋಗ್ಯ ಹಾಳಾಗುತ್ತಿದೆ. ಕಡಿಮೆ ನೀರು ಬಳಸಿ ಕೃಷಿ ಮಾಡುವ ತಾಂತ್ರಿಕತೆಯನ್ನು ರೈತರು ಬಳಸಿಕೊಳ್ಳಬೇಕು ಎಂದರು.

    ಸಮಾರಂಭದಲ್ಲಿ ರೈತ ಸಂಘದ ಉಸ್ತುವಾರಿ ಪ್ರಸನ್‌ಕುಮಾರ, ರೈತ ಮುಖಂಡರಾದ ಈರಣಗೌಡ ಪಾಟೀಲ, ಶಿವಲೀಲಾ ಲಿಗಾಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts