More

    ಸಂಪಾದಕೀಯ: ಸಾಧಕರಿಗೆ ಸ್ಪೂರ್ತಿಯಾಗಲಿ

    ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳಿಗಾಗಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ಪರೀಕ್ಷೆಯಲ್ಲಿ ಈ ಬಾರಿ ಕನ್ನಡಿಗರು ಹಿಂದೆಂದಿಗಿಂತಲೂ ಹೆಚ್ಚಿನ ಯಶಸ್ಸು ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅದರಲ್ಲೂ ರಾಜ್ಯದ ಟಾಪರ್​ಗಳಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಮಹಿಳೆಯರಿದ್ದಾರೆ ಎನ್ನುವುದು ಸಂತಸದ ವಿಚಾರವೂ ಹೌದು.

    ಕಳೆದ ಕೆಲ ವರ್ಷಗಳಿಂದ ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳು ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಕಳೆದ ವರ್ಷ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಉನ್ನತ ಹುದ್ದೆಗೆ ಆಯ್ಕೆಯಾದರೆ, ಈ ಬಾರಿ 36ಕ್ಕೂ ಹೆಚ್ಚು ಜನರು ಯಶಸ್ಸು ಗಳಿಸಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದೆ. ಅದರರ್ಥ ಕೇಂದ್ರ ಸರ್ಕಾರಿ ಪರೀಕ್ಷೆಗಳಲ್ಲಿ ಭಾಷಾ ಸಂಕಷ್ಟವನ್ನು ಮೀರಿ ರಾಜ್ಯದವರು ಸಾಧನೆಗೆ ಪಾತ್ರರಾಗುತ್ತಿದ್ದಾರೆ. ಆದರೆ, ಬೇರೆ ರಾಜ್ಯಗಳ ಅದರಲ್ಲೂ ಉತ್ತರ ಭಾರತ ಅಭ್ಯರ್ಥಿಗಳ ಸಾಧನೆಗೆ ಭಾಷೆ ಪ್ರಮುಖ ವಿಚಾರವಾಗಿರುವುದನ್ನು ಅಲ್ಲಗೆಳೆಯಲಾಗದು. ಇಂಥ ವೈರುಧ್ಯಗಳ ನಡುವೆಯೇ ರಾಜ್ಯದ ಅಭ್ಯರ್ಥಿಗಳು ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ.

    ಸ್ವಅಧ್ಯಯನ, ಪರಿಶ್ರಮ ಫಲ ನೀಡಿದೆ ಎಂದು ಹೆಚ್ಚಿನ ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಆರಂಭಿಕ ಹಂತದಲ್ಲಿ ಮಾರ್ಗದರ್ಶನ ಅಗತ್ಯ ಎಂಬುದನ್ನು ಹೇಳಿ ಕೊಂಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪರೀಕ್ಷಾ ತರಬೇತಿ ಕೇಂದ್ರಗಳ ಕೊರತೆ ಕಾಡುತ್ತಿತ್ತು. ಆದರೆ, ಈಗ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ತರಬೇತಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಈ ಮೊದಲು ದೆಹಲಿ, ಚೆನ್ನೈ, ಹೈದರಾಬಾದ್​ನತ್ತ ಮುಖ ಮಾಡುತ್ತಿದ್ದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಈಗ ಬೆಂಗಳೂರಿಗೆ ಧಾವಿಸುತ್ತಿದ್ದಾರೆ. ರಾಜ್ಯ ಹಾಗೂ ಪರರಾಜ್ಯದವರಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿರುವುದು ಯುಪಿಎಸ್​ಸಿ ಫಲಿತಾಂಶವನ್ನು ಉತ್ತಮ ಪಡಿಸುತ್ತಿದೆ.

    ಯುಪಿಎಸ್​ಸಿ ಪರೀಕ್ಷಾ ಆಕಾಂಕ್ಷಿಗಳು ಉನ್ನತ ಹುದ್ದೆಯ ಗುರಿಯೊಂದಿಗೆ ಕಣಕ್ಕಿಳಿದರೂ ಉದ್ಯೋಗ ಭದ್ರತೆಯೆಂಬ ಪ್ಲಾನ್ ಬಿ ಜತೆಗಿರಲೇಬೇಕು. ಹೀಗಾಗಿ ವೃತ್ತಿಪರ ಕೋರ್ಸ್​ಗಳಲ್ಲಿ ಪದವಿ ಮುಗಿಸಿದವರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಒಂದೊಮ್ಮೆ ವಿಫಲವಾದರೂ ಉದ್ಯೋಗ ಭೀತಿ ಅವರನ್ನು ಕಾಡವುದಿಲ್ಲ. ಆದರೆ, ವೈದ್ಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರರು ಆಡಳಿತ ಸೇವೆಗೆ ಆಯ್ಕೆಯಾದಾಗ ಆಯಾ ಕ್ಷೇತ್ರಗಳಲ್ಲಿ ಬೇರೆಯವರಿಗೆ ದೊರೆಯಬೇಕಾದ ಅವಕಾಶ ಕೈತಪ್ಪಿದಂತಾಗುವುದು ಸುಳ್ಳಲ್ಲ. ಜತೆಗೆ, ಆಡಳಿತಕ್ಕೆ ವೃತ್ತಿಪರರೂ ಬೇಕು ಎನ್ನುವುದು ಸತ್ಯವೇ. ಆದರೆ, ಈ ವೃತ್ತಿಪರರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಸುಲಭ ಎನಿಸುವ, ತಾವು ಓದಿಲ್ಲದ ವಿಷಯಗಳನ್ನೇ ಮುಖ್ಯ ಐಚ್ಛಿಕ ವಿಷಯವನ್ನಾಗಿಸಿಕೊಂಡಿರುತ್ತಾರೆ.

    ಆಡಳಿತ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವಿವಿಧ ತರಬೇತಿ ಯೋಜನೆಗಳನ್ನು ಜಾರಿಗೊಳಿಸಿವೆ. ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಯುಪಿಎಸ್​ಸಿ ಮಾತ್ರವಲ್ಲದೆ, ಕೇಂದ್ರದ ಎಸ್​ಎಸ್​ಸಿ, ರಾಜ್ಯದ ಕೆಪಿಎಸ್​ಸಿ ನಡೆಸುವ ಪರೀಕ್ಷೆಗಳಲ್ಲಿ ಸಾಧನೆ ಸಾಧ್ಯ. ಇತರರಿಗೂ ಇದು ಸ್ಪೂರ್ತಿ ಆಗಬಹುದು.

    ಮುಂಬೈ: ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts