More

    ಪಪಂ ಸದಸ್ಯೆ ಆಶಾ ಮೋಹನ್ ಬಹಿರಂಗ ಚರ್ಚೆಗೆ ಬರಲಿ

    ಮೂಡಿಗೆರೆ: ತಾಲೂಕು ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯಲ್ಲಿರುವವರು ಅವಿದ್ಯಾವಂತರು. ಅವರಿಂದ ಆಸ್ಪತ್ರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆರೋಪ ಮಾಡಿದ್ದ ಪಪಂ ಬಿಜೆಪಿ ಸದಸ್ಯೆ ಆಶಾ ಮೋಹನ್ ಬಹಿರಂಗ ಚರ್ಚೆಗೆ ಬರಲಿ ಎಂದು ಸಮಿತಿ ಸದಸ್ಯ ಚಂದ್ರು ಒಡೆಯರ್ ಸವಾಲು ಹಾಕಿದರು.

    ನಾಲ್ಕೂವರೆ ತಿಂಗಳ ಹಿಂದೆ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ತಾಲೂಕಿನ ಪ್ರಮುಖ ಅಧಿಕಾರಿಗಳು ಹಾಗೂ ಪ್ರಭಾವಿ ನಾಯಕರನ್ನು ಒಳಗೊಂಡ 19 ಸದಸ್ಯರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಕೂಡ ಇದ್ದಾರೆ. ಈವರೆಗೆ ಎರಡು ಸಭೆ ನಡೆದಿದೆ. ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡು ಜಾರಿಗೊಳಿಸಲಾಗಿದೆ. ರೋಗಿಗಳಿಗೆ ಡಿಜಿಟಲ್ ಟೋಕನ್ ಸೌಲಭ್ಯ, 2 ಡಯಾಲಿಸಿಸ್ ಯಂತ್ರ ದುರಸ್ತಿ, ರೋಗಿಗಳಿಗೆ ಆಸ್ಪತ್ರೆಯಲ್ಲೇ ಉಚಿತ ಔಷಧ ವ್ಯವಸ್ಥೆ ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶುಕ್ರವಾರ ಸುದಿಗೋಷ್ಠಿಯಲ್ಲಿ ತಿಳಿಸಿದರು.
    ಈ ಹಿಂದೆ ಟಿಎಚ್‌ಒ ಕಚೇರಿಯನ್ನು ಪಟ್ಟಣದ ಹೊಸ ಕಟ್ಟಡಕ್ಕೆ ಸ್ಥಳಾಂತರ ಸೇರಿದಂತೆ ನಾಲ್ಕೂವರೆ ತಿಂಗಳಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ನೇತೃತ್ವದ ಆರೋಗ್ಯ ರಕ್ಷಾ ಸಮಿತಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಇನ್ನೂ ಎರಡು ಡಯಾಲಿಸಿಸ್ ಯಂತ್ರ ಖರೀದಿಸಲಾಗುವುದು. ಕೊರತೆಯಿರುವ ವೈದ್ಯರನ್ನು ಸದ್ಯದಲ್ಲಿ ನೇಮಿಸಲಾಗುವುದು ಎಂದರು.
    ಎಂ.ಪಿ.ಕುಮಾರಸ್ವಾಮಿ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದಾಗ ಆಶಾ ಮೋಹನ್ ಕೂಡ ಸದಸ್ಯರಾಗಿದ್ದರು. 5 ವರ್ಷದಲ್ಲಿ ಎರಡು ಸಭೆ ಮಾತ್ರ ನಡೆದಿತ್ತು. ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಲಭ್ಯ ಇರಲಿಲ್ಲ. ಅಂದಿನ ಸಮಿತಿ ನಿಷ್ಕ್ರಿಯವಾಗಿತ್ತು. ಆಸ್ಪತ್ರೆಗೆ ಭೇಟಿ ನೀಡದ ಆಶಾ ಮೋಹನ್ ಈಗಿನ ರಕ್ಷಾ ಸಮಿತಿ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
    ಆಶಾ ಮೋಹನ್ ಪ್ರತಿನಿಧಿಸುತ್ತಿರುವ ಪಪಂನ 11ನೇ ವಾರ್ಡ್‌ನಲ್ಲಿ ಪಾರ್ಕ್ ನಿರ್ಮಾಣಕ್ಕೆ 38 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಮೂರು ವರ್ಷ ಕಳೆದರೂ ಪಾರ್ಕ್ ನಿರ್ಮಿಸಿಲ್ಲ. 38 ಲಕ್ಷ ರೂ. ಅನುದಾನ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು. ಹೊಯ್ಸಳ ಕ್ರೀಡಾಂಗಣದ ಬಳಿ ಇದ್ದ ಕೊಳವೆಬಾವಿಯ ಕೈಪಂಪ್ ಕಾಣೆಯಾಗಿದೆ ಎಂದು ದೂರಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಬಿ.ಮಹೇಶ್, ಕೆ.ಎನ್.ಕೋಮಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts