More

    ಮದುವೆಯ ಬಂಧ ಆಗದಿರಲಿ ಆರ್ಥಿಕ ಬಂಧನ

    ಮದುವೆಯ ಬಂಧ ಆಗದಿರಲಿ ಆರ್ಥಿಕ ಬಂಧನ‘ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು’- ಇದು ಪುರಾತನವಾದ ಗಾದೆಮಾತು. ಒಂದೆರಡು ದಶಕಗಳ ಹಿಂದೆ ಒಂದೊಂದು ಮನೆಗಳಲ್ಲಿ ಸಾಮಾನ್ಯವಾಗಿ ಸುಮಾರು 8 ರಿಂದ 12 ಮಕ್ಕಳು ಇರುತ್ತಿದ್ದರು. ಮಕ್ಕಳು ಪ್ರಾಪ್ತವಯಸ್ಸಿಗೆ ಬಂದಾಗ ಅವರ ಮದುವೆಯ ಬಗ್ಗೆ ಚಿಂತೆ ಶುರುವಾಗುತ್ತಿತ್ತು. ಒಂದು ಕಡೆ ಮದುವೆಯ ಖರ್ಚು-ವೆಚ್ಚಕ್ಕೆ ಹಣ ಹೊಂದಿಸುವುದು ಚಿಂತೆಯಾದರೆ ಇನ್ನೊಂದು ಕಡೆ ಮನೆ ಹೆಣ್ಣುಮಕ್ಕಳನ್ನು ಬೇಗ ಮದುವೆ ಮಾಡಿಕೊಟ್ಟರೆ ಮನೆಯಲ್ಲಿ ಸಣ್ಣ ಮಕ್ಕಳನ್ನು ಉಪಚರಿಸಲು, ದನಕರುಗಳನ್ನು ನೋಡಿಕೊಳ್ಳಲು, ಹೊಲಗಳಲ್ಲಿ ದುಡಿಯುವ ಜನ ಕಮ್ಮಿಯಾಗುತ್ತದೆ ಎಂಬ ಮನೋಭಾವವೂ ಇತ್ತು. ಹಾಗಾಗಿ ಮಕ್ಕಳಿಗೆ ಮದುವೆ ಮಾಡುವುದು ವಿಳಂಬವಾಗುತ್ತಿತ್ತು. ಹೆಣ್ಣು ಮಕ್ಕಳು ಮನೆಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾ, ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಿದ್ದರು. ಬಿಡುವಿಲ್ಲದ ದುಡಿಮೆ, ಬೀಡಿ ಕಟ್ಟುವ ಹೊಗೆಸೊಪ್ಪು, ಇತ್ಯಾದಿ ಕಾರಣಗಳಿಂದ ಅನಾರೋಗ್ಯವೂ ಬಾಧಿಸುತ್ತಿತ್ತು. ಇವೆಲ್ಲದರ ನಡುವೆ ವಯಸ್ಸು ದಾಟಿದ ಹೆಣ್ಣು ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ ಕೂಡಲೇ ಗಂಡು ಮಕ್ಕಳಿಗೂ ಮದುವೆ ಮಾಡಬೇಕು. ಯಾಕೆಂದರೆ ಸೊಸೆ ಬಂದರೆ ದುಡಿಯುವ ಕೈಗಳು ಹೆಚ್ಚಾಗುತ್ತವೆ ಎಂಬ ಮನೋಭಾವನೆ ಹೆಚ್ಚಿನವರಲ್ಲಿತ್ತು.

    ಮನೆಯ ಗಂಡು ಮಕ್ಕಳು ದೂರದ ಪಟ್ಟಣಗಳಿಗೆ, ಮುಂಬೈನಂತಹ ನಗರಗಳಿಗೆ ಹೋಗಿ ದುಡಿದು, ಮನೆಯಲ್ಲಿರುವ ಅಕ್ಕ-ತಂಗಿಯ ಮದುವೆಗೆಂದು ಹಣ ಕಳುಹಿಸುತ್ತಿದ್ದರು. ಹಾಗೂ ಹೀಗೂ ಅವರ ಮದುವೆ ಮುಗಿಯುವ ಹೊತ್ತಿಗೆ ಹುಡುಗರ ಮದುವೆ ಪ್ರಾಪ್ತ ವಯಸ್ಸು ದಾಟಿರುವುದುಂಟು. ಮತ್ತೆ ಅವರ ವಯಸ್ಸಿಗೆ ತಕ್ಕನಾದ ವಧುಗಳನ್ನು ಹುಡುಕುವುದೇ ಕಷ್ಟಕರವಾಗಿತ್ತು. ಇಂತಹುದನ್ನು ಬಹುತೇಕ ಕುಟುಂಬಗಳಲ್ಲಿ ಕಾಣಬಹುದಾಗಿತ್ತು.

    ಅಂತೆಯೇ ಮನೆ ಕಟ್ಟುವುದು ಕೂಡ ಸುಲಭವಾಗಿರಲಿಲ್ಲ. ಮನೆ ಮಂದಿಗೆ ಊಟ, ಬಟ್ಟೆ-ಬರೆ, ಪಾತ್ರೆ-ಸರಂಜಾಮುಗಳಿಗೆ ಹಣ ಹೊಂದಿಸುವುದೇ ಕಷ್ಟವಾಗಿತ್ತು. ಹಾಗಾಗಿ ಮನೆ ಕಟ್ಟುವ ಯೋಚನೆ ಮಾಡುವವರು ಬಹಳ ಕಡಿಮೆ. ಇದ್ದ ಮನೆಯನ್ನೇ ಸಾಧ್ಯವಾದಷ್ಟು ದುರಸ್ತಿ ಮಾಡಿಕೊಳ್ಳುತ್ತಾ ದಿನ ದೂಡುತ್ತಿದ್ದರು. ಆ ಕಾಲದಲ್ಲಿ ಮದುವೆ ಮಾಡಿದರೆ ಅಥವಾ ಮನೆ ಕಟ್ಟಿದವರು ಯಾರಾದರೂ ಇದ್ದರೆ ಅವರನ್ನು ಏನೋ ಸಾಧನೆ ಮಾಡಿದವರು ಎಂಬಂತೆ ಕಾಣುತ್ತಿದ್ದರು. ‘ಮಗಳ ಮದುವೆ ಮಾಡಿದ್ರಂತೆ! ನೀವು ಬಲು ಹುಷಾರ್ ಕಣ್ರೀ, ಕನ್ಯಾದಾನ ಮಾಡಿ ದೊಡ್ಡ ಸಾಧನೆನೇ ಮಾಡಿದ್ರಿ’ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಮಾತ್ರ ಮಕ್ಕಳ ಮದುವೆ ಮಾಡಲು ಅಥವಾ ಮನೆ ಕಟ್ಟಲು ಹರಸಾಹಸ ಪಡುವುದು ಇದ್ದೇ ಇತ್ತು. ಅದಕ್ಕಾಗಿ ತಾವು ಒಕ್ಕಲಿದ್ದ ಮನೆಗಳಲ್ಲಿ ಸಾಲ ಕೇಳುವುದು, ಸಾಲ-ಬಡ್ಡಿ ತೀರಿಸಲಾಗದೆ ಗಂಡು ಮಕ್ಕಳನ್ನು ಜೀತಕ್ಕೆ ದುಡಿಯಲು ಬಿಡುವುದು ಅಥವಾ ಮಠ, ಮಂದಿರ, ಅಥವಾ ಪುಣ್ಯ ಕ್ಷೇತ್ರಗಳಲ್ಲಿ ಸಹಾಯ, ಸಾಲ ನಿರೀಕ್ಷಿಸುವುದು ಅನಿವಾರ್ಯವಾಗಿದ್ದ ಪರಿಸ್ಥಿತಿಯಿತ್ತು. ಮದುವೆ ಕಾರಣದಿಂದಲೇ ಸಾಕಷ್ಟು ಜನರು ಜೀತಕ್ಕಾಗಿ ದುಡಿಯವ ಕಾಲ ಅದಾಗಿತ್ತು. 1970ರ ದಶಕದಲ್ಲಿ ಸರ್ಕಾರ ಈ ಜೀತ ಪದ್ಧತಿಗೆ ಮುಕ್ತಿ ನೀಡುವ ಆಂದೋಲನ ಪ್ರಾರಂಭಿಸಿತು. ಅದುವರೆಗೂ ಯಾರಿಗೂ ಗೋಚರವಾಗದಿದ್ದ ಅನೇಕ ಸಮಸ್ಯೆಗಳು ಸಮಾಜಕ್ಕೆ ತಿಳಿದು ಬಂತು. ಸರ್ಕಾರದ ಪ್ರಯತ್ನವೂ ಯಶಸ್ವಿಯಾಗಿ ಸಾಕಷ್ಟು ಜನರು ಜೀತಮುಕ್ತರಾದುದು ಉತ್ತಮ ಬೆಳವಣಿಗೆಯೇ ಆಗಿದೆ.

    ನಮ್ಮದು ಚತುರ್ದಾನಗಳಿಗೆ ಪ್ರಸಿದ್ಧವಾಗಿರುವ ಧರ್ಮಸ್ಥಳ ಕ್ಷೇತ್ರ. ನಮ್ಮಲ್ಲಿಗೂ ಸಾಕಷ್ಟು ಜನರು ಮಕ್ಕಳ ಮದುವೆಗೆ ಸಹಾಯ-ಸಾಲ ಕೇಳಿಕೊಂಡು ಬರುತ್ತಿದ್ದರು. ಒಂದು ದಿನ ವಯಸ್ಸಾದ ಮಹಿಳೆಯೊಬ್ಬಳು ಬಂದು, ‘ಅಯ್ಯಾ ನನಗೆ ವಯಸ್ಸಾಗುತ್ತಾ ಬಂತು. ನನ್ನ ಇಬ್ಬರು ಗಂಡು ಮಕ್ಕಳನ್ನು ಜೀತಕ್ಕೆ ಬಿಟ್ಟಿದ್ದೇನೆ. ಅವರ ಒಡೆಯನಿಗೆ ಹಣ ಕೊಟ್ಟು ಅವರನ್ನು ಬಿಡಿಸಿಕೊಂಡು ಬರಬೇಕಿದೆ. ದಯವಿಟ್ಟು ಸಾಲ ಕೊಡಿ’ ಎಂದಳು. ‘ಅಲ್ಲಮ್ಮಾ ನೀನು ಯಾಕೆ ಮಕ್ಕಳನ್ನು ಜೀತಕ್ಕೆ ಬಿಟ್ಟೆ?’ ಎಂದು ಕೇಳಿದಾಗ, ‘ನಾಲ್ವರು ಹೆಣ್ಣು ಮಕ್ಕಳ ಮದುವೆಗಾಗಿ ಅವರ ಬಳಿ ಸಾಲ ಮಾಡಿದ್ದೆ. ಸಾಲ ತೀರಿಸಲಾಗದೆ ಕೊನೆಗೆ ಗಂಡು ಮಕ್ಕಳನ್ನೇ ಜೀತಕ್ಕೆ ಇಟ್ಟೆ. ಈಗ ನನಗೆ ಕೆಲಸ ಮಾಡಲು ಶಕ್ತಿಯಿಲ್ಲ. ಮನೆಯಲ್ಲೂ ಯಾರೂ ಇಲ್ಲ. ಹಾಗಾಗಿ ಅವರನ್ನು ಮನೆಗೆ ಕರೆದುಕೊಂಡು ಬರಬೇಕು, ಅವರನ್ನು ಮನೆಯಲ್ಲೇ ದುಡಿಸಿ ನಿಮ್ಮ ಸಾಲ ತೀರಿಸುತ್ತೇನೆ. ದಯವಿಟ್ಟು ಸಹಾಯ ಮಾಡಿ’ ಎಂದಳು. ಅದಕ್ಕೆ ನಾನು ‘ಧರ್ಮಸ್ಥಳದಿಂದ ಸಾಲ ಕೊಡುವ ಪದ್ಧತಿಯಿಲ್ಲ’ ಎಂದು ತಿಳಿಸಿದೆ.

    ಇನ್ನೊಂದು ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ‘ಸ್ವಾಮಿ ಮಗಳ ಮದುವೆ ಮಾಡಬೇಕು. ಸಾಲ ಕೊಡಿ. ಸಾಲ ತೀರುವವರೆಗೆ ನಿಮ್ಮಲ್ಲೇ ಕೆಲಸಕ್ಕೆ ಇರುತ್ತೇನೆ’ ಎಂದ. ಇಂತಹ ಅನೇಕ ಸಂಗತಿಗಳು ಮದುವೆ ಮಾಡುವ ಕಷ್ಟವನ್ನು ತೆರೆದಿಟ್ಟವು. ಸಾಲ ಮಾಡದೆ ಮದುವೆ ಮಾಡಲಾಗುವುದಿಲ್ಲವೆ? ಖರ್ಚು-ವೆಚ್ಚಗಳನ್ನು ಹೇಗೆ ಕಡಿಮೆ ಮಾಡಬಹುದು? ಇವಕ್ಕೆಲ್ಲ ಪರಿಹಾರ ಏನು ಎಂದು ಯೋಚಿಸುತ್ತಿದ್ದಾಗ ಸಾಮೂಹಿಕ ವಿವಾಹದ ಪರಿಕಲ್ಪನೆ ಮೂಡಿತು. ತಾಯಿ ಶ್ರೀಮತಿ ರತ್ನಮ್ಮ ಹೆಗ್ಗಡೆಯವರಲ್ಲಿ ಹಾಗೂ ಆಪ್ತರಲ್ಲಿ ನಾನು ಈ ಬಗ್ಗೆ ವಿಷಯ ಹಂಚಿಕೊಂಡಾಗ ಸಂತೋಷಪಟ್ಟರು ಹಾಗೂ ಸಲಹೆ ಸೂಚನೆ ನೀಡಿ ಪೋ›ತ್ಸಾಹಿಸಿದರು. ಅದರಂತೆ 1972ರಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರಥಮವಾಗಿ ಸಾಮೂಹಿಕ ವಿವಾಹವನ್ನು ನೆರವೇರಿಸಲಾಯಿತು. ಆಗ 88 ಜೋಡಿಗಳು ಸತಿಪತಿಗಳಾದರು.

    ನಾವು ಕ್ಷೇತ್ರದ ವತಿಯಿಂದ ವಧುವಿಗೆ ರವಿಕೆ ಕಣ, ವರನಿಗೆ ಶಾಲು, ಧೋತಿ, ಮಾಂಗಲ್ಯವನ್ನು ಉಚಿತವಾಗಿ ಒದಗಿಸುತ್ತೇವೆ. ಮದುವೆಯಾಗುವವರು ಹೂವಿನ ಹಾರವನ್ನು ಮಾತ್ರ ತಂದರಾಯಿತು. ಉಳಿದೆಲ್ಲ ವ್ಯವಸ್ಥೆಯನ್ನು ಕ್ಷೇತ್ರದಿಂದ ಮಾಡಲಾಗುತ್ತದೆ ಎಂದು ಪ್ರಕಟಿಸಿದೆವು. ಮರು ವರ್ಷದಲ್ಲಿ ದಾಖಲೆ ಎಂಬಂತೆ 498 ಜೋಡಿಗಳು ಹಸೆಮಣೆ ಏರಿದರು. ಇದರಿಂದ ಆ ಕಾಲದಲ್ಲಿ ಬಡತನ ಹೇಗಿತ್ತು ಹಾಗೂ ಮಗಳನ್ನು ಕನ್ಯಾದಾನ ಮಾಡುವುದು ಮತ್ತು ಸೊಸೆಯನ್ನು ಮನೆ ತುಂಬಿಸಿಕೊಳ್ಳುವುದು ಎಷ್ಟು ಕಷ್ಟವೆಂದು ತಿಳಿಯುತ್ತಿತ್ತು. ಮದುವೆಯ ಸಮಯದಲ್ಲಿ ಎಷ್ಟೊಂದು ಜಾತಿಗಳು ಇವೆಯೆಂದು ಗೊತ್ತಾಯಿತು. ಸುಮಾರು 100ರಷ್ಟು ವಿವಿಧ ಜಾತಿಗಳವರು ವಿವಾಹ ಮಾಡಿಕೊಂಡಿದ್ದರು. ಇದನ್ನು ಯಾಕೆ ಗುರುತಿಸಲಾಗುತ್ತದೆ ಎಂದರೆ ಪ್ರತಿಯೊಂದು ಜಾತಿ-ಮತದವರು ತಮ್ಮದೇ ಆದ ಸಂಪ್ರದಾಯ, ರೀತಿ-ನೀತಿಗಳನ್ನು ಹೊಂದಿರುತ್ತಾರೆ. ಮದುವೆಯ ವಿಧಿ ವಿಧಾನಗಳೆಲ್ಲ ತಮ್ಮ ಜಾತಿಯ ಕ್ರಮದಲ್ಲೇ ನಡೆಯಬೇಕೆಂಬ ಅಭಿಲಾಷೆ ಇರುತ್ತದೆ. ಹಾಗಾಗಿ ನಾವು ಎಲ್ಲರಿಗೂ ಸಾಮೂಹಿಕ ವಿವಾಹದಲ್ಲಿ ಅವರವರ ಪದ್ಧತಿಗಳಿಗೆ ಅನುಗುಣವಾಗಿ ಅಗ್ನಿಸಾಕ್ಷಿಯಾಗಿ, ಕಲಶವನ್ನಿಟ್ಟು ಹೀಗೆ ಸಂಪ್ರದಾಯಗಳನ್ನು ಆಚರಿಸಲೂ ಅವಕಾಶ ಮಾಡಿಕೊಟ್ಟೆವು. ಬಡತನವಿದ್ದರೂ ಗೌರವಯುತವಾಗಿ ನಡೆಯುವ ಈ ಮದುವೆ ಜನರನ್ನು ಆಕರ್ಷಿಸಿತು. ಮಾತ್ರವಲ್ಲದೆ ರೋಟರಿ, ಲಯನ್ಸ್ ಕ್ಲಬ್, ಜೇಸಿ ಮುಂತಾದ ಸಂಘ ಸಂಸ್ಥೆಗಳು, ಧಾರ್ವಿುಕ ಕೇಂದ್ರಗಳು, ದೇವಾಲಯಗಳು, ಸಮಾಜ ಸೇವಕರು ಕ್ಷೇತ್ರದಿಂದ ಪ್ರೇರಣೆ ಪಡೆದು ತಮ್ಮ ವತಿಯಿಂದ ಸಾಮೂಹಿಕ ವಿವಾಹಗಳನ್ನು ನಡೆಸಲು ಆರಂಭಿಸಿದರು. ಸರಳವಾಗಿ ನಡೆಯುವ ಸಾಮೂಹಿಕ ವಿವಾಹವು ಸಾಕಷ್ಟು ಕುಟುಂಬಗಳಿಗೆ ವರದಾನವಾಯಿತು. ಮೊದ ಮೊದಲಿಗೆ ಉದ್ಯೋಗಸ್ಥರು ಕಡಿಮೆ ಸಂಖ್ಯೆಯಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿದ್ದರು. ಕೃಷಿ ಕುಟುಂಬ ಹಾಗೂ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಈಗ ಉದ್ಯೋಗದಲ್ಲಿರುವವರು, ಉದ್ಯಮಿಗಳು ಮಾತ್ರವಲ್ಲದೆ ಸರ್ಕಾರಿ ಉದ್ಯೋಗದಲ್ಲಿರುವವರೂ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಉತ್ಸುಕರಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಬಾರಿ ಕ್ಷೇತ್ರದಲ್ಲಿ ನಡೆದ 51ನೇ ಸಾಮೂಹಿಕ ವಿವಾಹದಲ್ಲಿ ಮದುವೆಯಾದ 201 ಜೋಡಿಗಳಲ್ಲಿ 58 ಜೋಡಿ ಅಂತರ್ಜಾತಿ ವಿವಾಹವಾದವರು. ಈಗ ಹೆಮ್ಮೆಯಿಂದ ಇಂತಿಷ್ಟು ಅಂತರ್ಜಾತಿ ವಿವಾಹ ನೆರವೇರಿದೆ ಎಂದು ಹೇಳುತ್ತೇವೆ. ಯಾಕೆಂದರೆ ಈ ಮೂಲಕ ಸಮಾಜದಲ್ಲಿನ ಜಾತಿಗಳ ನಡುವಿನ ಕಂದರ, ಜಗಳ, ವೈಮನಸ್ಸು ದೂರವಾಗಲು ಸಾಧ್ಯ. ಅಂತರ್ಜಾತಿ ವಿವಾಹವಾಗುವವರು ಮನೆಯವರ ಒಪ್ಪಿಗೆ ಪಡೆದಿರಬೇಕು. ಇಲ್ಲದಿದ್ದರೆ ಅವರು ಕುಟುಂಬದಿಂದ ಪರಿತ್ಯಕ್ತರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಾಧ್ಯವಾದಷ್ಟು ಮನೆಯವರ ಮನವೊಲಿಸಿ ಸುಖ ದಾಂಪತ್ಯಕ್ಕೆ ಮುನ್ನುಡಿ ಬರೆಯಬೇಕು. ಇಲ್ಲಿ ಅವರವರ ಹೆತ್ತವರ ಒಪ್ಪಿಗೆಯೊಂದಿಗೆ ಅಂತರ್ಜಾತಿ ವಿವಾಹವಾಗಿರುವುದು ಸಂತೋಷದ ಸಂಗತಿ.

    ಮದುವೆಯ ಬಗ್ಗೆ ಜನ ತಮ್ಮದೇ ಆದ ಕನಸುಗಳನ್ನು ಹೊಂದಿರುತ್ತಾರೆ. ಕುಟುಂಬ, ಬಂಧು-ಬಳಗ, ಸ್ನೇಹಿತರನ್ನು ಕರೆಯಬೇಕು, ಸಿಹಿಯೂಟ ಕೊಡಬೇಕು ಎಂದೆಲ್ಲ ಆಸೆಗಳಿರುತ್ತವೆ. ಸಾಮೂಹಿಕ ಮದುವೆಗಳಿಂದ ಹಾಗೂ ಈಗ ಸಾಕಷ್ಟು ಅನುಕೂಲಗಳು ಇರುವುದರಿಂದ ಮದುವೆಗಳು ಎಲ್ಲ ಕಡೆಗಳಲ್ಲಿ ನಡೆಯುತ್ತವೆ. ಮದುವೆಗಳು ಸಾಂಪ್ರದಾಯಿಕವಾಗಿ ನಡೆಯುತ್ತವೆಯಾದರೂ ಮೆಹಂದಿ ಅಥವಾ ಔತಣ ಕೂಟ ಇನ್ನಿತರ ಕಾರ್ಯಕ್ರಮಗಳನ್ನು ಅಬ್ಬರದಿಂದ ಮಾಡುವ ಪರಿಪಾಠ ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ. ಸಾಂಪ್ರದಾಯಿಕ ಮದರಂಗಿ ಶಾಸ್ತ್ರದಂದು ಡಿ.ಜೆ ಸಂಗೀತ ಮಾತ್ರವಲ್ಲದೆ ಮದ್ಯವನ್ನೂ ಪೂರೈಸಿ ಮದುವೆಯ ಸಂಭ್ರಮವನ್ನು ಹೆಚ್ಚಿಸಿದ್ದೇವೆ ಎಂದು ಭಾವಿಸುವುದುಂಟು. ಇದೊಂದು ಅಬ್ಬರವಷ್ಟೇ. ಇವೆಲ್ಲ ನಮ್ಮ ಸಂಪ್ರದಾಯ ಖಂಡಿತಾ ಅಲ್ಲ. ಔತಣಕೂಟದ ನೆಪದಲ್ಲಿ ಬೀಗರಿಗೆ ಬಾಡೂಟ ಬಡಿಸುವ ಸಂದರ್ಭಗಳಲ್ಲಿ ಅನಗತ್ಯ ಖರ್ಚುಗಳು ಆಗುತ್ತವೆ. ಸಾಕಷ್ಟು ಆಹಾರಗಳೂ ವ್ಯರ್ಥವಾಗುತ್ತವೆ. ಈಗೀಗ ಧಾರ್ವಿುಕತೆ ಮತ್ತು ಸಂಪ್ರದಾಯಗಳ ಆಚರಣೆ, ಮಹತ್ವ ಕಡಿಮೆಯಾಗಿ ಅಬ್ಬರ, ಆಡಂಬರಗಳೇ ಹೆಚ್ಚಾಗುತ್ತಿವೆ ಎಂದೆನಿಸುತ್ತದೆ. ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಕಾರ್ಯಕ್ರಮಗಳು ನಡೆಯುವ ಮನೆಗೆ ಹೋಗಿ ದುಂದುವೆಚ್ಚ ಮಾಡದೆ ಅದರ ಹಣವನ್ನು ಮದುಮಗ-ಮದುಮಗಳಿಗೆ ನೀಡಿ, ಅನಗತ್ಯವಾಗಿ ಆಹಾರ ತಯಾರಿಸಿ ಚೆಲ್ಲಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದಾರೆ.

    ‘ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ನಡೆಯುವುದು ಮಾತ್ರ ಭೂಲೋಕದಲ್ಲಿ’ ಎಂಬ ಮಾತಿದೆ. ಜೀವನ ಪರ್ಯಂತ ಸಂಗಾತಿಯೊಡನೆ ಬಾಳಲು ಮುನ್ನುಡಿ ಬರೆಯುವ ಈ ಮದುವೆಯನ್ನು ಅವಿಸ್ಮರಣೀಯಗೊಳಿಸಲು ಅಬ್ಬರ, ಆಡಂಬರಗಳು ಬೇಕಿಲ್ಲ. ಬೇಕಿರುವುದು ಗುರು-ಹಿರಿಯರ ಆಶೀರ್ವಾದ, ಬಂಧು-ಬಳಗದವರ ಹಾರೈಕೆ ಹಾಗೂ ಸನ್ಮಿತ್ರರ ಶುಭಕಾಮನೆಗಳು. ದುಂದುವೆಚ್ಚ ಮಾಡದೆ, ಆಹಾರ ಪೋಲು ಮಾಡದೆ, ಸರಳವಾಗಿ ಕಾರ್ಯಕ್ರಮ ಹಮ್ಮಿಕೊಂಡು, ಸಂಪ್ರದಾಯ, ಸಂಸ್ಕೃತಿಗಳನ್ನು ಆಚರಿಸುತ್ತಾ ಮದುವೆಯ ಕ್ಷಣವನ್ನು ಜೀವನದುದ್ದಕ್ಕೂ ರಸಮಯ ಕ್ಷಣವನ್ನಾಗಿಸಿಕೊಳ್ಳುವ ಪ್ರಯತ್ನ ನಮ್ಮದಾಗಲಿ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts