More

    ವೈದ್ಯಕೀಯ-ಅಧ್ಯಾತ್ಮ ಪ್ರಭಾವದಿಂದ ಕರ್ನಾಟಕ ಕರೊನಾಮುಕ್ತವಾಗಲಿ: ಸಚಿವ ಡಾ.ಕೆ. ಸುಧಾಕರ್

    ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪೀಠಾರೋಹಣದ ತ್ರಿದಶಮಾನೋತ್ಸವ

    ಶಿರಸಿ: ಕರೊನಾ ನಿಯಂತ್ರಣದಲ್ಲಿ ವೈದ್ಯಕೀಯ ಜಗತ್ತಿನ ಪ್ರಭಾವದಷ್ಟೇ ಆಧ್ಯಾತ್ಮಿಕ ಕ್ಷೇತ್ರದ ಪ್ರಭಾವವೂ ಇದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಪೀಠಾರೋಹಣದ ತ್ರಿದಶಮಾನೋತ್ಸವ ಹಾಗೂ ವಿದ್ಯಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿದ್ವತ್ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

    ಕರೊನಾ ಹೆಚ್ಚಿದ್ದ ಸಂದರ್ಭದಲ್ಲಿ ವೈದ್ಯರಂತೆ ಧಾರ್ವಿುಕ ಮುಖಂಡರು ಸಹ ವಿವಿಧ ಕಾರ್ಯದಲ್ಲಿ ನಿರತರಾಗಿದ್ದರು. ಆ ಪ್ರಕಾರ ಪೂಜೆ, ಪುನಸ್ಕಾರ, ಹೋಮ- ಹವನದಿಂದಲೂ ಕರೊನಾ ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಹೋಮ- ಹವನಗಳು ಇನ್ನಷ್ಟು ಹೆಚ್ಚಬೇಕು. ಆ ಮೂಲಕ ವೈದ್ಯಕೀಯ ಹಾಗೂ ಅಧ್ಯಾತ್ಮದ ಪ್ರಭಾವದಲ್ಲಿ ರಾಜ್ಯವನ್ನು ಕರೊನಾಮುಕ್ತಗೊಳಿಸಬೇಕು ಎಂದರು.

    ಆದಿಗುರು ಶಂಕರಾಚಾರ್ಯರ ಪರಂಪರೆಯನ್ನು ಯಥಾವತ್ತಾಗಿ ಆಚರಿಸಿಕೊಂಡು ಬರುತ್ತಿರುವ ಪೀಠಗಳಲ್ಲಿ ಸ್ವರ್ಣವಲ್ಲೀ ಕೂಡ ಒಂದಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು. ವಿದ್ಯಾಭವನ ಉದ್ಘಾಟಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ವರ್ಣವಲ್ಲೀ ಮಠದಲ್ಲಿ ಸಮಾಜ ಕಟ್ಟುವ ಕೈಂಕರ್ಯ ನಿರಂತರವಾಗಿ ನಡೆಯುತ್ತಿದೆ. ಮಠ- ಮಂದಿರಗಳ ಆರ್ಥಿಕ, ಆಡಳಿತಾತ್ಮಕ ಸಮಸ್ಯೆ ದೂರಗೊಳಿಸುವುದು ಸರ್ಕಾರದ ಆಶಯವಾಗಬೇಕು. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವ ಅಗತ್ಯವಿದೆ ಎಂದರು.

    ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ‘ಸನ್ಯಾಸಿಗಳ ತಪಸ್ಸು, ಯಜ್ಞ ರಾಷ್ಟ್ರದ ಹಿತಕ್ಕೆ ಅಗತ್ಯ. ಹಾಗಾಗಿ ಋಷಿಮುನಿಗಳು, ರಾಜರು ಈ ವ್ಯವಸ್ಥೆಯನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಮಠಗಳ ಬೆಳವಣಿಗೆಯಾಗಿದೆ. ಇವುಗಳನ್ನು ಭಕ್ತರು ಹಾಗೂ ಸರ್ಕಾರ ಕಾಪಾಡಿಕೊಂಡು ಹೋಗಬೇಕು’ ಎಂದರು. ತ್ರಿದಶಮಾನೋತ್ಸವ ಸಭಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಸಚಿವ ಶಿವರಾಮ ಹೆಬ್ಬಾರ, ಶಾಸಕ ಆರ್.ವಿ. ದೇಶಪಾಂಡೆ ಉಪಸ್ಥಿತರಿದ್ದರು.

    ಮೀಸಲಾತಿ ಅತಿಯಾದರೆ ಅಪಾಯ ನಿಶ್ಚಿತ: ರಾಜ್ಯದಲ್ಲಿ ಈಗ ಎದ್ದಿರುವ ಒಳಮೀಸಲಾತಿ ಬಗ್ಗೆ ಸಾಕಷ್ಟು ಗೊಂದಲವಿದೆ. ಮೀಸಲಾತಿ ಅತಿಯಾದರೆ ಅಪಾಯ ನಿಶ್ಚಿತ ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು. ದೊಡ್ಡ ಸಮುದಾಯಗಳು ಮೀಸಲಾತಿಗೆ ಒಳಗಾದರೆ ಸಣ್ಣ ಸಮುದಾಯಗಳು ಮಾಯವಾಗುತ್ತವೆ. ಪ್ರತಿಭೆಗಳ ಪಲಾಯನ ಹೆಚ್ಚುತ್ತದೆ. ಹಾಗಾಗಿ ಇದರ ಬಗ್ಗೆ ಸರ್ಕಾರ ಚಿಂತಿಸುವ ಅಗತ್ಯವಿದೆ ಎಂದರು. ಪಶ್ಚಿಮಘಟ್ಟದ ನದಿಗಳ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಒಯ್ಯುವ ಯೋಜನೆಯಲ್ಲಿ ಲಾಭಕ್ಕಿಂತ ಹಾನಿಯೇ ಹೆಚ್ಚು. ವೈಜ್ಞಾನಿಕವಾಗಿ ಈ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಹಾಗಾಗಿ ಬೇರೆ ಮಾರ್ಗದಿಂದ ಬಯಲುಸೀಮೆ ಜನರಿಗೆ ನೀರು ನೀಡುವ ಕಾರ್ಯ ಆಗಬೇಕು ಎಂದರು.

    ಸಾಧಕರಿಗೆ ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸ ಬಂದಗದ್ದೆ ನಾಗರಾಜ ಭಟ್ಟ, ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ, ಪ್ರಗತಿಪರ ಕೃಷಿಕ ಸತ್ಯನಾರಾಯಣ ಹೆಗಡೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಟ್ಟಡ ತಂತ್ರಜ್ಞರು ಹಾಗೂ ಸಾಧಕರಾದ ತಿಮ್ಮಪ್ಪ ಭಟ್ಟ, ಮಹಾಬಲೇಶ್ವರ ಹೆಗಡೆ, ವಿಘ್ನೕಶ್ವರ ಹೆಗಡೆ, ಮಹಾದೇವ ಹೆಗಡೆ, ಪಿ.ವಿ. ಭಟ್ಟ, ಉಲ್ಲಾಸ ನಾಯ್ಕ, ಶ್ಯಾಮಸುಂದರ ಭಟ್ಟ ಹಾಗೂ ಇತರರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts