More

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ

    ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಕವಿವಾಣಿ ಆಶಯದಂತೆ ಬ್ರ್ಯಾಂಡ್ ಬೆಂಗಳೂರು ಮುಂದುವರಿದು ಬ್ರ್ಯಾಂಡ್​ ಕರ್ನಾಟಕ ಆಗಲಿ, ಕನ್ನಡಿಗರೇ ಪ್ರಚಾರ ರಾಯಭಾರಿಯಾಗಲಿ ಎಂದು ಅರ್ಥಶಾಸ್ತ್ರಜ್ಞ ಪ್ರೊ.ರಾಜೀವ್ ಗೌಡ, ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಸಾಹಿತಿ ವಸುಧೇಂದ್ರ ಆಶಯ ವ್ಯಕ್ತಪಡಿಸಿದರು. ‘ಕರ್ನಾಟಕ-50’ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ಮೂರು ವಿಭಿನ್ನ ಕ್ಷೇತ್ರದ ಈ ಪರಿಣತರು ‘ವಿಜಯವಾಣಿ’ ಸಂವಾದದಲ್ಲಿ ಪಾಲ್ಗೊಂಡು, ‘ಬ್ರಾ್ಯಂಡ್ ಕರ್ನಾಟಕ’ ರಾತ್ರಿ ಬೆಳಗಾಗುವುದರಲ್ಲಿ ಆಗುವುದಲ್ಲ. ಸಾಮೂಹಿಕ ಪ್ರಯತ್ನ, ನಿರಂತರ ಶ್ರಮದಿಂದ ನಿರೀಕ್ಷಿತ ಸಾಧನೆ ಸಾಧ್ಯ ಎಂಬ ಭರವಸೆ ವ್ಯಕ್ತಪಡಿಸಿದರು. ಸಂವಾದದ ಪ್ರಶೋತ್ತರಗಳ ಸ್ಥೂಲ ಮಾಹಿತಿ ನಿಮಗಾಗಿ.
    • ಪ್ರವಾಸೋದ್ಯಮ, ಕೈಗಾರಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೋಕೇಸ್ ಮಾಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಈ ದಿಸೆಯಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಏನು ಮಾಡಬೇಕು?

    ಪ್ರೊ.ರಾಜೀವ್ ಗೌಡ: ಬ್ರ್ಯಾಂಡ್​ ಆಗಿಲ್ಲ ಎನ್ನಲಾಗದು. ಹೊರದೇಶಗಳಲ್ಲಿ ‘ಯುರ್ ಬೆಂಗಳೂರ್ ್ಡ ಎಂದು ಹೊರಗುತ್ತಿಗೆ ಪದಕ್ಕೆ ಸಮಾನಾರ್ಥಕವಾಗಿ ಬಳಸುವ ಮಟ್ಟಿಗೆ ಬೆಂಗಳೂರು ಬ್ರ್ಯಾಂಡ್​ ಆಗಿದೆ. ಇದನ್ನು ಕರ್ನಾಟಕಕ್ಕೆ ವ್ಯಾಪಿಸಲು ವಿಪುಲ ಅವಕಾಶಗಳಿವೆ. ನಿವೃತ್ತ ಐಎಎಸ್ ಅಧಿಕಾರಿ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಕೇರಳಕ್ಕೆ ‘ದೇವರನಾಡು’ ಛಾಪು ಮೂಡಿಸುವಲ್ಲಿ ನಿರ್ಣಾಯಕರಾದರು. ನಮ್ಮಲ್ಲೂ ಅಂತಹ ಪ್ರಯತ್ನಗಳಾಗುತ್ತಿವೆ ಎನ್ನುವುದಕ್ಕೆ ಹೊಯ್ಸಳ, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳ ಗುಚ್ಛ ಯುನೆಸ್ಕೋ ವಿಶ್ವಪರಂಪರೆ ತಾಣದ ಪಟ್ಟಿಗೆ ಸೇರ್ಪಡೆಯಾಗಿರುವುದೇ ಉದಾಹರಣೆ. ಆತಿಥ್ಯ ವಲಯಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಣೆ, ಗೋವಾ ಮಾದರಿಯಲ್ಲಿ ಮಂಗಳೂರು, ಕಾರವಾರ ಬೀಚ್​ಗಳ ಅಭಿವೃದ್ಧಿ, ಸಂಪರ್ಕಜಾಲ ಸುಧಾರಣೆ ಅಗತ್ಯ. ಮುಖ್ಯವಾಹಿನಿ ನಗರ-ಪಟ್ಟಣ ಕೇಂದ್ರಿತ ಆದಾಯ ಉತ್ಪತ್ತಿ ರಾಜ್ಯದ ಎಲ್ಲ ಭಾಗದಿಂದ ಆಗುವಂತೆ ಯುರೋಪ್ ಮಾದರಿ ಉಪಕ್ರಮಗಳು, ಪಾರಂಪರಿಕ ತಾಣಗಳ ಸರಪಳಿ ರಚನೆಯಾಗಬೇಕು.

    ವಸುಧೇಂದ್ರ: ಹೊರಗಿನ ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸಬೇಕು. ಬೇರೆ ಭಾಷೆಯ ಉತ್ತಮ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕು. ಅದಕ್ಕೆ ದೊಡ್ಡಮೊತ್ತದ ಬಹುಮಾನ ನಿಗದಿಯಾಗಬೇಕು. ಪ್ರತಿವರ್ಷ ಚಲನಚಿತ್ರೋತ್ಸವದಲ್ಲಿ ಭಾಗಿಯಾಗುವ ಸಿನಿಮಾಗಳಿಗೆ ಕನ್ನಡ ಉಪಶೀರ್ಷಿಕೆ ಕಡ್ಡಾಯಗೊಳಿಸಬೇಕು. ಕರ್ನಾಟಕ ಬ್ರಾ್ಯಂಡ್ ಬೆಳೆಸಲು ಸಾಹಿತ್ಯ, ನಾಟಕ, ಸಿನಿಮಾ ಸಮರ್ಥ ಪ್ರಭಾವಿ ರಂಗಗಳಾಗಿವೆ. ಪ್ರೀತಿಯ ಮೂಲಕ ನಮ್ಮನ್ನು ನಾವು ಗುರುತಿಸಿಕೊಂಡರೆ ಬೆಳೆಯುತ್ತದೆ. ಒಲಿಂಪಿಕ್ಸ್​ನಿಂದ ಸಿಯಾನ್ ಬ್ರಾ್ಯಂಡ್ ಆಯಿತು, ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳ ಪೈಕಿ ಇಂಗ್ಲಿಷ್ ಮೇಲೆ ಹಿಡಿತವುಳ್ಳವರು ಮಿಂಚಿದರು. ವ್ಯಾಸಭಾರತವನ್ನು ಮೊದಲಿಗೆ ಕನ್ನಡಕ್ಕೆ ತಂದಿದ್ದೇ ಪಂಪ. ಆದರೆ ಒರಿಯಾ ಮಹಾಭಾರತ ಬ್ರಾ್ಯಂಡ್ ಆಯಿತು, ನಾವು ಹಿಂದೆ ಬಿದ್ದೆವು. ಮಹತ್ವದ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸಲು ಖಾಸಗಿಯವರಿಗೆ ಲಕ್ಷಾಂತರ ರೂ. ಅನುದಾನ ಒದಗಿಸುವಂತಾಗಬೇಕು.

    ಪಿ.ಶೇಷಾದ್ರಿ: 1970ರ ದಶಕದ ‘ಗಂಧದಗುಡಿ’ ಸಿನಿಮಾ ಕರ್ನಾಟಕ ಬ್ರಾ್ಯಂಡ್​ಗೆ ನಾಂದಿ ಹಾಡಿತು. ಅದು ಮುಂದುವರಿಯಲಿಲ್ಲ. ಆನೆ ವೀರಪ್ಪನ್ ಬ್ರಾ್ಯಂಡ್ ಆಗಿಹೋಯಿತು. ಛಾಪು ಮೂಡಿಸುವುದಕ್ಕೆ ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಿನಿಮಾ ಮತ್ತಿತರ ಕಲೆಗಳು ತಮ್ಮದೇ ಕೊಡುಗೆ ನೀಡಿವೆ. ನಾವು ಸರ್ಕಾರದ ಕಡೆಗೆ ಬೆರಳು ತೋರಿಸುತ್ತೇವೆ. ಆದರೆ ಪ್ರತಿಯೊಬ್ಬ ವ್ಯಕ್ತಿ, ಸಂಘ-ಸಂಸ್ಥೆಗಳ ಪ್ರಯತ್ನ ಮುಖ್ಯ. ಕನ್ನಡಿಗರ ಉದಾರತೆ ಬಗ್ಗೆ ಹೆಮ್ಮೆಪಡಬೇಕೋ ನಮ್ಮತನ ಬಿಟ್ಟುಕೊಟ್ಟು ಒಳಗೊಳ್ಳುತ್ತಿರುವುದಕ್ಕೆ ಮರುಗಬೇಕೋ ತಿಳಿಯದು. ಮಾರುಕಟ್ಟೆ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಜರ್ಮನ್​ನಲ್ಲಿ ನೆಲೆಸಿರುವ ಕನ್ನಡಿಗ ಸಂಶೋಧಕರೊಬ್ಬರು ತಮ್ಮ ಮಗನಿಗೆ ದಿನಕ್ಕೊಂದು ಕನ್ನಡ ಪದ ಕಲಿತರೆ ಬಹುಮಾನ ನೀಡಿ ಭಾಷೆ ಕಲಿಸುತ್ತಾರೆ ಎಂದಾದರೆ ಕನ್ನಡಿಗರೆಲ್ಲ ಮನಸ್ಸು ಮಾಡಿದರೆ ಕರ್ನಾಟಕ ಬ್ರಾ್ಯಂಡ್ ರೂಪಿಸಲು ಖಂಡಿತ ಸಾಧ್ಯವಿದೆ.

    • ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ಆಗಬೇಕಿರುವ ಕೆಲಸಗಳೇನು? ಕನ್ನಡ ಸಿನಿಮಾ ರಂಗ ಮುನ್ನಡೆಯಬೇಕಾದ ದಾರಿ ಯಾವುದು? ಯಾವ ರೀತಿಯ ಸಿನಿಮಾಗಳು ಬರಬೇಕು?

    ವಸುಧೇಂದ್ರ: ಒಳ್ಳೆಯ ಸಿನಿಮಾ ಮಾಡಲು ಪ್ರಾದೇಶಿಕತೆಯೇ ಇರಬೇಕು ಎಂದಿಲ್ಲ. ಹೇಗೆ ಇಂಗ್ಲಿಷ್ ಭಾಷೆ ತಿಳಿಯದ ಇಟಾಲಿಯನ್ ಸಿನಿಮಾ ಒಂದು ಹಾಲಿವುಡ್ ಅನ್ನು ಮೀರಿಸಿತೋ ಅದೇ ರೀತಿ ಗುಣಮಟ್ಟ ಹಾಗೂ ಉತ್ತಮ ಸಿನಿಮಾಗಳನ್ನು ನಿರ್ವಿುಸುವುದು ಮುಖ್ಯವಾಗುತ್ತದೆ. ಅದು ಕನ್ನಡದಲ್ಲಿಯೂ ಸಾಧ್ಯವಾಗಬೇಕು.

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿರಾಜೀವ್ ಗೌಡ: ಹೊಸತನ ಎನ್ನುವುದು ಯಾವುದೇ ಭಾಷೆಯಲ್ಲಿದ್ದರೂ ಜನರು ಸ್ವೀಕರಿಸುತ್ತಾರೆ. ಅಂತಹ ಕಾರ್ಯ ಕನ್ನಡದಲ್ಲಿ ಹೆಚ್ಚು ಆಗಬೇಕು. ಉದಾಹರಣೆಗೆ ಮುಂಗಾರು ಮಳೆ, ಆರ್​ಆರ್​ಆರ್, ಬಾಹುಬಲಿ ಇತ್ಯಾದಿ. ಸಿನಿಮಾ ಯಶಸ್ಸಿಗೆ ವಸ್ತು, ಗುಣಮಟ್ಟ ಹಾಗೂ ಕ್ರಿಯಾತ್ಮಕತೆ ಕಾರಣವಾಗುತ್ತದೆ.

    ಪಿ. ಶೇಷಾದ್ರಿ: 50ರ ದಶಕದಲ್ಲಿ ವರ್ಷಕ್ಕೆ 3-4 ಕನ್ನಡ ಸಿನಿಮಾ ಬರುತ್ತಿದ್ದವು. ಇಂದು 300-400 ಸಿನಿಮಾಗಳು ಕನ್ನಡ ಭಾಷೆಯಲ್ಲಿ ಬರುತ್ತಿವೆ. ಆದರೆ ಇವುಗಳಲ್ಲಿ ಹೆಚ್ಚಿನವು ಕನ್ನಡದ ಸಿನಿಮಾಗಳಲ್ಲ. ಇತ್ತೀಚಿನ ಕಾಂತಾರ ಹಾಗೂ ಕೆಜಿಎಫ್ ಚಿತ್ರಗಳ ಯಶಸ್ಸನ್ನು ತುಲನೆ ಮಾಡಿದರೆ ಒಂದರಲ್ಲಿ ಮಾರುಕಟ್ಟೆ ಕೆಲಸ ಮಾಡಿದರೆ, ಮತ್ತೊಂದರಲ್ಲಿ ಪ್ರಾದೇಶಿಕ ವಿಚಾರಗಳು ಯಶಸ್ಸಿಗೆ ಕಾರಣವಾಗಿದೆ. ಉದಾಹರಣೆಗೆ ಮಲಯಾಳಂ ಭಾಷೆಯ ಗಾಳಿಗಂಧ ಗೊತ್ತಿಲ್ಲದವರೂ ಆ ಸಿನಿಮಾವನ್ನು ನೋಡಲು ಕಾರಣ ಅದು ತನ್ನ ಪ್ರಾದೇಶಿಕತೆಯನ್ನು ಉಳಿಸಿಕೊಂಡಿರುವುದು. ಆದರೆ ಕನ್ನಡತವನಿಲ್ಲದ ಕನ್ನಡ ಸಿನಿಮಾಗಳು ಪ್ರಾದೇಶಿಕತೆಯನ್ನು ಸರಿಯಾಗಿ ದುಡಿಸಿಕೊಂಡಿಲ್ಲ.

    ದೂರದರ್ಶನ ಸತ್ತು ಹೋಗಿದೆ: ದೂರದರ್ಶನದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರಾದೇಶಿಕ ಸಿನಿಮಾ ಹೆಚ್ಚು ಪ್ರಸಾರವಾಗುತ್ತಿತ್ತು. ಅವುಗಳೇ ನಮ್ಮನ್ನು ಪ್ರಯೋಗಾತ್ಮಕ ಸಿನಿಮಾಗಳತ್ತ ಸೆಳೆಯಲು ಸಾಧ್ಯವಾಯಿತು. ಆದರೆ ಇಂದು ಇತರ ವಾಹಿನಿಗಳ ನಡುವೆ ದೂರದರ್ಶನ ಸತ್ತು ಹೋಗಿದೆ. ದೂರದರ್ಶನ ಕೇವಲ ಸರ್ಕಾರದ ಮುಖವಾಣಿಯೇ? ದೂರದರ್ಶನದ ಗೋಪುರ ಒಂದೇ ಎತ್ತರವಾಗಿ ಕಾಣುತ್ತಿದೆ. ಸಂಸ್ಕೃತಿ, ಭಾಷೆ ಬೆಳೆಸುವ ನಿಟ್ಟಿನಲ್ಲಿ ಯಾವ ಎತ್ತರಕ್ಕೂ ಏರಿಲ್ಲ. ಇದಕ್ಕೆ ಕಾರಣ ಇಚ್ಛಾಶಕ್ತಿಯ ಕೊರತೆ. ದೂರದರ್ಶನಕ್ಕೆ ಶಕ್ತಿ ತುಂಬಿದರೆ ಸಂಸ್ಕೃತಿ ಮತ್ತು ಭಾಷೆ ಎರಡೂ ಬೆಳೆಯುತ್ತದೆ.

    • ಕನ್ನಡ ಭಾಷಾಭಿಮಾನ ಯಾವ ದಿಸೆಯಲ್ಲಿ ಸಾಗುತ್ತಿದೆ? ಕನ್ನಡದ ಉಳಿವಿಗೆ ಹೊಡಿ ಬಡಿ ತಂತ್ರಗಳು ಅನಿವಾರ್ಯವೇ? ಮತ್ತು ಸಂಸ್ಥೆಗಳು ಏನು ಮಾಡಬೇಕು?

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿಪಿ. ಶೇಷಾದ್ರಿ: ರಾಜ್ಯದಲ್ಲಿ ಕನ್ನಡ ಉಳಿದಿರುವುದು ಪೊಲೀಸರಿಂದ. ಅವರಿಗೆ ಒಬ್ಬ ಕಳ್ಳ ಯಾವುದೇ ರಾಜ್ಯ, ದೇಶದವನಿರಲಿ ಅವನನ್ನು ವಿಚಾರಿಸುವುದು ಕನ್ನಡದಲ್ಲಿಯೇ. ಆದರೆ ಟ್ಯಾಕ್ಸಿ, ಆಟೋ ಚಾಲಕರು ಹಾಗೂ ವ್ಯಾಪಾರಿಗಳನ್ನು ಮಾತನಾಡಿಸಿದರೆ ಕನ್ನಡ ಚೆನ್ನಾಗಿ ಬಂದರೂ ಅವರು ಮೊದಲು ಹಿಂದಿ ಅಥವಾ ಇಂಗ್ಲಿಷ್​ನಲ್ಲೇ ಮಾತು ಆರಂಭಿಸುತ್ತಾರೆ. ನಮಗೆ ವ್ಯಾಪಾರ ನಡೆಯುವುದೇ ಹಿಂದಿಯವರಿಂದ, ಅವರ ಭಾಷೆಯಲ್ಲಿ ಮಾತನಾಡಿದರೆ ಖುಷಿಯಿಂದ ಟಿಪ್ಸ್ ನೀಡುತ್ತಾರೆ ಎನ್ನುತ್ತಾರೆ. ಹೊರಗಿನಿಂದ ಯಾರೇ ರಾಜ್ಯಕ್ಕೆ ಬಂದರೂ ಕನ್ನಡ ಮಾತನಾಡದಿದ್ದರೆ ಇಲ್ಲಿ ಜೀವನ ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ವಿುಸಬೇಕು. ಈ ಕೆಲಸ ಜನರೇ ಮಾಡಬೇಕು.

    ಕನ್ನಡ ಭಾಷೆಗೆ ಸಾವಿಲ್ಲ: ಕನ್ನಡ ಭಾಷೆ ಅಷ್ಟು ಸುಲಭವಾಗಿ ಸಾಯುವುದಿಲ್ಲ. ಹಳಗನ್ನಡ, ನಡುಗನ್ನಡದ ರೀತಿಯಲ್ಲಿ ಬದಲಾವಣೆ ಆಗಬಹುದು. ಹಲವು ರೂಪಾಂತರಗಳನ್ನು ಪಡೆದುಕೊಂಡು ಕನ್ನಡ ಉಳಿಯುತ್ತದೆ. ಇದಕ್ಕಾಗಿ ಜನಸಾಮಾನ್ಯರು, ಸರ್ಕಾರ ಹಾಗೂ ಸಂಘಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ. ಸರ್ಕಾರ ಕೆಲವು ಹಳಗನ್ನಡ ಕೃತಿಗಳನ್ನು ಕನ್ನಡೀಕರಿಸಬೇಕು.

    ಡಬ್ಬಿಂಗ್ ಸಿನಿಮಾ ಕನ್ನಡದಲ್ಲಿ ನೋಡಿ: ಡಬ್ಬಿಂಗ್ ಬಹಳ ಚರ್ಚೆ ಆಗಿತ್ತು. ಆದರೆ ಅನಿವಾರ್ಯವಾಗಿ ಎಲ್ಲರೂ ಒಪ್ಪಲೇಬೇಕಾಯಿತು. ಅದರಿಂದ ಒಳಿತು ಕೆಡುಕು ಎರಡೂ ಆಗಿದೆ. ಆದರೆ ಪರಭಾಷೆ ಚಿತ್ರಗಳನ್ನು ನೋಡುವಾಗ ಕನ್ನಡದಲ್ಲಿ ನೋಡಿ. ಏಕೆಂದರೆ ಅದರ ಡಾಟಾ ಸಂಗ್ರಹವಾಗುತ್ತದೆ. ಇದರಿಂದ ಮುಂದಿನ ಸಿನಿಮಾ ಡಬ್ ಮಾಡಬೇಕೇ? ಬೇಡವೇ? ಎಂದು ನಿರ್ಧರಿಸುತ್ತಾರೆ. ಮೊಬೈಲ್​ಗಳಲ್ಲಿ ಬರುವ ಕಂಪನಿ ಕರೆಗಳಿಗೂ ಕನ್ನಡದಲ್ಲಿಯೇ ಉತ್ತರಿಸಿ. ಆ ಮೂಲಕ ಅವರಿಗೆ ವ್ಯಾಪಾರ ಮಾಡಲು ಕನ್ನಡ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡಬೇಕು. ನಿರ್ಮಾಣ ಕ್ಷೇತ್ರದಲ್ಲಿರುವವರಂತೂ ರಾಜ್ಯಕ್ಕೆ ಬಂದು ವರ್ಷಗಳೇ ಕಳೆದರೂ ಕನ್ನಡ ಕಲಿತಿಲ್ಲ. ಅವರಿಗೂ ಕನ್ನಡ ಕಲಿಕೆ ಅನಿವಾರ್ಯವಾಗುವಂತಾಗಬೇಕು.

    ವಸುಧೇಂದ್ರ: ಜನಪ್ರಿಯ ಸಂಸ್ಕೃತಿಯಲ್ಲಿ ಸಿನಿಮಾ ಕೂಡ ಒಂದಾಗಿದೆ. ದೂರದ ಹಿಮಾಚಲ ಪ್ರದೇಶದ ಗುಡ್ಡದ ಹಳ್ಳಿಯ ಗೂಡಂಗಡಿಯಲ್ಲಿ ಟೀ ಮಾರುವ ಅಜ್ಜಿಯ ಫೋನ್ ರಿಂಗ್​ಟೋನ್ ಕನ್ನಡದ ಕಾಂತಾರ ಸಿನಿಮಾದ್ದಾಗಿತ್ತು. ಅಷ್ಟರ ಮಟ್ಟಿಗೆ ಸಿನಿಮಾ ಹೆಸರು ಮಾಡಿತು. ಅಂತಹ ಭಾವ ಸೃಷ್ಟಿಸಬೇಕು. ಕಟ್ಟಪ್ಪಣೆಯಿಂದ ಕನ್ನಡ ಕಲಿಸುವುದು ಒಂದೆಡೆಯಾದರೆ, ಬೆಲ್ಲಕ್ಕೆ ಇರುವೆ ಮುತ್ತುವಂತೆ ಕನ್ನಡ ಭಾಷೆ ಎಂಬ ಬೆಲ್ಲದ ರುಚಿಯನ್ನು ಅನ್ಯಭಾಷಿಕರು ಸವಿಯುವ ವಾತಾವರಣವನ್ನು ಸೃಷ್ಟಿಸಬೇಕಿದೆ.

    ರಾಜೀವ್ ಗೌಡ: ರಾಜಕೀಯದಲ್ಲಿ ಎಲ್ಲವೂ ಕನ್ನಡದಲ್ಲಿಯೇ ನಡೆಯು ತ್ತದೆ. ಆಡಳಿತದಲ್ಲೂ ಕನ್ನಡ ಜಾರಿ ಕುರಿತು ಬಹಳಷ್ಟು ಕಾರ್ಯಗಳು ಆಗಿವೆ. ಭಾಷಣಗಳನ್ನು ಕನ್ನಡದಲ್ಲಿಯೇ ಮಾಡುತ್ತಾರೆ. ಗ್ರಾಮ, ತಾಲೂಕು, ಜಿಲ್ಲಾಮಟ್ಟದಲ್ಲಿ ಎಲ್ಲವೂ ಕನ್ನಡದಲ್ಲಿಯೇ ನಡೆಯುತ್ತಿದೆ.

    • ತಂತ್ರಜ್ಞಾನ ಬಳಸಿ ಕನ್ನಡವನ್ನು ಅನ್ನದ ಭಾಷೆಯಾಗಿ ಮಾಡಲು ಸಾಧ್ಯವೇ?

    ವಸುಧೇಂದ್ರ: ಭಾಷೆ ಹೇಗೆ ಎಂದರೆ ಆನೆ ಇದ್ದಂತೆ, ನಡೆದಿದ್ದೇ ದಾರಿ. ನಾವು ಭಾಷೆ ನಿಯಂತ್ರಿಸಬಹುದು ಎಂದುಕೊಳ್ಳುತ್ತೇವೆ. ಆದರೆ, ಹಾಗಲ್ಲ. ಇದು ಎರಡು ಸಾವಿರ ವರ್ಷದ ಹಳೆಯ ಭಾಷೆ. ತನ್ನದೇ ರೀತಿಯಲ್ಲಿ ಸಾಗಿ ಬಂದಿದೆ. ಮುಂದೆ ಯಾವ ರೀತಿ ದಾರಿ ಮಾಡಿಕೊಳ್ಳುತ್ತದೋ ಗೊತ್ತಿಲ್ಲ.

    ಅನ್ನದ ಭಾಷೆ ಮಾಡಲು ಬುನಾದಿ ಹಾಕುವುದನ್ನೇ ಮರೆತುಬಿಡುತ್ತೇವೆ. ನಮ್ಮ ಮಟ್ಟಿಗೆ ಹೇಳುವುದಾದರೆ ಉನ್ನತ ಶಿಕ್ಷಣದ ಸಂಪನ್ಮೂಲ ಕನ್ನಡ ಭಾಷೆಯಲ್ಲಿ ಸಿಗುವವರೆಗೂ ಅದು ಅನ್ನದ ಭಾಷೆಯಾಗದು. ಚೀನಾದಲ್ಲಿ ಇಂಗ್ಲಿಷ್ ಕಡಿಮೆ ಇದೆ. ಆದರೆ, ತಾಂತ್ರಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಚೀನಾ, ಜಪಾನ್​ನವರು ತಮ್ಮ ಭಾಷೆಯಲ್ಲಿ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ನಾವು ಇನ್ನಾದರೂ ಶುರು ಮಾಡಬೇಕು. ಯಾವ ಭಾಷೆಯಿಂದ ಯಾವ ಭಾಷೆಗಾದರೂ ಅನುವಾದ ಸುಲಭವಾಯಿತೆಂದರೆ ಭಾಷೆಯ ಸೀಮೆ ಅಳಿಸಿಹೋಗುತ್ತದೆ. ಅಂದರೆ ಒಟಿಟಿ ವೇದಿಕೆಯಲ್ಲಿ ಯಾವುದೇ ಭಾಷೆಯ ಸಿನಿಮಾವನ್ನು ತಮಗೆ ಬೇಕಾದ ಭಾಷೆಯಲ್ಲಿ ನೋಡುವಂತೆ ಕನ್ನಡದ ಕಾದಂಬರಿ ಬೇರೆ ಭಾಷೆಯಲ್ಲಿ ಓದಲು ಅವಕಾಶ ಸಿಗುವ ದಿನಗಳು ತುಂಬ ದೂರ ಏನಿಲ್ಲ. ಆಗ ಭಾಷೆಯಿಂದ ವಂಚಿತರಾಗಬೇಕಾಗಿಲ್ಲ. 5-10 ವರ್ಷದಲ್ಲಂತೂ ಈ ತಂತ್ರಜ್ಞಾನ ಬರಲಿದೆ. ಇನ್ನು ಈಗ ಗೂಗಲ್ ಅನುವಾದ ನೋಡಿದರೆ ನಗು ಬರುತ್ತದೆ, ಸ್ವಲ್ಪವೇ ಸಮಯದಲ್ಲಿ ಶೇ.99ರಷ್ಟು ನಿಖರ ಅನುವಾದ ಲಭ್ಯವಾಗುತ್ತದೆ. ಆದರೆ, ಯಾರಿಗೆ ಹಣ ಹೋಗುತ್ತದೆ ಎಂಬುದು ಸಮಸ್ಯೆ. ನಮ್ಮದೇ ಆದ ಸ್ವತಂತ್ರ ತಂತ್ರಜ್ಞಾನ ಮಾಡಿಕೊಳ್ಳದೆ ಹೋದರೆ ಬೇರೆಯವರ ಕೈಗೊಂಬೆಯಾಗುವ ಅಪಾಯವಿದೆ. ತಂತ್ರಜ್ಞಾನ ಬೇಕು, ಸ್ವಂತಿಕೆಯೂ ಬೇಕು.

    ಪಿ. ಶೇಷಾದ್ರಿ: ಕನ್ನಡ ಭಾಷೆ ಓದಿ, ಬರೆಯುವವರಿಗೆ ಉದ್ಯೋಗಾವಕಾಶ ಹೆಚ್ಚಾಗಬೇಕು. ಇವತ್ತು ವಿದ್ಯಾಸಂಸ್ಥೆಗಳಲ್ಲಿ ನಿಕೃಷ್ಟವಾಗಿ ಕಾಣಲ್ಪಡುವವನು ಕನ್ನಡ ಮೇಸ್ಟ್ರು. ಗೌರವವೂ ಇಲ್ಲ, ಸಂಬಳವೂ ಇಲ್ಲ. ಅಲ್ಲಿ ಸರಿಯಾದ ವ್ಯಕ್ತಿ ಕನ್ನಡ ಕಲಿಸಬೇಕು. ಅವನಿಗೆ ಎಲ್ಲರಿಗಿಂತ ಹೆಚ್ಚಿನ ಸಂಬಳ ಕೊಡುವಂತಾಗಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ, ಬರೆದರೆ ಪ್ರೋತ್ಸಾಹ ಕೊಡಬೇಕು. ಇನ್ಪೋಸಿಸ್, ಟಿಸಿಎಸ್ ಸೇರಿ ಕೆಲವು ಕಡೆ ಕನ್ನಡ ಕಲಿಸುವ ವಿಭಾಗಗಳಿವೆಯಂತೆ. ಇಂಥವು ಹೆಚ್ಚಾಗಬೇಕು. ಸರ್ಕಾರ ಕೆಲವು ಸಂದರ್ಭದಲ್ಲಿ ಕಾನೂನೇ ಮಾಡಬೇಕು. ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಬೀಳುತ್ತದೆ ಎಂದಾಗ ಪಾಲನೆ ಮಾಡುತ್ತಾರೆ. ವಿದೇಶದಲ್ಲಿ ಇಂಥವು ಸಾಧ್ಯವಾಗುತ್ತದೆ, ಇಲ್ಲಿ ಏಕಿಲ್ಲ? ಭಾಷೆಯು ಕಾನೂನಿನ ಮಿತಿಗೆ ಒಳಪಟ್ಟರೆ ಪ್ರಾಯಶಃ ಅನ್ನದ ಭಾಷೆ ಆಗಬಹುದು.

    ರಾಜೀವ್ ಗೌಡ: ನಾನು ಫ್ರೆಂಚ್ ಶಾಲೆಗೆ ಹೋಗಿದ್ದೆ, ಸುಲಲಿತವಾಗಿ ಕಡಿಮೆ ಅವಧಿಯಲ್ಲಿ ಫ್ರೆಂಚ್ ಕಲಿಸಿದ್ದರು. ನಾವು ಸಹ ಹಳೇ ಪರಿಪಾಠ ಬಿಟ್ಟು ತಂತ್ರಜ್ಞಾನ ಆಧಾರಿತವಾಗಿ ಕಲಿಸಬೇಕು. ಕನ್ನಡವನ್ನೂ ಕಲಿಸಲು ಆಸಕ್ತಿ ಮೂಡಿಸಬೇಕು.

    ಸಾಫ್ಟ್​ವೇರ್ ಇರಲಿ, ಹಾರ್ಡ್​ವೇರ್​ಗೆ ಆದ್ಯತೆ ಸಿಗಲಿ

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿವಸುಧೇಂದ್ರ: ಸಾಫ್ಟ್​ವೇರ್-ಸರ್ವೀಸಸ್​ಗೆ ಮಾತ್ರ ಇಷ್ಟು ವರ್ಷ ಆದ್ಯತೆ ಕೊಡುತ್ತ ಬಂದಿದ್ದೇವೆ. ಒಂದು ಹಂತದಲ್ಲಿ ಬೆಂಗಳೂರು ಈ ಕ್ಷೇತ್ರದಲ್ಲಿ ಸ್ಯಾಚುರೇಟ್ ಆಗಿರಬಹುದು, ಆದರೆ ಇಡೀ ಕರ್ನಾಟಕ ಆಗಿಲ್ಲ. ನಮಗೆ ಬೇಕಾಗಿರುವುದು ಹಾರ್ಡ್​ವೇರ್ ಉತ್ಪಾದನೆ. ಈ ವಿಷಯದಲ್ಲಿ ಚೀನಾ ಬಹಳ ಮುಂದಿದೆ. ಮುಕ್ಕಾಲುಪಾಲು ಆಧಿಪತ್ಯ ಸಾಧಿಸಿದೆ. ಅದು ಮುಂದಿನ ದಿನಗಳಲ್ಲಿ ನಮ್ಮ ಕಡೆ ಬರುವ ಸಾಧ್ಯತೆ ಇದೆ. ಹಾರ್ಡ್​ವೇರ್ ಉತ್ಪಾದನೆ ಕಡೆ ಹೆಚ್ಚೆಚ್ಚು ಗಮನ ಕೊಡಬೇಕಾಗುತ್ತದೆ. ಹಾರ್ಡ್​ವೇರ್ ಉನ್ನತ ಮಟ್ಟದ ತಂತ್ರಜ್ಞಾನ ಅರಿತವರ ಜತೆ ಕೆಳಹಂತದ ಕಾರ್ವಿುಕರಿಗೂ ಅವಕಾಶ ಸಿಗಲಿದೆ. ಹೀಗಾಗಿ ಈ ದಿಕ್ಕಿನಲ್ಲಿ ಕರ್ನಾಟಕ ಆದ್ಯತೆ ನೀಡಬೇಕು ಮತ್ತು ಬೆಂಗಳೂರು ಹೊರತಾದ ನಗರಗಳಲ್ಲಿ ಸ್ಥಾಪನೆ ಮಾಡಬೇಕು. ಸಾಫ್ಟ್​ವೇರ್ ಸರ್ವಿಸಸ್​ವೆುೕಲೆ ನಂಬಿಕೊಂಡಿದ್ದೇವೆ, ಈ ಸರ್ವಿಸಸ್ ಎಂದರೆ ಏನೋ ಹೇಳಿಕೊಡುತ್ತಾರೆ, ಅದನ್ನು ಮಾಡುತ್ತಾರೆ. ಕೂಲಿ ಕೆಲಸ ಮಾಡಿದಂತೆ ಮಾಡಲಾಗುತ್ತಿದೆ. ಇದು ಐಟಿ ಕೂಲಿ ಎಂದೇ ಪ್ರಚಲಿತದಲ್ಲಿದೆ. ನಾವೇ ಸಂಶೋಧನೆ ಮಾಡುವ ಸಂಗತಿ ಬಹಳ ಕಡಿಮೆ. ಇಡೀ ಪ್ರಪಂಚದ ಐದು ಮುಖ್ಯ ಐಟಿ ಕಂಪನಿಗಳು ಅಮೆರಿಕದಲ್ಲೇ ಇದೆ. ಅವರು ಗಳಿಸುತ್ತಿದ್ದಾರೆ, ನಾವು ಕೂಲಿ ಮಾಡುತ್ತಿದ್ದೇವೆ. ನಾವೇ ಸಂಶೋಧನೆ ಮಾಡಿ ಪ್ರಾಡಕ್ಟ್ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಾಗಿದೆ.

    ರಾಜೀವ್ ಗೌಡ: ಮೈಕ್ರೋಸಾಫ್ಟ್ ಮೊದಲು ಸಾಫ್ಟ್​ವೇರ್ ಕಂಪನಿಯಾಗಿದ್ದು ನಂತರ ವಿವಿಧ ಹೊಸ ರೀತಿ ಉತ್ಪನ್ನ ಹೊರತಂದರು. ಈ ರೀತಿ ಸಂಸ್ಥೆಗಳ ಸಿಇಒ, ಇಂಜಿನಿಯರ್​ಗಳು ಹೆಚ್ಚಿನವರು ಭಾರತೀಯರು. ಅದೇ ರೀತಿ ಸಂಸ್ಥೆಯನ್ನು ಇಲ್ಲಿ ಸ್ಥಾಪನೆ ಮಾಡುವುದು ಹೇಗೆ? ಇದಕ್ಕೊಂದು ಆತ್ಮಸ್ಥೈರ್ಯ ಬೇಕು ಎನಿಸುತ್ತದೆ. ನಾನು ಹಲವು ವರ್ಷ ಅಮೆರಿಕದಲ್ಲಿದ್ದೆ, ಆ ಸಂದರ್ಭದಲ್ಲಿ ಭಾರತೀಯ ವೈದ್ಯರು ಸಾಹುಕಾರರಿದ್ದರು. ಬೇರೆ ವೃತ್ತಿಯಲ್ಲಿದ್ದವರಲ್ಲಿ ಮಧ್ಯಮವರ್ಗದ ಜೀವನ ಕಾಣಸಿಗುತ್ತಿದ್ದರು. ಈ ನಡುವೆ ಸಿಲಿಕಾನ್ ವ್ಯಾಲಿಯಲ್ಲಿ ಈ ಸ್ಟಾರ್ಟ್​ಅಪ್ ಬೂಮ್ ಶುರುವಾಯಿತು. ಅನೇಕರು ಪೈಪೋಟಿಯಲ್ಲಿ ನವೋದ್ಯಮ ಶುರುಮಾಡಿದರು. ಈ ರೀತಿ ಚಿಂತನೆ ನಮ್ಮಲ್ಲೂ ಹೊಳೆಯಬೇಕು. ನಮ್ಮ ಕೈಯಲ್ಲೂ ಆಗಲಿದೆ ಎಂದು ಆತ್ಮವಿಶ್ವಾಸ ತಂದುಕೊಳ್ಳಬೇಕು. ನಮ್ಮದೇ ಮೂಲಚಿಂತನೆ, ಅದನ್ನು ಪ್ರಾಡಕ್ಟ್ ಆಗಿ ಮಾಡುವ ಕೆಲಸ ಆಗಬೇಕು. ಪ್ರಪಂಚವೇ ನಮ್ಮ ಮಾರುಕಟ್ಟೆ ಎಂಬ ಭಾವನೆ ನಮ್ಮ ಯುವಕರಲ್ಲಿ ಕಾಣಿಸುತ್ತಿದ್ದು ಇಲ್ಲೂ ಅಂತಹ ಬೆಳವಣಿಗೆ ಬರಲು ಕೆಲವು ಸಮಯ ಬೇಕಾಗಬಹುದು.

    ಕನ್ನಡ ಕಲಿತರೆ ಜೀವನ ಸುಲಭ

    ವಸುಧೇಂದ್ರ: ಭಾರತದಲ್ಲಿ ದೊಡ್ಡ ವಲಸೆ ಇರುವುದು ಉತ್ತರ ಭಾರತದಿಂದ ದಕ್ಷಿಣಕ್ಕೆ. ಕರ್ನಾಟಕಕ್ಕೆ ಬಿಹಾರ, ಒಡಿಶಾ, ಉತ್ತರಪ್ರದೇಶದಿಂದ ಹೆಚ್ಚು ಬರುತ್ತಿದ್ದಾರೆ. ನಾವು ಅಲ್ಲಿ ಕನ್ನಡ ಕಲಿಸಿಕೊಡುತ್ತೇವೆ ಎಂದು ಉಚಿತವಾಗಿ ಸಂಜೆ ಕನ್ನಡ ತರಗತಿ ಆರಂಭಿಸಿದರೆ ಜನ ಖಂಡಿತ ಬರುತ್ತಾರೆ. ಉತ್ತರ ಭಾರತದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿಲ್ಲ. ಹೀಗಾಗಿ ಅವರು ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಕಲಿಯುತ್ತಾರೆ. ಆದರೆ, ಕರ್ನಾಟಕಕ್ಕೆ ಹೋಗಲು ಕನ್ನಡ ಅನಿವಾರ್ಯ, ಅನುಕೂಲ ಎಂದು ಮನವರಿಕೆ ಮಾಡಿ ಪ್ರೀತಿಯಿಂದ ಕನ್ನಡ ಕಲಿಸಬೇಕು, ಬಲವಂತದಿಂದಲ್ಲ. ಆಗ ರಾಜ್ಯಕ್ಕೆ ಬಂದಾಗ ಅವರಿಗೂ ಸಮಸ್ಯೆಯಾಗದು.

    ಬದುಕು ಕೇಂದ್ರಬಿಂದು

    ಬೆಂಗಳೂರಿನಲ್ಲಿ ಶೇ.95ರಷ್ಟಿರುವ ಕನ್ನಡಿಗ ಟ್ಯಾಕ್ಸಿ ಚಾಲಕರು ಹಿಂದಿ ಮಾತನಾಡುತ್ತಾರೆ. ನಮ್ಮ ಭಾಷೆಯಲ್ಲೇ ವ್ಯವಹರಿಸಬಹುದಲ್ಲವೆಂದರೆ ಅವರ ಭಾಷೆಯಲ್ಲೇ ಮಾತನಾಡಿ ನಾಲ್ಕು ಕಾಸು ಸಂಪಾದಿಸುತ್ತೇವೆ ಎನ್ನುತ್ತಾರೆ ಎಂದು ಪಿ.ಶೇಷಾದ್ರಿ ಉದಾಹರಿಸಿದರು. ಬೇರೆ ರಾಜ್ಯಗಳಿಂದ ಬಂದಿರುವ ವೈದ್ಯರು, ದೊಡ್ಡ ಆಸ್ಪತ್ರೆ ಕಟ್ಟಿಕೊಂಡವರು ರೋಗಿಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತಾರೆ. ಅವರ ವೃತ್ತಿ, ಆಸ್ಪತ್ರೆ ನಡೆಯಬೇಕೆಂದರೆ ಕನ್ನಡ ಗೊತ್ತಿರಬೇಕು ಎಂದು ವಸುಧೇಂದ್ರ ಮತ್ತೊಂದು ಉದಾಹರಣೆ ನೀಡಿದರು. ಅತ್ತ ಆಟೋ ಚಾಲಕ, ಇತ್ತ ವೈದ್ಯರ ನಡೆ-ನುಡಿಗೆ ಬದುಕಿನ ಅನಿವಾರ್ಯತೆಯೇ ಕೇಂದ್ರಬಿಂದು. ಹೀಗಾಗಿ ಕನ್ನಡ ಸಂಪರ್ಕ, ಸಂವಹನ ಮಾತ್ರವಲ್ಲ ಬದುಕಿನ ಭಾಷೆಯಾಗಬೇಕು ಎಂದರು.

    ಕೊನೆಗೂ ಅಲ್ಲಿ ರಾಜ್ಯೋತ್ಸವ ಆಚರಿಸಲು ಅವಕಾಶ ಸಿಕ್ತು: ಉಚ್ಚ ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts