More

    ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಲಿ

    ಹುಣಸೂರು: ಕನ್ನಡಿಗರಾಗಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್- 2 ತಹಸೀಲ್ದಾರ್ ಯದುಗಿರೀಶ್ ಸಲಹೆ ನೀಡಿದರು.

    • ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಟ್ಯಾಲೆಂಟ್ ವಿದ್ಯಾಸಂಸ್ಥೆಯ ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 2ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    • ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಧಾನವಾಗಬೇಕು. ಕರುನಾಡಿಗೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವಸಂತ ಕಳೆದ ಈ ಶುಭಸಂದರ್ಭದಲ್ಲಿ ಕನ್ನಡಿಗರ ಉದಾರತೆ ಮತ್ತು ಭಾಷೆಯ ಮೇಲಿನ ಅಭಿಮಾನ ಶೂನ್ಯತೆಯೇ ಎದ್ದುಕಾಣುತ್ತಿದೆ. ಭಾಷಾಭಿಮಾನದ ಮೂಲಕ ನೆರೆ ರಾಜ್ಯಗಳು ಅಭಿವೃದ್ಧಿಯತ್ತ ಸಾಗುತ್ತಿವೆ ಎನ್ನುವುದು ಸುಳ್ಳಲ್ಲ. ಹೀಗಿರುವಾಗ ಕನ್ನಡಿಗರಾಗಿ ನಾವು ಅಭಿಮಾನದೊಂದಿಗೆ ಅಂದಾಭಿಮಾನಿಗಳಾದರೂ ಸರಿಯೇ ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿಕೊಡುವತ್ತ ಹೆಜ್ಜೆಯಿಡಬೇಕಿದೆ ಎಂದು ಕರೆ ನೀಡಿದರು.
    • ಟ್ಯಾಲೆಂಟ್ ವಿದ್ಯಾಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ ಮಾತನಾಡಿ, ಇಂಗ್ಲೀಷ್ ಮಾತನಾಡುವವನು ಬುದ್ಧಿವಂತ ಎಂಬ ಭಾವನೆ ಪಾಲಕರಲ್ಲಿದೆ. ಇಂಜಿನಿಯರಿಂಗ್ ಪದವಿಯನ್ನು ಸಂಪೂರ್ಣವಾಗಿ ಕನ್ನಡೀಕರಣಗೊಳಿಸಿ ವ್ಯಾಸಂಗ ಮಾಡಲು ಸರ್ಕಾರ ಮುಂದಾದರೆ ಒಬ್ಬನೇ ಒಬ್ಬ ಕನ್ನಡಿಗ ಪ್ರವೇಶ ಪಡೆಯಲಿಲ್ಲ. ಪ್ರತಿ ಶಾಲೆಯಲ್ಲೂ ಕನ್ನಡದ್ದೇ ಹವಾ ಇರಬೇಕು. ಶಾಲೆಯಿಂದಲೇ ಮಕ್ಕಳಲ್ಲಿ ಸಾಹಿತ್ಯದ ರುಚಿ ಹತ್ತಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಬ್ಬ ಕುವೆಂಪು, ಕಾರಂತ, ಬೇಂದ್ರೆಯರನ್ನು ಕಾಣಬಹುದು ಎನ್ನುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಪರಿಷತ್ ರಚಿಸಲಾಗಿದೆ. ಭಾಷೆ ಸಂಸ್ಕೃತಿಯನ್ನು ಕಲಿಸುತ್ತದೆ. ಸಂಸ್ಕೃತಿ ಇರುವ ಮಗುವಿಗೆ ಬೇರೇನನ್ನೂ ಹೇಳಿಕೊಡಬೇಕಿಲ್ಲ. ಅದಾಗಿಯೇ ದೇಶದ ಆಸ್ತಿಯಾಗುತ್ತದೆ. ಹಾಗಾಗಿ ಎಲ್ಲರೂ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡೋಣ ಎಂದರು.
    • ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಎಲುಬಿನ ಗೂಡಿನಂತಿದ್ದ ಇಂಗ್ಲೀಷ್ ಇತರ ಭಾಷೆಗಳ ಪದಗಳನ್ನೇ ತನ್ನದಾಗಿಸಿಕೊಂಡು ಇಂದು ವಿಶ್ವಮಾನ್ಯ ಭಾಷೆಯಾಗಿ ಬೆಳೆದಿದೆ. ತನ್ನದೇ ಪದಗಳನ್ನು ಹೊಂದಿರುವ ಕನ್ನಡ ಯಾಕೆ ಆ ಮಟ್ಟಕ್ಕೆ ಬೆಳೆಯಲಾಗದು ಎಂಬ ಚಿಂತನೆ ನಮ್ಮಲ್ಲಿ ಮೂಡಿಬರಬೇಕು. ಮಕ್ಕಳಲ್ಲಿ ಕನ್ನಡದ ಸೊಗಡನ್ನು ಹುಟ್ಟುಹಾಕುವ ಇಂತಹ ಪ್ರಯೋಗಗಳನ್ನು ನಡೆಸುತ್ತಿರುವ ಟ್ಯಾಲೆಂಟ್ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
    • ಸಮ್ಮೇಳಾಧ್ಯಕ್ಷೆಯಾದ ವಿದ್ಯಾರ್ಥಿನಿ ಈ. ಪ್ರಕೃತಿ ಅಧ್ಯಕ್ಷೀಯ ಭಾಷಣ ಮಾಡಿ, ಸಮ್ಮೇಳನದ ಮೂಲಕ ಬಾಲಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಎರಡು ವರ್ಷಗಳಿಂದ ನೂರಾರು ಪ್ರತಿಭೆಗಳು ಅನಾವರಣಗೊಳ್ಳುತ್ತಿರುವುದು ಸಂತಸ ತಂದಿದೆ. ಕನ್ನಡಿಗರು ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗದೇ ವರ್ಷಪೂರ್ತಿ ಕನ್ನಡಿಗರಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
    • ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ.ಮಹದೇವ, ಕ್ಷೇತ್ರ ಸಮನ್ವಯಾಧಿಕರಿ ಕೆ.ಸಂತೋಷ್‌ಕುಮಾರ್, ಸಿ.ಆರ್.ಪಿ ಪ್ರಶಾಂತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಮಾತನಾಡಿದರು.
    • ಯುವ ಸಾಹಿತಿ ಗಣೇಶ್ ನಿಲುವಾಗಿಲು, ಹರೀಶ್, ಪ್ರಾಂಶುಪಾಲ ಎಂ.ಟಿ.ಮಂಜುನಾಥ್, ಗುಲ್ನಾಜ್ ಖಾನ್ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಹಿರಿಯ ರಂಗ ಕಲಾವಿದ ಎಸ್.ಜಯರಾಂ ಹಾಗೂ ನಗರದ ಸಂತ ಜೋಸೆಫರ ಶಾಲೆಯ ಕನ್ನಡ ಶಿಕ್ಷಕ ಪಾಟೀಲರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
    • ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಶಾಲಾ ಆವರಣಕ್ಕೆ ಕರೆತರಲಾಯಿತು. ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಭಾಗವಹಿಸಿದ್ದರು.

    2ಊಓ1: ಹುಣಸೂರು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 2ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರೇಡ್-2 ತಹಸೀಲ್ದಾರ್ ಯದುಗಿರೀಶ್ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಈ.ಪ್ರಕೃತಿ, ನವೀನ್ ರೈ, ಎಸ್.ರೇವಣ್ಣ, ಸಂತೋಷ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts