More

    ಕ್ಯಾನ್ಸರ್​, ಹೃದಯಾಘಾತ ತಡೆಗೆ ಪೂರಕ ಸಂಶೋಧನೆಯಾಗಲಿ

    ಕೋಲಾರ: ಮುಂದಿನ ವರ್ಷಗಳಲ್ಲಿ ಕ್ಯಾನ್ಸರ್​ ಮತ್ತು ದೃದಯಾಘಾತಗಳು ಹೆಚ್ಚು ಸಂಭವಿಸುವ ಮುನ್ಸೂಚನೆಗಳು ಕಾಣುತ್ತಿವೆ. ಇದನ್ನು ತಡೆಗಟ್ಟಲು ಪೂರಕವಾದ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಪಾಶ್ಚಾತ್ಯ ದೇಶಗಳನ್ನು ನಾವು ಈ ವಿಭಾಗದಲ್ಲಿ ಅನುಕರಿಸಬೇಕಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು.

    ನಗರದ ಟಮಕದಲ್ಲಿರುವ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ರಜತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನ್ಯಾಷನಲ್​ ಸೈಂಟಿಫಿಕ್​ ಕಾನ್​ಕ್ಲೇವ್​ ಆನ್​ ಟ್ರಾನ್ಸಲೇಷನ್​ ರಿಸರ್ಚ್​ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
    ಮುಂದಿನ 10 ವರ್ಷದ ನಂತರ ಕ್ಯಾನ್ಸರ್​ ಬರಲಿದೆ, 5 ವರ್ಷದ ನಂತರ ಹೃದಯಾಘಾತವಾಗಲಿದೆ ಎಂಬ ಬರಲಿದೆ ಎಂಬುದನ್ನು ಪತ್ತೆ ಹಚ್ಚಲು ಸಂಶೋಧನೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿ ಮತ್ತೆ ಸಂಶೋಧನಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
    ಕೋವಿಡ್​ ಜಗತ್ತಿಗೆ ದೊಡ್ಡ ಪಾಠ ಕಲಿಸಿದೆ. ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ. ಹಿಂದೆಲ್ಲಾ ಲಸಿಕೆ ಅಭಿವೃದ್ಧಿಗೆ 15 ವರ್ಷ ಕಾಲಾವಕಾಶ ಬೇಕಾಗುತಿತ್ತು. ಆದರೆ, ಕೋವಿಡ್​ ಲಸಿಕೆಯನ್ನು ಕೇವಲ ಒಂದೂವರೆ ವರ್ಷದಲ್ಲಿ ಅಭಿವೃದ್ಧಿಪಡಿಸಲಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಭಾರತದಲ್ಲಿ ಶೇ.65ರಷ್ಟು ಸಾವುಗಳು ಜೀವನಶೈಲಿ ಕಾರಣದಿಂದ ಸಂಭವಿಸುತ್ತಿವೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್​ ಸಾವಿಗೆ ಕಾರಣವಾಗುತ್ತಿವೆ. ಶೇ.30 ರಷ್ಟು, ಹೃದಯಾಘಾತ 40 ವರ್ಷದೊಳಗಿನವರಲ್ಲಿ ಸಂಭವಿಸುತ್ತಿದೆ ಎಂದು ತಿಳಿಸಿದರು.
    ದೇಶದಲ್ಲಿ ಸುಮಾರು 8 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಶೇ.1 ಅಥವಾ 2 ರಷ್ಟು ಸಂಸ್ಥೆಗಳು ಮಾತ್ರ ಮೂಲ ಸಂಶೋಧನೆಗೆ ಒತ್ತು ಕೊಡುತ್ತಿವೆ. ಸಂಶೋಧಕರಿಗೆ ಮಹತ್ವದ ಸ್ಥಾನ ಇದೆ. ಕೆಲವೇ ಕೆಲ ಸಂಸ್ಥೆಗಳು ಸಂಶೋಧನೆಗಾಗಿ ಹಣ ಹಾಗೂ ಸಮಯ ಮೀಸಲಿಡುತ್ತಿವೆ. ಅದರಲ್ಲಿ ಅರಸು ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಕೂಡ ಒಂದು ಎಂದು ಶ್ಲಾಘಿಸಿದರು.
    ಅಮೆರಿಕ, ಚೀನಾ,ದಕ್ಷಿಣ ಕೊರಿಯಾ, ಇಸ್ರೇಲ್​, ಕೆನಡಾದಂಥ ದೇಶಗಳು ಜಿಡಿಪಿಯ ಶೇ 3.5ರಷ್ಟು ಹಣವನ್ನು ವೆಚ್ಚ ಮಾಡುತ್ತಿದೆ. ಆದರೆ, ಭಾರತದಲ್ಲಿ ಜಿಡಿಪಿಯ ಕೇವಲ ಶೇ 0.6ರಷ್ಟು ಹಣವನ್ನು ಸಂಶೋಧನೆಗೆ ವೆಚ್ಚ ಮಾಡಲಾಗುತ್ತಿದೆ. ವಿವಿಧ ಕಾರಣಗಳಿಂದ ಕಳೆದ 10 ವರ್ಷಗಳಲ್ಲಿ ಇನ್ನೂ ಕಡಿಮೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಅಧ್ಯಕ್ಷ ಜಿ.ಎಚ್​.ನಾಗರಾಜ್​, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿ ಡಾ.ರಾಜೇಶ್​ ಜಗದಾಳೆ, ಕುಲಪತಿ ವೆಂಗಮ್ಮ, ಡೀನ್​ ಡಾ.ಕೆ.ಪ್ರಭಾಕರ್​, ಕುಲಪತಿ ಡಿ.ವಿ.ಎಲ್​.ಎನ್​.ಪ್ರಸಾದ್​, ಯನಪೋಯಾ ವಿಶ್ವವಿದ್ಯಾಲಯದ ವಿಜಯ ಕುಮಾರ್​, ವೈದ್ಯಕಿಯ ಅಧೀಕ್ಷಕ ಡಾ.ಕೃಷ್ಣಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts