More

    ಆಡಳಿತಕ್ಕೆ ಸಿಗಲಿ ವೇಗ; ಅಭಿವೃದ್ಧಿ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು…

    ಅಭಿವೃದ್ಧಿ, ಆಡಳಿತಾತ್ಮಕ ವಿಚಾರಗಳ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಇರುವುದು ಅಗತ್ಯ. ಆದರೆ, ಎಷ್ಟೋ ಕ್ಷೇತ್ರಗಳಲ್ಲಿ ಈ ತಾಳಮೇಳ ತಪ್ಪಿಹೋಗುವುದರಿಂದ ಆಗಬೇಕಾದ ಕೆಲಸಗಳು ವಿಳಂಬವಾಗುತ್ತವೆ. ‘ಶಾಸಕರು ಬರೀ ಆಶ್ವಾಸನೆ ನೀಡುತ್ತಾರೆ’ ಎಂಬ ಜನರ ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳು ತುಂಬ ವಿಳಂಬವಾಗುವುದರಿಂದ ಜನಸಾಮಾನ್ಯರು ವ್ಯವಸ್ಥೆ ಬಗ್ಗೆ ಭ್ರಮನಿರಸನ ಹೊಂದುವಂತಾಗುತ್ತದೆ. ಕೆಲವೊಮ್ಮೆ ಅಧಿಕಾರಿಗಳು ಯಾವುದೋ ಕುಂಟುನೆಪ ಹೇಳುತ್ತ ಕಾಲ ತಳ್ಳುತ್ತಿರುತ್ತಾರೆ. ಕೆಲ ಪ್ರಕರಣಗಳಲ್ಲಿ ಶಾಸಕರೇ ಸೂಕ್ತ ಪ್ರಕ್ರಿಯೆ ಅಥವಾ ನಿಯಮಗಳನ್ನು ಪೂರೈಸಿರುವುದಿಲ್ಲ. ಕಾರಣಗಳು ಏನೇ ಇದ್ದರೂ, ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಬೇಕು.

    ತಾಲೂಕು ಮಟ್ಟದಲ್ಲಿ ಇಂದಿಗೂ ಸಣ್ಣ ಸಣ್ಣ ಸಮಸ್ಯೆ ಬಗೆಹರಿಯಬೇಕಾದರೆ ಜನಸಾಮಾನ್ಯರು ಹತ್ತಾರು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂಥ ದುಸ್ಥಿತಿ ಇದೆ. ‘ನಮ್ಮ ಮಾತು ಕೇಳುವುದಿಲ್ಲ’ ಅಂತ ಶಾಸಕರೂ, ‘ಸೂಕ್ತ ಅನುದಾನವೇ ಬಂದಿಲ್ಲ’ ಎಂದು ಅಧಿಕಾರಿಗಳೂ ಸಬೂಬು ನೀಡುವುದು ಸಾಮಾನ್ಯ. ಇದು ಒಟ್ಟಾರೆ ಆಯಾ ಕ್ಷೇತ್ರಗಳ ಹಿಂದುಳಿಯುವಿಕೆಗೆ ಕಾರಣವಾಗುವ ಜತೆಗೆ, ಸುಧಾರಣೆಗಳಿಂದ ವಂಚಿತ ವಾಗಬೇಕಾಗುತ್ತದೆ.

    ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲೇ ಶಾಸಕರ ಸಭೆ ನಡೆಸಬೇಕು ಎಂಬ ಬೇಡಿಕೆ ಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಡೇರಿಸಿದ್ದಾರೆ. ಗುರುವಾರ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಹಲವು ಗಂಭೀರ ಸಮಸ್ಯೆಗಳು ಅನಾವರಣಗೊಳ್ಳುವ ಜತೆಗೆ, ಪರಿಹಾರದ ದಾರಿಯನ್ನು ಕಂಡುಕೊಂಡವು. ಸಮನ್ವಯ ಸಾಧಿಸುವಂತೆ ಈ ವೇಳೆ ಕರೆನೀಡಿದ ಮುಖ್ಯಮಂತ್ರಿ, ‘ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ಹಾದಿಬೀದೀಲಿ ಮಾತನಾಡಬೇಡಿ’ ಎಂದು ಶಾಸಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಳೆದೊಂದು ವರ್ಷದಿಂದ ಕರೊನಾ ಹಾವಳಿಯ ಆಘಾತದಿಂದ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿರುವುದು ನಿಜವೇ. ಮಂಜೂರಾದ ಅನುದಾನಗಳು ಕೂಡ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ನೀಡಿದ ಆಶ್ವಾಸನೆಗಳು ಈಡೇರುತ್ತಿಲ್ಲ. ಆರಂಭಿಸಿದ ಕಾಮಗಾರಿಗಳು ಕುಂಟುತ್ತ ಸಾಗಿವೆ. ಬೇಸಿಗೆ ಬಂದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿದೆ. ಮತ್ತೊಂದೆಡೆ, ಲಭ್ಯ ಇರುವ ಅನುದಾನವನ್ನೂ ಅಧಿಕಾರಿ ಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪ ಶಾಸಕರದ್ದು. ಬಹುತೇಕ ಇಲಾಖೆಗಳಲ್ಲಿ ಕಾರ್ಯಗಳೇ ಸ್ತಬ್ಧವಾಗಿದ್ದು, ‘ಕರೊನಾ ಎಫೆಕ್ಟ್’ ಎಂಬ ಸಿದ್ಧಉತ್ತರ ಬರುತ್ತಿದೆ. ಈ ಸ್ಥಿತಿ ಹೀಗೆ ಮುಂದುವರಿದರೆ ಜನಸಾಮಾನ್ಯರು ತಮ್ಮ ಬವಣೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಶಾಸಕರೇ ಅಸಹಾಯಕರಾಗಿಬಿಟ್ಟರೆ ಗತಿ ಏನು?

    ಈ ಅಂಶಗಳನ್ನೆಲ್ಲ ಪರಿಗಣಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿರುವುದು, ಸೂಕ್ತ ನಿರ್ದೇಶನಗಳನ್ನು ನೀಡಿರುವುದು ಮಹತ್ವದ ಕ್ರಮವಾಗಿದೆ. ರಾಜಕೀಯದ ಜಿದ್ದಾಜಿದ್ದಿಗಳು ಏನೇ ಇರಬಹುದು. ಕ್ಷೇತ್ರ ಸುಧಾರಣೆ, ಅನುದಾನ ಹಂಚಿಕೆ, ಮೂಲಸೌಕರ್ಯ ಒದಗಿಸುವಿಕೆಯಂಥ ವಿಷಯಗಳಲ್ಲಿ ರಾಜಕಾರಣ ನುಸುಳಬಾರದು. ನಿಗದಿತ ಕಾಲಾವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಅಧಿಕಾರಿಗಳ ಸಹಕಾರ, ಶಾಸಕರ ಬದ್ಧತೆ ಮೇಳೈಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts