More

    ರೈತರು ಆರೋಗ್ಯದ ಕಡೆ ಗಮನ ಹರಿಸಲಿ

    ಹಿರೀಸಾವೆ: ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಬೆಂಗಳೂರಿನ ಯುಟಿ ಲೈವ್‌ಲೈನ್ ಆಸ್ಪತ್ರೆಯ ವೈದ್ಯ ಡಾ.ಬಿ.ಆರ್.ಜಯರಾಂ ಹೇಳಿದರು.

    ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ಸಿಂಗಮ್ಮದೇವಿ ದೇಗುಲ ಉದ್ಘಾಟನೆ ಹಿನ್ನೆಲೆ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ರೈತರು ಆರೋಗ್ಯವಾಗಿದ್ದಲ್ಲಿ ದೇಶ ಸುಭಿಕ್ಷೆಯಿಂದಿರುತ್ತದೆ. ಇತ್ತೀಚಿನ ಆಹಾರದ ಪದ್ಧತಿಯಲ್ಲಿನ ಬದಲಾವಣೆಯಿಂದ ಮನುಷ್ಯನ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಸೇರಿದಂತೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಸಾವು-ನೋವುಗಳು ಹೆಚ್ಚುತ್ತಿವೆ ಎಂದು ಹೇಳಿದರು.

    ಪ್ರತಿದಿನ ವ್ಯಾಯಾಮ ಮಾಡುವುದರ ಜತೆಗೆ ಅಡುಗೆಯಲ್ಲಿ ಹೆಚ್ಚು ಸೊಪ್ಪು-ತರಕಾರಿ ಪದಾರ್ಥಗಳನ್ನು ಉಪಯೋಗಿಸಬೇಕು. ಟೀವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ಸಾಕಷ್ಟು ದೂರ ಸರಿಯುವುದು ಒಳ್ಳೆಯದು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣು, ಕಿವಿ, ಮೂಗು, ಕೀಲು ಹಾಗೂ ಮೂಳೆ ಸೇರಿದಂತೆ ವಿವಿಧ ತಪಾಸಣೆ ನಡೆಸಲಾಯಿತು. 390 ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು.

    ನುಗ್ಗೇಹಳ್ಳಿ-ಅಯ್ಯನಹಳ್ಳಿ ಪುರವರ್ಗ ಹಿರೇಮಠದ ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.

    ಹಿರೀಸಾವೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ್, ಮಾಜಿ ಉಪಾಧ್ಯಕ್ಷ ಬಿ.ಸಿ.ಕಿರಣ್, ಶ್ರೀ ಸಿಂಗಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಮಂಜೇಗೌಡ, ಖಜಾಂಚಿ ಪುಟ್ಟಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts