More

    ಪುಸ್ತಕ ಮಿತ್ರ ಇರಲಿ ಸದಾ ಪುಟಾಣಿಗಳ ಹತ್ತಿರ!

    ಅದೊಂದಿತ್ತು ಕಾಲ. ವ್ಯಾಪಿಸಿರಲಿಲ್ಲ ಮೊಬೈಲ್ ಜಾಲ! ರಾಮಾಯಣ, ಮಹಾಭಾರತ, ರಾತ್ರಿ ವಾರ್ತೆಗಷ್ಟೇ ಸೀಮಿತವಾಗಿತ್ತು ಟಿವಿ. ವಾರಕ್ಕೊಮ್ಮೆ ಚಿತ್ರಮಂಜರಿ, ಭಾನುವಾರಕ್ಕೊಮ್ಮೆ ಸಿನಿಮಾ. ಅದೇ ದೊಡ್ಡ ಸಂಭ್ರಮ. ಟಿವಿ ಎದುರು ಠೀವಿಯಿಂದ ಕುಳಿತಿರುತ್ತಿದ್ದ ಮಕ್ಕಳಿಗೆ ಅದಷ್ಟೇ ಸ್ಕ್ರೀನ್ ಟೈಮ್ ಆಗೆಲ್ಲ ಪುಸ್ತಕಗಳೇ ಚಿಣ್ಣರಿಗೆ ಆಪ್ತ ಸ್ನೇಹಿತರು! ಪುಸ್ತಕಗಳ ಮಹತ್ವ ನೆನಪಿಸಲೆಂದು ನಿನ್ನೆಯಷ್ಟೇ (ಪ್ರತಿ ವರ್ಷ ಏಪ್ರಿಲ್ 2) ‘ಮಕ್ಕಳ ಪುಸ್ತಕ ದಿನ’ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಪುಸ್ತಕಗಳ ಜತೆಗಿನ ಮಕ್ಕಳ ಸ್ನೇಹ, ಸಂಬಂಧ, ಇತಿಹಾಸ ‘ಪುಟಾಣಿ’ ಓದುಗರಿಗಾಗಿ.

    | ಬಿ.ಎಸ್. ಮಂಜುನಾಥ್

    ಮೂರ್ನಾಲ್ಕು ದಶಕಗಳ ಹಿಂದೆ ಇಂಟರ್ನೆಟ್ ಇರಲಿಲ್ಲ. ಇದ್ದರೂ ಕೆಲವೇ ಕೆಲವು ಕಚೇರಿಗಳ ಕಂಪ್ಯೂಟರ್​ಗಷ್ಟೇ ಸೀಮಿತವಾಗಿತ್ತು. ಇನ್ನು ಮೊಬೈಲ್ ಫೋನ್ ಅಂತೂ ಇರಲೇ ಇಲ್ಲ ಬಿಡಿ. ಬೀದಿಗೊಂದು ಲ್ಯಾಂಡ್​ಲೈನ್ ಫೋನ್ ಇದ್ದರೆ ಅದೇ ಹೆಚ್ಚು. ಮಕ್ಕಳಿಗಂತೂ ಪಠ್ಯಪುಸ್ತಕ, ದಿನಪತ್ರಿಕೆಯೇ ಟೈಮ್ ಪಾಸ್​ಗೆ ಆಧಾರ. ಹೀಗಾಗಿ ಮಕ್ಕಳು ಪುಸ್ತಕಗಳನ್ನೇ ನೆಚ್ಚಿಕೊಂಡಿದ್ದರು. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪ್ರಕಟವಾಗುವ ಮಕ್ಕಳ ನಿಯತಕಾಲಿಕಗಳನ್ನು ಅಪ್ಪ-ಅಮ್ಮನ ಬಳಿ ಕಾಡಿ ಬೇಡಿ ತರಿಸಿಕೊಳ್ಳುತ್ತಿದ್ದರು. ಇಲ್ಲದಿದ್ದರೆ ಲೈಬ್ರರಿಗೆ ಹೋಗಿ ಓದುತ್ತಿದ್ದರು. ಇಲ್ಲವೇ ಅಕ್ಕಪಕ್ಕದ ಮನೆಯಿಂದ ಪಡೆದು ಓದಿ ಸಂಭ್ರಮಿಸುತ್ತಿದ್ದರು. ಹೀಗೆ ಓದಿ ಬೆಳೆದವರಲ್ಲಿ ಇಂದಿನ ನಮ್ಮ ಕವಿಗಳು, ಸಾಹಿತಿಗಳು, ಲೇಖಕರ ದೊಡ್ಡ ಸಾಲೇ ಇದೆ.

    ಓದಿನ ಸ್ವಾದವೇ ಚಂದ: ಟಾಮ್ ಆಂಡ್ ಜೆರ್ರಿ, ಸ್ಕೂಬಿ ಡೂ, ಮಾಶಾ ಆಂಡ್ ದ ಬೇರ್, ಮಿಕ್ಕಿಮೌಸ್​ನಂತಹ ಹತ್ತಾರು ಕಾರ್ಟೂನ್ ಶೋಗಳು ಇಂದಿನ ಮಕ್ಕಳಿಗೆ ಅಚ್ಚುಮೆಚ್ಚು. ಕನ್ನಡಕ್ಕೆ ಬಂದರೆ ಚಿಂಟು ಟಿವಿಯೇ ಚಿಣ್ಣರ ಅತ್ಯಾಪ್ತ ಸ್ನೇಹಿತ. ಇಂದಿನ ಮಕ್ಕಳು ಟಿವಿಯಲ್ಲಿ ಅಥವಾ ಮೊಬೈಲ್ ಫೋನ್​ನಲ್ಲಿ ಕಾರ್ಟೂನ್ ನೋಡಲು ಕುಳಿತರೆ ಕಣ್ರೆಪ್ಪೆ ಮಿಟುಕಿಸುವುದನ್ನೇ ಮರೆತುಬಿಡುತ್ತವೆ! ಅದಕ್ಕೇ ಒಂದು ಗೀಳಾಗಿ, ಚಟವಾಗಿ ಕಾಡುತ್ತದೆ. ಬಿಟ್ಟೇನೆಂದರೂ ಬಿಡದೆ ಅಂಟಿಕೊಂಡುಬಿಡುತ್ತದೆ. ಆದರೆ ಪುಸ್ತಕ ಹಾಗಲ್ಲ. ಓದಿನ ಪ್ರಪಂಚವೇ ಬೇರೆ. ಟಾಮ್ ಆಂಡ್ ಜೆರ್ರಿಯ ಕಾಲಾವಧಿಯಲ್ಲೇ ಕನ್ನಡದಲ್ಲಿ ಹತ್ತಾರು ಮಕ್ಕಳ ಕಥೆ ಪುಸ್ತಕಗಳು ಸಿಗುತ್ತಿದ್ದವು. ಈ ಪೈಕಿ ಈಗಲೂ ಕೆಲವು ಪುಸ್ತಕಗಳು ಮಕ್ಕಳ ಮನ ತಣಿಸುತ್ತಲೇ ಇವೆ. ಮಕ್ಕಳೇ, ಟಿವಿಯ ಕಾರ್ಟೂನ್​ಗೂ ಪುಸ್ತಕದ ಕಾರ್ಟೂನ್​ಗೂ ಸಾಕಷ್ಟು ವ್ಯತ್ಯಾಸವಿದೆ. ಟಿವಿ ಷೋ ನಿಮ್ಮನ್ನು ಕ್ಷಣಿಕವಾಗಿ ರಂಜಿಸಿದರೆ ಮಕ್ಕಳ ಪುಸ್ತಕ ನಿಮ್ಮ ಕಲ್ಪನಾಶಕ್ತಿಯನ್ನು ವೃದ್ಧಿಸುತ್ತದೆ. ಭಾಷೆಯನ್ನು ಪರಿಪಕ್ವಗೊಳಿಸುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮಲ್ಲಿ ಅಕ್ಷರ ಜ್ಞಾನ, ಬರವಣಿಗೆ ಆಸಕ್ತಿಯ ಹೆಚ್ಚಾಗುತ್ತದೆ. ವ್ಯಾಕರಣವೂ ಶುದ್ಧವಾಗುತ್ತದೆ. ಇದಿಷ್ಟೇ ಅಲ್ಲ ಮಕ್ಕಳ ಪುಸಕ್ತದಲ್ಲಿನ ಚಿತ್ರಗಳು ನಿಮ್ಮಲ್ಲಿ ಚಿತ್ರಕಲೆ ಕಲಿಯುವುದಕ್ಕೂ ಸ್ಪೂರ್ತಿ ತುಂಬುತ್ತವೆ. ಕಥೆ, ಕವನ ಬರೆಯಲೂ ಪ್ರೇರಣೆ ನೀಡುತ್ತವೆ.

    ಏನಿದು ಮಕ್ಕಳ ಪುಸ್ತಕ ದಿನ?: ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಡೆನ್ಮಾರ್ಕ್​ನ ಪ್ರಸಿದ್ಧ ಕಥೆಗಾರ. 1805ರಲ್ಲಿ ಜನಿಸಿದ ಈತ ಮಕ್ಕಳ ಕತೆ ಬರೆಯುವುದರಲ್ಲಿ ಪರಿಣಿತ. ಈತನ 9 ಸಂಪುಟಗಳ ‘ಫೇರಿ ಟೇಲ್ಸ್’ 156 ಕಥೆಗಳ ಗುಚ್ಛ. ಇಂದಿಗೂ ಚಿಣ್ಣರಿಗೆ ಅಚ್ಚುಮೆಚ್ಚು. ಡ್ಯಾನಿಶ್ ಭಾಷೆಯ ಈ ಕಥೆಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ನೂರಾರು ವರ್ಷಗಳ ಹಿಂದೆಯೇ ಮಕ್ಕಳ ಕಥೆಗಾರರ ಸಾಲಿನಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದ ಹ್ಯಾನ್ಸ್​ನ ಜನ್ಮದಿನ ಪ್ರಯುಕ್ತ ಪ್ರತಿ ವರ್ಷ ಏ. 2ನ್ನು ‘ಮಕ್ಕಳ ಪುಸ್ತಕ ದಿನ’ವಾಗಿ ಆಚರಿಸಲಾಗುತ್ತದೆ.

    ಎಲ್ಲೆಲ್ಲಿ ಲಭ್ಯ?: ಮಕ್ಕಳ ಕಥೆಗಳ ಪುಸ್ತಕಗಳು ಪುಸ್ತಕದಂಗಡಿಗಳಲ್ಲಿ ಲಭ್ಯವಿರುತ್ತವೆ. ಇನ್ನು ಕೆಲವು ಆನ್​ಲೈನ್​ನಲ್ಲೂ ಖರೀದಿಗೆ ಸಿಗುತ್ತವೆ. ಚಂದಮಾಮ, ಬಾಲಮಿತ್ರದಂತಹ ನಿಯತಕಾಲಿಕಗಳು ಗ್ರಂಥಾಲಯಗಳಲ್ಲಿ ಸಿಗುತ್ತವೆ. ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿ ದಶಕಗಳಷ್ಟು ಹಳೆಯ ಪುಸ್ತಕಗಳು ಓದುಗರಿಗೆ ಲಭ್ಯವಿದೆ. ಮಕ್ಕಳೇ ಇದರ ಜತೆಗೆ ನಿಮ್ಮ ನೆರೆ ಹೊರೆಯವರು, ಸಂಬಂಧಿಕರನ್ನು ವಿಚಾರಿಸಿ. ಅನೇಕ ವರ್ಷಗಳಿಂದ ಅಟ್ಟದಲ್ಲಿ ಅಡಗಿಸಿಟ್ಟ ಮಕ್ಕಳ ಅನೇಕ ಪುಸ್ತಕಗಳು ನಿಮಗೆ ಸಿಗಬಹುದು. ನಿಮ್ಮ ಓದಿನ ಹಸಿವು ನೀಗಿಸಬಹುದು.

    ಇವುಗಳನ್ನು ಓದಿ: ಚಂದಮಾಮ, ಬಾಲಮಂಗಳ, ಬಾಲಮಿತ್ರ, ಚಂಪಕ, ತುಂತುರು, ಅಕ್ಬರ್ ಬೀರಬಲ್ ಕಥೆಗಳು, ತೆನಾಲಿ ರಾಮನ ಹಾಸ್ಯ ಕಥೆಗಳು, ಮಕ್ಕಳ ಮಂದಾರ, ಈಸೋಪನ ನೀತಿ ಕತೆಗಳು, ಪಂಚತಂತ್ರ ಕಥೆಗಳು, ಪಾತಾಳದಲ್ಲಿ ಪಾಪಚ್ಚಿ, ಮಕ್ಕಳ ಸಚಿತ್ರ ಜ್ಞಾನ ಭಂಡಾರ…. ಹೀಗೆ ನೂರಾರು ಪುಸ್ತಕಗಳು, ನಿಯತಕಾಲಿಕಗಳು ಪುಸ್ತಕದಂಗಡಿಗಳಲ್ಲಿ ದೊರೆಯುತ್ತವೆ. ಇನ್ನೂ ಸ್ವಲ್ಪ ದೊಡ್ಡ ಮಕ್ಕಳಿಗೆ ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು, ಕಾದಂಬರಿಗಳು ಹಿಡಿಸುತ್ತವೆ. ಇವು ನಿಮ್ಮ ಬೇಸಿಗೆ ರಜೆಯ ಸಂಭ್ರಮ ಹೆಚ್ಚಿಸುವುದರ ಜತೆಗೆ ಜ್ಞಾನವೂ ವೃದ್ಧಿಯಾಗುವಂತೆ ಮಾಡುತ್ತವೆ.

    ಲಾಭವೇನು?

    • ಓದುವ ಹವ್ಯಾಸ ನಿಮ್ಮ ಜೀವನದ ಹೆಜ್ಜೆಯನ್ನೇ ಬದಲಿಸಬಹುದು
    • ನಿಮ್ಮಲ್ಲಿರುವ ಕವಿ, ಲೇಖಕ, ಬರಹಗಾರನನ್ನು ಪ್ರೇರೇಪಿಸಬಹುದು
    • ನಿಮ್ಮ ಭಾಷಾಜ್ಞಾನ, ವ್ಯಾಕರಣ, ಕಲ್ಪನಾ ಶಕ್ತಿ ವೃದ್ಧಿಗೆ ಪ್ರೇರಣೆ

    ಸಂಕಲ್ಪ ತೊಡಿ

    ಮಕ್ಕಳ ಪುಸ್ತಕ ಕೇವಲ ನಿಮ್ಮನ್ನು ಸಂತೃಪ್ತಗೊಳಿಸಿದರೆ ಸಾಲದು. ನಿಮ್ಮ ಮುಂದಿನ ಪೀಳಿಗೆಗೂ ಸಿಗಬೇಕೆಂದಾದರೆ ಇಂತಹ ಸಂಕಲ್ಪ ತೊಡಿ.

    ಇ-ಸ್ಪರ್ಶ ನೀಡಿ: ಅಪರೂಪದ ಪುಸ್ತಕ ಸಿಕ್ಕರೆ ಅದನ್ನು ಪಿಡಿಎಫ್ ಮಾಡಿ ಕಂಪ್ಯೂಟರ್​ನಲ್ಲಿ ಶಾಶ್ವತವಾಗಿ ಇರುವಂತೆ ಮಾಡಿ. ಇದು ಮುಂದೆ ನಿಮ್ಮಂತಹ ಲಕ್ಷಾಂತರ ಮಕ್ಕಳಿಗೆ ನೆರವಾಗಬಹುದು.

    ಗ್ರಂಥಾಲಯ ಮಾಡಿ: ಮಕ್ಕಳ ಪುಸ್ತಕಗಳಿಗಾಗಿಯೇ ನಿಮ್ಮ ಮನೆಯಲ್ಲಿ ಪುಟ್ಟ ಗ್ರಂಥಾಲಯ ಮಾಡಿ. ಬೈಂಡ್ ಹಾಕಿಟ್ಟು, ಧೂಳು ತಿನ್ನದಂತೆ ಎಚ್ಚರ ವಹಿಸಿ. ಸಾಧ್ಯವಾದರೆ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರಿಗೂ ಈ ಕಾರ್ಯದ ಬಗ್ಗೆ ಅರಿವು ಮೂಡಿಸಿ

    ನೀವೂ ಬರೆಯಿರಿ: ಮಕ್ಕಳ ಪುಸ್ತಕಗಳ್ನು ಓದಿದರೆ ಸಾಲದು. ಅದರಲ್ಲಿರುವಂತೆ ಬರೆ ಯಲು ನೀವೂ ಪ್ರಯತ್ನಿಸಿ. ಈ ಕಾರ್ಯಕ್ಕೆ ವಿಶಿಷ್ಟ ಮುಹೂರ್ತವೇನೂ ಇಲ್ಲ. ಇಂದೇ ಇದಕ್ಕೆ ಚಾಲನೆ ಸಿಗಲಿ

    ಉಡುಗೊರೆ ನೀಡಿ: ನಿಮ್ಮ ಸ್ನೇಹಿತರ ಹುಟ್ಟಿದ ಹಬ್ಬ ಮತ್ತು ಇತರ ಶುಭ ಸಂದರ್ಭದಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಹವ್ಯಾಸ ಬೆಳೆಸಿಕೊಳ್ಳಿ. ಇದು ಅವರಿಗೂ ಪುಸ್ತಕ ಪ್ರೀತಿ ಹೆಚ್ಚಾಗುತ್ತದೆ. ಇದು ಎಲ್ಲರ ಹವ್ಯಾಸವಾದರೆ ಪುಸ್ತಕಗಳ ಲಭ್ಯತೆ ಹೆಚ್ಚುತ್ತದೆ.

    ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

    ಕಸದ ಗಾಡಿಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಪರಿಣಿತಿ! ಫೋಟೊ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts