More

    ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಲಿ

    ನಂಜನಗೂಡು: ಸಂವಿಧಾನಿಕವಾಗಿ ದೊರೆತಿರುವ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಜತೆಗೆ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಜವಬ್ದಾರಿ ಪ್ರತಿಯೊಬ್ಬರ ಆದ್ಯತೆಯಾಗಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ವಿವಿಧತೆಯಲ್ಲಿ ಏಕತೆಯಿರುವ ಭಾರತ ದೇಶದಲ್ಲಿ ಸರ್ವರನ್ನೂ ಸಮಾನವಾಗಿ ಕಾಣುವ ಸಂವಿಧಾನವನ್ನು ಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಚಹಾ ಮಾರುತ್ತಿದ್ದವರು ಪ್ರಧಾನಿಯಾಗುವ, ಅತ್ಯಂತ ಕಿರಿಯ ವಯಸ್ಸಿನ ನಾನು ಶಾಸಕನಾಗುವ ಕಾನೂನಾತ್ಮಕ ಅವಕಾಶವಿದ್ದರೆ ಅದು ಭಾರತ ದೇಶದಲ್ಲಿ ಮಾತ್ರ. ಇದು ದೇಶದ ಸಂವಿಧಾನದ ವೈಶಿಷ್ಠ್ಯ. ಇಂತಹ ಸಂವಿಧಾನವನ್ನು ನಾವು ಕಾಪಿಟ್ಟುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಮೂಲಭೂತ ಕರ್ತವ್ಯಗಳನ್ನು ಕಾನೂನಿನಡಿ ಪಾಲನೆ ಮಾಡಬೇಕು. ಜತೆಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾದಾಗ ಮಾತ್ರ ದೇಶದ ಅಖಂಡತೆಯನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.

    ಕಾರ್ಮಿಕ ಇಲಾಖೆಯ ಉಪ ಆಯುಕ್ತ ನಾಜೀಯಾ ಸುಲ್ತಾನಾ ಮಾತನಾಡಿ, ಸೋದರತೆ, ಸಮಾನತೆ ಹಾಗೂ ಭ್ರಾತೃತ್ವ ನೆಲೆಗೊಳ್ಳಬೇಕೆಂಬ ತಳಹದಿ ಹಾಗೂ ಆಶಯದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಅವರ ಆಶಯವನ್ನು 12ನೇ ಶತಮಾನದಲ್ಲೇ ಬಸವಣ್ಣ ಪ್ರತಿಪಾದಿಸಿದ್ದನ್ನು ಕಾಣಬಹುದು. ಸಮಾಜದಲ್ಲಿ ಸಹಿಷ್ಣತೆ ಗಟ್ಟಿಯಾಗಬೇಕಾದರೆ ಮೊದಲು ನಮ್ಮಲ್ಲಿ ಪರಿವರ್ತನೆ ಆಗಬೇಕೆಂಬುದನ್ನು ಬಸವಣ್ಣ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಆ ಕಾಲಘಟ್ಟದಲ್ಲೇ ಹೇಳಿದ್ದಾರೆ. ಸಮಾಜವನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಸಾರ್ವಭೌಮತ್ವವನ್ನು ಸಾರಿಸುವ ಸಂವಿಧಾನ ಹಾಗೂ ವಚನಕಾರರ ಆದರ್ಶಗಳು ನಮ್ಮ ಬದುಕಿನ ಭಾಗವಾಗಬೇಕು ಎಂದು ಹೇಳಿದರು.

    ಇದಕ್ಕೂ ಮುನ್ನ ಧ್ವಜಾರೋಹಣವನ್ನು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ನೆರವೇರಿಸಿ ಸಂದೇಶ ನೀಡಿದರು. ಬಳಿಕ ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

    ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಡಿವೈಎಸ್ಪಿ ಗೋವಿಂದರಾಜು, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಶ್ವೇತಲಕ್ಷ್ಮೀ, ಗಂಗಾಧರ್, ಮಹೇಶ್, ಮಹದೇವಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts