More

    ಸದಾಕಾಲದ ಮಿತ್ರ ಇಸ್ರೇಲ್ ಭಯೋತ್ಪಾದನೆ ವಿರುದ್ಧ ಜಯ ಗಳಿಸಲಿ!

    ಸದಾಕಾಲದ ಮಿತ್ರ ಇಸ್ರೇಲ್ ಭಯೋತ್ಪಾದನೆ ವಿರುದ್ಧ ಜಯ ಗಳಿಸಲಿ!

    ಹಾಗೇ ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಭಾರತದ ನೆರೆ ರಾಷ್ಟ್ರವಾಗಿರುವ ಭೂತಾನ್, ಬರ್ವ, ನೇಪಾಳಗಳು ಮುಸಲ್ಮಾನರ ರಾಷ್ಟ್ರವಾಗಿದ್ದು ಶ್ರೀಲಂಕಾವೂ ಅವರದ್ದೇ ಬಾಹುಳ್ಯದ ರಾಷ್ಟ್ರವಾಗಿದ್ದರೆ; ಅದೂ ಸಾಲದೆಂಬಂತೆ ಚೀನಾದ ತುಂಬೆಲ್ಲ ಇದೇ ಜನಾಂಗದವರು ತುಂಬಿಕೊಂಡಿದ್ದರೆ ಭಾರತದ ಕಥೆ ಹೇಗಿರಬಹುದಿತ್ತು? ಒಂದು ಪಾಕಿಸ್ತಾನ, ಬಾಂಗ್ಲಾದೇಶಗಳನ್ನೇ ಸಹಿಸಿಕೊಳ್ಳಲು ಹೆಣಗಾಡುತ್ತಿರುವ ನಮಗೆ ಇವೆಲ್ಲವನ್ನೂ ಜೀರ್ಣಿಸಿಕೊಳ್ಳುವುದು ಸಾಧ್ಯವಿತ್ತೇ? ರಷ್ಯಾ ಕೂಡ ಅವರಿಂದಲೇ ತುಂಬಿ ಹೋಗಿದ್ದರೆ ಕಥೆ ಮುಗಿದೇ ಹೋಗಿರುತ್ತಿತ್ತೇನೋ! ಈಗ ಇದೇ ಸ್ಥಿತಿಯಲ್ಲಿರುವ ಇಸ್ರೇಲ್ ಕುರಿತಂತೆ ಆಲೋಚಿಸಿ ನೋಡಿ. ಈಜಿಪ್ತ್, ಜೋರ್ಡಾನ್, ಲೆಬೆನಾನ್, ಸಿರಿಯಾ, ಟರ್ಕಿ, ಇರಾನ್, ಸೌದಿ ಅರೇಬಿಯಾ ಎಲ್ಲವೂ ಕಟ್ಟರ್ ಅರಬ್ ರಾಷ್ಟ್ರಗಳೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕಿತ್ತು ತಿನ್ನಲು ಹೊಂಚು ಹಾಕಿಕೊಂಡು ಕುಳಿತಿರುವ ತೋಳಗಳೇ. ಇವರ ನಡುವೆ ಎದೆಯೆತ್ತಿಕೊಂಡು ಬೀಗುತ್ತ ನಿಂತಿರುವ ಇಸ್ರೇಲ್ ಅನೇಕ ಬಾರಿ ವಿಜಯನಗರ ಸಾಮ್ರಾಜ್ಯವನ್ನೇ ನೆನಪಿಗೆ ತರುತ್ತದೆ. ಹೇಗೆ ಕೃಷ್ಣದೇವರಾಯ ತನ್ನ ಸಾಮರ್ಥ್ಯ ಮಾತ್ರದಿಂದಲೇ ಎಲ್ಲರನ್ನೂ ಕಾಲಬುಡಕ್ಕೆ ಕೆಡವಿಕೊಂಡಿದ್ದನೋ ಇಸ್ರೇಲ್ ಕೂಡ ಅರಬ್ ರಾಷ್ಟ್ರಗಳನ್ನು ಬಡಿದು ಮೆತ್ತಗೆ ಮಾಡಿಯೇ ಸಾರ್ವಭೌಮತೆಯನ್ನು ಮೆರೆದಿದೆ. ನಿಜಕ್ಕೂ ಇಸ್ರೇಲ್​ನಂತೆ ಬದುಕುವುದು ಇಂದಿನ ದಿನಮಾನದಲ್ಲಿ ಸುಲಭ ಸಾಧ್ಯವಾದ ಸಂಗತಿಯಲ್ಲ ಬಿಡಿ. ಒಂದೆಡೆ ಅರಬ್ಬರು, ಮತ್ತೊಂದೆಡೆ ಜಗತ್ತಿನ ತುಂಬೆಲ್ಲ ಹರಡಿಕೊಂಡಿರುವ ಎಡಬುದ್ಧಿಜೀವಿಗಳು. ಅವರುಗಳದ್ದೇ ಮಾಧ್ಯಮ, ಮಾನವ ಹಕ್ಕು ರಕ್ಷಣೆಯ ಸಂಘಟನೆಗಳು. ಇವೆಲ್ಲವನ್ನೂ ಎದುರಿಸಿಯೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಇಸ್ರೇಲ್ ಸಾಮರ್ಥ್ಯಕ್ಕೆ ದೊಡ್ಡ ಸಲಾಮು ಹೊಡೆಯಲೇಬೇಕು.

    ಇಷ್ಟಕ್ಕೂ ಯಹೂದ್ಯರಿಗೆ ಇಸ್ರೇಲ್ ಏಕೆ ಬೇಕು? ಎಂಬ ಪ್ರಶ್ನೆ ಕಾಡುವುದು ಸಹಜವೇ. ಕೆಲವು ಸಾವಿರ ವರ್ಷಗಳ ಹಿಂದೆ ಭಗವಂತ ವಾಗ್ದಾನ ನೀಡಿದ ಭೂಮಿ ಯಹೂದ್ಯರಿಗೆ ದಕ್ಕಿತ್ತು. ಹಾಗೆಂದು ಬೈಬಲ್​ನ ಹಳೆಯ ಒಡಂಬಡಿಕೆಗಳು ಹೇಳುತ್ತವೆ. ಅಲ್ಲಿಯೇ ಸೊಲೊಮನ್ ಮಂದಿರ ಕಟ್ಟಿ ಯಹೂದ್ಯರ ಪಾಲಿಗೆ ಈ ಭೂಮಿಯನ್ನು ಪವಿತ್ರವಾಗಿಸಿಬಿಟ್ಟ. ಆನಂತರವೇ ಅವರ ಮೇಲೆ ನಿರಂತರವಾದ ದಾಳಿಗಳಾಗಿದ್ದು. ಬುದ್ಧಿವಂತರ, ಸಭ್ಯರ ನಾಡೆಂದು ಕರೆಯಲ್ಪಡುತ್ತಿದ್ದ ಇಸ್ರೇಲ್ ಈ ದಾಳಿಗಳಿಗೆ ಸಮರ್ಥ ಪ್ರತಿರೋಧ ತೋರಲಾಗದೆ ಮಂಡಿಯೂರಬೇಕಾಗಿ ಬಂತು. ಮತಾಂಧರ ಆಕ್ರಮಣಕ್ಕೆ ತಮ್ಮ ಪಂಥವನ್ನು ಬಿಡಲೊಲ್ಲದ ಜನ ಜಗತ್ತಿನ ಅನೇಕ ರಾಷ್ಟ್ರಗಳಿಗೆ ದಿಕ್ಕಾಪಾಲಗಿ ಓಡಿದರು. ಹಾಗೆ ಭಾರತಕ್ಕೂ ಬಂದು ನೆಲೆಸಿದ್ದರು. ಅದನ್ನೇ ಷಿಕಾಗೊ ಸರ್ವಧರ್ಮ ಸಮ್ಮೇಳನದ ತಮ್ಮ ಮೊದಲ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು ಹೆಮ್ಮೆಯಿಂದ ಉಲ್ಲೇಖಿಸಿ, ‘ಯಹೂದ್ಯರಿಗೂ ಆಶ್ರಯ ಕೊಟ್ಟ ಶ್ರೇಷ್ಠ ಜನಾಂಗ ನನ್ನದು’ ಎಂದು ಎದೆಯುಬ್ಬಿಸಿ ಹೇಳಿದ್ದು.

    ಹಿಂದೂಗಳಂತೆ ಎಲ್ಲರೂ ಯಹೂದ್ಯರನ್ನು ಪ್ರೀತಿಯಿಂದ ನೋಡಿಕೊಳ್ಳಲಿಲ್ಲ. ಅನೇಕ ರಾಷ್ಟ್ರಗಳಲ್ಲಿ ಅವರನ್ನು ತುಚ್ಛವಾಗಿ ಕಾಣಲಾಯ್ತು. ಆದರೆ ಸಹಜವಾಗಿಯೇ ಬುದ್ಧಿವಂತರಾದ್ದರಿಂದ ಹೋದೆಡೆಯಲ್ಲೆಲ್ಲ ಸಾಮರ್ಥ್ಯವನ್ನು ಸಾಬೀತುಪಡಿಸಿಯೇ ಬದುಕಿದರು. ಈ ಜನಾಂಗದವರ ಕಥೆ ಥೇಟು ಕಾಶ್ಮೀರದ ಪಂಡಿತರನ್ನೇ ಹೋಲುತ್ತದೆ. ಪ್ರತಿ ಬಾರಿ ಆಕ್ರಮಣಕ್ಕೆ ತುತ್ತಾದಾಗಲೂ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ ಪಂಡಿತರು ಬೇರೆ-ಬೇರೆ ರಾಜ್ಯಗಳಲ್ಲಿ ಬೌದ್ಧಿಕ ಶಕ್ತಿಯಿಂದಲೇ ಉತ್ತಮ ಮಟ್ಟಕ್ಕೆ ಬೆಳೆದಿದ್ದು.

    ಇರಲಿ. ಮುಂದೆ ಥಿಯೋಡರ್ ಹರ್ಜ್​ನ ನೇತೃತ್ವದಲ್ಲಿ 19ನೇ ಶತಮಾನದ ಉತ್ತರಾರ್ಧದಲ್ಲಿ ಜಿಯೋನಿಸ್ಟ್ ಚಳವಳಿ ನಡೆದು ಯಹೂದ್ಯರ ಹಳೆಯ ನಾಡನ್ನು ಮರಳಿ ಪಡೆಯುವ ಸಂಕಲ್ಪ ಮಾಡಲಾಯ್ತು. ಡೆವಿಡ್ ಮತ್ತು ಸೊಲೊಮನ್​ನ ಇಸ್ರೇಲಿಗೆ ಮರಳುವ ಈ ಸಂಕಲ್ಪ ನೂರಾರು ವರ್ಷಗಳ ನಂತರ ಜೀವ ಪಡೆದುಕೊಂಡಿತು. ಕಾಲ ಉರುಳಿದ್ದಿರಬಹುದು, ಆದರೆ ಯಹೂದ್ಯರು ಅವರ ವೈಭವವನ್ನು ಮರೆತಿರಲಿಲ್ಲ. ಪ್ರತಿ ಬಾರಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವಾಗ ‘ಮುಂದಿನ ವರ್ಷ ಇದನ್ನು ಇಸ್ರೇಲ್​ನಲ್ಲಿಯೇ ಆಚರಿಸೋಣ’ ಎಂದು ಹೇಳಿಕೊಂಡೇ ಬದುಕಿದ್ದರವರು. ಪೀಳಿಗೆಯಿಂದ ಪೀಳಿಗೆಗೆ ಅವರ ರಾಷ್ಟ್ರವನ್ನು ಮರುನಿರ್ವಿುಸುವ ಕನಸನ್ನು ಉಳಿಸಿಬಿಟ್ಟಿದ್ದರು. ಅದರ ಫಲವಾಗಿಯೇ ಜಿಯೋನಿಸ್ಟ್ ಚಳವಳಿ ಬಲುಬೇಗ ವೇಗ ಪಡೆದುಕೊಂಡಿತು. 1881ರಲ್ಲಿ ಆರಂಭವಾದ ಇಸ್ರೇಲ್​ಗೆ ಮರಳುವ ಕ್ರಿಯೆ 35 ಸಾವಿರ ಯಹೂದ್ಯರನ್ನು ಅರಬ್ಬರ ವಶದಲ್ಲಿದ್ದ ಈ ಭೂಮಿಗೆ ಕರೆತಂದಿತು. ಯೋಜನೆ ಬಲು ಸರಳವಾಗಿತ್ತು. ಇಸ್ರೇಲ್​ನಲ್ಲಿ ಅರಬ್ಬರಿಂದ ಜಮೀನು ಕೊಂಡುಕೊಳ್ಳುವುದು, ಕೃಷಿಗೈಯ್ಯುವ ನೆಪದಲ್ಲಿ ವಿಸ್ತಾರವಾದ ಭೂಭಾಗಗಳಿಗೆ ಒಡೆಯರಾಗೋದು. ನಾಲ್ಕಾರು ಜನ ಪಕ್ಕಪಕ್ಕದಲ್ಲೇ ನಿರ್ವಿುಸಿಕೊಂಡ ಈ ರೀತಿಯ ವ್ಯವಸ್ಥೆಗೆ ಸೆಟಲ್​ವೆುಂಟ್ ಎಂದು ಕರೆಯಲಾಯ್ತು. ಈ ರೀತಿಯ 28 ಸೆಟಲ್​ವೆುಂಟ್​ಗಳಿಂದ 90 ಸಾವಿರ ಎಕರೆಗೂ ಹೆಚ್ಚು ಭೂಮಿ ಖರೀದಿಸಲಾಯ್ತು. ಈ ವೇಳೆಗೆ ಎಲಿಜರ್​ಬೆನ್ ಯಹೂದಿ ಇಸ್ರೇಲಿಗರ ಭಾಷೆಯಾಗಿದ್ದ ಹೀಬ್ರೂವನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ಮಾಡಿದ. ತನ್ನ ಮನೆಯಲ್ಲಿ ಬೇರೆ ಭಾಷೆ ಆಡದಿರುವಂತೆ ತಾಕೀತು ಮಾಡಿದ. ಹೆಂಡತಿಯ ಹೆರಿಗೆಯ ಹೊತ್ತಿನಲ್ಲಿ ಸೂಲಗಿತ್ತಿಗೂ ಹೀಬ್ರೂ ಕಲಿಸಿ ಹುಟ್ಟುವ ಮಗು ಕೇಳಬೇಕಾಗಿರುವ ಮೊದಲ ಪದ ಈ ಭಾಷೆಯದ್ದೇ ಆಗಿರಬೇಕೆಂಬ ಪ್ರಯತ್ನವನ್ನೂ ಮಾಡಿದ. ಮೊದಮೊದಲು ಜನ ಆಡಿಕೊಳ್ಳುತ್ತಿದ್ದರು. ಆದರೆ ಆತನ ಇಚ್ಛಾಶಕ್ತಿ ಎದುರು ತಲೆಬಾಗಿಸಿ ನಿಂತರು. ಹೀಬ್ರೂ ಮತ್ತೆ ಬಳಕೆಯಾಗುವುದರೊಂದಿಗೆ ಇಸ್ರೇಲ್​ನ ಕನಸೂ ಗಟ್ಟಿಯಾಯ್ತು. ವಿಶ್ವಾಸ ಹೊಂದಿದ ಇನ್ನೊಂದಷ್ಟು ಮಂದಿ ಯಹೂದ್ಯರು ಇಸ್ರೇಲ್​ಗೆ ಬಂದರು. ನಿಧಾನವಾಗಿ ರಾಷ್ಟ್ರವೊಂದು ರೂಪುಗೊಳ್ಳಲಾರಂಭಿಸಿತು. ಇಂದು ಬಹಳ ಚರ್ಚೆಯಲ್ಲಿರುವ ಟೆಲ್ ಅವೀವ್ ಎಂಬ ಯಹೂದಿ ನಗರ ನಿರ್ವಣಗೊಂಡಿದ್ದು ಆಗಲೇ!

    ಮೊದಲ ವಿಶ್ವಯುದ್ಧ ಆರಂಭವಾಗುತ್ತಿದ್ದಂತೆ ಇವರನ್ನು ಶತ್ರುರಾಷ್ಟ್ರದಿಂದ ಬಂದವರೆಂಬ ನೆಪವೊಡ್ಡಿ ಮತ್ತೆ ಓಡಿಸಲಾಯ್ತು. ಯಹೂದ್ಯರು ಎಲ್ಲಿಂದ ಹೊರಟಿದ್ದರೋ ಮತ್ತೆ ಅಲ್ಲಿಗೇ ಬಂದು ತಲುಪಿದರು. ಕನಸುಗಳು ಮಾತ್ರ ಇಂಗಿರಲಿಲ್ಲ. ಇಸ್ರೇಲನ್ನು ಬಲವಾಗಿ ಕಟ್ಟುವ ಕನಸು. ಭಗವಂತ ಶಕ್ತಿವಂತನನ್ನೇ ಆಶೀರ್ವದಿಸುವುದಂತೆ. ಹಾಗೆಯೇ ಆಯ್ತು. ಮೊದಲ ಮಹಾಯುದ್ಧದಲ್ಲಿ ಬ್ರಿಟಿಷರ ಕೈ ಮೇಲಾದಾಗ ಈಗಿನ ಇಸ್ರೇಲ್, ಜೋರ್ಡಾನ್ ನದಿಯ ಎಡದಂಡೆಯ ಮೇಲಿರುವ ವೆಸ್ಟ್​ಬ್ಯಾಂಕ್ ಮತ್ತು ಗಾಜಾಪಟ್ಟಿ ಬ್ರಿಟಿಷರ ಕೈವಶವಾಯ್ತು. ಸಹಜವಾಗಿಯೇ ಉಸಿರಾಡುವ ವಾತಾವರಣ ನಿರ್ವಣವಾಗಿತ್ತು. ಈ ಬಾರಿ ಯಹೂದ್ಯರು ಚೌಕಶಿ ಮಾಡಲಿಲ್ಲ. ದೊಡ್ಡ ಸಂಖ್ಯೆಯಲ್ಲಿ ಇಸ್ರೇಲಿನತ್ತ ಧಾವಿಸಿದರು. ಮುಂದಿನ ಎರಡೂವರೆ ದಶಕಗಳೊಳಗೆ ಅರ್ಧ ಮಿಲಿಯನ್​ನಷ್ಟು ಜನ ಇಸ್ರೇಲಿನಲ್ಲಿ ವಾಸ್ತವ್ಯ ಹೂಡಿಬಿಟ್ಟರು. ಹೀಗಾಗಿಯೇ 1947ರಲ್ಲಿ ಈ ಪ್ರದೇಶವನ್ನು ಬ್ರಿಟಿಷರು ಬಿಟ್ಟುಹೋಗುವಾಗ ಯಹೂದ್ಯರಿಗೊಂದು ನಾಡನ್ನು ಕೊಟ್ಟು ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

    ಯಹೂದ್ಯರ ಇಸ್ರೇಲ್ ಮತ್ತು ಅರಬ್ಬರ ಪ್ಯಾಲೆಸೆôನ್ ನಿರ್ವಣಗೊಂಡಿತು. 1948ರ ಮೇ 14ರಂದು ಬೆನ್​ಗುರಿಯನ್ ಇಸ್ರೇಲನ್ನು ರಾಷ್ಟ್ರವೆಂದು ಘೊಷಿಸಿದ. ಇತರ ಜನಾಂಗದವರ ರಾಷ್ಟ್ರಗಳನ್ನೇ ಆಪೋಷನ ತೆಗೆದುಕೊಳ್ಳುವ ಅರಬ್ಬರಿಗೆ ತಮ್ಮ ನಡುವೆಯೇ ಯಹೂದ್ಯರ ನಾಡೊಂದು ತಲೆ ಎತ್ತುವುದನ್ನು ಸಹಿಸಿಕೊಳ್ಳಲಾದೀತೇನು? ಅರಬ್ ರಾಷ್ಟ್ರಗಳೆಲ್ಲ ಒಟ್ಟುಗೂಡಿ ಇಸ್ರೇಲ್ ಮೇಲೆ ಮುಗಿಬಿದ್ದವು. ಆರಂಭದಲ್ಲಿ ಸ್ವಲ್ಪ ಹಿನ್ನಡೆ ಕಂಡರೂ ಸಾವರಿಸಿಕೊಂಡ ಇಸ್ರೇಲ್ ತೋರಿದ ಪ್ರತಿರೋಧ ಹೇಗಿತ್ತೆಂದರೆ ಅರಬ್ಬರ ಸೇನೆ ಕಾಲಿಗೆ ಬುದ್ಧಿ ಹೇಳಿತು. ಈ ಯುದ್ಧದಲ್ಲಿ ಸಾಕಷ್ಟು ಲಾಭ ಪಡೆದ ಇಸ್ರೇಲ್ ವೆಸ್ಟ್​ಬ್ಯಾಂಕಿನ ಒಂದಷ್ಟು ಜಾಗವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡರೆ ಗಾಜಾಪಟ್ಟಿಯನ್ನಂತೂ ಪೂರ್ಣವಾಗಿಯೇ ಜೀರ್ಣಿಸಿಕೊಂಡುಬಿಟ್ಟಿತ್ತು. ಅರಬ್ಬರಿಗೆ ದಂಡವೇ ಬುದ್ಧಿ ಕಲಿಸಬಲ್ಲದು. ಇಸ್ರೇಲ್​ನ ಬಡಿತದ ಪರಿಣಾಮ ಮುಂದಿನ ಎರಡು ದಶಕಗಳ ಕಾಲ ಅವರನ್ನು ತೆಪ್ಪಗಿರುವಂತೆ ಮಾಡಿತ್ತು.

    1964ರಲ್ಲಿ ಪ್ಯಾಲೆಸೆôನಿನಲ್ಲಿ ಹುಟ್ಟಿಕೊಂಡ ಯಾಸಿರ್ ಅರಾಫತ್​ನ ‘ಪ್ಯಾಲೆಸೆôನ್ ಲಿಬರೇಷನ್ ಆರ್ಗನೈಸೇಷನ್’ ಜನರನ್ನು ಒಗ್ಗೂಡಿಸಲಾರಂಭಿಸಿತು. ಅರಬ್ಬರಿಗೆ ಮತ್ತೆ ಆಸೆ ಚಿಗುರಲು ಬಹಳ ಕಾಲ ಬೇಕಾಗಲಿಲ್ಲ. 1967ರಲ್ಲಿ ಅರಬ್ಬರ ಸಂಯುಕ್ತ ಪಡೆ ಇಸ್ರೇಲ್ ಮೇಲೆ ದಾಳಿ ಮಾಡಿತು. ನಿರಂತರವಾಗಿ ಮುಸಲ್ಮಾನರ ಭಯೋತ್ಪಾದನೆಯನ್ನು ಎದುರಿಸಿಕೊಂಡೇ ಬಂದಿದ್ದ, ಈ ರೀತಿ ದಾಳಿಯನ್ನು ನಿರೀಕ್ಷಿಸಿಯೇ ಇದ್ದ ಇಸ್ರೇಲ್ ಸಾಕಷ್ಟು ತಯಾರಿಯನ್ನೇ ಮಾಡಿಕೊಂಡಿತ್ತು. ಆರೇ ದಿನದಲ್ಲಿ ಅರಬ್ಬರ ಪಡೆಯನ್ನು ಮಣ್ಣುಮುಕ್ಕಿಸಿ ಈಜಿಪ್ತ್​ಗೆ ಸೇರಿದ್ದ ಭೂಪ್ರದೇಶವನ್ನೂ ವಶಪಡಿಸಿಕೊಂಡುಬಿಟ್ಟಿತು! ಇದು ಅರಬ್ಬರ ಪಾಲಿಗೆ ಘೊರ ಅವಮಾನ ಮತ್ತು ಸಹಿಸಲಸಾಧ್ಯವಾದ ನೋವುಂಟುಮಾಡಿತು. 1973ರಲ್ಲಿ ಇಸ್ರೇಲ್ ಯೋಮ್ ಕಿಪರ್ ಹಬ್ಬದಲ್ಲಿ ಮಗ್ನವಾಗಿದ್ದಾಗ ಮತ್ತೊಮ್ಮೆ ಈ ಪಡೆ ದಾಳಿ ಮಾಡಿತು. ಆರಂಭದಲ್ಲಿ ಅರಬ್ಬರ ಕೈ ಮೇಲಾಗಿ ಅವರು ಖುಷಿ ಪಡುವಂತೆ ಕಂಡರೂ ತಿರುಗಿಬಿದ್ದ ಇಸ್ರೇಲ್ ಎದುರು ಅರಬ್ಬರು ಮೆತ್ತಗಾಗಿಬಿಟ್ಟರು. ಯುದ್ಧದಲ್ಲಿ ಕೈ ಮೇಲಾಗಿದ್ದಾಗ್ಯೂ ಸ್ವತಃ ಇಸ್ರೇಲ್ ತಾನೇ ಒಂದಿಂಚು ಬಾಗಿ ಗೆದ್ದ ಈಜಿಪ್ತ್​ನ ಪ್ರದೇಶಗಳನ್ನು ಮರಳಿಕೊಟ್ಟು ಅರಬ್ಬರ ಕಡೆಯಿಂದಲೇ ಬಂದಿದ್ದ ಶಾಂತಿ ಮಾತುಕತೆಗೆ ಅಸ್ತು ಎಂದಿತು. ಪ್ರತಿಯಾಗಿ ಈಜಿಪ್ತ್ ಇನ್ನುಮುಂದೆ ಇಸ್ರೇಲ್ ವಿರುದ್ಧ ದಾಳಿ ಮಾಡಲಾರೆ ಎಂದಿತಲ್ಲದೆ ಅದನ್ನೊಂದು ರಾಷ್ಟ್ರವೆಂದು ಮಾನ್ಯ ಮಾಡುವುದಾಗಿ ಒಪ್ಪಿಕೊಂಡಿತು. ಇಸ್ರೇಲ್ ಪಾಲಿಗೆ ಇದು ಯುದ್ಧದ ಗೆಲುವಿಗಿಂತಲೂ ದೊಡ್ಡದ್ದು!

    ಆದರೆ ಪ್ಯಾಲೆಸೆôನಿ ಭಯೋತ್ಪಾದಕರ ಕಿರಿಕಿರಿ ಮುಗಿದಿರಲಿಲ್ಲ. ಇಸ್ರೇಲಿನ ವಿಮಾನವನ್ನು ಅಪಹರಿಸಿಕೊಂಡು ಉಗಾಂಡಾಕ್ಕೊಯ್ದರು. ನರಭಕ್ಷಕ ಈದೀ ಅಮೀನನ ಸಹಕಾರ ಪಡೆದು ಯಹೂದ್ಯರ ಜೀವಕ್ಕೆ ಪ್ರತಿಯಾಗಿ ಪ್ಯಾಲೆಸೆôನಿ ಉಗ್ರರ ಬಿಡುಗಡೆ ಮಾಡುವಂತೆ ಷರತ್ತು ಒಡ್ಡಲಾಯ್ತು. ದೇಶದ ಪ್ರಧಾನಮಂತ್ರಿಯನ್ನೇ ಅಪಹರಿಸಿದರೂ ಅದಕ್ಕೆ ಪ್ರತಿಯಾಗಿ ಉಗ್ರರನ್ನು ಬಿಡುವುದಿಲ್ಲವೆಂದು ಇಸ್ರೇಲ್ ಸಂಕಲ್ಪ ಮಾಡಿತು. ಹೀಗಾಗಿಯೇ ಲೆಫ್ಟಿನೆಂಟ್ ಕರ್ನಲ್ ಯೋನಾಥನ್ ನೆತನ್ಯಾಹು ನೇತೃತ್ವದಲ್ಲಿ ಯೋಜನೆ ರೂಪಿಸಿ ನಾಲ್ಕು ಸಾವಿರ ಕಿಲೋಮೀಟರ್ ದೂರದ ಉಗಾಂಡಾಕ್ಕೆ ಇಸ್ರೇಲಿನ ಕಮಾಂಡೊಗಳು ನುಗ್ಗಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬಂದರಲ್ಲದೆ ಉಗಾಂಡಾದ ಏರ್​ಬೇಸನ್ನು ಧ್ವಂಸಗೊಳಿಸಿಬಿಟ್ಟರು. ಉಗ್ರರಲ್ಲಿ ಒಬ್ಬರೂ ಉಳಿಯಲಿಲ್ಲ. ಈದೀ ಅಮೀನನ ಪಾಲಿಗೆ ಇದು ಭಾರಿ ಮುಖಭಂಗ. ಆ ವೇಳೆಗೆ ಇಸ್ರೇಲ್ ಅಜಿಂಕ್ಯ ರಾಷ್ಟ್ರವೆಂಬ ಅಭಿದಾನವನ್ನು ಪಡೆದುಕೊಂಡುಬಿಟ್ಟಿತ್ತು. ಜಗತ್ತು ಕೂಡ ಈ ರಾಷ್ಟ್ರವನ್ನು ಗೌರವಿಸಲಾರಂಭಿಸಿತು. ಶಕ್ತನಾದರೆ ಊರೆಲ್ಲ ನೆಂಟರೇ ಎನ್ನುತ್ತಾರಲ್ಲ, ಹಾಗೆಯೇ ಇದು. ಮುಂದೆ ಅಮೆರಿಕ ಯಾಸಿರ್ ಅರಾಫತ್ ಮತ್ತು ಇಸ್ರೇಲ್ ಪ್ರಧಾನಿ ನಡುವೆ ಒಪ್ಪಂದ ಮಾಡಿಸಿ ಶಾಂತಿ ಮರಳಿಸುವ ಪ್ರಯತ್ನ ಮಾಡಿತು. ಆದರೆ ಇದನ್ನು ಒಪ್ಪದ ಕಟ್ಟರ್​ಪಂಥಿ ಮುಸಲ್ಮಾನರು ಹಮಾಸ್ ಎಂಬ ಉಗ್ರವಾದಿ ಸಂಘಟನೆಯನ್ನು ಕಟ್ಟಿಕೊಂಡು ಯಹೂದ್ಯರನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಗಳನ್ನು ಮಾಡುತ್ತಲೇ ಹೋದರು. ಈ ನಡುವೆ ಸೌಹಾರ್ದದ ಸಂಕೇತವಾಗಿ ಗಾಜಾಪಟ್ಟಿಯಲ್ಲಿದ್ದ ಇಸ್ರೇಲಿಗರನ್ನು ಮತ್ತು ಸೈನಿಕರನ್ನು ಮರಳಿ ಕರೆಸಿಕೊಂಡ ಇಸ್ರೇಲ್ ಅದಕ್ಕೆ ಪ್ರತ್ಯೇಕ ಸ್ಥಾನಮಾನವನ್ನೇ ಕೊಟ್ಟುಬಿಟ್ಟಿತು. ಆಗ ಅಲ್ಲಿ ನಡೆದ ಚುನಾವಣೆಗಳಲ್ಲಿ ಹಮಾಸ್ ಕೈ ಮೇಲಾಗಿ ಇಡಿಯ ಗಾಜಾಪಟ್ಟಿ ಹಮಾಸ್ ಹೇಳಿದಂತೆ ನಡೆಯಲಾರಂಭಿಸಿತು. ಮತ್ತೆ ಮಾನವ ಬಾಂಬುಗಳ ದಾಳಿ ಮಾಡುತ್ತ ಇಸ್ರೇಲಿಗೆ ಹಮಾಸ್ ಕಿರಿಕಿರಿ ಉಂಟು ಮಾಡುತ್ತಲೇ ಇತ್ತು. ತನ್ನ ಪ್ರತಿಯೊಬ್ಬ ಪ್ರಜೆಯ ಜೀವವನ್ನೂ ಅಮೂಲ್ಯವೆಂದು ಭಾವಿಸುವ ಇಸ್ರೇಲ್ ಪ್ರತಿಬಾರಿ ನಾಗರಿಕನೊಬ್ಬ ಸತ್ತಾಗಲೂ ಹಮಾಸ್​ಗೆ ಸರಿಯಾದ ಶಿಕ್ಷೆಯನ್ನೇ ನೀಡುತ್ತಿತ್ತಾದರೂ ಕೊನೆಗೊಮ್ಮೆ ಸಹಿಸಲಾಗದೆ ಗಾಜಾಪಟ್ಟಿಗೆ ಹೋಗುವ ಎಲ್ಲ ರಸ್ತೆಗಳಲ್ಲೂ ಚೆಕ್​ಪೋಸ್ಟ್ ಹಾಕಿ ಅನುಮತಿ ಇಲ್ಲದೆ ಸ್ಪೋಟಕಗಳಿರಲಿ, ನರಪಿಳ್ಳೆಯೂ ನುಗ್ಗದಂತೆ ನಾಕಾಬಂದಿ ಹಾಕಿಬಿಟ್ಟಿತು. ಹಮಾಸ್ ಕೂಡ ಕಡಿಮೆಯಲ್ಲ. ಸುರಂಗಗಳನ್ನು ಕೊರೆದು ಇಸ್ರೇಲಿನೊಳಕ್ಕೆ ಬಂದು ದಾಳಿಗೈಯ್ಯುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಲೇ ಇತ್ತು. ಈ ಬಾರಿ ರಂಜಾನ್ ಹೊತ್ತಲ್ಲಿ ಈ ಪ್ರಯತ್ನ ತಾರಕಕ್ಕೇರಿತು. ಈ ಕಿರಿಕಿರಿಯನ್ನು ಶಾಶ್ವತವಾಗಿ ಮುಗಿಸಲು ಇಸ್ರೇಲೂ ಆಲೋಚಿಸಿತು. ಆಗಿದ್ದು ಇಷ್ಟೆ.

    ಈಗ ಹಮಾಸ್ ಪರಿತಪಿಸುತ್ತಿದೆ. ಇಸ್ರೇಲ್ ದಾಳಿಗೆ ಅದು ತತ್ತರಿಸಿ ಹೋಗಿದೆ. ಇತ್ತ ಪ್ಯಾಲೆಸೆôನ್​ನ ನಿರಾಶ್ರಿತರನ್ನು ಮರಳಿ ಕರೆಸಿಕೊಳ್ಳಿ ಎನ್ನುತ್ತಿರುವ ಭಾರತದ ಬುದ್ಧಿಜೀವಿಗಳು ಕಾಶ್ಮೀರಕ್ಕೆ ಪಂಡಿತರು ಮರಳುವುದನ್ನು ವಿರೋಧಿಸುತ್ತಿದ್ದಾರೆ. ಜೆರುಸಲೇಂ ಸುತ್ತಲೂ ಇರುವ ಯಹೂದ್ಯರು ಜಾಗ ಖಾಲಿ ಮಾಡಬೇಕು ಎನ್ನುತ್ತಿರುವ ಈ ಮಂದಿ, ರೋಹಿಂಗ್ಯಗಳನ್ನು ಓಡಿಸುತ್ತೇವೆ ಎಂದರೆ ಮಾತ್ರ ತಕರಾರು ಎತ್ತುತ್ತಿದ್ದಾರೆ. ಇನ್ನೊಂದು ಅರಬ್ ರಾಷ್ಟ್ರ ನಿರ್ವಣಗೊಂಡರೆ ನಷ್ಟವೇನು ಎನ್ನುತ್ತಿದ್ದಾರೆ; ಇನ್ನೊಂದು ಬಲೂಚಿಸ್ತಾನ ಯಾಕೆ ಬೇಡ ಎಂದಾಗ ಮಾತ್ರ ಮೌನ ಧರಿಸುತ್ತಿದ್ದಾರೆ. ನೆನಪಿಡಿ. ಕಾರ್ಗಿಲ್ ಯುದ್ಧದ ಹೊತ್ತಲ್ಲಿ ಯಾವ ನಿಯಮವನ್ನೂ ಹೇರದೆ ನಮ್ಮ ಬೆಂಬಲಕ್ಕೆ ನಿಂತಿದ್ದು ಇಸ್ರೇಲ್. ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ಮಾಡುವಾಗ ನಾವು ಬಳಸಿದ ಬಾಂಬ್ ಇಸ್ರೇಲಿನದ್ದೇ. ಚೀನಾದ ಕಿರಿಕಿರಿ ಇರಲಿ, ಕರೊನಾ ಸಮಸ್ಯೆಯೇ ಇರಲಿ- ಪ್ರಶ್ನೆ ಕೇಳದೇ ನಮ್ಮ ಬೆನ್ನಿಗೆ ಆತುಕೊಳ್ಳುವುದು ಈ ರಾಷ್ಟ್ರವೇ! ಈ ಹೊತ್ತಲ್ಲಿ ನಮ್ಮ ಸರ್ವಋತು ಮಿತ್ರ ಇಸ್ರೇಲಿನ ಜೊತೆ ನಿಲ್ಲುವುದು ನಮ್ಮ ಕರ್ತವ್ಯ ಕೂಡ. ಜಗತ್ತಿನಿಂದ ಭಯೋತ್ಪಾದನೆ ನಿಮೂಲನೆಗೊಳ್ಳಲಿ. ಅದೊಂದೇ ನಮ್ಮ ಆಶಯ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts