More

    ಒಂದೇ ಸೂರಿನಡಿ ಸಕಲ ಸೌಲಭ್ಯ ಸದ್ಬಳಕೆ ಆಗಲಿ

    ಜಮಖಂಡಿ: ಒಂದೇ ಸೂರಿನಡಿ ರೈತರಿಗೆ ಬೇಕಾಗುವ ಬೀಜ, ರಸಗೊಬ್ಬರ, ಔಷಧಗಳು, ವಿವಿಧ ಯಂತ್ರೋಪಕರಣಗಳು ಸಿಗುವಂತೆ ಮಾಡಿರುವುದು ಶ್ಲಾಘನೀಯ. ರಾಜ್ಯಾದ್ಯಂತ ಇಂತಹ ಮಳಿಗೆಗಳನ್ನು ತೆರೆಯುವ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

    ಇಲ್ಲಿನ ಕುಡಚಿ ರಸ್ತೆಯ ಹುನ್ನೂರು ಕಾಲೇಜಿನ ಹತ್ತಿರ ಬುಧವಾರ ಮಹಾಲಕ್ಷ್ಮೀ ಟ್ರೇಡಿಂಗ್ ಕಂಪನಿ (ಎಂ.ಟಿ.ಸಿ) ಯ ಮಲ್ಟಿಬ್ರ್ಯಾಂಡ್ ಕೃಷಿ ಮಳಿಗೆ ಮತ್ತು ಕಾರ್ಪೋರೇಟ್ ನೂತನ ಕಚೇರಿ ಹಾಗೂ ರಸಗೊಬ್ಬರ ಹರಡಿಸುವ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ರೈತರಿಗೆ ಸರಿಯಾದ ಮಾರ್ಗದರ್ಶನ ಇಲ್ಲದೆ ತೊಂದರೆಯಾಗುತ್ತಿದೆ. ವಿವಿಧ ಕಂಪನಿಯ ಬೀಜ, ಔಷಧ ಒಂದೇ ಕಡೆ ಸಿಗುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳನ್ನು ರೈತರು ಪಡೆದುಕೊಳ್ಳಬೇಕು. ಯಂತ್ರಗಳಿಗೆ ನೀಡುವ ಸಹಾಯಧನವನ್ನು ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

    ರಾಜ್ಯಕ್ಕೆ ಬರಗಾಲ ಆವರಿಸಿರುವುದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ನಮ್ಮ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಉತ್ತರವನ್ನು ನೀಡುತ್ತಿಲ್ಲ, ಇನ್ನೆರಡು ದಿನದಲ್ಲಿ ಚರ್ಚೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

    ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣ ಮಾಡಲು ಸರ್ಕಾರ ಬದ್ಧವಿದೆ. ಜನರು ನಾವು ನೀಡಿರುವ ಭರವಸೆಗಳನ್ನು ನಂಬಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನೀಡಿರುವ ಸುಳ್ಳು ಭರವಸೆಗಳನ್ನು ತಿರಸ್ಕರಿಸಿದ್ದಾರೆ ಎಂದರು.

    ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಬಿಜೆಪಿ-ಜೆಡಿಎಸ್‌ನವರಿಗೆ ಆಸಕ್ತಿ ಇಲ್ಲ. ಯಾವುದಾದರೂ ಒಂದು ವಿವಾದವನ್ನು ಎಬ್ಬಿಸುವುದೇ ಅವರ ಕೆಲಸವಾಗಿದೆ. ಅವರ ಜತೆ ಜೆಡಿಎಸ್ ಕುಮಾರಸ್ವಾಮಿ ಸೇರಿ ಜೈ ಶ್ರೀರಾಮ ಎನ್ನುತ್ತಿದ್ದಾರೆ ಎಂದರು.

    ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳು ಮಾತನಾಡಿ, 2005ರಲ್ಲಿ ಪ್ರಾರಂಭವಾದ ಮಹಾಲಕ್ಷ್ಮೀ ಕಂಪನಿ ರೈತರಿಗಾಗಿ ಹಗಲಿರುಳು ಶ್ರಮಿಸಿ ಉತ್ತುಂಗಕ್ಕೇರಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಕೆಲಸ ಮಾಡುತ್ತಿರುವುದು ಶ್ಲಾಘನಿಯ ಎಂದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಪಿ.ಎಲ್.ಪಾಟೀಲ, ಉದ್ಯಮಿ ಸಂಗಮೇಶ ನಿರಾಣಿ, ಸಂಸ್ಥಾಪಕ ಚಂದ್ರಶೇಖರ ಬಾಗೇವಾಡಿ, ಸಹಸಂಸ್ಥಾಪಕ ಸುರೇಶ ಬಾಗೇವಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts