More

    ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲಿ

    ಎನ್.ಆರ್.ಪುರ: ರೈತರ ಹಿತದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಎಂದು ಬಾಳೆಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಒತ್ತಾಯಿಸಿದರು.

    ತಾಲೂಕು ಪಶುಸಂಗೋಪನಾ ಇಲಾಖೆಯಿಂದ ಶನಿವಾರ ಬಾಳೆಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಆಯೋಜಿಸಿದ್ದ ಜಾನುವಾರು ಉಚಿತ ಚಿಕಿತ್ಸೆ, ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪ್ರಸ್ತುತ ಶಿವಮೊಗ್ಗ ಹಾಲು ಒಕ್ಕೂಟವು ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಹಾಲು ಸಂಗ್ರಹ ಮಾಡುತ್ತಿದೆ. ಆದರೆ ತಾಲೂಕಿನಲ್ಲಿ ಹಾಲು ಮಾರಾಟ ಆಗುತ್ತಿರುವುದು ಹಾಸನ ಒಕ್ಕೂಟದ್ದು. ಇದರಿಂದ ಈ ಭಾಗದಲ್ಲಿ ಹೈನುಗಾರರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ಪ್ರಸ್ತುತ ಹೈನುಗಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.
    ರೈತರು ಮಾರಾಟ ಮಾಡುವ ಹಾಲಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಒಂದು ಲೀಟರ್ ಹಾಲಿಗೆ 28 ರೂ. ದೊರೆಯುತ್ತಿದೆ. ಒಂದು ಕಟ್ಟು ಹುಲ್ಲಿಗೆ 30 ರೂ. ಇದೆ. 1 ಕೆ.ಜಿ. ಹಿಂಡಿ ದರ 50 ರೂ. ಆಗಿದೆ. ಈ ವೆಚ್ಚ ಭರಿಸಿ ಹೈನುಗಾರಿಕೆ ಮಾಡುವುದು ಕಷ್ಟವಾಗಿದೆ. ಪಶುಸಂಗೋಪನೆ ಮಾಡಲು ರೈತರಿಗೆ ಹೆಚ್ಚು ಉತ್ತೇಜನ ಸಿಗಬೇಕಾದರೆ ಜಿಲ್ಲೆಗೆ ಪ್ರತ್ಯಕ ಹಾಲು ಒಕ್ಕೂಟ ಸ್ಥಾಪಿಸಬೇಕು. ಇಲ್ಲವೇ ಹಾಸನ ಹಾಲು ಒಕ್ಕೂಟವೇ ಇಲ್ಲಿನ ಹಾಲು ಖರೀದಿಸುವಂತೆ ಕ್ರಮ ಕೈಗೊಳ್ಳಲು ಶಾಸಕರು ಒತ್ತಡ ಹೇರಬೇಕು ಎಂದರು.
    ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವಕುಮಾರ್, ಹಸುಗಳಿಗೆ ಒಣ ಮೇವು, ಹಸಿ ಮೇವು ಕೊಡುವ ವಿಧಾನ ಹಾಗೂ ಹಸುಗಳ ಪೋಷಣೆ ಬಗ್ಗೆ ಮಾಹಿತಿ ನೀಡಿದರು.
    ಕಡಹಿನಬೈಲು-ಬಕ್ರಿಹಳ್ಳ ಏತ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಮಾತನಾಡಿ, ಪಶು ಇಲಾಖೆಯು ರೈತರಿಗೆ ಸೌಲಭ್ಯ ನೀಡುವಾಗ ಹಾಲು ಉತ್ಪಾದಕರ ಸಂಘದ ಸಲಹೆ ಪಡೆದು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಜಾನುವಾರುಗಳ ಸ್ಪರ್ಧೆಯಲ್ಲಿ ವಿನೋದ್‌ಕುಮಾರ್ ಅವರ ಎಚ್‌ಎ್ ತಳಿಯ ಹಸು ಪ್ರಥಮ, ಶೀಬು ಎಂಬುವರಿಗೆ ದ್ವಿತೀಯ, ವಿಲ್ಸನ್ ಅವರ ಗೀರ್ ತಳಿ ಹಸು ಪ್ರಥಮ, ಧನಂಜಯ ಅವರ ಜರ್ಸಿ ತಳಿ ಪ್ರಥಮ ಬಹುಮಾನ ಪಡೆದವು. 21 ಹಸು ಮತ್ತು ಕರುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
    ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನಿಲ್‌ಕುಮಾರ್, ಸದಸ್ಯ ಚಂದ್ರಶೇಖರ್, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಕೆ.ಕೆ.ಬೆನ್ನಿ, ನಿರ್ದೇಶಕ ಎಂ.ಜೆ.ವಿಲ್ಸನ್, ತೋಟಗಾರಿಕಾ ಸಹಾಯಕ ನಿರ್ದೇಶಕ ರಾಹುಲ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎನ್.ಟಿ.ಶೇಷಾಚಲ, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts