More

    ಬುಡಕಟ್ಟು ಜನರಿಗೆ ಕಾನೂನಿನ ತೊಡಕು

    ಯಳಂದೂರು: ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಅರಣ್ಯ ರಕ್ಷಣೆಯ ಕಾನೂನುಗಳಿಂದ ಕೆಲವು ತೊಂದರೆಗಳಿವೆ, ಇದನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೆಲ ಮಾರ್ಪಾಡುಗಳನ್ನು ತರುವ ಅವಶ್ಯಕತೆ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

    ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕಾಡಿನಲ್ಲಿ ವಾಸ ಮಾಡುವ ಗಿರಿಜನರು ಇಲ್ಲಿನ ಮೂಲನಿವಾಸಿಗಳಾಗಿದ್ದಾರೆ. ಇವರಿಗೆ ಮೂಲ ಅವಶ್ಯಕತೆಗಳಾದ ಮನೆ, ರಸ್ತೆ, ಚರಂಡಿ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಯ ಕೆಲವು ಕಾನೂನುಗಳು ಅಡ್ಡಬರುತ್ತವೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಅನುದಾನಗಳಿದ್ದರೂ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕಾನೂನು ತೊಡಕಿವೆ. ಇದರ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆಗಳನ್ನು ನಡೆಸಿ ಇದನ್ನು ಸಡಿಲಗೊಳಿಸಿ ನೆರವಿಗೆ ಸಹಕರಿಸಬೇಕು ಎಂದರು.

    ನಮ್ಮ ತಂದೆ ಬಿ. ರಾಚಯ್ಯ ಅವರು 60ರ ದಶಕದಲ್ಲಿ ಇಲ್ಲಿನ ಕಾಡು ಜನರಿಗೆ ವ್ಯವಸಾಯಕ್ಕೆ ಭೂಮಿಯನ್ನು ನೀಡಿದ್ದರು, ಮನೆ ನೀಡಿದ್ದರು. ಕೆಲ ರೈತರಿಗೆ ಕಾಡಂಚಿನಲ್ಲಿ ಜಮೀನು ನೀಡಿದ್ದಾರೆ. ಆದರೆ, ಈಗ ಅರಣ್ಯ ಇಲಾಖೆಯ ಕಾನೂನುಗಳಿಂದ ಇದಕ್ಕೆ ತೊಡಕಾಗಿದ್ದು ಇದನ್ನು ನಿವಾರಿಸಲು ಕ್ರಮ ವಹಿಸಲಾಗುವುದು. ಗಿರಿಜನರ ಕಲೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರು.

    ಪ್ರಚಾರದ ಕೊರತೆ, ಶಾಲಾ ಮಕ್ಕಳೇ ಪ್ರೇಕ್ಷಕರು
    ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಇಲಾಖೆ ಪ್ರಚಾರ ನೀಡುವಲ್ಲಿ ವಿಫಲವಾಗಿತ್ತು. ಇಲ್ಲಿನ ಶಾಲಾ ಮಕ್ಕಳು ಹಾಗೂ ಇದರಲ್ಲಿ ಭಾಗವಹಿಸಿದ್ದ ಕಲಾವಿದರು ಹೊರತುಪಡಿಸಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲಲ್ಲಿ ಖಾಲಿ ಕುರ್ಚಿಗಳ ನಡುವೆಯೇ ಕಲಾವಿದರೂ ತಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

    ಗ್ರಾಪಂ ಸದಸ್ಯರಿಗೇ ಆಹ್ವಾನವಿಲ್ಲ
    ಕಾರ್ಯಕ್ರಮದ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾಹಿತಿ ಹಾಗೂ ಆಹ್ವಾನವೇ ಇಲ್ಲ. ನನಗೆ ಮಾತ್ರ ಒಂದು ದಿನ ಮುಂಚೆ ಆಹ್ವಾನ ಪತ್ರಿಕೆಯನ್ನು ತಲುಪಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಪ್ರತೀಪ್‌ಕುಮಾರ್ ದೂರಿದರು.

    ಸ್ಥಳೀಯರಿಗೆ ಕೂಡ ಮಾಹಿತಿ ನೀಡಿಲ್ಲ. ಸರ್ಕಾರದ ಅನುದಾನ ಬಳಸಿಕೊಂಡು ಇಲಾಖೆ ಕಾಟಾಚಾರಕ್ಕೆ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂದೆ ಹೀಗಾಗಬಾರದು, ಈ ಬಗ್ಗೆ ಸಂಬಂಧಟ್ಟ ಉನ್ನತ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

    ಜಿಲ್ಲೆಯ ವಿವಿಧ ಭಾಗದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಪಂ ಮಾಜಿ ಉಪಾಧ್ಯಕ್ಷ ಕೇತಮ್ಮ, ಜೆ. ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ವಿ. ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕಂದಹಳ್ಳಿ ನಂಜುಂಡಸ್ವಾಮಿ, ಶಾಸಕರ ಆಪ್ತ ಸಹಾಯಕ ಚೇತನ್, ವೆಂಕಟೇಶ್, ನಾಗೇಶ್, ನಾಗೇಂದ್ರ ಇತರರು ಇದ್ದರು.

    30ವೈಎಲ್‌ಡಿ ಚಿತ್ರ01 ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಶುಕ್ರವಾರ ನಡೆದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts