More

    ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಹೇಳಿಕೆಗೆ ಟ್ವಿಟರ್​ ಮೂಲಕ ತಿರುಗೇಟು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸೋಲಿಸಲು ಮರಾಠಿಗರೆಲ್ಲರೂ ಒಟ್ಟಾಗಬೇಕೆಂದು ಕರೆಕೊಟ್ಟಿದ್ದ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟ್​ ನೀಡಿದ್ದಾರೆ.

    ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಹೆಬ್ಬಾಳ್ಕರ್​ ಮಾಡಿದ ಪೋಸ್ಟ್ ಹೀಗಿದೆ…​
    ಬೆಳಗಾವಿ ತಾಲೂಕಿನ ಜನಪ್ರತಿನಿಧಿಗಳು ಕನ್ನಡ ಮತ್ತು ಮರಾಠಿ ಭಾಷಿಕರ ಸೌಹಾರ್ದತೆ ಕಾಪಾಡಲು ಶ್ರಮಿಸುತ್ತಿದ್ದೇವೆ. ನಾನು ವಯಕ್ತಿಕವಾಗಿ ಯಾವುದೇ ಭಾಷಾ ರಾಜಕಾರಣ, ಜಾತಿ ರಾಜಕಾರಣ ಹಾಗೂ ದ್ವೇಷದ ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರು ನನ್ನನ್ನು ಮನೆ ಮಗಳು ಎಂದು ಸ್ವೀಕಾರ ಮಾಡಿದ್ದಾರೆ. ಎಲ್ಲ ಸಮಾಜದ ಬಾಂಧವರು, ಎಲ್ಲ ಭಾಷೆಯ ಜನರು ಈ ಕ್ಷೇತ್ರದಲ್ಲಿ ಅನ್ಯೋನ್ಯವಾಗಿದ್ದೇವೆ. ನನ್ನನ್ನು ಆರಿಸಿ ಕಳಿಸಿದ್ದು ಅತ್ಯಂತ ಹಿಂದುಳಿದ ಕ್ಷೇತ್ರ ಅಭಿವೃದ್ಧಿಯಾಗಲಿ ಎನ್ನುವ ಅಪೇಕ್ಷೆ ಮತ್ತು ವಿಶ್ವಾಸದ ಮೇಲೆಯೇ ಹೊರತು ಯಾವುದೇ ಆಸೆ, ಆಮಿಷಕ್ಕೆ ಮತ ಹಾಕಿಲ್ಲ. ಜನರು ಹಣಕ್ಕಾಗಿ ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಅವರು ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

    ರಮೇಶ ಜಾರಕಿಹೊಳಿ ನಿನ್ನೆ ನೀಡಿರುವ ಹೇಳಿಕೆಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ನಿಂತವರ ಪರವಾಗಿ 5 ಕೋಟಿ ರೂ. ಹಂಚುವುದಾಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸೇರಿದ ತಕ್ಷಣ 5 ಕೋಟಿ ರೂ. ಮತದಾರರಿಗೆ ಹಂಚಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಚುನಾವಣೆ ಆಯೋಗ ಅನುಮತಿ ನೀಡಿದೆಯೇ? ಒಂದು ಕಡೆ ಲಕ್ಷ್ಮಿ ಹೆಬ್ಬಾಳ್ಕರ್​ ದುಡ್ಡು ಹಂಚಿ ಆರಿಸಿ ಬಂದಿದ್ದಾರೆ ಎನ್ನುವ ರಮೇಶ ಜಾರಕಿಹೊಳಿ, ಮತ್ತೊಂದು ಕಡೆ ತಾವು 5 ಕೋಟಿ ರೂ. ಹಂಚುವುದಾಗಿ ಹೇಳುವ ಮೂಲಕ ದ್ವಂಧ್ವ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಭಿಮಾನಿ ಎಲ್ಲ ಮತದಾರರು ಅರ್ಥ ಮಾಡಿಕೊಳ್ಳುತ್ತಾರೆ. ರಮೇಶ ಜಾರಕಿಹೊಳಿ ಹಂಚುವುದು ಬಿಜೆಪಿ ದುಡ್ಡಾ ಅಥವಾ ಅವರ ಸ್ವಂತದ್ದಾ? ಮತದಾರರಿಗೆ ಅಕೌಂಟ್ ಮೂಲಕ ಹಂಚುತ್ತಾರಾ? ಆರ್.ಟಿ.ಜಿ.ಎಸ್. ಮಾಡುತ್ತಾರಾ ಅಥವಾ ನಗದು ರೂಪದಲ್ಲಿ ಕೊಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು.

    ಬಿಜೆಪಿ ರಾಜ್ಯಾಧ್ಯಕ್ಷರು ಇದರ ಬಗ್ಗೆ ಗಮನಕೊಡಬೇಕು. ಈ ಬಗ್ಗೆ ರಮೇಶ್​ ಜಾರಕಿಹೊಳಿ ನಿಮ್ಮ ಜತೆಗೆ ಚರ್ಚಿಸಿದ್ದಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬೆಳಗಾವಿ ತಾಲೂಕಿನಲ್ಲಿ ಮೂವರು ಶಾಸಕರಿದ್ದೇವೆ. ಒಬ್ಬರು ಜೈನ್, ಮತ್ತೊಬ್ಬರು ಮರಾಠ ಹಾಗೂ ಇನ್ನೊಬ್ಬರು ಲಿಂಗಾಯತ. ಹಿಂದೆ ಇಬ್ಬರು ಜೈನ್ ಹಾಗೂ ಓರ್ವ ಮುಸ್ಲಿಂ ಸಮಾಜದವರಿದ್ದರು. ಅದಕ್ಕೂ ಹಿಂದೆ ಒಬ್ಬ ಮರಾಠಾ, ಒಬ್ಬ ಜೈನ್ ಹಾಗೂ ಮತ್ತೊಬ್ಬರು ಮುಸ್ಲಿಂ ಶಾಸಕರಿದ್ದರು. ಇದು ಇಲ್ಲಿಯ ಜನರು ಸೌಹಾರ್ದಯುತ ರಾಜಕಾಣಕ್ಕೆ ಮನ್ನಣೆ ನೀಡುವುದನ್ನು ತೋರಿಸುತ್ತದೆ ಎಂದು ಹೆಬ್ಬಾಳ್ಕರ್​ ವಿವರಿಸಿದ್ದಾರೆ.

    ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಅಥವಾ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಚಂದಗಡದಲ್ಲಿ ಮರಾಠಿ ಸಮಾಜದ ಹಕ್ಕಿನಲ್ಲಿ ತಮ್ಮ ಅಳಿಯ, ವಾಲ್ಮೀಕಿ ಸಮಾಜದ ಅಪ್ಪಿರಾವ್ ಪಾಟೀಲ ಅವರನ್ನು ಆಯ್ಕೆಮಾಡಿಸಿಕೊಳ್ಳುವಾಗ ಮರಾಠಿ ಭಾಷಿಕರ ಹಕ್ಕಿನ ಚ್ಯುತಿ ಆಗಲಿಲ್ಲವೇ? ಈ ಬಗ್ಗೆ ಸ್ಪಷ್ಟೀಕರಣ ನೀಡಿದ ನಂತರ ಮರಾಠಿ ಭಾಷಿಕರ ಬಗ್ಗೆ ರಮೇಶ್​ ಜಾರಕಿಹೊಳಿ ಮಾತನಾಡಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್​ ಸವಾಲೆಸೆದಿದ್ದಾರೆ.

    ನಾನು ಬೆಳಗಾವಿ ತಾಲೂಕನ್ನು ಯಾವುದೇ ಕಾರಣಕ್ಕೂ ರಿಪಬ್ಲಿಕ್ ಆಫ್ ಗೋಕಾಕ್ ಮಾಡಲು ಬಿಡುವುದಿಲ್ಲ. ಜನರು ಇವರ ಷಢ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ. ರಮೇಶ್​ ಜಾರಕಿಹೊಳಿ ಇಂತಹ ಕೀಳು ರಾಜಕಾರಣ ಬಿಟ್ಟು ಹಾಗೂ ಜನರ ಮಧ್ಯೆ ವಿಷಬೀಜ ಬಿತ್ತುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಕೊಡಲಿ ಎಂದು ತಿರುಗೇಟು ನೀಡಿದರು.​ (ದಿಗ್ವಿಜಯ ನ್ಯೂಸ್​)

    ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ರೂಪಾಯಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts