More

    ಲಾ ಆ್ಯಂಡ್​ ಆರ್ಡರ್​: ಡೇಟಾ ದುರ್ಬಳಕೆ ತಡೆಗೆ ಕಾನೂನು ಅಗತ್ಯ

    ಲಾ ಆ್ಯಂಡ್​ ಆರ್ಡರ್​: ಡೇಟಾ ದುರ್ಬಳಕೆ ತಡೆಗೆ ಕಾನೂನು ಅಗತ್ಯ

    ‘ಖಾಸಗಿತನವು ಒಂದು ಆಯ್ಕೆಯಲ್ಲ. ನಾವು ಇಂಟರ್​ನೆಟ್ ಬಳಸುತ್ತೇವೆ ಎಂದ ಮಾತ್ರಕ್ಕೆ ಖಾಸಗಿತನದ ಬೆಲೆ ತೆರಲಾಗದು’.

    | ಗ್ಯಾರಿ ಕೊವಾಕ್ಸ್ ಸಿಇಒ., ಎವಿಜಿ ಟೆಕ್ನಾಲಜಿಸ್

    ಮಹಾಮಾರಿ ಕೊವಿಡ್-19ನಿಂದಾಗಿ ಲಾಕ್​ಡೌನ್, ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರದಂಥ ಹೊಸ ಲೋಕವನ್ನು ಮನಸ್ಸಿಲ್ಲದ ಮನಸ್ಸಿನಿಂದ ನಾವು ಪ್ರವೇಶಿಸುತ್ತಿದ್ದಂತೆ ಕರೊನಾ ವೈರಸ್ ಮಹಾಮಾರಿ ನಮ್ಮ ನಿತ್ಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ ಹಾಗೂ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಕೋರ್ಟ್ ಕೊಠಡಿಗಳಿಂದ ಹಿಡಿದು ಆರೋಗ್ಯ ಕ್ಷೇತ್ರದ ಜನರವರೆಗೆ ಎಲ್ಲರೂ, ಕಣ್ಣಿಗೆ ಕಾಣದ ವೈರಿಯ ವಿರುದ್ಧದ ಸಮರದಲ್ಲಿ ಮಾಹಿತಿ ತಂತ್ರಜ್ಞಾನದ ಮೇಲೆ ಅವಲಂಬಿಸುವುದು ಜಾಸ್ತಿಯಾಗಿದೆ. ದೈನಂದಿನ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನದ ಮೇಲಿನ ಅವಲಂಬನೆ ಹೊಸ ವಿಷಯವೇನೂ ಅಲ್ಲ. ಆದರೆ, ನಾವು ನಮ್ಮ ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆಯೇ ಎನ್ನುವುದು ಪ್ರಶ್ನೆಯಾಗಿದೆ.

    ಜಗತ್ತಿನಾದ್ಯಂತ ಸರ್ಕಾರಗಳು ಮತ್ತು ಖಾಸಗಿ ಸಂಘಸಂಸ್ಥೆಗಳು ಕರೊನಾ ವೈರಸ್ ಹರಡುವುದನ್ನು ತಡೆಯಲು ಮಾತ್ರವಲ್ಲದೆ ಸಾರ್ಸ್ ಸಿಒವಿ2ಗೆ ತುತ್ತಾಗುವುದರಿಂದ ರಕ್ಷಿಸಿಕೊಳ್ಳುವಂತೆ ಎಚ್ಚರಿಸಲು ಕೂಡ ಮಾಹಿತಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ. ಬ್ಲೂಟೂತ್, ಲೊಕೇಶನ್ ಮತ್ತು ಸೆಲ್ಯುಲರ್ ಡೇಟಾಗಳಿಗೆ ಪ್ರವೇಶ ಪಡೆಯಲು (ಆಕ್ಸೆಸ್) ಅಧಿಕಾರವಿರುವ ಮೊಬೈಲ್ ಅಪ್ಲಿಕೇಶನ್​ಗಳು ಈಗ ಸರ್ವೆಸಾಮಾನ್ಯವಾಗಿವೆ. ಕೊವಿಡ್-19 ಸಾಂಕ್ರಾಮಿಕತೆಯನ್ನು ನಿಭಾಯಿಸುವಲ್ಲಿನ ಯಶಸ್ಸಿಗೆ ಇಂಥ ಅಪ್ಲಿಕೇಶನ್​ಗಳು ಭಾಗಶಃವಾದರೂ ಕಾರಣ ಎಂದು ಕೆಲವು ದೇಶಗಳು ಒಪ್ಪಿಕೊಂಡಿವೆ. ಇನ್ನು ಕೆಲವು ರಾಷ್ಟ್ರಗಳು ಇಂಥ ಅಪ್ಲಿಕೇಶನ್​ಗಳನ್ನು ರೂಪಿಸಲು ಇನ್ನೂ ಹೆಣಗಾಡುತ್ತಿವೆ. ಏನೇ ಇರಲಿ, ಸಾಂಕ್ರಾಮಿಕ ರೋಗವೊಂದರ ಅಸ್ತಿತ್ವವು ಮುಂದೆ ಸಂಪರ್ಕ ಪತ್ತೆಗೆ ನೆರವಾಗುವ ಅಪ್ಲಿಕೇಶನ್ ರೂಪಿಸಲು ನೆರವಾಗುವುದೆಂಬ ಆಶಯದೊಂದಿಗೆ ಯಾವುದೇ ಸರ್ಕಾರವು ದತ್ತಾಂಶವನ್ನು (ಡೇಟಾ) ಅನಿಯಂತ್ರಿತವಾಗಿ ಸಂಗ್ರಹಿಸುವುದು ಸಮರ್ಥನೀಯವೇ?.

    ಮೊಬೈಲ್ ಸಾಧನಗಳು ಕಾಲಾನುಕ್ರಮದಲ್ಲಿ ಎಲ್ಲ ಪ್ರಾಯೋಗಿಕ ಉದ್ದೇಶಗಳಿಗಾಗಿ ನಮ್ಮ ಮಿದುಳು, ದೇಹ ಮತ್ತು ವೈಯಕ್ತಿಕ ಸಂವಹನದ ವಿಸ್ತರಣೆಯಾಗಿದೆ. ಅವುಗಳು ಬಳಕೆದಾರರ ಖಾಸಗಿ ಮಾತುಕತೆಗಳು, ಫೋಟೋಗಳು, ಸ್ಥಳಮಾಹಿತಿ, ಸಂಪರ್ಕಗಳು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇತ್ಯಾದಿಗಳನ್ನು ಹೊಂದಿರುವ ಬೃಹತ್ ಖಜಾನೆಯೇ ಆಗಿವೆ. ಈ ಸಾಧನಗಳನ್ನು ವಿವಿಧ ಅನಧಿಕೃತ ಉದ್ದೇಶಗಳಿಗೆ ಬಳಸಲಾಗುವುದಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗುವುದಿಲ್ಲ. ಅಂದರೆ ಮೊಬೈಲ್ ಸಾಧನವೊಂದರಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಾಣಿಜ್ಯ ಲಾಭಗಳಿಗಾಗಿ (ನಿರ್ದಿಷ್ಟ ಗುರಿಯ ಜಾಹಿರಾತು) ಬಳಕೆದಾರರು ಭೇಟಿ ನೀಡಿದ ಎಲ್ಲ ತಾಣಗಳನ್ನು ಹುಡುಕುವುದು, ಎಲ್ಲ ಚಲನವಲನಗಳ ಮೇಲೆ ನಿಗಾ ಇಡುವುದಕ್ಕೆ ಬಳಸಬಹುದಾಗಿದೆ. ಇದಕ್ಕೆ ಅನುಮತಿಯನ್ನು ಕೋರದಿರುವುದೆಂದರೆ ಅನಧಿಕೃತ ಬಳಕೆ ಎಂದೇ ಅರ್ಥವಾಗುತ್ತದೆ.

    ಅನುಮತಿ ಅಗತ್ಯ: ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡುವುದಕ್ಕೂ ಮಾಹಿತಿ ತಂತ್ರಜ್ಞಾನ ಹಾಗೂ ಡೇಟಾ ಸಂಗ್ರಹಕ್ಕೂ ಇರುವ ಅಂತರ್​ಸಂಬಂಧದ ಬಗೆಗೆ ನಡೆದ ಒಂದು ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತೀರಾ ಇತ್ತೀಚೆಗಷ್ಟೆ ಪೂರ್ಣಗೊಳಿಸಿದೆ. ‘ಆಧಾರ್’ ಯೋಜನೆಯ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಕಲಾಪಗಳಲ್ಲಿ ಅದು ಪ್ರತಿಫಲನಗೊಂಡಿದೆ. ಪ್ರಜೆಗಳ ಡೇಟಾ ಬಳಸುವ ಮುನ್ನ ಅವರ ಅನುಮತಿ ಕೋರುವುದರ ಮಹತ್ವವನ್ನು ಸವೋನ್ನತ ನ್ಯಾಯಾಲಯ ಮನವರಿಕೆ ಮಾಡಿ ಒತ್ತಿ ಹೇಳಿದೆ. ಆದರೆ ಸೂಕ್ತ ಕಾರಣಕ್ಕೆ ಹಾಗೂ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಮತ್ತು ಅಧಿಕೃತ, ನ್ಯಾಯಸಮ್ಮತ ಹಾಗೂ ಸೀಮಿತ ಉದ್ದೇಶಗಳಿಗೆ ಕಣ್ಗಾವಲು ಇಡಲು ಸರ್ಕಾರ ಪ್ರಜೆಗಳ ಅನುಮತಿ ಕೋರಬೇಕೇಂದಿಲ್ಲ ಎಂದೂ ಕೋರ್ಟ್ ಹೇಳಿದೆ.

    ಏನಿದ್ದರೂ ಈ ಉದ್ದೇಶಕ್ಕೆ ಕೂಡ ಸಂಸತ್ತು ಅಂಗೀಕರಿಸಿದ ಒಂದು ಕಾನೂನು ಇರಬೇಕು. ಸರ್ಕಾರ ತನ್ನ ಅಧಿಕಾರವನ್ನು ಸ್ವೇಚ್ಛಾಚಾರದಿಂದ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆ ರೀತಿ ಮಾಡಿದರೆ ಅದು ಜನರ ಖಾಸಗಿತನದ ಹಕ್ಕಿನ ಮೇಲಿನ ಆಕ್ರಮಣವಾಗುತ್ತದೆ, ಉಲ್ಲಂಘನೆಯಾಗುತ್ತದೆ ಎಂದಿದೆ. ಅದನ್ನು ತಡೆಯಲು ರೂಪಿಸುವ ಕಾನೂನು ನ್ಯಾಯಸಮ್ಮತವಾಗಿರಬೇಕು. ಏಕಪಕ್ಷೀಯ ಹಾಗೂ ಅಸ್ಪಷ್ಟವಾಗಿರಬಾರದು ಎಂದೂ ನಿರ್ದೇಶಿಸಿದೆ. ಯಾವ ಉದ್ದೇಶಕ್ಕೆ ಡೇಟಾ ಸಂಗ್ರಹ ಬಳಸಲಾಗುತ್ತದೆ ಅಥವಾ ಯಾಕಾಗಿ ಕಣ್ಗಾವಲು ಇಡಲಾಗುತ್ತದೆ ಎಂಬ ಅಂಶವೂ ಮಹತ್ವದ್ದು ಎಂದಿದೆ.

    ನಮ್ಮ ಕಾಲದ ಡೇಟಾ ದೈತ್ಯರಾದ ಆಪಲ್ ಮತ್ತು ಗೂಗಲ್​ಗಳ ಮುಖ್ಯ ಹಿತವಿರುವುದು ಡಿಜಿಟಲ್ ಡೇಟಾ ಆರ್ಥಿಕತೆಯಲ್ಲಿ ಪಾಲ್ಗೊಳ್ಳುವುದರಲ್ಲಿ. ಅವುಗಳು ಕೂಡ ತಮ್ಮ ಸಂಯೋಜಿತ ಸಂಪರ್ಕ ಪತ್ತೆ (ಕಾಂಟಾಕ್ಟ್ ಟ್ರೇಸಿಂಗ್) ಅಪ್ಲಿಕೇಶನ್ ಸಂಬಂಧಿತ ತಂತ್ರಜ್ಞಾನವು ಬ್ಲೂಟೂತ್ ಅಥವಾ ಇತರೆ ಮಾರ್ಗಗಳ ಮೂಲಕ ಸಂಗ್ರಹವಾಗುವ ಡೇಟಾವನ್ನು ಸಾಂಕ್ರಾಮಿಕತೆ ಅಂತ್ಯಗೊಂಡ ನಂತರ ಬಳಸದಂತೆ ಮಾಡುವುದನ್ನು ಖಾತರಿಪಡಿಸುವ ಸಿದ್ಧಾಂತಕ್ಕೆ ಬದ್ಧವಾಗಿರುವಂತೆ ಮಾಡಿವೆ. ಸಂಗ್ರಹಿತ ಡೇಟಾವನ್ನು ಸಂಪರ್ಕ ಪತ್ತೆಗೆ ಮಾತ್ರವೇ ಬಳಸಲಾಗುತ್ತದೆ. ಲಾಭ ಪ್ರಧಾನವಾದ ಖಾಸಗಿ ಸಂಸ್ಥೆಗಳೇ ಖಾಸಗಿತನದ ಹಕ್ಕಿನ ಬಗ್ಗೆ ಈ ರೀತಿಯ ಬದ್ಧತೆ ತೋರಿಸುತ್ತಿರುವಾಗ, ಸರ್ಕಾರವೇಕೆ ಇನ್ನೂ ಹೆಚ್ಚು ಉತ್ತರದಾಯಿತ್ವ ತೋರಬಾರದು ಎನ್ನುವುದು ಪ್ರಶ್ನೆಯಾಗಿದೆ. ಹೇಗೆ ನಮ್ಮ ಆರ್ಥಿಕತೆಯಲ್ಲಿ ಕಾಳಸಂತೆಯ ಛಾಯೆ ಇರುವುದನ್ನು ನಾವು ಬಯಸುವುದಿಲ್ಲವೋ ಹಾಗೆಯೇ ಜ್ಞಾನ (ಡೇಟಾ) ಆರ್ಥಿಕತೆಗಳು ಕೂಡ ಅತ್ಯಗತ್ಯವಾಗಿ ಸೋರಿಕೆ-ನಿರೋಧಕವಾಗಿರಬೇಕು (ಲೀಕ್-ಪ್ರೂಫ್). ಕನಿಷ್ಠ ಪಕ್ಷ ಡೇಟಾ ಪಡೆಯುವ ಪ್ರಾಥಮಿಕ ಫಲಾನುಭವಿ ಶೋಷಣೆಗೆ ಒಳಗಾಗುವುದನ್ನು ತಡೆಯುವಂತಾದರೂ ಇರಬೇಕು.

    ಆರೋಗ್ಯಸೇತು ಆಪ್: ಭಾರತದ ಸಂಪರ್ಕ ಪತ್ತೆ ಅಪ್ಲಿಕೇಶನ್ ‘ಆರೋಗ್ಯಸೇತು’ ಜನರ ವೈಯಕ್ತಿಕ ಮಾಹಿತಿಗಳನ್ನು ಸರ್ಕಾರ ಅಥವಾ ಬೇರೆ ಯಾರೊಡನೆಯೂ ಬಹಿರಂಗಪಡಿಸುವುದಿಲ್ಲ ಎಂದು ಮೇಲ್ನೋಟಕ್ಕೆ ಕಾಣಿಸುವಂತಿದೆ. ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬ ಖಾಸಗಿತನದ ನೀತಿಯನ್ನೂ ಅದು ಒಳಗೊಂಡಿದೆ. ಆದರೆ, ನಂತರದಲ್ಲಿ ರೂಪಿಸಲಾಗುವ ಕಾನೂನುಗಳನ್ನು ಅನ್ವಯಿಸಿ ಈ ಡೇಟಾಗಳನ್ನು ಬಹುಉದ್ದೇಶಗಳಿಗೆ ಬಳಸುವ/ ವಿಸ್ತರಿಸುವ ಸಾಧ್ಯತೆಯಿದೆ ಎಂಬುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಇಂಥ ಆಪ್​ನ ಉದ್ದೇಶ ವಿವರಿಸುವ ಹಾಗೂ ಅದರ ಮಿತಿಗಳನ್ನು ತಿಳಿಸುವ ಯಾವುದೇ ಕಾಯ್ದೆಯನ್ನು ಸಂಸತ್ತು ರೂಪಿಸದಿರುವುದೇ ಈ ಕಳವಳಕ್ಕೆ ಕಾರಣವಾಗಿದೆ. ‘ಕಾನೂನಿನ ಗೈರೇ’ ವಾಸ್ತವವಾಗಿ ‘ಅಸ್ಪಷ್ಟತೆಯ’ ಇನ್ನೊಂದು ವಿಧಾನವಾಗಿರುತ್ತದೆ. ಈ ಆಪ್ ಬಳಸಬೇಕೆಂದು ಸರ್ಕಾರ ಕೇವಲ ಒಂದು ಅಧಿಸೂಚನೆ ಹೊರಡಿಸುವುದರಿಂದ ಜನರಲ್ಲಿ ವಿಶ್ವಾಸ ಮೂಡುವುದಿಲ್ಲ ಎನ್ನುವುದು ಗಮನಾರ್ಹ.

    ಸರ್ಕಾರದ ಅಭಿಪ್ರಾಯ: ‘ಆಧಾರ್’ಅನ್ನು ಮೊದಲಿಗೆ ಕೇವಲ ಅಧಿಸೂಚನೆ ಮೂಲಕ ಪರಿಚಯಿಸಲಾಗಿತ್ತೇ ಹೊರತು ಅದಕ್ಕೆ ಸಂಸತ್ತು ರೂಪಿಸಿದ ಯಾವುದೇ ಕಾನೂನು ಇರಲಿಲ್ಲ. ಅದೇ ರೀತಿ ಈ ಆಪ್ ವಿಚಾರದಲ್ಲೂ ಮಾಡಬಹುದಾಗಿದೆ ಎನ್ನುವುದು ಕೇಂದ್ರ ಸರ್ಕಾರದ ಎಣಿಕೆಯಾಗಿದೆ. ಆರೋಗ್ಯಸೇತುಗೆ ಸ್ವಯಂಪ್ರೇರಣೆಯಿಂದ ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಈಗ ಸರ್ಕಾರದ ಆದ್ಯತೆಯಾದಂತೆ ಕಾಣುತ್ತಿದೆ. ಸಾಂಕ್ರಾಮಿಕ ಮಹಾಮಾರಿ ಅಂತ್ಯಗೊಂಡ ನಂತರವೂ ಅದನ್ನು ಬಳಸಲಾಗುತ್ತದೆಯೇ? ಏನಾದರೂ ನಿರ್ಬಂಧಗಳಿವೆಯೇ? ಬೇರೆ ಯಾವುದಾದರೂ ಉದ್ದೇಶಕ್ಕೆ ಅದನ್ನು ಬಳಸಲಾಗುತ್ತದೆಯೇ? ಸಂಗ್ರಹಿಸಿದ ಡೇಟಾವನ್ನು ಸರ್ಕಾರ ಏನು ಮಾಡುತ್ತದೆ?- ಈ ಎಲ್ಲ ಪ್ರಶ್ನೆಗಳಿಗೆ, ಸಾಂವಿಧಾನಿಕವಾಗಿ ಹೇಳುವುದಾದಲ್ಲಿ ಸಂಸತ್ತು ರೂಪಿಸುವ ಕಾನೂನೊಂದೇ ಉತ್ತರಿಸಬಲ್ಲದು. ಸುಪ್ರೀಂ ಕೋರ್ಟ್ ಈಗಾಗಲೇ ಈ ವಿಚಾರದಲ್ಲಿ ಸ್ಪಷ್ಟ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಅರ್ಥಪೂರ್ಣ.

    ಡೇಟಾ ಸಂರಕ್ಷಣೆಗೇ ಕಾನೂನಿಲ್ಲ!: ದಕ್ಷಿಣ ಕೊರಿಯಾ, ಸಿಂಗಾಪುರ ಮೊದಲಾದ ದೇಶಗಳಲ್ಲಿ ಸಂಪರ್ಕ ಪತ್ತೆ ಆಪ್​ಗಳು ಯಾವುದೇ ಕಾನೂನು-ಶೂನ್ಯತೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ದಕ್ಷಿಣ ಕೊರಿಯಾದಲ್ಲಿ ‘ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾನೂನು-2011’ ಇದೆ. ಸಿಂಗಾಪುರದಲ್ಲಿ 2012ರ ‘ವೈಯಕ್ತಿಕ ಡೇಟಾ ಸಂರಕ್ಷಣೆ ಕಾನೂನು’ ಇದೆ. ಸಂಪರ್ಕ ಪತ್ತೆ ಆಪ್​ಗಳ ಮೂಲಕ ಸಂಗ್ರಹಿಸುವ ವೈಯಕ್ತಿಕ ಡೇಟಾ ಈ ಕಾನೂನುಗಳ ಡೇಟಾ ಸಂರಕ್ಷಣಾ ನಿಯಮಗಳಿಗೆ ಅಧೀನವಾಗಿ ಇರುತ್ತದೆ. ದುರದೃಷ್ಟವೆಂದರೆ, ಭಾರತದಲ್ಲಿ ಕನಿಷ್ಠ ಪಕ್ಷ ಡೇಟಾ ಸಂರಕ್ಷಣಾ ಕಾನೂನು ಕೂಡ ಇಲ್ಲ!.

    ವಿಶೇಷವಾಗಿ ಸಾಂಕ್ರಾಮಿಕತೆಯ ಅವಧಿಯಲ್ಲಿ ನಮ್ಮ ಹಕ್ಕುಗಳಿಗಿಂತ ನಮ್ಮ ಕರ್ತವ್ಯವೇ ಮುಖ್ಯ ಎಂದು ಕೆಲವರು ವಾದಿಸಬಹುದು. ಅದರಲ್ಲಿ ಅನುಮಾನವೇ ಇಲ್ಲ. ಪ್ರಸ್ತುತ ಸನ್ನಿವೇಶದ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಗತ್ಯವಿರುವ ಇತರರಿಗೆ ನಾವು ನೆರವಾಗಬೇಕಿದೆ. ನಾವೆಲ್ಲರೂ ನಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಆದರೆ ಇಂಥ ಕರ್ತವ್ಯಗಳ ಅಸ್ತಿತ್ವವು, ಸರ್ಕಾರ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ನೆಪವಾಗಲಾರದು. ರಾಜಕೀಯ ವ್ಯವಸ್ಥೆಗಳು ಪಾರದರ್ಶಕವಾಗಿರುವಲ್ಲಿ ಮತ್ತು ಮಾಹಿತಿಯ ಮುಕ್ತ ಹರಿವು ಇರುವಲ್ಲಿ ಈ ಅದೃಶ್ಯ ವೈರಾಣು ವಿರುದ್ಧ ಪ್ರಬಲ ಸಮರ ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳಬೇಕಾಗಿದೆ. ಮಾಹಿತಿ ಹರಿದು ಬರುವಲ್ಲಿನ ಅಸಮಾನತೆಯು ಪ್ರಜೆಗಳನ್ನು ಕತ್ತಲಲ್ಲಿ ಇಡುತ್ತದೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರವು ವೈಯಕ್ತಿಕ ಮಾಹಿತಿಯ ಶೋಷಣೆ ಮಾಡಲು ನೆರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts