More

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

    ವಿಜಯಪುರ: ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಜೈನ ಮುನಿಗಳ ಹತ್ಯೆ, ಟಿ. ನರಸೀಪುರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆ, ಬೆಂಗಳೂರಿನಲ್ಲಿ ಇಬ್ಬರ ಹತ್ಯೆಯಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಸಂಜಯ್ ಪಾಟೀಲ ಕನಮಡಿ ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಾಶ್ವತ ಹಿಂದುಳಿದ ವರ್ಗ, ಶೋಷಿತ ವರ್ಗ ಯಾವುದಾದರು ಇದ್ದರೆ ಅದು ರೈತ ವರ್ಗವಾಗಿದೆ. ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಲಿದೆ. ಬಿಜೆಪಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಯೋಜನೆಗಳಿಗೆ ಕೊಕ್ಕೆ ಹಾಕಿದೆ. ಎಪಿಎಂಸಿ ಕಾಯ್ದೆ, ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆ, ಕಿಸಾನ್ ಸಮ್ಮಾನ, ಭೂ ಸಿರಿ ಯೋಜನೆಗಳಂತಹ ಮಹತ್ವದ ಹಾಗೂ ರೈತರಿಗೆ ನೇರವಾಗುವ ಯೋಜನೆಗಳಿಗೆ ಕತ್ತರಿ ಹಾಕಿರುವುದನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಕಾಂಗ್ರೆಸ್ ಸದಾ ರೈತ ಪರವಾಗಿದೆ ಎಂದು ಹೇಳುವ ನಾಯಕರು ರೈತರ ಯೋಜನೆಗಳನ್ನು ತೆಗೆದು ಹಾಕಿ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕಾಂಗ್ರೆಸ್ ಒಂದು ಕೈಯಲ್ಲಿ ಯೋಜನೆ ನೀಡಿ ಮತ್ತೊಂದು ಕಡೆಗೆ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿ ಷರತ್ತು ಹಾಕಿದೆ. ಅಲ್ಲದೆ ವಿದ್ಯುತ್ ಬಿಲ್ ಹೆಚ್ಚಿಸಿ ಜನರಿಗೆ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ವಿವಿಧ ಕಡೆಗೆ ಹತ್ಯೆಗಳು ಆಗುತ್ತಿದ್ದು, ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಜೈನ ಮುನಿಗಳ ಹತ್ಯೆಯನ್ನು ಸಿಬಿಐ ತನಿಖೆ ನೀಡಬೇಕು. ವಿವಿಧ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮೂಲಕ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಸರ್ಕಾರ ಎಂಟಕ್ಕೂ ಅಧಿಕ ಕಾಯ್ದೆಗಳನ್ನು ರದ್ದು ಮಾಡಿದೆ. ರೈತರ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರ ಕೂಡಲೇ ರದ್ದು ಮಾಡಿರುವ ಎಲ್ಲ ಕಾಯ್ದೆಗಳನ್ನು ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಮುಖಂಡ ಚಂದ್ರಶೇಖರ್ ಕವಟಗಿ, ಕಾಸುಗೌಡ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts