More

    ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಬದ್ಧ

    ಚಿತ್ತಾಪುರ: ಕಾಂಗ್ರೆಸ್‌ನದ್ದು ಆಳುವ ಸರ್ಕಾರವಲ್ಲ, ಜನರ ಸಮಸ್ಯೆ ಆಲಿಸುವ ಸರ್ಕಾರವಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಬದ್ಧವಾಗಿದ್ದು, ನಾವು ನೀಡಿದ ಭರವಸೆಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಕದ್ದರಗಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಿಎಂಜಿಎಸ್‌ವೈ ಅಡಿ ೫೦ ಲಕ್ಷ ರೂ. ವೆಚ್ಚದಲ್ಲಿ ಕದ್ದರಗಿ- ಯರಗಲ್ ರಸ್ತೆ ಸುಧಾರಣೆ, ಲೋಕೋಪಯೋಗಿ ಇಲಾಖೆಯಡಿ ೧೩.೯೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೋಣೆ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಚುನಾವಣೆಗೆ ಮುನ್ನ ನಾವು ನೀಡಿದ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಜಾರಿಗೊಳಿಸಿದ್ದೇವೆ. ಇನ್ನೊಂದು ಶೀಘ್ರದಲ್ಲೇ ಜಾರಿಗೊಳ್ಳಲಿದೆ ಎಂದರು.

    ಗೃಹಲಕ್ಷ್ಮಿಯೋಜನೆಯಡಿ ಜಿಲ್ಲೆಯಲ್ಲಿ ೧.೨೦ ಕೋಟಿ ಫಲಾನುಭವಿಗಳಿಗೆ ತಲಾ ೨ ಸಾವಿರ ರೂ. ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ನಿತ್ಯ ೬೦ ಲಕ್ಷ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಅಡಿ ೧.೫೦ ಕೋಟಿ ಫಲಾನುಭವಿಗಳು ೨೦೦ ಯೂನಿಟ್ ಫ್ರಿ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನ ಭಾಗ್ಯದಿಂದ ೫ ಕೆಜಿ ಅಕ್ಕಿ ಹಾಗೂ ಇನ್ನುಳಿದ ೫ ಕೆಜಿ ಬದಲು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡಲು ೬೦೦ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಇಲ್ಲಿವರೆಗೂ ಬಿಡುಗಡೆ ಮಾಡಿಲ್ಲ. ಮಾನವ ದಿನ ೧೫೦ ದಿನಗಳವರೆಗೆ ವಿಸ್ತರಿಸಲು ಪತ್ರ ಬರೆದರೂ ಕೇಂದ್ರ ಸ್ಪಂದಿಸಿಲ್ಲ. ಆದರೆ ಸಂಸತ್‌ನಲ್ಲಿ ಸಂಸದೆ ಸುಮಲತಾ ಅವರ ಪ್ರಶ್ನೆಗೆ ಪತ್ರವೇ ಬಂದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಸುಳ್ಳು ಉತ್ತರ ನೀಡಿದ್ದಾರೆ ಎಂದು ದೂರಿದರು.

    ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮಾತನಾಡಿದರು.

    ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಮಾಜಿ ಸದಸ್ಯ ಅರವಿಂದ ಚವ್ಹಾಣ್, ಬಾಗೋಡಿ ಗ್ರಾಪಂ ಅಧ್ಯಕ್ಷ ಜಗದೀಶ ಪಾಟೀಲ್, ಪ್ರಮುಖರಾದ ಶರಣಬಸಪ್ಪ ಧನ್ನಾ, ಅಜೀಜ್ ಸೇಠ್, ಮಹಿಮೂದ್ ಸಾಹೇಬ್, ಚಂದ್ರಶೇಖರ ಕಾಶಿ, ಮೃತ್ಯುಂಜಯಸ್ವಾಮಿ ಹಿರೇಮಠ, ಜಗದೀಶ ಚವ್ಹಾಣ್, ಆಂಜನೇಯ ಜೀವಣಗಿ, ಮಲ್ಲಿಕಾರ್ಜುನ ಪೂಜಾರಿ, ಗೂಳಿನಾಥ ಹಳಿಮನಿ, ಮಹೇಶ ಧರಿ, ಶರಣು ಡೋಣಗಾಂವ್, ಅಂಬಾರಾಯ ಕನ್ನಡಗಿ, ಬಸಂತ ಗುತ್ತೇದಾರ್, ಶರಣು ದೇಸಾಯಿ, ಮಲ್ಲಿನಾಥ ಪೂಜಾರಿ, ದೇವಿಂದ್ರ ಗುಡ್ಡಾಪುರ, ದಶರಥ ಪರಸನೂರ ಇತರರಿದ್ದರು. ಪ್ರದೀಪ ಪೂಜಾರಿ ನಿರೂಪಣೆ ಮಾಡಿ, ವಂದಿಸಿದರು.

    ಶಾಶ್ವತ ಕುಡಿವ ನೀರು, ರಸ್ತೆ, ಗ್ರಾಮೀಣ ಭಾಗದ ಆಡಳಿತದಲ್ಲಿ ಚುರುಕು ಮೂಡಿಸಲು ನೀಲಿನಕ್ಷೆ ತಯಾರಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಿಂದ ಸಾಕಷ್ಟು ಅನುದಾನ ಒದಗಿಸಲಾಗುವುದು. ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಅಭಿವೃದ್ಧಿ ಕಾಮಗಾರಿ ಅದರಲ್ಲೂ ಕುಡಿವ ನೀರಿನ ಕೆಲಸಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು.
    | ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts