More

    ಖಾನಾಪುರ ಶಾಸಕರ ಊರಲ್ಲಿ ಲಾಠಿಚಾರ್ಜ್

    ಬೆಳಗಾವಿ: ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಸ್ವಗ್ರಾಮ ತೋಪಿನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಎರಡು ಕೋಮಿನ ಮಧ್ಯೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ಗಣೇಶ ಚತುರ್ಥಿ ಮರುದಿನ ಹುಂದರಿ (ಇಲಿಗಳ ಹಬ್ಬ) ಹಬ್ಬದಂದು ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ತಂಟೆ ನಡೆದಿದೆ.

    ಗುರುವಾರ ಗ್ರಾಮದಲ್ಲಿ ಎರಡೂ ಗುಂಪುಗಳ ಹಲವರ ನಡುವೆ ಮತ್ತೆ ವಾಗ್ವಾದ ನಡೆದು ಹಿರಿಯರು ಸಮಾಧಾನ ಪಡಿಸಿದ್ದರು. ಒಂದು ಕೋಮಿನ ಸಂಘಟನೆಗಳ ಮುಖಂಡರು ಶುಕ್ರವಾರ ಗ್ರಾಮಕ್ಕೆ ಆಗಮಿಸಿ ಹಲಗೆ ಬಾರಿಸಿ ಘೋಷಣೆಗಳನ್ನು ಕೂಗಿ ಮತ್ತೊಂದು ಕೋಮಿನ ವಿರುದ್ಧ ಪ್ರತಿಭಟಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

    ಸುದ್ದಿ ತಿಳಿದ ಶಾಸಕ ವಿಠ್ಠಲ ಹಲಗೇಕರ ಮತ್ತು ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ ಸ್ಥಳಕ್ಕಾಗಮಿಸಿ ಎರಡೂ ಗುಂಪಿನ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸುತ್ತಿರುವಾಗಲೇ ಕಲ್ಲು ತೂರಾಟ ನಡೆದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

    ಗ್ರಾಮದ ಎರಡೂ ಗುಂಪುಗಳ ತಲಾ 40 ಯುವಕರ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಲ್ಲೆ ಯತ್ನ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲು ಮಾಡಿಕೊಂಡಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts