More

    ತರುವೆ ಗ್ರಾಪಂನ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ

    ಮೂಡಿಗೆರೆ: ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನ ತರುವೆ ಗ್ರಾಪಂನ ನರೇಗಾ ಯೋಜನೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವುದು ತನಿಖೆಯಿಂದ ಬಯಲಾಗಿದೆ. ಹಾಗಾಗಿ ಅಧ್ಯಕ್ಷರು ಹಾಗೂ ಸದಸ್ಯೆಯನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕೆಂದು ಗ್ರಾಮಸ್ಥ ಟಿ.ಆರ್.ಸಾಗರ್ ಒತ್ತಾಯಿಸಿದರು.

    ತರುವೆ ಗ್ರಾಪಂ ಅಧ್ಯಕ್ಷ ಸತೀಶ್ ಹಾಗೂ ಸದಸ್ಯೆ ನರೇಗಾ ಯೋಜನೆಯ 7 ಕಾಮಗಾರಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಾನು ಜಿಲ್ಲಾ ಪಂಚಾಯಿತಿಗೆ ದೂರು ನೀಡಿದ್ದೆ. ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಒಂಬುಡ್ಸ್‌ಮನ್‌ಗಳು ತನಿಖೆ ನಡೆಸಿದ್ದು, 7 ಕಾಮಗಾರಿಗಳ ಪೈಕಿ ಎರಡರಲ್ಲಿ ಹಣ ದುರ್ಬಳಕೆ ಆಗಿರುವುದು ಸಾಬೀತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಉಳಿದ 5 ಕಾಮಗಾರಿಗಳಲ್ಲೂ ಅವ್ಯವಹಾರ ನಡೆಸುವಷ್ಟರಲ್ಲಿ ತನಿಖೆ ಎದುರಾಗಿದ್ದರಿಂದ ಹಣ ದುರ್ಬಳಕೆ ಸಾಧ್ಯವಾಗಿಲ್ಲ. ಆದರೆ ಭ್ರಷ್ಟಾಚಾರ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಫೋಟೋಗಳು ಸಾಕ್ಷಿಯಾಗಿ ದೊರಕುತ್ತವೆ. ಹಾಗಾಗಿ ಅಧ್ಯಕ್ಷ, ಪಿಡಿಒ ಹಾಗೂ ಸಿಬ್ಬಂದಿಗೆ ದಂಡ ವಿಧಿಸಿದ್ದಲ್ಲದೆ, ಕಾಮಗಾರಿಯ ಹಣವನ್ನು ಸರ್ಕಾರಕ್ಕೆ ವಾಪಸ್ ಕಟ್ಟಲು ಆದೇಶ ಮಾಡಲಾಗಿದೆ ಎಂದು ಹೇಳಿದರು.
    ಪಂಚಾಯಿತಿಯಲ್ಲಿ ವಾಸಸ್ಥಳ ದೃಢೀಕರಣ ಸೇರಿ ಇತರೇ ದೃಢೀಕರಣಕ್ಕೆ ಪಿಡಿಒ ಸಹಿ ಹಾಕಬೇಕೆಂಬ ನಿಯಮವಿದ್ದರೂ ಅವುಗಳಿಗೆ ಅಧ್ಯಕ್ಷರೇ ಸಹಿ ಹಾಕುತ್ತಿದ್ದಾರೆ. ಪಂಚಾಯಿತಿಯಲ್ಲಿ ಚುನಾಯಿತರಾದ ಮಹಿಳಾ ಸದಸ್ಯರ ಕುಟುಂಬದವರು ಯಾವುದೇ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ ಸದಸ್ಯೆಯ ಪತಿ ಪಂಚಾಯಿತಿಗೆ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲೇ 2ನೇ ಸ್ಥಾನಗಳಿಸಿ ಹೆಸರು ಮಾಡಿದ್ದ ತರುವೆ ಗ್ರಾಪಂ ಈಗ ಅಧ್ಯಕ್ಷ ಹಾಗೂ ಸದಸ್ಯೆಯ ದುರಾಡಳಿತದಿಂದ ಕೊನೆಯ ಸ್ಥಾನಕ್ಕೆ ಇಳಿಯುವಂತಾಗಿದೆ. ಹಾಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರುನೀಡಿ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಲಾಗುವುದು ಎಂದರು.
    ಸಂಜಯ್ ಕೊಟ್ಟಿಗೆಹಾರ, ಬಿ.ಎನ್.ವಿನಯ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts