More

    ಅಭಿವೃದ್ಧಿಗೆ ಕಳಶವಿಟ್ಟಂತಿದೆ ಕಳಸ ಗ್ರಾಪಂ

    
    
    ಅಭಿವೃದ್ಧಿಗೆ ಕಳಶವಿಟ್ಟಂತಿದೆ ಕಳಸ ಗ್ರಾಪಂ

    ಕಳಸ: ಪಂಚಾಯತ್​ರಾಜ್ ವ್ಯವಸ್ಥೆ ಬಲಗೊಂಡರೆ ದೇಶದ ಆಡಳಿತವೇ ಸದೃಢವಾಗುವುದು ಎಂಬುದಕ್ಕೆ ಕಳಸ ಗ್ರಾಪಂ ನಿದರ್ಶನ. ಒಂದಷ್ಟು ದಿನ ಜನರಿಂದ ಟೀಕೆಗೆ ಗುರಿಯಾಗಿದ್ದ ಗ್ರಾಪಂ ನಂತರದ ದಿನಗಳಲ್ಲಿ ಅಭಿವೃದ್ಧಿ ಹೊಂದಿ ಸದ್ಯ ಬೇರೆ ಜಿಲ್ಲೆಗಳ ಗ್ರಾಪಂ ಪ್ರತಿನಿಧಿಗಳು ಆಗಮಿಸಿ ಇಲ್ಲಿನ ಆಡಳಿತ ವೈಖರಿ ಅಧ್ಯಯನ ಮಾಡುವಷ್ಟರಮಟ್ಟಿಗೆ ಮಾದರಿಯಾಗಿ ಬೆಳೆದಿದೆ.

    ಗ್ರಾಪಂ ಬಗ್ಗೆ ಈ ಹಿಂದೆ ಹೊಗಳಿದವರಿಗಿಂತ ತೆಗಳಿದವರೇ ಹೆಚ್ಚು. ಸದಾ ಏನಾದರೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇತ್ತು. ಆದರೆ ಈ ಬಾರಿ ಗ್ರಾಪಂ ಮಾಡುತ್ತಿರುವ ಅಭಿವೃದ್ಧಿ ಮತ್ತು ಕಾರ್ಯವೈಖರಿಯಿಂದ ಜನರಲ್ಲಿ ಉತ್ತಮ ಭಾವನೆ ಬರುವಂತಾಗಿದೆ.

    29 ಸದಸ್ಯರಿರುವ ಗ್ರಾಪಂ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಗ್ರಾಪಂ ಎನ್ನುವ ಹೆಗ್ಗಳಿಕೆ ಪಡೆದಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ನೂತನ ಕಟ್ಟಡ ಜಿಲ್ಲೆಯಲ್ಲೇ ಮಾದರಿಯಾಗಿದೆ. ನೂತನ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಇದು ಗ್ರಾಪಂ ಕಟ್ಟಡಗಳಿಗೆ ಮಾದರಿ ಎಂದು ಶ್ಲಾಘಿಸಿದ್ದರು.

    ಕಟ್ಟಡ ಮಾತ್ರವಲ್ಲದೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ ಟಿಪ್ಪರ್ ಖರೀದಿಸಿ ಪ್ರತಿ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದ್ದು, ಇದಕ್ಕಾಗಿ ಪ್ರತಿ ಮನೆಗೆ ದಿನಕ್ಕೆ ಒಂದು ರೂ. ನಿಗದಿಪಡಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೂ ಶಿಲಾನ್ಯಾಸ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪ್ರತಿ ಮನೆಗೂ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಮಾಡಿಕೊಡಲು ಬಕೆಟ್​ಗಳನ್ನು ಖರೀದಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣವಾದ ನಂತರ ಅವುಗಳನ್ನು ಮನೆಗಳಿಗೆ ವಿತರಿಸಲಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಕಳಸವಾಗಬೇಕು ಎನ್ನುವ ದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ಮಾರಾಟ ಕಂಡುಬಂದಲ್ಲಿ ದಂಡ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ.

    ಇಲ್ಲಿಯ ಅಭಿವೃದ್ಧಿ ಕುರಿತು ಮಾಹಿತಿ ಪಡೆದ ರಾಜ್ಯದ ಇತರೆ ಗ್ರಾಪಂನವರು ಇಲ್ಲಿಗೆ ಭೇಟಿ ನೀಡಿ ಗ್ರಾಪಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಗ್ರಾಪಂ ಅನ್ನೂ ಇದೇ ರೀತಿ ಅಭಿವೃದ್ಧಿ ಮಾಡುತ್ತೇವೆಂದು ಹೇಳಿ ಹೋಗುತ್ತಿದ್ದಾರೆ. ಮಾ.3ರಂದು ದಾವಣಗೆರೆ ತಾಲೂಕು ಬೇತೂರು ಗ್ರಾಪಂ ತಂಡ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿ ವೀಕ್ಷಿಸಿ ಮಾಹಿತಿ ಪಡೆದಿದೆ.

    ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಲ್ಲಿ ಸಾಧಿಸಿದ್ದಾರೆ. ಈ ಮೂಲಕ ಅಭಿವೃದ್ಧಿಗೆ ಗ್ರಾಪಂ ಕಳಶವಿಟ್ಟಂತಾಗಿದೆ.

    ಸುಸಜ್ಜಿತ ಕಟ್ಟಡ: 81.25 ಲಕ್ಷ ರೂ. ವೆಚ್ಚದ ಗ್ರಾಪಂ ನೂತನ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಜಿಪಂನಿಂದ ಅನುಮೋದನೆ ಪಡೆಯಲಾಗಿತ್ತು. ವಿಶೇಷ ಅಂದರೆ ಸರ್ಕಾರದ ನೇರ ಅನುದಾನಕ್ಕೆ ಕಾಯದೆ ತನ್ನ ಆದಾಯದ 75 ಲಕ್ಷ ರೂ. ಮತ್ತು ಇತರೆ ಮೊತ್ತ ಬಳಸಿ ಕಟ್ಟಡ ನಿರ್ವಿುಸಲಾಯಿತು. ನೂತನ ಕಟ್ಟಡದಲ್ಲಿ ಗ್ರಾಮಸ್ಥರಿಗೆ ಕೂರಲು ಉತ್ತಮ ಆಸನಗಳು, ಜನಪ್ರತಿನಿಧಿಗಳು ಸಭೆ ನಡೆಸಲು ಆಧುನಿಕ ಪೀಠೋಪಕರಣಗಳನ್ನು ಹೊಂದಿರುವ ಸುಸಜ್ಜಿತ ಸಭಾಂಗಣ, ಅಧ್ಯಕ್ಷರು-ಉಪಾಧ್ಯಕ್ಷರು, ಪಿಡಿಒ, ಕಾರ್ಯದರ್ಶಿಗೆ ಪ್ರತ್ಯೇಕ ಕೊಠಡಿ,ದಾಖಲೆಗಳ ಕೊಠಡಿ, 3 ಶೌಚಗೃಹ, 15 ಸಿಸಿ ಕ್ಯಾಮರಾಗಳು, ವಿದ್ಯುತ್ ಕಡಿತವಾಗದಂತೆ ಜನರೇಟರ್ ವ್ಯವಸ್ಥೆ, ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.

    ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಿಬ್ಬಂದಿ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಪಡಿಸಿದ್ದೇವೆ. ಗ್ರಾಮಸ್ಥರು ಪ್ರತಿ ವರ್ಷದ ತೆರಿಗೆಯನ್ನು ಏಪ್ರಿಲ್​ನಲ್ಲಿ ಕಡ್ಡಾಯವಾಗಿ ಪಾವತಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಪಿಡಿಒ ಕವೀಶ್.

    ಎಲ್ಲರ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಜನಪ್ರತಿನಿಧಿಗಳಾದ ನಂತರ ಜನ ನಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸ ಮಾಡಬೇಕು ಎಂಬುದು ಅಧ್ಯಕ್ಷೆ ರತಿ ರವೀಂದ್ರ ಅವರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts