More

    ದೊಡ್ಡಬಳ್ಳಾಪುರ-ಯಲಹಂಕ ರಸ್ತೆ ಕಾಮಗಾರಿ ಅಪೂರ್ಣ, ಬಲಿಗಾಗಿ ಕಾಯುತ್ತಿವೆ ಗುಂಡಿಗಳು, ವಾಹನ ಸವಾರರಿಗೆ ಸುಂಕದ ಹೊರೆ

    ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ
    ಎರಡು ವರ್ಷಗಳಿಂದ ದೊಡ್ಡಬಳ್ಳಾಪುರ-ಯಲಹಂಕ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆಯೇ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಸುಂಕ ವಸೂಲಿ ಮಾಡುತ್ತಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

    2018ರಲ್ಲಿ ಮುಗಿಯದ ರಸ್ತೆ ಕಾಮಗಾರಿಗೆ ಸಮ್ಮಿಶ್ರ ಸರ್ಕಾರ ಕಂಟನಕುಂಟೆ ಬಳಿ ಟೋಲ್ ಸಂಗ್ರಹ ಮಾಡಲು ಅನುಮತಿ ನೀಡಿದ್ದರಿಂದ ದೊಡ್ಡಬಳ್ಳಾಪುರ, ಯಲಹಂಕ, ಗೌರಿಬಿದನೂರು ಭಾಗದ ಪ್ರಯಾಣಿಕರಿಗೆ ಪ್ರತಿ ದಿನ ಟೋಲ್ ವಿಧಿಸಿ ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ.
    ಟೋಲ್ ಪ್ರಾರಂಭವಾಗಿ 2 ವರ್ಷ ಕಳೆದರೂ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಕಾಮಗಾರಿ ತಡವಾಗಿದೆ ಎಂದು ಹೇಳಲಾಗಿದೆ. ಇದರಿಂದ ಟೋಲ್ ಮಾಲೀಕರು ಶ್ರೀಮಂತರಾದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

    ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ನಂತರ ಸುಂಕ ವಸೂಲಿಗೆ ಅನುವು ಮಾಡಿ ಕೊಟ್ಟರೆ ನಾಗರಿಕರು ನೆಮ್ಮದಿಯ ಪ್ರಯಾಣ ಮಾಡಬಹುದು.

    ಸವಾರರ ಜೀವಕ್ಕೆ ಕುತ್ತು: ಮುತ್ತೂರು, ಸಿದ್ದೆನಾಯಕನಹಳ್ಳಿ, ರೈಲ್ವೆ ಸ್ಟೇಷನ್ ಬಳಿ ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆಯ ಬದಿಯಲ್ಲಿ ಬೃಹತ್ ಗುಂಡಿಗಳಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡಬೇಕಾಗಿದೆ. ಈಗಾಗಲೇ ಇಲ್ಲಿ ಹಲವು ಅಪಘಾತಗಳು ಸಂಭವಿಸಿದ್ದರೂ ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಅಳವಡಿಸಿಲ್ಲ.

    ರಸ್ತೆ ದಾಟಲು ಹರಸಾಹಸ: ಕಂಟನಕುಂಟೆಯಿಂದ ಆರಂಭವಾಗುವ ಚತುಷ್ಪಥ ರಸ್ತೆಯು ಯಲಹಂಕದವರೆಗೆ ಇದ್ದು ಟಿ.ಬಿ.ವೃತ್ತ, ಡಿ.ಕ್ರಾಸ್ ಸರ್ಕಲ್, ರೈಲ್ವೆ ಸ್ಟೆಷನ್ ವೃತ್ತ, ಬಾಶೆಟ್ಟಿಹಳ್ಳಿ, ಬ್ಯಾಂಕ್ ಸರ್ಕಲ್, ಫ್ಯಾಕ್ಟರಿ ಸರ್ಕಲ್‌ಗಳಲ್ಲಿ ಸರ್ವೀಸ್ ರಸ್ತೆ, ಪಾದಚಾರಿಗಳ ರಸ್ತೆ ಇಲ್ಲ. ಎಲ್ಲಿಯೂ ಸಿಗ್ನಲ್‌ಗಳು ಇಲ್ಲ, ಕನಿಷ್ಠ ನಾಮಲಕ ಕೂಡ ಅಳವಡಿಸಿಲ್ಲ. ಅತಿ ದಟ್ಟಣೆ ವೃತ್ತಗಳಲ್ಲಿ ಸ್ಕೈವಾಕ್ ಇಲ್ಲದೆ ನಾಗರಿಕರು ರಸ್ತೆ ದಾಟಲು ಹರಸಾಹಸಪಡಬೇಕಾಗಿದೆ.

    ರಸ್ತೆ ಕಾಮಗಾರಿ ಮುಗಿಸದೆ ಟೋಲ್ ವಸೂಲಿ ಮಾಡುತ್ತಿದ್ದು, ಜನರ ದುಡ್ಡು ಖಾಸಗಿಯವರ ಜೇಬು ಸೇರಲು ಸರ್ಕಾರವೆ ನೇರ ಹೊಣೆ. ಇಂತಹ ಗುಂಡಿಗಳಿರುವ ರಸ್ತೆಗೆ ಟೋಲ್ ಏಕೆ ಕಟ್ಟಬೇಕು, ಅಪಘಾತಕ್ಕೆ ಯಾರು ಹೊಣೆ?
    ಜಿ.ಎನ್ ಪ್ರದೀಪ್, ದೊಡ್ಡಬಳ್ಳಾಪುರ

    ಕೆಲವು ಜಾಗ ಇತ್ಯರ್ಥವಾಗದೆ ಇರುವುದರಿಂದ ಕಾಮಗಾರಿ ಪೂರ್ಣಗೊಳಿಸಿಲ್ಲ. ತಕ್ಷಣವೇ ಅಗತ್ಯ ಸೂಚನಾ ಫಲಕ ಅಳವಡಿಸಿ ಎರಡು ಮೂರು ತಿಂಗಳಲ್ಲಿ ಟೋಲ್ ರಸ್ತೆಯ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
    ಗೋಪಾಲರಾವ್, ಕಾರ್ಯಪಾಲಕ ಅಭಿಯಂತ, ಕೆಆರ್‌ಡಿಸಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts