More

    Web Exclusive | ಇಂಗ್ಲೆಂಡ್​ಗೆ ಲಗ್ಗೆ ಇಟ್ಟ ಲಂಟಾನೆ: ಕಳೆ ಸಸ್ಯ ಲಂಟಾನಾ ಬಳಸಿ ಕಲಾಕೃತಿ ಸೃಷ್ಟಿ; ವಿದೇಶಕ್ಕೆ ಬುಡಕಟ್ಟು ಜನರ ಕರಕೌಶಲ

    | ರವಿತೇಜ್ ವಿ. ಛತ್ರ ಚಾಮರಾಜನಗರ

    ಕಾಡಿನ ಪಾಲಿಗೆ ಕಂಟಕವಾಗಿರುವ ಲಂಟಾನಾ (ಕಳೆಸಸ್ಯ) ಜಿಲ್ಲೆಯ ಆದಿವಾಸಿಗಳ ಕರಕುಶಲ ಕಲೆಯ ಮೂಲಕ ಆನೆ ರೂಪ ಪಡೆದು ಇಂಗ್ಲೆಂಡ್ ಮಾರುಕಟ್ಟೆಯ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಈಗಾಗಲೇ 100ಕ್ಕೂ ಹೆಚ್ಚು ಆನೆ ಕಲಾಕೃತಿಗಳು ಅಲ್ಲಿ ಮಾರಾಟವಾಗಿವೆ.

    ಯಳಂದೂರಿನ ಬಿಳಿಗಿರಿ ರಂಗನಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಬರುವ ಬೆಲವತ್ತ ಗ್ರಾಮದ ಆದಿವಾಸಿ ಕಾಲನಿಯ ಪಾಪಣ್ಣ ಮತ್ತು ತಂಡ ಲಂಟಾನಾದಿಂದ ಆನೆ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಇದನ್ನು ತಮಿಳುನಾಡಿನ ಸೋಲಾಸ್ ಸಂಸ್ಥೆ ಮೂಲಕ ಇಂಗ್ಲೆಂಡ್​ಗೆ ಮಾರಾಟ ಮಾಡಲಾಗುತ್ತಿದ್ದು, ಇವುಗಳೀಗ ಅಲ್ಲಿ ಪ್ರಸಿದ್ಧಿ ಪಡೆದಿವೆ.

    ತಮಿಳುನಾಡಿನ ಗೂಡಲೂರಿನಲ್ಲಿ ಸೋಲಾಸ್ ಸಂಸ್ಥೆ ಇದೆ. ಇದು ಕರಕುಶಲ ವಸ್ತುಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದೆ. ಸಂಸ್ಥೆಯ ಡಾ.ಥಾಸ್ ಎಂಬವರು ಆನೆ ಕಲಾಕೃತಿಗಳ ಬಗ್ಗೆ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡುತ್ತಿದ್ದು, ಲಂಟಾನಾದಿಂದ ತಯಾರಿಸಲಾದ ಆನೆಯನ್ನು ಇಂಗ್ಲೆಂಡ್​ಗೆ ಪರಿಚಯಿಸಿದರು. ಇಂಗ್ಲೆಂಡ್​ನಲ್ಲಿ ಲಂಟಾನಾ ಆನೆ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದು, ಈಗಾಗಲೇ 100ಕ್ಕೂ ಹೆಚ್ಚು ಆನೆ ಕಲಾಕೃತಿಗಳನ್ನು ಜನ ಖರೀದಿ ಮಾಡಿದ್ದಾರೆ.

    ಯೂರೋಪಿಯನ್ನರು ವಿಶ್ವದಾದ್ಯಂತ ವಸಾಹತು ಸ್ಥಾಪಿಸುವಾಗ ಬ್ರಿಟಿಷ್ ಮಹಿಳೆ ಮೂಲಕ ಲಂಟಾನಾ ಭಾರತ ಪ್ರವೇಶಿಸಿತು ಎನ್ನಲಾಗುತ್ತದೆ. ಅರಣ್ಯವನ್ನೇ ಸರ್ವನಾಶ ಮಾಡುವ ಹಂತ ತಲುಪಿದ ಲಂಟಾನಾವನ್ನು ಬುಡಕಟ್ಟು ಜನರು ಬಳಸಿಕೊಂಡು ಆನೆ ಕಲಾಕೃತಿಯನ್ನು ತಯಾರಿಸಿ ಇಂಗ್ಲೆಂಡ್ ಜನರಿಗೇ ಮಾರಾಟ ಮಾಡುತ್ತಿದ್ದಾರೆ.

    Web Exclusive | ಇಂಗ್ಲೆಂಡ್​ಗೆ ಲಗ್ಗೆ ಇಟ್ಟ ಲಂಟಾನೆ: ಕಳೆ ಸಸ್ಯ ಲಂಟಾನಾ ಬಳಸಿ ಕಲಾಕೃತಿ ಸೃಷ್ಟಿ; ವಿದೇಶಕ್ಕೆ ಬುಡಕಟ್ಟು ಜನರ ಕರಕೌಶಲ
    ಲಂಟಾನಾದಿಂದ ತಯಾರಾಗಿರುವ ಆನೆ ಕಲಾಕೃತಿ.

    ಲಂಟಾನಾ ಆನೆ ತಯಾರಿ ಹೇಗೆ?: ತಿಂಗಳಿಗೆ ಎರಡು ಬಾರಿ ಅರಣ್ಯಕ್ಕೆ ಹೋಗುವ ಬುಡಕಟ್ಟು ಜನರು ಲಂಟಾನಾ ಗಿಡವನ್ನು ಕತ್ತರಿಸಿ ಸಂಗ್ರಹಿಸುತ್ತಾರೆ. ಬಳಿಕ ಮನೆಯ ಬಳಿ ದೊಡ್ಡ ಕೊಳಾಯಿಯೊಳಗೆ ನೀರಿನಲ್ಲಿ ಲಂಟಾನಾ ಕಡ್ಡಿ ಮುಳುಗಿಸಿ, 5 ಗಂಟೆಗಳ ಕಾಲ ಬಿಸಿ ನೀರಿನಲ್ಲಿ ಬೇಯಿಸುತ್ತಾರೆ. ನಂತರ ಲಂಟಾನಾ ಸಿಪ್ಪೆಯನ್ನು ಬಿಡಿಸಿ ಹದ ಮಾಡಿಕೊಳ್ಳುತ್ತಾರೆ. ಇದರಿಂದ ಲಂಟಾನಾ ಯಾವ ರೀತಿ ಬೇಕಾದರೂ ಬಾಗುತ್ತದೆ. ಎಷ್ಟೇ ವರ್ಷಗಳು ಇಟ್ಟರೂ ಹಾಳಾಗುವುದಿಲ್ಲ.

    ಆನೆಯ ಉದ್ದ-ಅಗಲ ಅಳತೆಗೆ ಸರಿಯಾಗಿ ಕಲಾಕೃತಿಯ ಚೌಕಟ್ಟನ್ನು ಕಬ್ಬಿಣದಿಂದ ತಯಾರಿಸಿಕೊಳ್ಳಲಾಗುತ್ತದೆ. ಚೌಕಟ್ಟಿಘ ಹೊರಭಾಗದಲ್ಲಿ ಲಂಟಾನಾ ಬಳಸಿ ಅಚ್ಚುಕಟ್ಟಾಗಿ ಕಲಾಕೃತಿ ರೂಪಿಸಲಾಗುತ್ತದೆ. ಇದಕ್ಕೆ ವಾರ್ನಿಶ್ ಹೊರತುಪಡಿಸಿ ಯಾವುದೇ ರಾಸಾಯನಿಕ ಬಣ್ಣ ಸೇರಿಸುವುದಿಲ್ಲ. ಇದೇ ರೀತಿ ಪೀಠೋಪಕರಣ ತಯಾರಿಸಲಾಗುತ್ತದೆ.

    ಸುಮಾರು 20 ವರ್ಷಗಳಿಂದ ಲಂಟಾನಾದಲ್ಲಿ ಕಲಾಕೃತಿ ತಯಾರಿಸುತ್ತಿರುವ ಪಾಪಣ್ಣ, ಹತ್ತಾರು ಬುಡಕಟ್ಟು ಕುಟುಂಬದ ಜನರ ಪಾಲಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. 20-25 ಜನರ ಒಂದು ತಂಡವನ್ನು ಕಟ್ಟಿಕೊಂಡು ಮಂಚ, ಬೃಹತ್ ಗಾತ್ರದ ಆನೆ, ಸೋಫಾ ಸೆಟ್, ಚೇರ್, ಟೇಬಲ್ ಹೀಗೆ ವಿವಿಧ ಪೀಠೋಪಕರಣಗಳನ್ನು ತಯಾರಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.

    Web Exclusive | ಇಂಗ್ಲೆಂಡ್​ಗೆ ಲಗ್ಗೆ ಇಟ್ಟ ಲಂಟಾನೆ: ಕಳೆ ಸಸ್ಯ ಲಂಟಾನಾ ಬಳಸಿ ಕಲಾಕೃತಿ ಸೃಷ್ಟಿ; ವಿದೇಶಕ್ಕೆ ಬುಡಕಟ್ಟು ಜನರ ಕರಕೌಶಲ
    ಲಂಟಾನಾದಿಂದ ಸಿದ್ಧಪಡಿಸಿರುವ ಪೀಠೋಪಕರಣಗಳು.

    ಅಪಾಯಕಾರಿ ಸಸ್ಯ: ವರ್ಭಿನೇಶಿಯ ಪ್ರಭೇದಕ್ಕೆ ಸೇರಿದ ಲಂಟಾನಾ ಪೊದೆ ಸಸ್ಯ. ಪರಿಸರ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ ಗುರುತಿಸಿರುವ ಕಳೆ ಸಸ್ಯಗಳಲ್ಲಿ ಲಂಟಾನಾವೂ ಒಂದು. ಇದು ಭಾರತದ ಬಹುಪಾಲು ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಲಂಟಾನಾ ಬೆಳೆಯುವ ಜಾಗದಲ್ಲಿ ಹುಲ್ಲು, ಬಿದಿರಿನ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ ಸಸ್ಯಹಾರಿ ಪ್ರಾಣಿಗಳ ಆಹಾರಕ್ಕೂ ಧಕ್ಕೆ ಉಂಟಾಗುತ್ತದೆ.

    ಅರಣ್ಯಕ್ಕೆ ಮಾರಿ, ಜನರಿಗೆ ಉಪಕಾರಿ: ಅರಣ್ಯಕ್ಕೆ ಮಾರಿಯಾಗಿರುವ ಲಂಟಾನಾ ಬುಡಕಟ್ಟು ಜನರ ಪಾಲಿಗೆ ಆಸರೆಯಾಗಿದೆ. ಕೂಲಿ ಅರಸಿ ಹತ್ತಾರು ಕಿಲೋಮೀಟರ್ ದೂರ ಹೋಗುತ್ತಿದ್ದ ಬುಡಕಟ್ಟು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆತಿದೆ. ಸಣ್ಣ ಪ್ರಮಾಣದಲ್ಲಿರುವ ಪೀಠೋಪಕರಣ ತಯಾರಿಕಾ ಘಟಕವನ್ನು ವಿಸ್ತರಣೆ ಮಾಡಿದರೆ ನೂರಾರು ಜನರ ಉದ್ಯೋಗಕ್ಕೆ ಅವಕಾಶವಾಗುತ್ತದೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಘಟಕ ಸ್ಥಾಪನೆಯಾದರೆ ಪ್ರವಾಸೋದ್ಯಮದ ಜತೆಗೆ ಬುಡಕಟ್ಟು ಜನರ ಆರ್ಥಿಕ ಶ್ರೇಯೋಭಿವೃದ್ಧಿಯಾಗಲಿದೆ. ಇದಕ್ಕೆ ಸರ್ಕಾರದ ಅನುದಾನ ಬಹಳ ಮುಖ್ಯವಾಗಿದೆ.

    ಲಂಟಾನಾದಿಂದ ಎಲ್ಲ ರೀತಿಯ ಪೀಠೋಪಕರಣ ಮತ್ತು ಕಲಾಕೃತಿ ಮಾಡುತ್ತೇವೆ. ಇದರಿಂದ ನಮ್ಮ ಬದುಕು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೂ, ಸಾಧಾರಣವಾಗಿದೆ. ಸರ್ಕಾರದ ಸಹಕಾರ ಸಿಕ್ಕರೆ ನಮ್ಮ ಸಮಸ್ಯೆ ಬಗೆಹರಿದು ಬದುಕು ಹಸನಾಗುತ್ತದೆ.

    | ಪಾಪಣ್ಣ ಮುಖ್ಯಸ್ಥ, ಲಂಟಾನಾ ಕಲಾಕೃತಿ ತಯಾರಿಕ ಘಟಕ.

    ಆನೆಗಳ ಬಗ್ಗೆ ನಾನು ಸಂಶೋಧನೆ ಮಾಡುತ್ತಿದ್ದು, ಲಂಟಾನಾದಿಂದ ತಯಾರಿಸಿರುವ ಆನೆ ಕಾಲಕೃತಿಯನ್ನು ಇಂಗ್ಲೆಂಡ್ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ಪ್ರದರ್ಶನ ಮಾಡಿ, ಲಂಟಾನಾ, ಆನೆ ಮತ್ತು ಅರಣ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಕಲಾಕೃತಿ ಮಾರಾಟವಾಗಿ ಬಂದಂತಹ ಹಣವನ್ನು ಬುಡಕಟ್ಟು ಜನರ ಅನುಕೂಲಕ್ಕಾಗಿ ಬಳಸಲಾಗುತ್ತದೆ.

    | ಡಾ.ಥಾಸ್ ಸಂಶೋಧಕ, ಸೊಲಾಸ್ ಸಂಸ್ಥೆ. ಗೂಡಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts