More

    ಬಂದರುಗಳಿನ್ನು ‘ಲ್ಯಾಂಡ್‌ಲಾರ್ಡ್’ ಮಾದರಿ

    ವೇಣುವಿನೋದ್ ಕೆ.ಎಸ್.ಮಂಗಳೂರು
    ನವಮಂಗಳೂರು ಬಂದರು ಇನ್ನು ನಾಲ್ಕು ವರ್ಷಗಳಲ್ಲಿ ಸಾಂಪ್ರದಾಯಿಕ ‘ಸರ್ವಿಸ್ ಪೋರ್ಟ್’ ಬದಲಾಗಿ ಖಾಸಗಿ ಸಹಭಾಗಿತ್ವದ ‘ಲ್ಯಾಂಡ್‌ಲಾರ್ಡ್ ಮಾದರಿ’ ಬಂದರು ಆಗಿ ಪರಿವರ್ತನೆಗೊಳ್ಳಲಿದೆ.

    ಈ ಬದಲಾವಣೆ ಮಂಗಳೂರಿಗಷ್ಟೇ ಸೀಮಿತವಲ್ಲ, ಎಲ್ಲಾ 12 ಬೃಹತ್ ಬಂದರುಗಳ ಆಡಳಿತವನ್ನೂ ‘ಸರ್ವಿಸ್ ಪೋರ್ಟ್’ ಮಾದರಿಯಿಂದ ‘ಲ್ಯಾಂಡ್‌ಲಾರ್ಡ್ ಮಾದರಿ’ಯಲ್ಲಿ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಖಾಸಗಿ ಪಾಲುದಾರಿಕೆಯೇ ಪ್ರಮುಖ. ಕೇಂದ್ರದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ಸೂಚ್ಯವಾಗಿ ಪ್ರಕಟಿಸಿದ್ದಾರೆ.

    ಬೃಹತ್ ಬಂದರುಗಳಲ್ಲಿ 2000 ಕೋಟಿ ರೂ. ಮೊತ್ತದ 7 ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ತಿಳಿಸಲಾಗಿದೆ. ಬಂದರುಗಳು ಇನ್ನು ಮುಂದೆ ಅವರ ನಿರ್ವಹಣಾ ಸೇವೆಯಿಂದ ದೂರವಾಗಿ, ಹೊಸ ಮಾದರಿಯಡಿ ಖಾಸಗಿ ಪಾಲುದಾರರು ನಿರ್ವಹಣೆ ಮಾಡುವ ವ್ಯವಸ್ಥೆ ಬರಲಿದೆ ಎಂಬ ಅಂಶವನ್ನು ನಿರ್ಮಲಾ ತಿಳಿಸಿದ್ದರು.

    ಏನಿದು ಲ್ಯಾಂಡ್‌ಲಾರ್ಡ್ ಮಾದರಿ?: ಸದ್ಯ ಎಲ್ಲಾ ಬಂದರುಗಳಲ್ಲೂ ಬಂದರು ಚಟುವಟಿಕೆ, ನಿರ್ವಹಣೆ, ಹಡಗುಗಳ ಮೇಲುಸ್ತುವಾರಿಯನ್ನು ಪೋರ್ಟ್ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗುತ್ತಿಲ್ಲ ಎನ್ನುವ ಆಕ್ಷೇಪ ಸರ್ಕಾರದ್ದು. ಇದರ ಬದಲು ಜಾಗತಿಕವಾಗಿ ಹಲವು ದೇಶಗಳಲ್ಲಿರುವ ಲ್ಯಾಂಡ್‌ಲಾರ್ಡ್ ಮಾದರಿ ಬಳಸಿಕೊಳ್ಳುವುದು ಈಗಿನ ಯೋಜನೆ. ಇದರಂತೆ ಬಂದರಿನ ಮಾಲೀಕತ್ವ ಸರ್ಕಾರದ್ದಾಗಿರುತ್ತದೆ, ಆದರೆ ಅದರಲ್ಲಿ ವಿವಿಧ ಸೇವೆಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ. ಬಂದರು ಮಂಡಳಿಗೆ ಆದಾಯದ ಭಾಗವನ್ನು ನೀಡಬೇಕಾಗುತ್ತದೆ. ಖಾಸಗಿಯವರು ಕಂಟೈನರ್,ಹಡಗು, ಟರ್ಮಿನಲ್ ಮತ್ತು ಗೋದಾಮುಗಳ ನಿರ್ವಹಣೆ ಇತ್ಯಾದಿ ನೋಡಿಕೊಳ್ಳುತ್ತಾರೆ. ಕೈಗಾರಿಕೆಗಳಿಗೆ ಜಾಗ ಕೂಡಾ ನೀಡಬಹುದು. ಇಲ್ಲಿ ಯಂತ್ರೋಪಕರಣ, ಕ್ರೇನ್ ಇತ್ಯಾದಿಗಳನ್ನು ಖಾಸಗಿಯವರೇ ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಹಳೆಯ ಸರ್ವಿಸ್ ಪೋರ್ಟ್ ಮಾದರಿ ಈಗಿನ ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಒಗ್ಗುವುದಿಲ್ಲ, ಮಾರ್ಕೆಟಿಂಗ್‌ನಲ್ಲಿ ಹಿಂದೆ ಬೀಳುತ್ತಿದೆ ಎಂಬ ಅಪಸ್ವರ ಕೇಳಿಬಂದಿರುವುದೇ ಸರ್ಕಾರದ ಈ ಹೆಜ್ಜೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ಈಗಾಗಲೇ ಹೆಜ್ಜೆ ಇಟ್ಟಾಗಿದೆ: ಎನ್‌ಎಂಪಿಟಿ ವ್ಯಾಪ್ತಿಯಲ್ಲಿ ಖಾಸಗಿ ನಿರ್ವಹಣೆ ಮಾದರಿ ಈ ಮೊದಲೇ ಶುರುವಾಗಿದೆ. ಕೆಲ ವರ್ಷಗಳ ಹಿಂದೆಯೇ ಬರ್ತ್ ನಂ.15ನ್ನು ಕಲ್ಲಿದ್ದಲು ನಿರ್ವಹಣೆಗೆ ಯುಪಿಸಿಎಲ್‌ಗೆ ನೀಡಲಾಗಿದ್ದು, ಪ್ರಸ್ತುತ ಅದಾನಿ ಸಮೂಹದವರು ನಿರ್ವಹಿಸುತ್ತಿದ್ದಾರೆ. ಬರ್ತ್ ನಂ.16 ಹಾಗೂ 14ನ್ನು ಜೆಎಸ್‌ಡಬ್ಲುೃ ನಿರ್ವಹಿಸುತ್ತಿವೆ. ಇದರಲ್ಲಿ ಕಂಟೈನರ್, ಕಲ್ಲಿದ್ದಲು, ಸಿಮೆಂಟ್ ಸೇರಿದೆ.

    2024 ಟಾರ್ಗೆಟ್: ಲಭ್ಯ ಮಾಹಿತಿ ಪ್ರಕಾರ, ಈಗಾಗಲೇ ಎನ್‌ಎಂಪಿಟಿ ಆಡಳಿತಕ್ಕೂ ಸರ್ಕಾರದಿಂದ ಸೂಚನೆ ಬಂದಿದ್ದು 2024ರೊಳಗೆ ಹೊಸ ಮಾದರಿಗೆ ಪರಿವರ್ತನೆಗೊಳ್ಳುವಂತೆ ತಿಳಿಸಲಾಗಿದೆ. ಮಾಲೀಕತ್ವ ಉಳಿಸಿಕೊಂಡು ಉಳಿದ ಎಲ್ಲಾ ಸೇವೆಗಳನ್ನೂ ಖಾಸಗಿಯವರಿಗೆ ಹೊರಗುತ್ತಿಗೆ ನೀಡಬೇಕಾಗುತ್ತದೆ. ಅಲ್ಲಿಗೆ ಆಡಳಿತ ಮಂಡಳಿ ಕೇವಲ ಸೇವೆಗಳ ಹೊರಗುತ್ತಿಗೆ ನೀಡುವ ಯಜಮಾನನಾಗಿ, ಲಾಭಾಂಶ ಸಂಗ್ರಹಿಸುವ ಪಾತ್ರಕ್ಕೆ ಸೀಮಿತವಾಗಲಿದೆ.

    ಸಿಬ್ಬಂದಿ ಗತಿಯೇನು?: ಪ್ರಸ್ತುತ ನವಮಂಗಳೂರು ಬಂದರು ಮಂಡಳಿಯಲ್ಲಿ 400ರಷ್ಟು ನೌಕರರಿದ್ದಾರೆ. ಇದರಲ್ಲಿ ಎ, ಬಿ, ಸಿ ಮತ್ತು ಡಿ ವರ್ಗ ಸೇರಿದೆ. ಡಿ ವರ್ಗದವರ ಸಂಖ್ಯೆ 70ರಷ್ಟಿದೆ. ಬಂದರು ಮಂಡಳಿಯ ಆಯಕಟ್ಟಿನ ಸಿಬ್ಬಂದಿಯನ್ನು ಉಳಿಸಿಕೊಂಡು ಉಳಿದವರನ್ನು ಸ್ವಯಂನಿವೃತ್ತಿಗೆ ಸೂಚಿಸುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts