More

    ಭೂ ಪರಿವರ್ತನೆಗೆ 11ಇ ಕಡ್ಡಾಯವಲ್ಲ: ಹೈಕೋರ್ಟ್ ತೀರ್ಪು ನೀಡಿದರೂ ದ.ಕ. ಜಿಲ್ಲೆಯಲ್ಲಿ ಜಾರಿಯಾಗದ ಆದೇಶ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಭೂಪರಿವರ್ತನೆ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಲಿಷ್ಟಕರವಾಗುವುದು 11ಇ ನಕ್ಷೆ. ಭೂಪರಿವರ್ತನಾ ಅರ್ಜಿಗಳೊಂದಿಗೆ 11ಇ ನಕ್ಷೆ ಕಡ್ಡಾಯ ಎಂಬ ನಿಯಮವನ್ನು ದ.ಕ. ಜಿಲ್ಲೆಗೆ ಸೀಮಿತಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿ ಆರು ತಿಂಗಳು ಕಳೆದರೂ, ಅದು ಅನುಷ್ಠಾನಕ್ಕೆ ಬಂದಿಲ್ಲ.
    ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ ಮಾಡಬೇಕಾದರೆ ಸರ್ವೇ ಇಲಾಖೆಯಿಂದ 11ಇ ನಕ್ಷೆ ಹಾಜರುಪಡಿಸಬೇಕೆಂಬ ಕಡ್ಡಾಯ ನಿಯಮ ಕಾನೂನು ಸಮ್ಮತವಲ್ಲ ಎಂದು ಹೈಕೋರ್ಟ್ ಹೇಳಿದೆ.

    ವ್ಯಕ್ತಿಯೊಬ್ಬರು ಜಮೀನು ಖರೀದಿ, ಮಾರಾಟದಲ್ಲಿ ತೊಡಗುವಾಗ 11ಇ ನಕ್ಷೆ ಬೇಕು. ನಗರ ಪ್ರದೇಶದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇತರ ಪಟ್ಟಣಗಳಲ್ಲಿ ಆಯಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಗಳಿಂದ 11ಇ ನಕ್ಷೆ ಮಾಡಿಸಬೇಕಾಗುತ್ತದೆ. ಇದಕ್ಕೆ ಬೇಕಾಗುವ ಸರ್ವೇ ಮಾಡಲು ಸರ್ವೇಯರ್‌ಗಳನ್ನು ನಾಗರಿಕರು ಖರ್ಚು ಮಾಡಿ ಕರೆ ತರಬೇಕಾಗುತ್ತದೆ. ಇಲ್ಲಿ ವಿನಾಃ ಕಾರಣ ವಿಳಂಬ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತದೆ ಎನ್ನುವ ದೂರು ಕೇಳಿಬರುತ್ತಿತ್ತು.

    ಭೂಪರಿವರ್ತನಾ ಅರ್ಜಿಯನ್ನು ಸಲ್ಲಿಸುವಾಗ ದಾಖಲೆಗಳಲ್ಲಿ ನಕ್ಷೆ ಇರುತ್ತದೆ. ಹಾಗಿರುವಾಗ ನೋಂದಣಿ ಮಾಡಿಸುವುದಕ್ಕೆ ಮತ್ತೊಂದು ನಕ್ಷೆಯ(11 ಇ) ಅಗತ್ಯವಿರುವುದಿಲ್ಲ. ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರ ಈ 11ಇ ನಕ್ಷೆ ಕಾನೂನು ಜಾರಿಗೊಳಿಸಿದ್ದು, ಜನಸಾಮಾನ್ಯರಿಗೆ ಹೊರೆ ಹಾಗೂ ಕೆಲಸದ ವಿಳಂಬಕ್ಕೆ ಕಾರಣವಾಗಿತ್ತು. ಜಿಲ್ಲೆಯಿಂದ ಇದನ್ನು ವಿರೋಧಿಸಿ ಕೆಲವು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದು ಹೈಕೋರ್ಟ್ ಅದನ್ನು ರದ್ದುಗೊಳಿಸಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್ ತಿಳಿಸಿದ್ದಾರೆ.

    ಈ ಮೊದಲು ಭೂಪರಿವರ್ತನೆಗೆ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಅನುಸರಿಸುತ್ತಿದ್ದ ಕಠಿಣ ನಿಯಮ ಸಡಿಲಗೊಂಡು ಸಾರ್ವಜನಿಕರಿಗೆ ಭೂಪರಿವರ್ತನೆಗೆ ಅನುಕೂಲವಾಗಲಿದೆ. ನ್ಯಾಯಾಲಯದ ಆದೇಶವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಭೂಮಾಪನಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಭೂಮಾಪನಾ ಇಲಾಖೆ ಉಪನಿರ್ದೇಶಕರಿಗೆ ನೀಡಿದ್ದರೂ, ಎಲ್ಲಿಯೂ ಆದೇಶವನ್ನು ಪಾಲಿಸದೆ ಹಿಂದಿನಂತೆ ಕಠಿಣ ನಿಯಮಗಳನ್ನು ಇಲಾಖೆ ಮುಂದುವರಿಸಿದೆ ಎಂದು ಕಾಮತ್ ತಿಳಿದ್ದಾರೆ.

    ಜಿಲ್ಲಾಡಳಿತಕ್ಕೆ ತಲೆನೋವು: ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ದ.ಕ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. 11ಇ ನಕ್ಷೆಯು ದ.ಕ ಜಿಲ್ಲೆಗೆ ಸೀಮಿತವಲ್ಲ, ರಾಜ್ಯಾದ್ಯಂತ ಜಾರಿಯಲ್ಲಿದೆ. ಹಾಗಿರುವಾಗ ಹೈಕೋರ್ಟ್ ದ.ಕ ಜಿಲ್ಲೆಗೆ ಮಾತ್ರವೇ ವಿನಾಯಿತಿ ನೀಡಿದೆ. ಆದರೆ ಅದಿಲ್ಲದೆ ಪೋರ್ಟಲ್‌ನಲ್ಲಿ ಪ್ರಕ್ರಿಯೆ ಮುಂದುವರಿಸಲು ಸಾಧ್ಯ ಆಗುವುದಿಲ್ಲ. ಅಲ್ಲದೆ 11ಇ ನಕ್ಷೆ ಇಲ್ಲದಿದ್ದರೆ ಜಾಗದ ಸರಿಯಾದ ಅಳತೆ ಸಿಗದೆ ಮುಂದೆ ಕಾನೂನಾತ್ಮಕ ಸಮಸ್ಯೆಗೂ ಕಾರಣವಾಗಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ. ಆದರೆ ಅದರ ಬಗ್ಗೆ ಯಾವುದೇ ತೀರ್ಮಾನವೂ ಆಗಿಲ್ಲ.
    ಜಿಲ್ಲಾಡಳಿತ ತಾಂತ್ರಿಕವಾಗಿ ಇಕ್ಕಟ್ಟಿಗೆ ಸಿಲುಕಿರುವುದರಿಂದ ಸದ್ಯ ಹೈಕೋರ್ಟಿನ ಆದೇಶವನ್ನು ಪಾಲಿಸದೆ, ಹಿಂದಿನಂತೆಯೇ 11ಇ ನಕ್ಷೆಯೊಂದಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ.

    ಭೂಪರಿವರ್ತನೆಗೆ 11ಇ ನಕ್ಷೆ ಕಡ್ಡಾಯವಲ್ಲ ಎಂಬ ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿಲ್ಲ. ಅದು ಸಿಕ್ಕಿದ ಕೂಡಲೆ ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ, ಮುಂದೆ ಏನು ಮಾಡಬಹುದು ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
    – ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ, ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts