More

    ಕೈಗಾರಿಕೆಗಳ ಭೂಸ್ವಾಧೀನ ಸರಾಗ: ಕೆಐಎಡಿಬಿಗೆ ಕಾನೂನು ಬಲ, ಕಾಯ್ದೆಗೆ ಶೀಘ್ರ ತಿದ್ದುಪಡಿ

    ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಮತ್ತು ಕ್ರಮಬದ್ಧವಾದ ಅಭಿವೃದ್ಧಿ ಉತ್ತೇಜಿಸಲು ನೆರವಾಗುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ. ಹೊಸ ಭೂ ಸ್ವಾಧೀನ ಕಾಯ್ದೆ- 2013ರ ಅನ್ವಯ ಭೂ ಮಾಲಿಕರಿಗೆ ಸೂಕ್ತ ಭೂ ಪರಿಹಾರ ನೀಡಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ, 1966 ಮತ್ತು ನ್ಯಾಯಯುತ ಪರಿಹಾರ ಹಕ್ಕು, ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಕಾಯ್ದೆ 2013ರ ನಡುವೆ ಸಾಮ್ಯತೆ ತರುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಕಾಯ್ದೆ 1966, ಅಧ್ಯಾಯ 7ರ ಕಲಂ 30ಕ್ಕೆ ತಿದ್ದುಪಡಿ ಮಾಡಲು ಸಂಪುಟ ಸಭೆ ನಿರ್ಣಯಿಸಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಹೊಸ ಭೂ ಸ್ವಾಧೀನ ಕಾಯ್ದೆ ಯನ್ವಯ ಭೂ ಮಾಲಿಕರಿಗೆ ಪರಿಹಾರ ಪಾವತಿಸಿದಲ್ಲಿ ಯಾವುದೇ ವ್ಯಾಜ್ಯಗಳಿರುವುದಿಲ್ಲ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ‘ತ್ವರಿತ’ವಾಗಿ ಪೂರ್ಣಗೊಳಿಸಲು ಅನುವಾಗುತ್ತದೆ ಎಂದು ಕೈಗಾರಿಕೆ ಇಲಾಖೆ ಹೇಳಿಕೊಂಡಿದೆ.

    ‘ತ್ವರಿತ’ ಎಂಬುದನ್ನು ‘30 ದಿನ’ ಎಂದು ಸ್ಪಷ್ಟಪಡಿಸಲಾಗಿದ್ದು, ಈ ಮೂಲಕ ತಿಂಗಳೊಳಗೆ ಪರಿಹಾರ ವಿತರಿಸಿ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸುವ ಗುರಿ ನಿಗದಿಪಡಿಸಲಾಗಿದೆ. ಕಾಲಮಿತಿಯಲ್ಲಿ ಪ್ರಕ್ರಿಯೆ ಮುಗಿಸುವುದರಿಂದ ಸರ್ಕಾರದ ಮೇಲಾಗುವ ವ್ಯಾಜ್ಯದ ಒತ್ತಡ, ಯೋಜನೆ ಅಥವಾ ಕಾಮಗಾರಿಯಿಂದ ಆಗುವ ವಿಳಂಬ ವೆಚ್ಚ ಹೆಚ್ಚದಂತೆ ಚೌಕಟ್ಟು ವಿಧಿಸಲು ಅನುಕೂಲವಾಗಲಿದೆ.

    ಕೆಐಎಡಿಬಿ ಕಾಯ್ದೆಯ ಮುಖ್ಯ ಗುಣಲಕ್ಷಣವು ಪರಿಹಾರ ಪಡೆಯುವ ವ್ಯಕ್ತಿ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಳ್ಳುವುದು ಮತ್ತು ಪರಿಹಾರ ಪಾವತಿಸುವುದಾಗಿರುತ್ತದೆ. ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂ ದರ ನಿರ್ಧರಣಾ ಸಲಹಾ ಸಮಿತಿ ರಚಿಸಲಾಗಿದೆ. ಒಪ್ಪಂದದ ಮೂಲಕ ಪರಿಹಾರ ಪಾವತಿಸಿದ ನಂತರ ಭೂ ಮಾಲಿಕರು ಪರಿಹಾರದ ಹೆಚ್ಚಳಕ್ಕಾಗಿ ನ್ಯಾಯಾಲಯಗಳ ಮೊರೆಹೋಗುವುದನ್ನು ನಿಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳ ವಾದವಾಗಿದೆ.

    ಕಾನೂನು ತಿದ್ದುಪಡಿ: ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ನ್ನು ಮುಂದಿನ ಆರ್ಥಿಕ ಸಾಲಿಗೆ ಸೀಮಿತವಾಗಿ ತಿದ್ದುಪಡಿ ಮಾಡಲು ಸರ್ಕಾರ ಉದ್ದೇಶಿಸಿದ್ದು, ಶಾಸನ ಸಭೆಯಲ್ಲಿ ಮಂಡನೆ ಮಾಡಲು ಸಂಪುಟ ಸಭೆಯಲ್ಲಿ ಅನುಮೋದನೆಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜಸ್ವ ಕೊರತೆಯು 14,699 ಕೋಟಿ ರೂ. ಆಗಬಹುದೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆಯು 61,564 ಕೋಟಿ ರೂ.ಗಳಾಗುತ್ತದೆಂದು ನಿರೀಕ್ಷಿಸಲಾಗಿದೆ. ಅದು ರಾಜ್ಯದ ಆಂತರಿಕ ಉತ್ಪನ್ನದ ಶೇ.3.26ರಷ್ಟಾಗಿದ್ದು, 2022-23ರ ಕೊನೆಯಲ್ಲಿ 5,18,366 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.27.49ರಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ಸೂಕ್ತ ತಿದ್ದುಪಡಿ ತರಲಾಗುತ್ತಿದೆ.

    ಅನಿವಾರ್ಯವೇನಿತ್ತು?

    • ವ್ಯಾಜ್ಯಗಳಾಗುವುದರಿಂದ ಯೋಜನೆಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳದೇ ಸರ್ಕಾರದ ಉದ್ದೇಶ ಈಡೇರುವುದು ಮುಂದೂಡಲ್ಪಡುತ್ತದೆ
    • ಕಾಮಗಾರಿ ವಿಳಂಬದಿಂದ ವೆಚ್ಚ ಹೆಚ್ಚಾಗಿ, ಸರ್ಕಾರದ ಬೊಕ್ಕಸಕ್ಕೆ ಹೊರೆ ಬೀಳುತ್ತದೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ಕಷ್ಟವಾಗುತ್ತದೆ
    • ಪರಿಹಾರದ ವಿಚಾರದಲ್ಲಿ ವ್ಯಾಜ್ಯ ಎದುರಿಸುತ್ತಾ ಹೋದರೆ ಸರ್ಕಾರಕ್ಕೆ ಸಮಯವೂ ವ್ಯರ್ಥ, ಕಿರಿಕಿರಿ ಹೆಚ್ಚು. ಸ್ಥಳೀಯ ಆಡಳಿತದ ಮೇಲೆ ಒತ್ತಡ

    ಅನುಕೂಲವೇನು?

    • ರೈತರಿಗೆ ಹೆಚ್ಚಿನ ಪರಿಹಾರ ಸಿಗುತ್ತದೆ
    • ಕಾಲಮಿತಿಯಲ್ಲಿ ಪರಿಹಾರ ಲಭ್ಯ
    • ನ್ಯಾಯಾಲಯಕ್ಕೆ ಹೋದರೂ ಲಾಭವಾಗುವುದಿಲ್ಲ

    ಕುಸುಮ್​ಬಿಗೆ ಅನುಮೋದನೆ

    ಬೆಂಗಳೂರು: ರಾಜ್ಯದಲ್ಲಿ ಜಾಲಮುಕ್ತ ಸೌರ ಪಂಪ್​ಸೆಟ್ ಯೋಜನೆ ಜಾರಿಗೊಳಿಸುವುದಕ್ಕಾಗಿ ‘ಪಿಎಂ ಕುಸುಮ್​ಬಿ’ ಸೇವೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನ್ ಹೆಸರಿನ ಕೇಂದ್ರ ಪುರಸ್ಕೃತ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಲಭಿಸಿದ್ದು, ರಾಜ್ಯದಲ್ಲಿ ಹತ್ತು ಸಾವಿರ ರೈತ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ.

    ರೈತರ ಹೊಲದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಅಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಪಂಪ್​ಸೆಟ್ ಗಳಿಗೆ ಬಳಸಬೇಕಾಗುತ್ತದೆ. ಹೀಗಾಗಿ ಇದಕ್ಕೆ ಯಾವುದೇ ವಿದ್ಯುತ್ ಜಾಲದಿಂದ ಸಂಪರ್ಕ ಪಡೆಯಬೇಕಾದ ಅಗತ್ಯ ಇರುವುದಿಲ್ಲ. ಒಟ್ಟು 307.23 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ 106.97 ಕೋಟಿ ರೂ. ಭರಿಸಲಿದೆ. ಉಳಿದ ಹಣವನ್ನು ಕೇಂದ್ರ ನೀಡಲಿದೆ. ಈ ಯೋಜನೆ ಹೊಸ ಪಂಪ್​ಸೆಟ್​ಗಷ್ಟೇ ಅನ್ವಯವಾಗುತ್ತದೆ. 3 ಎಚ್​ಪಿ ಹೊಂದಿರುವ 250, 5 ಎಚ್​ಪಿ ಹೊಂದಿರುವ 750 ಹಾಗೂ 7.5 ಎಚ್​ಪಿ ಪಂಪ್ ಸೆಟ್ ಹೊಂದಿರುವ 9000 ರೈತರಿಗೆ ಈ ಸೌಲಭ್ಯ ನೀಡಲಾಗುತ್ತದೆ. ಫಲಾನುಭವಿ ರೈತರನ್ನು ಕ್ರೆಡೆಲ್ ನಿಂದ ಆನ್​ಲೈನ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಯೋಜನೆಯ ಶೇ.30 ರಾಜ್ಯ ಸರ್ಕಾರ, ಶೇ.30 ಕೇಂದ್ರ ಸರಕಾರ ಹಾಗೂ ಶೇ.40 ರೈತರು ಬ್ಯಾಂಕ್ ಸಾಲದ ಮೂಲಕ ಭರಿಸಬೇಕಾಗುತ್ತದೆ.

    ಇದ್ದಕ್ಕಿದ್ದಂತೆ ಹೆಚ್ಚಾಯ್ತು ಕೋವಿಡ್​ ಕೇಸ್​; ಚೀನಾದಲ್ಲಿಂದು 2 ವರ್ಷದಲ್ಲೇ ಅತ್ಯಧಿಕ ದೈನಂದಿನ ಪ್ರಕರಣ!

    ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts