More

    ಸ್ಥಳೀಯರಿಗೆ ಉದ್ಯೋಗ ನೀಡಿ: ಶಾಸಕ ಲಾಲಾಜಿ ಮೆಂಡನ್

    ಉಡುಪಿ: ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ಕಾನೂನು ಇದ್ದರೂ ನಂದಿಕೂರು, ಬೆಳಪು ಸಹಿತ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಹಲವು ಕೈಗಾರಿಕಾ ಸಂಸ್ಥೆಗಳು ನಿಯಮ ಉಲ್ಲಂಘಿಸುತ್ತಿವೆ. ಭೂಮಿ ಕಳೆದುಕೊಂಡವರು ಹಾಗೂ ಸ್ಥಳೀಯ ಆಕಾಂಕ್ಷಿಗಳಿಗೆ ಉದ್ಯೋಗ ನೀಡಬೇಕು. ಎಷ್ಟು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಕಾಪು ಶಾಸಕ ಲಾಲಾಜಿ ಮೆಂಡನ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಉಡುಪಿ ತಾಲೂಕು ಮಟ್ಟದ ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಪ್ರಾಕೃತಿಕ ವಿಕೋಪ ಸಂದರ್ಭ ಪರಿಸ್ಥಿತಿ ನಿಭಾಯಿಸಲು ಜಿಲ್ಲೆಗೆ ಉತ್ತಮ ಟಾಸ್ಕ್‌ಫೋರ್ಸ್ ಅಗತ್ಯವಿದೆ. ಕರೊನಾದಿಂದ ಸರ್ಕಾರಕ್ಕೆ ಆದಾಯ ಕೊರತೆ ಉಂಟಾಗಿದ್ದು, ಇಲಾಖೆಗಳು ಸಂಪನ್ಮೂಲವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಎಂದು ಮೆಂಡನ್ ತಿಳಿಸಿದರು.

    ಅಲೆವೂರಿನಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಬಗ್ಗೆ ಶೀಘ್ರದಲ್ಲಿಯೇ ವರದಿ ಸಿದ್ಧಪಡಿಸಿ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

    ಬಚ್ಚಲುಗುಂಡಿಗೆ 14 ಸಾವಿರ ರೂ.: ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ ಪೌಷ್ಟಿಕ ತೋಟ ನಿರ್ಮಾಣ ಮಾಡಬೇಕು. ಇದಕ್ಕೆ ಪಂಚಾಯಿತಿ ನೆರವನ್ನು ಪಡೆದುಕೊಳ್ಳಬಹುದು. ಯೋಜನೆಯ ಮೂಲಕ ಬಚ್ಚಲುಗುಂಡಿ ನಿರ್ಮಾಣಕ್ಕೆ 1 ಕುಟುಂಬಕ್ಕೆ 14 ಸಾವಿರ ರೂ. ನೀಡಲಾಗುತ್ತಿದೆ. ವಸ್ತುಗಳಿಗಾಗಿ 8,300 ರೂ., 5,700 ರೂ. ಕೂಲಿ ಸಿಗುತ್ತಿದ್ದು, ಗ್ರಾಪಂಗಳು ನಿಗದಿತ ಗುರಿ ಸಾಧಿಸಬೇಕು ಎಂದರು.

    ಬಾಲ್ಯವಿವಾಹ ಕಾನೂನು ತೊಡಕು: ಅನ್ಯ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚು ವರದಿಯಾಗುತ್ತಿದೆ. ಇದರಿಂದ ಅಪ್ರಾಪ್ತರು ಪೋಕ್ಸೊ ಕಾಯ್ದೆ ಸಹಿತ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ತಹಸೀಲ್ದಾರ್ ನೇತೃತ್ವದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಹೇಳಿದರು.
    ತಾ.ಪಂ.ಅಧ್ಯಕ್ಷೆ ಸಂಧ್ಯಾ ಕಾಮತ್, ಉಪಾಧ್ಯಕ್ಷ ಶರತ್ ಬೈಲಕೆರೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

    2.5 ಕೋಟಿ ರೂ. ಪರಿಹಾರ ವಿತರಣೆ
    ಉಡುಪಿ ತಾಲೂಕಿನಲ್ಲಿ ಈ ಬಾರಿ ಉಂಟಾದ ನೆರೆಗೆ ಒಟ್ಟು 344 ಮನೆಗಳಿಗೆ ಹಾನಿಯಾಗಿದೆ. 79 ಮನೆಗೆ ಸಂಪೂರ್ಣ, 130 ಮನೆಗಳು ಭಾಗಶಃ, 135 ಮನೆಗಳಿಗೆ ಅಲ್ಪಪ್ರಮಾಣ ಹಾನಿಯಾಗಿದೆ. ಈಗಾಗಲೇ 2.5 ಕೋಟಿ ರೂ. ಪರಿಹಾರ ನೀಡಲಾಗಿದೆ. ಆರ್‌ಟಿಸಿ ಸಮಸ್ಯೆ ಹಾಗೂ ಅಸಮರ್ಪಕ ದಾಖಲೆಯಿಂದ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts