More

    ರಾಜಸ್ಥಾನ ಚುನಾವಣೆ| ಜೈಪುರದ ಗಣಪತಿ ಪ್ಲಾಜಾ ಮೇಲೆ ಐಟಿ ದಾಳಿ; ಕೋಟ್ಯಂತರ ರೂಪಾಯಿ ಹಣ ವಶ

    ಜೈಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ಮಧ್ಯೆ ಸರ್ಕಾರಿ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ ರಾಜ್ಯದಲ್ಲಿ ಬೇಟೆಯಾಡುವುದನ್ನು ಚುರುಕುಗೊಳಿಸಿದೆ.

    ಇದರ ನಡುವೆ ಜೈಪುರದ ಗಣಪತಿ ಪ್ಲಾಜಾ ಎಂಬಲ್ಲಿ ಖಾಸಗಿ ಲಾಕರ್​ಗಳನ್ನು ನಿರ್ಮಿಸಲಾಗಿದ್ದು, ಸುಮಾರು 500ಕ್ಕೂ ಅಧಿಕ ಕೋಟಿ ಕಪ್ಪು ಹಣವನ್ನು ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪೂರಕ ಎಂಬಂತೆ ದಾಳಿ ನಡೆಸಿದ ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಲೆಕ್ಕ ಸಿಗದ ಕೋಟ್ಯಂತರ ರುಪಾಯಿ ಹಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

    ಗಣಪತಿ ಪ್ಲಾಜಾದಲ್ಲಿರುವ ಲಾಕರ್​ಗಳಲ್ಲಿ ಕಾಂಗ್ರೆಸ್​ ನಾಯಕರು ಹಾಗೂ ಪ್ರಭಾವಿ ಅಧಿಕಾರಿಗಳು ಹಣವನ್ನು ಕೂಡಿಟ್ಟಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ (ರಾಜ್ಯಸಭೆ) ಕಿರೋಡಿ ಮೀನಾ ಆರೋಪಿಸಿದ ಬೆನ್ನಲ್ಲೇ ದಾಳಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ಕಾರಿ ನೇಮಕಾತಿ ಪತ್ರ ಸೋರಿಕೆ ಹಗರಣ, ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಹಗರಣ, ಜಲ ಜೀವನ್ ಮಿಷನ್ ಹಗರಣಗಳಿಂದ ಮಾಡಿದ ಕಪ್ಪುಹಣ ಲಾಕರ್‌ಗಳಲ್ಲಿದೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿಗೆ ಬಂದ ರಚಿನ್​ಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೋ ವೈರಲ್

    ಎರಡು ಏಜೆನ್ಸಿಗಳಿಂದ ತಕ್ಷಣದ ದೃಢೀಕರಣ ಸಿಕ್ಕಿಲ್ಲ. 50 ಲಾಕರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 10 ಕೆಲವು ಅಧಿಕಾರಿಗಳಿಗೆ ಸೇರಿದ್ದವು ಎಂದು ತಿಳಿದು ಬಂದಿದೆ. ಎಣಿಕೆ ಕಾರ್ಯ ನಡೆಯುತ್ತಿದ್ದು, ಸರ್ಕಾರಿ ಸಂಸ್ಥೆಗಳಿಂದ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಪ್ರಕಟವಾಗಿಲ್ಲ. ಚುನಾವಣೆಯ ಹೊಸ್ತಿಲಲ್ಲೇ ಐಟಿ ಹಾಗೂ ಇಡಿ ರಾಜಸ್ಥಾನದಲ್ಲಿ ದಾಳಿ ಚುರುಕುಗೊಳಿಸಿದ್ದು, ನ್ಯಾಯವಾಗಿ ಗೆಲ್ಲಲಾಗದ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ ಅರೋಪಿಸಿದೆ. ಭ್ರಷ್ಟಾಚಾರ ಮುಕ್ಯ ಆಡಳಿತ ಮಾಡಿದ್ದೇವೆ ಎನ್ನುವವರು ಐಟಿ, ಇಡಿ ಕಂಡರೆ ಭಯ ಬೀಳುವುದು ಯಾಕೆ ಎಂದು ಬಿಜೆಪಿ ತಿರುಗೇಟು ನೀಡಿದೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts