More

    ಮನುಷ್ಯನ ಸ್ವಾರ್ಥಕ್ಕೆ ಕೆರೆಗಳು ನಾಶ

    ಚಿಕ್ಕಮಗಳೂರು: ಸಮಾಜದ ಸೌಂದರ್ಯವನ್ನು ವೃದ್ಧಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಅಭಿಪ್ರಾಯಪಟ್ಟರು.

    ತಾಲೂಕಿನ ಕುನ್ನಾಳು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಲಾಗಿದ್ದ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ 662ನೇ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಜ್ಜನ ಕಾಲಕ್ಕೆ ತೆರೆದ ಬಾವಿ, ಮಗನ ಕಾಲಕ್ಕೆ ಕೊಳವೆಬಾವಿ, ಮೊಮ್ಮಕ್ಕಳ ಕಾಲಕ್ಕೆ ಖಾಲಿ ಬಾವಿ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಭೂಮಿಯಲ್ಲಿರುವ ನೀರಿನ ಪ್ರಮಾಣ ಕ್ಷೀಣಿಸಿ ಮನುಷ್ಯ ತನ್ನ ನೀರಿನ ದಾಹವನ್ನು ನೀಗಿಸಿಕೊಳ್ಳಲು ಮಾತ್ರೆಗಳನ್ನು ಬಳಸಬೇಕಾಗುತ್ತದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದರು.
    ಸಮಾಜದಲ್ಲಿ ನಾವೆಲ್ಲರೂ ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ. ಇದರ ಪರಿಣಾಮ ಪ್ರಕೃತಿಯಲ್ಲಿ ಹಲವು ಬದಲಾವಣೆ ಕಾಣಬಹುದಾಗಿದೆ. ಕೆರೆಗಳಲ್ಲಿ ಹೂಳು ತೆಗೆದು ನೀರು ಇಂಗಿಸುವ ಬದಲು ಊರಿನ ಕಸ ಮತ್ತು ತ್ಯಾಜ್ಯ ಹಾಕಲು ಕೆರೆಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಕೆರೆಗಳು ತಮ್ಮ ಇರುವಿಕೆಯನ್ನೇ ಕಳೆದುಕೊಳ್ಳುತ್ತಿವೆ ಎಂದು ತಿಳಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ವಚ್ಛತೆ, ಪಾವಿತ್ರೃತೆ ಎಂಬುದು ಕೇವಲ ಧರ್ಮಸ್ಥಳಕ್ಕೆ ಸೀಮಿತವಾಗದೇ ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ಸುಂದರ ಸಮಾಜ ನಿರ್ಮಾಣದ ಕನಸು ಕಂಡವರು. ಈ ಮೂಲಕ ಸಮಾಜದ ಕಳೆ ಮತ್ತು ಕೊಳೆಯನ್ನು ತೊಳೆಯುವಂಥ ಕೆಲಸದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದರು.
    ತಾಪಂ ಇಒ ಎಚ್.ಕೆ.ತಾರಾನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐತಿಹಾಸಿಕ ಕೆರೆಗಳನ್ನು ಹುಡುಕಿ ಅವುಗಳನ್ನು ಪುನಶ್ಚೇತನಗೊಳಿಸುವಂಥ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಬಹಳಷ್ಟು ವೈಶಿಷ್ಟ್ಯಪೂರ್ಣವಾಗಿದೆ. ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದಲ್ಲದೇ ಕೊಳೆವೆ ಬಾವಿಗಳಲ್ಲೂ ನೀರು ಬರುತ್ತದೆ. ಇಂತಹ ನೀರಿನ ಸೆಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದ್ದು, ಇಂತಹ ಕೆರೆಗಳನ್ನು ಉಳಿಸಿ, ಬೆಳೆಸಲು ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಗಳನ್ನು ಪುನಶ್ಚೇತನಗೊಳಿಸಿ ಗ್ರಾಮಸ್ಥರಿಗೆ ವರ್ಗಾಯಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಲಕ್ಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಪ್ರಾದೇಶಿಕ ಕೆರೆ ಅಭಿಯಂತರರಾದ ಹರೀಶ್ ನಾಯ್ಕ, ಗ್ರಾಪಂ ಪಿಡಿಒ ಕೆ.ಬಿ.ಮಂಜೇಗೌಡ, ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ಹರೀಶ್, ವಲಯ ಮೇಲ್ವಿಚಾರಕಿ ನಮ್ರತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts