More

    ಮಳೆ ಕೊರತೆ ಕಾಫಿ ಬೆಳೆಗಾರರಿಗೆ ವರ

    ಸಕಲೇಶಪುರ: ಮಳೆ ಕೊರತೆಯಿಂಸದಾಗಿ ಬೆಳೆ ನಾಶವಾಗುತ್ತಿದೆ ಎಂಬುದು ಕೂಗು ನಾಡಿನೆಲ್ಲೆಡೆ ಕೇಳಿಬರುತ್ತಿದ್ದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಮಳೆ ಕೊರತೆ ತಾಲೂಕಿನ ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ.

    ಹೌದು ಭಾರತೀಯ ಕಾಫಿ ಬೆಳೆಗೆ ಕಾಫಿಮಂಡಳಿ ನಿಗದಿಪಡಿಸಿರುವ ಮಳೆಯ ಪ್ರಮಾಣದಂತೆ ರೋಬಸ್ಟ್ ಕಾಫಿ ಉತ್ತಮ ಫಸಲು ಪಡೆಯಲು 1800 ಮಿಲಿ ಮೀಟರ್‌ನಿಂದ 2500 ಮೀಲಿಮೀಟರ್ ಮಳೆ ಉತ್ತಮ. ಇನ್ನು ಅರೇಬಿಕ ಕಾಫಿಗೆ 1,000 ಮಿ.ಮೀಟರ್‌ನಿಂದ 1800 ಮಿ.ಮೀಟರ್ ಉತ್ತಮ ಮಳೆ ಎಂಬುದು ಕಾಫಿಮಂಡಳಿಯ ಅಭಿಪ್ರಾಯ.

    ಅನುಕೂಲ ಹೇಗೆ: ಉತ್ತಮ ಕಾಫಿ ಫಸಲು ಪಡೆಯಲು ಹಾಗೂ ಬೆಳೆಗೆ ಕಾಡುವ ಕೊಳೆರೋಗ ಶಮನಕ್ಕೆ ಮಂಡಳಿ ಸೂಚಿರುವ ಮಾನದಂಡದಲ್ಲಿ ಮಳೆಯಾಗಬೇಕಿದೆ. ಆದರೆ ತಾಲೂಕಿನಲ್ಲಿ ಸಾಮಾನ್ಯವಾಗಿ ವಾಡಿಕೆ ಮಳೆಗಿಂತ ಎರಡುಪಟ್ಟು ಹೆಚ್ಚಿನ ಮಳೆಯಾಗುತ್ತಿದ್ದರೆ, ಪಶ್ಚಿಮಘಟ್ಟದಂಚಿನ ಹೋಬಳಿಗಳಾದ ಯಸಳೂರು, ಹೆತ್ತೂರು, ಹಾನುಬಾಳ್ ಭಾಗದಲ್ಲಿ ಕಾಫಿಬೆಳೆಗೆ ಅಗತ್ಯವಿರುವುದಕ್ಕಿಂತ ಮೂರು ಪಟ್ಟು ಅಧಿಕ ಮಳೆಯಾಗುತ್ತಿದೆ. ಪರಿಣಾಮ ಕಾಫಿ ಬೆಳೆಗೆ ಇದು ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ಅರ್ಧದಷ್ಟು ಬೆಳೆ ಮಾತ್ರ ಬೆಳೆಗಾರರ ಕೈಹತ್ತುತ್ತಿತ್ತು.

    ಆದರೆ, ಈ ಬಾರಿ ಮಳೆ ಕನಿಷ್ಠ ಪ್ರಮಾಣದಲ್ಲಿ ಸುರಿದಿದ್ದು ತಾಲೂಕನ್ನು ಮೊದಲ ಹಂತದಲ್ಲೇ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಕಾಫಿ ಮಂಡಳಿ ಅಧಿಕಾರಿಗಳ ವಿವರಣೆಯಂತೆ ಕಾಫಿ ಬೆಳೆಗೆ ಅಗತ್ಯವಿರುವಷ್ಟು ಮಾತ್ರ ಈ ಬಾರಿ ಮಳೆಯಾಗಿದೆ. ಈವರೆಗೆ ಅತಿವೃಷ್ಟಿಯಿಂದ ಹಾನಿಗೀಡಾಗುತ್ತಿದ್ದ ಕಾಫಿಬೆಳೆಗೆ ಈ ಬಾರಿ ಇಂತಹ ಸಮಸ್ಯೆ ತಲೆದೂರದು ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿದೆ.

    ತಾಲೂಕಿನಲ್ಲಿ ಹಿಂಗಾರು ಮಳೆ ಆರಂಭವಾಗುವ ವೇಳೆಗೆ 2,190 ಮೀಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಅಕ್ಟೋಬರ್ ಅಂತ್ಯಕ್ಕೆ 1,710 ಮೀಲಿ ಮೀಟರ್ ಮಳೆಯಾಗಿದೆ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಪಶ್ಚಿಮಘಟ್ಟದಂಚಿನ ಪ್ರದೇಶದಲ್ಲಿ ಕನಿಷ್ಠ ಪ್ರಮಾಣದ ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಶೇ.16 ರಷ್ಟು ಮಳೆ ಕೊರತೆ ಎದುರಾಗಿದೆ ಎಂಬುದು ಕೃಷಿ ಇಲಾಖೆಯ ಮಾಹಿತಿ. ಈ ಬಾರಿ ವಾಡಿಕೆ ಮಳೆಯಾಗದಿರುವುದು ತಾಲೂಕಿನ ಕಾಫಿ ಬೆಳೆಗಾರರ ನೆಮ್ಮದಿಗೆ ಕಾರಣವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಕಾಫಿ ಕಾಯಿಗಳ ಗಾತ್ರ ವೇಗದಲ್ಲಿ ಬೆಳೆಯುತ್ತಿದೆ ಎಂಬುದು ಕಾಫಿ ಮಂಡಳಿ ಅಧಿಕಾರಿಗಳ ವಿವರಣೆ. ಅಲ್ಲದೆ, ಮಳೆಯಿಂದ ಕಾಣಿಸಿಕೊಳ್ಳುತ್ತಿದ್ದ ಹಲವು ಸಮಸ್ಯೆಗಳಿಂದಲು ಮುಕ್ತಿ ದೊರಕಿದ್ದು, ಕಾಫಿ ಕಾಯಿ ನೆಲಸೇರುವ ಪ್ರಮಾಣ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಈ ಬಾರಿ ರೋಬಸ್ಟ್ ಕಾಫಿ ಬೆಳೆಗಾರರಿಗೆ ಅಧಿಕ ಇಳುವರಿ ನಿಶ್ಚಿತ.

    ಅತಿವೃಷ್ಟಿಯಿಂದ ಬೆಳೆ ನೆಲ ಸೇರುತ್ತಿತ್ತು: ಸಾಮಾನ್ಯವಾಗಿ ತಾಲೂಕಿನ ಐದು ಹೋಬಳಿಗಳಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗುವುದು ನಿಶ್ಚಿತವಾಗಿದ್ದರಿಂದ ಶೇ.30 ರಿಂದ 50 ರಷ್ಟು ಕಾಫಿ ಹಣ್ಣಾಗುವ ಮುನ್ನವೇ ಅಧಿಕ ಗಾಳಿ, ಶೀತ ಹಾಗೂ ಅತಿವೃಷ್ಟಿಯಿಂದ ಬೆಳೆ ನೆಲ ಸೇರುತ್ತಿತ್ತು. ಅದರಲ್ಲೂ ಶೀತದಿಂದ ಕೊಳೆರೋಗಕ್ಕೆ ಸಾಕಷ್ಟು ಕಾಫಿ ಧರೆಶಾಯಿಯಾಗುತ್ತಿದ್ದರಿಂದ ಬೆಳೆಗಾರರು ಮಳೆಗೆ ಹಿಡಿಶಾಪ ಹಾಕುತಿದ್ದರು. ಇನ್ನು ಹೆತ್ತೂರು, ಹಾನುಬಾಳ್ ಹೋಬಳಿಯ ಪಶ್ಚಿಮಘಟ್ಟದಂಚಿನ ಹಲವು ಗ್ರಾಮಗಳಲ್ಲಿ ಮಳೆ ಹಾಗೂ ಗಾಳಿಹೊಡೆತಕ್ಕೆ ರೋಬಸ್ಟ್ ಕಾಫಿ ಗಿಡಗಳಲ್ಲಿ ಕಾಯಿಯೊಂದಿಗೆ ಎಲೆಗಳೂ ಉದುರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಪ್ರತಿ ಎಕರೆ ಕಾಫಿ ಇಳುವರಿ ಅಷ್ಟಕಷ್ಟೆ ಎಂಬಂತಾಗಿತ್ತು.

    ಬೆಳಗೋಡು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರೋಬಸ್ಟ್ ತೋಟದಲ್ಲಿ ಪ್ರತಿ ಎಕರೆಗೆ ಕನಿಷ್ಠ 30 ರಿಂದ 50 ಚೀಲ ಕಾಫಿ ಇಳುವರಿ ದೊರೆತರೆ, ಹಾನುಬಾಳ್ ಹಾಗೂ ಹೆತ್ತೂರು ಹೋಬಳಿಯ ಪಶ್ಚಿಮಘಟ್ಟದಂಚಿನ ಕಾಫಿತೋಟಗಳಲ್ಲಿ 20 ರಿಂದ 40 ಚೀಲಕ್ಕೆ ಸೀಮಿತಗೊಳ್ಳತಿತ್ತು. ಆದರೆ, ಈ ಬಾರಿ ಪಶ್ಚಿಮಘಟ್ಟದಂಚಿನ ಕಾಫಿತೋಟಗಳಲ್ಲೂ ಅಧಿಕ ಇಳುವರಿ ದೊರಕಲಿದೆ ಎಂಬ ಮಾತುಗಳು ಬೆಳೆಗಾರರ ವಲಯದಿಂದ ಕೇಳಿ ಬರುತಿವೆ.

    ಆತಂಕ ದೂರ: 2021-22 ನೇ ಸಾಲಿನಲ್ಲಿ ಡಿಸಂಬರ್‌ವರೆಗೆ ಮಳೆ ಸುರಿದ ಪರಿಣಾಮ ಕೂಯಿಲು ನಡೆಸಿದ್ದ ಅರೇಭಿಕ ಕಾಫಿ ಒಣಗಿಸಲು ಸಾಧ್ಯವಿಲ್ಲದೆ ಪರಿತಪಿಸುವಂತಾಗಿತ್ತು. ಆರ್ಥಿಕವಾಗಿ ಸ್ಥಿತಿವಂತರಾದ ಬೆಳೆಗಾರರು ಡ್ರೈಯರ್‌ಗಳ ಮೊರೆಹೋಗುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ, ಸಣ್ಣ ಹಾಗೂ ಅತಿಸಣ್ಣ ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಹಿಂಗಾರು ಮಳೆ ಸಮಸ್ಯೆ ತಂದೊಡ್ಡಲಿದೆ ಎಂಬ ಭಾವನೆ ತಾಲೂಕಿನ ರೈತ ಸಮೂಹದಲ್ಲಿ ನೆಲಸಿತ್ತು. ಆದರೆ, ಮಳೆದೂರ ಎಂಬ ಹವಮಾನ ಇಲಾಖೆ ವರದಿ ಬೆಳೆಗಾರರ ನೆಮ್ಮದಿ ತಂದಿದ್ದು ಈಗಾಗಲೇ ಅರೇಬಿಕ ಕಾಫಿ ಕೂಯಿಲು ಆರಂಭವಾಗಿದ್ದು ಸಂಸ್ಕರಣೆಗೆ ಉತ್ತಮ ವಾತವಾರಣ ಇರುವುದು ಸದ್ಯ ಬೆಳೆಗಾರರ ನಿಶ್ಚಿಂತೆಗೆ ಕಾರಣವಾಗಿದೆ.

    ಭತ್ತದ ಬೆಳೆಗೂ ಇಲ್ಲ ಆತಂಕ: ತಾಲೂಕಿನಲ್ಲಿ ಮುಂಗಾರು ಮಳೆ ವಿಳಂಬದಿಂದಾಗಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಾಡಬೇಕಿದ್ದ ನಾಟಿಕಾರ್ಯ ಅಗಸ್ಟ್‌ವರೆಗೆ ವಿಸ್ತರಣೆಗೊಂಡಿತ್ತು. ನಿಧಾನಗತಿ ನಾಟಿಕಾರ್ಯದಿಂದ ಪ್ರತಿ ವರ್ಷಕ್ಕಿಂತ ಈ ಬಾರಿ ಕಡಿಮೆ ಪ್ರಮಾಣದಲ್ಲಿ ನಾಟಿಮಾಡಲಾಗಿದೆ ಎಂಬುದು ಕೃಷಿ ಇಲಾಖೆಯ ವರದಿ.

    ತಾಲೂಕಿನಲ್ಲಿ ಎರಡು ಬೆಳೆ ಬೆಳೆಯಬಹುದಾದ ಭತ್ತದ ಗದ್ದೆಗಳ ಪ್ರಮಾಣ 3,500 ಹೇಕ್ಟರ್‌ಗೂ ಅಧಿಕ. ಶೀತಾಂಶದಿಂದ ಕೂಡಿರುವ ಭತ್ತದ ಗದ್ದೆಗಳಲ್ಲಿಕಡಿಮೆ ಇಳುವರಿ ಲಭಿಸುವುದರಿಂದ ಭತ್ತ ಬೆಳೆಯುವುದೂ ನಷ್ಟ ಎಂಬ ಮನಸ್ಥಿತಿ ಮಲೆನಾಡಿಗರಲ್ಲಿ ನೆಲಸಿದೆ. ಇಳುವರಿ ಪ್ರಮಾಣದಲ್ಲಿ ಪ್ರತಿ ಎಕರೆ 10 ರಿಂದ 14 ಕ್ವಿಂಟಾಲ್‌ಗೆ ಸೀಮಿತ. ಆದರೆ, ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಭತ್ತದ ಗದ್ದೆಗಳಲ್ಲಿ ಶೀತದ ಅಂಶ ಕಡಿಮೆಯಾಗಿದ್ದು ಇಳುವರಿ ಹೆಚ್ಚುವ ನಿರೀಕ್ಷೆ ಇದೆ. ತಾಲೂಕಿನಲ್ಲಿ ಹಳ್ಳಕೊಳ್ಳಗಳ್ಳು ಹೆಚ್ಚಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಭತ್ತದ ಬೆಳೆಗೆ ನೀರಿನ ಕೊರತೆ ಸಹ ಎದುರಾಗದು ಎಂಬುದು ಮೊಗನಹಳ್ಳಿ ಗ್ರಾಮದ ರೈತ ಸ್ವಾಮಿಗೌಡರ ಅಭಿಪ್ರಾಯ.

    ಮಳೆಕೊರತೆ ತಾಲೂಕಿನ ಕಾಫಿಬೆಳೆಗಾರರಿಗೆ ವರವಾಗಿ ಪರಿಣಮಿಸಿದ್ದರೆ ಆಲೂರು ಹಾಗೂ ಬೇಲೂರು ತಾಲೂಕಿನ ಹಲವೆಡೆ ಸಮಸ್ಯೆ ತಂದೊಡ್ಡಿದೆ. ಈ ಎರಡೂ ತಾಲೂಕಿನ ಹಲವೆಡೆ 500 ರಿಂದ 1000 ಮಿಲಿ ಮೀಟರ್ ಮಳೆಯಾಗಿದೆ. ಕನಿಷ್ಠ ಮಳೆಯಾಗಿರುವುದರಿಂದ ರೋಬಸ್ಟ್ ಹಾಗೂ ಅರೇಬಿಕ ಕಾಫಿ ತೋಟಗಳಲ್ಲಿ ಈಗಾಗಲೇ ತೇವಾಂಶದ ಕೊರತೆ ಕಾಣಿಸಿಕೊಳ್ಳುವಂತಾಗಿದೆ. ಪರಿಣಾಮ ಕಾಫಿ ಕಾಯಿ ಗಾತ್ರದೊಡ್ಡದಾಗಲು ಅಡ್ಡಿಯಾಗಿದ್ದು, ಹಣ್ಣು ಮೂಡಿದರು ಗುಣಮಟ್ಟ ಉತ್ಕ್ರಷ್ಟಮಟ್ಟದಲ್ಲಿರುವುದು ಕಷ್ಟಕರ ಎಂಬುದು ಕಾಫಿ ಮಂಡಳಿ ಅಧಿಕಾರಿಗಳ ಹೇಳಿಕೆ.

    ಮಳೆಕೊರತೆ ಪ್ರಸಕ್ತ ವರ್ಷ ರೋಬಸ್ಟ್ ಕಾಫಿಗೆ ವರವಾಗಿ ಪರಿಣಮಿಸಿದ್ದು ಪಶ್ಚಿಮಘಟ್ಟದಂಚಿನ ಗ್ರಾಮಗಳ ಕಾಫಿತೋಟದಲ್ಲಿ ಕಾಫಿಕಾಯಿ ಉತ್ತಮಗಾತ್ರ ಪಡೆಯುತ್ತಿವೆ.
    ಬಸವರಾಜ್ ಸಂಪರ್ಕ ಅಧಿಕಾರಿ, ಕಾಫಿಮಂಡಳಿ, ಯಸಳೂರು

    ಈ ಬಾರಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದು ಕಾಫಿ ತೋಟಗಳಲ್ಲಿ ಉತ್ತಮ ಫಸಲು ಮೂಡಲು ಕಾರಣವಾಗಿದೆ. ಕಾಫಿಕಾಯಿ ನೆಲಸೇರುವುದು ಈ ಬಾರಿ ಕಂಡುಬಂದಿಲ್ಲ. ಅಲ್ಲದೆ ಕೊಳೆರೋಗ ಸಹ ಹತೋಟಿಯಲ್ಲಿದೆ.
    ರೋಷನ್ ಕಾಫಿಬೆಳೆಗಾರ, ಹರಗರಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts