More

    ಸರ್ಕಾರದ ಸೌಲಭ್ಯ ಸದುಪಯೋಗಿಸಿಕೊಳ್ಳಿ : ಕಾರ್ಮಿಕ ಅಧಿಕಾರಿ ಖೈನೂರ ಸಲಹೆ

    ವಿಜಯಪುರ: ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಜಿ.ಖೈನೂರ ಹೇಳಿದರು.

    ನಗರದ ಗಾಂಧಿಚೌಕ್‌ನಲ್ಲಿರುವ ಸಂತ ಅನ್ನಮ್ಮ ಚರ್ಚ್ ಆವರಣದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಯೂನಿಯನ್, ಗೃಹ ಕಾರ್ಮಿಕರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈಗಾಗಲೇ ಕಾರ್ಮಿಕ ಅದಾಲತ್ ಕಾರ್ಯಕ್ರಮ ಜು.15ರಿಂದ ಆರಂಭಗೊಂಡಿದ್ದು ಜು.31ರವರೆಗೆ ಅರ್ಜಿ ಸ್ವೀಕರಿಸಲು ಅವಕಾಶ ಇದೆ. ಅದೇ ರೀತಿ ಆಗಸ್ಟ್ 15ರ ವರೆಗೆ ಸ್ವೀಕೃತಗೊಂಡ ಅರ್ಜಿಗಳ ಪರಿಶೀಲನೆ ಮಾಡಿ ಅರ್ಹ ಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದರು.

    60 ವರ್ಷದೊಳಗಿನ ಎಲ್ಲ ಕಾರ್ಮಿಕರು ಇ-ಶ್ರಮ ಕಾರ್ಡ್ ಮಾಡಿಸಿಕೊಳ್ಳಬೇಕು. 2.5 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ, ರಾಷ್ಟ್ರೀಯ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆರ್.ಕೆ.ಆಸ್ಪತ್ರೆ ವೈದ್ಯ ಡಾ. ಸುನೀಲ ರಾಠೋಡ್ ಮಾತನಾಡಿ, ಎಲ್ಲ ಕಾರ್ಮಿಕರಿಗೆ ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ರಮ ಈಗಾಗಲೇ ಸರ್ಕಾರ ಜಾರಿ ಮಾಡಿದ್ದು, ಈವರೆಗೆ ಜಿಲ್ಲೆಯಲ್ಲಿ 25 ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

    ಅನೌಪಚಾರಿಕ ಶಿಕ್ಷಣ ಸಂಸ್ಥೆ ಾದರ್ ನಿರ್ದೇಶಕ ಟಿಯೋಲ್ ಮಚಾದೊ ಮಾತನಾಡಿ, ಕಾರ್ಮಿಕರ ಕಾರ್ಡ್‌ಗಳು ಕಾಲ ಕಾಲಕ್ಕೆ ನವೀಕರಣಗೊಂಡಿರಬೇಕು. ಮಕ್ಕಳ ವಿದ್ಯಾರ್ಥಿ ವೇತನ, ಮದುವೆ ಸಹಾಯಧನ, ಎ್.ಡಿ. ಬಾಂಡ್‌ಗಳು, ಪಿಂಚಣಿಗಳು ವಿಳಂಬವಾದಲ್ಲಿ ನೇರವಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕ ಅದಾಲತ್ ಕಾರ್ಯಕ್ರಮದಡಿ ಬೇಗನೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಲು ತಿಳಿಸಿದರು.

    200ಕ್ಕಿಂತ ಹೆಚ್ಚು ವಿವಿಧ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೇಣುಕಾ ಕೋಟ್ಯಾಳ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ಸಿಂಗೆ ಸ್ವಾಗತಿಸಿದರು, ರವಿ ದೊಡಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts