More

    ಕುವೈತ್ ಅಕ್ರಮವಾಸಿಗಳು ಮರಳಲು ದಿನಗಣನೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಸರ್ಕಾರದ ಸೂಚನೆಯಂತೆ ಕುವೈತ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದನ್ನು ಸ್ವಯಂ ಘೋಷಿಸಿಕೊಂಡಿರುವ ಭಾರತೀಯ ಕಾರ್ಮಿಕರು ಸ್ವದೇಶಕ್ಕೆ ಮರಳಲು ದಿನಗಣನೆ ಆರಂಭಿಸಿದ್ದಾರೆ.
    ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಮಾಹಿತಿಯಂತೆ ಅಕ್ರಮ ವಾಸವನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ಭಾರತೀಯರ ಸಂಖ್ಯೆ 6,500. ಸ್ವದೇಶಗಳಿಗೆ ತೆರಳಲು ಸಿದ್ಧರಾಗಿರುವ ಜಗತ್ತಿನ ಇತರ ದೇಶಗಳ ಅಕ್ರಮವಾಸಿಗರನ್ನು ಸೇರಿಸಿದರೆ ಈ ಸಂಖ್ಯೆ 23,500 ತಲುಪುತ್ತದೆ.

    ಪ್ರಯಾಣಕ್ಕೆ ಸಿದ್ಧತೆ: ಕುವೈತ್‌ನಲ್ಲಿ ಅಕ್ರಮವಾಗಿ ತಲೆಮರೆಸಿಕೊಂಡು ಬದುಕುತ್ತಿರುವವರು ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಅವರನ್ನು ಗುರುತಿಸಿ ಸ್ವದೇಶಕ್ಕೆ ಕಳುಹಿಸಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
    ಇದರ ಪ್ರಥಮ ಹಂತವಾಗಿ ಸ್ವಯಂ ಪ್ರೇರಿತವಾಗಿ ಅಕ್ರಮವಾಸವನ್ನು ದೃಢೀಕರಿಸಿಕೊಳ್ಳುವವರಿಗೆ ಶಿಕ್ಷೆಯಿಂದ ವಿನಾಯಿತಿ ಹಾಗೂ ಸ್ವದೇಶಕ್ಕೆ ವಿಮಾನದ ಉಚಿತ ಟಿಕೆಟ್ ಕೊಡುಗೆ ಪ್ರಕಟಿಸಲಾಗಿತ್ತು. ಭಾರತೀಯರು ತಮ್ಮ ಅಕ್ರಮ ವಾಸವನ್ನು ದೃಢಿಕರಿಸಿಕೊಳ್ಳಲು ಏ.20 ಕೊನೆಯ ದಿನವಾಗಿತ್ತು. ಅಂತಾರಾಷ್ಟ್ರೀಯ ವಿಮಾನ ಯಾನ ನಿರ್ಬಂಧ ಸಡಿಲಿಕೆಯಾದ ಕೂಡಲೇ ಸ್ವದೇಶಕ್ಕೆ ಕಳುಹಿಸುವ ಸಾಧ್ಯತೆಗಳಿವೆ.

    ಒಪ್ಪಿಕೊಂಡವರು ಕಡಿಮೆ: ಮುಖ್ಯವಾಗಿ ಭಾರತ, ಬಾಂಗ್ಲಾದೇಶ, ಫಿಲಿಫೈನ್ಸ್, ಶ್ರೀಲಂಕಾ, ಪಾಕಿಸ್ತಾನ, ಈಜಿಪ್ಟ್ ದೇಶಗಳ ಒಟ್ಟು 1,60,000ಕ್ಕೂ ಅಧಿಕ ಅಕ್ರಮ ವಾಸಿಗಳು ಕುವೈತ್ ನೆಲದಲ್ಲಿದ್ದು, ಇದರಲ್ಲಿ ಅಲ್ಪಮಂದಿಯಷ್ಟೇ ಅಕ್ರಮ ವಾಸವನ್ನು ಒಪ್ಪಿಕೊಂಡಿದ್ದಾರೆ. ಉಳಿದವರು ಸಿಕ್ಕಿಬಿದ್ದರೆ ಎದುರಾಗುವ ಕಠಿಣ ಕಾನೂನು ಕ್ರಮ ಎದುರಿಸುವ ರಿಸ್ಕ್ ತೆಗೆದುಕೊಂಡಿದ್ದಾರೆ.

    ಕರಾವಳಿ ಆರ್ಥಿಕತೆಗೆ ಕೊಡುಗೆ: ದಕ್ಷಿಣ ಕನ್ನಡ, ಉಡುಪಿ, ಹೆಚ್ಚು ಕರಾವಳಿ ತೀರವನ್ನು ಹೊಂದಿರುವ ಕೇರಳ ರಾಜ್ಯದ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಕೊಲ್ಲಿ ದೇಶಗಳ ಕೊಡುಗೆ ಮುಖ್ಯವಾಗಿದೆ. ಅಲ್ಲಿನ ಉನ್ನತ ಹುದ್ದೆಗಳಲ್ಲಿ ಇರುವವರನ್ನು ಹೊರತುಪಡಿಸಿ, ಸಾಮಾನ್ಯ ಹುದ್ದೆಗಳಲ್ಲಿ ದುಡಿಯುವವರಲ್ಲಿ ಭಾರತೀಯ ಅಕ್ರಮವಾಸಿಗಳ ಸಂಖ್ಯೆಯೂ ಗಣನೀಯ. ಇಂಥವರಲ್ಲಿ ವಿದೇಶಿ ಉದ್ಯೋಗದ ವ್ಯಾಮೋಹದ ಬೆನ್ನುಬಿದ್ದು ಏಜೆನ್ಸಿಗಳ ವಂಚನೆಗೆ ಒಳಗಾದವರೇ ಅಧಿಕ. ಅಕ್ರಮ ವಾಸ ಸಂದರ್ಭ ಜೈಲುಪಾಲಾದವರ ಸಂಖ್ಯೆಯೂ ಸಾಕಷ್ಟಿದ್ದು, ಹೆಚ್ಚಿನ ಸಂದರ್ಭ ಇಂತಹ ಮಾಹಿತಿ ಅವರ ಕುಟುಂಬ ಸದಸ್ಯರನ್ನು ದಾಟಿ ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ.

    ಹೊಸ ಸವಾಲು: ಕರೊನಾ ಸಂಬಂಧಿತ ದೀರ್ಘಕಾಲದ ಲಾಕ್‌ಡೌನ್ ಸಂದರ್ಭ ಅನೇಕ ಸಂಸ್ಥೆಗಳು ತನ್ನ ನೌಕರರ ಸಂಖ್ಯೆ ಕಡಿತಗೊಳಿಸಲು ಮುಂದಾಗಿದೆ. ಇಂತಹ ಸಂದರ್ಭ ವಿದೇಶಗಳಲ್ಲಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಮರಳುವವರಿಗೆ ಕೂಡ ನೌಕರಿ ಒದಗಿಸುವ ಸವಾಲು ಕೂಡ ಸರ್ಕಾರದ ಮುಂದಿದೆ.

    ಅಕ್ರಮ ವಾಸಿಗಳಲ್ಲಿ ಕನ್ನಡಿಗರು ಎಷ್ಟು ಇರಬಹುದು ಎನ್ನುವ ನಿಖರ ಮಾಹಿತಿ ಇಲ್ಲ. ಆದರೆ ಅಕ್ರಮ ವಾಸಿಗಳೆಂದು ಘೋಷಿಸಿ ಸ್ವದೇಶಕ್ಕೆ ತೆರಳಲು ಅವಕಾಶ ಇರುವ ನಮೂನೆಯ ನೋಂದಣಿ ಲಿಂಕ್ ಅನ್ನು ಕನ್ನಡಿಗರಿಗೆ ಮಾತ್ರವಲ್ಲ, ಕುವೈತ್‌ನಲ್ಲಿ ನೆಲೆಸಿರುವ ಅತ್ಯಧಿಕ ಭಾರತೀಯರಿಗೆ ತಲುಪಿಸಲು ಪ್ರಯತ್ನಿಸಿದ್ದೇವೆ. ಅಕ್ರಮ ವಾಸಿಗಳಿಗೆ ಸ್ವದೇಶಕ್ಕೆ ಮರಳಲು ಇದೊಂದು ಉತ್ತಮ ಅವಕಾಶ.
    – ರಾಜೇಶ್ ವಿಟ್ಲ, ಅಧ್ಯಕ್ಷ, ಕುವೈತ್ ಕನ್ನಡ ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts