More

    ಸ್ಥಳೀಯ ಭಾಷೆಯಲ್ಲೇ ಉನ್ನತ ಶಿಕ್ಷಣ ಪ್ರಾರಂಭಿಸಲಿ: ಡಾ. ಎಸ್.ಸಿ.ಶರ್ಮಾ

    ಶಿವಮೊಗ್ಗ: ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿ ಜಿಲ್ಲೆಯಲ್ಲೂ ಸ್ಥಳೀಯ ಭಾಷೆಯಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ನ್ಯಾಕ್ ನಿರ್ದೇಶಕ ಡಾ. ಎಸ್.ಸಿ.ಶರ್ಮಾ ಅಭಿಪ್ರಾಯಪಟ್ಟರು.
    ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸೋಮವಾರ ಉನ್ನತ ಶಿಕ್ಷಣದ ಸವಾಲುಗಳು ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಂತರ್-ಶಿಸ್ತೀಯ ವಿವಿಗಳ ಸಂಖ್ಯೆಗಿಂತ ಬಹುಶಿಸ್ತೀಯ ವಿವಿಗಳ ಸಂಖ್ಯೆ ಏರಿಕೆಯಾಗಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಎಂದರು.
    ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ಅನ್ವೇಷಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಅಗತ್ಯತೆಗಳ ಕುರಿತು ಇನ್ನೂ ಹೆಚ್ಚಿನ ಪ್ರಾಯೋಗಿಕ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.
    ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಮಾತನಾಡಿ, ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಸಮಗ್ರ ದಾಖಲಾತಿ ಪ್ರಮಾಣ(ಜಿಇಆರ್) ಪ್ರಮುಖವಾಗಿದೆ. ಸರ್ಕಾರಗಳು ಕೂಡ ದಾಖಲಾತಿ ಪ್ರಮಾಣ ಹೆಚ್ಚಿಸುವುದರತ್ತ ಗಮನ ಹರಿಸುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕರೆತರುವ ಜವಾಬ್ದಾರಿ ವಿವಿಗಳ ಮೇಲಿದೆ. ಕುವೆಂಪು ವಿವಿ ಇದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದರು.
    ಪ್ರಸ್ತುತ ಭಾರತದ ಜಿಇಆರ್ ಶೇ. 26.3ರಷ್ಟಿದ್ದು, 2035ರ ಹೊತ್ತಿಗೆ ಈ ಪ್ರಮಾಣವನ್ನು ಶೇ.50ಕ್ಕೆ ತಲುಪಿಸುವ ಗುರಿಯನ್ನು ಹೊಸ ಶಿಕ್ಷಣ ನೀತಿ ಹೊಂದಿದೆ. ಬ್ರೆಜಿಲ್ (ಶೇ.51.3), ಚೀನಾ (ಶೇ.49.1) ಮತ್ತಿತರ ದೇಶಗಳಿಗೆ ಹೋಲಿಸಿದರೆ ಭಾರತ ಇನ್ನೂ ಬಹುದೂರ ಸಾಗಬೇಕಿದೆ ಎಂದರು.
    ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಬಿ.ಧನಂಜಯ, ಕಾಲೇಜಿನ ನ್ಯಾಕ್ ಸಂಚಾಲಕ ಡಾ. ಎಸ್.ಸಿರಾಜ್‌ಅಹ್ಮದ್, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts