More

    ಹಾಸ್ಟೆಲ್ ಶುಲ್ಕ ನೆಪದಲ್ಲಿ ಹಣ ವಸೂಲಿ

    ಶಿವಮೊಗ್ಗ: ಕುವೆಂಪು ವಿವಿಯಿಂದ ಹಾಸ್ಟೆಲ್ ಶುಲ್ಕದ ನೆಪದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಮಂಗಳವಾರ ಕುವೆಂಪು ವಿವಿ ನಗರಾಡಳಿತ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

    ಕುವೆಂಪು ವಿವಿ ಹಾಸ್ಟೆಲ್​ನಿಂದ ದೂರದ ಊರುಗಳ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ ಶುಲ್ಕ ಮಾತ್ರ ಹೊರೆಯಾಗಿದೆ. ಈ ಹಾಸ್ಟೆಲ್ ವಿವಿಯ ಅನುದಾನಕ್ಕೆ ಒಳಪಟ್ಟಿದ್ದರೂ ಖಾಸಗಿ ವಿದ್ಯಾರ್ಥಿ ನಿಲಯದಂತೆ ದುಬಾರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮುಂಗಡವಾಗಿ 8,500ರೂ.- 9,080 ರೂ.ವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪ್ರತಿ ತಿಂಗಳು ಊಟದ ಖರ್ಚು ಮತ್ತು ವಿದ್ಯುತ್ ಬಿಲ್​ನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುತ್ತದೆ. ವಿದ್ಯಾರ್ಥಿಗಳು ಹಾಸ್ಟೆಲ್ ಬಿಡುವ ಸಂದರ್ಭದಲ್ಲಿ ಡಿಪಾಸಿಟ್ ಹಣ ಹಿಂತಿರುಗಿಸಬೇಕು.

    ಆದರೆ ಮುಂಗಡದಲ್ಲಿ ವಿದ್ಯಾರ್ಥಿ ನಿಲಯದ ಅಭಿವೃದ್ಧಿ ಶುಲ್ಕ, ಕೊಠಡಿ ಬಾಡಿಗೆ ಶುಲ್ಕ, ನೌಕರರ ಕಲ್ಯಾಣ ನಿಧಿ ಮತ್ತು ಮಿಸಲೇನಿಯಸ್ ಹೆಸರಿನಲ್ಲಿ ಕಡಿತಗೊಳಿಸಲಾಗುತ್ತಿದೆ. 8000 ರೂ. ಗೂ ಹೆಚ್ಚಿನ ಡಿಪಾಸಿಟ್ ಹಣದಲ್ಲಿ ಕೇವಲ 2 ಸಾವಿರ ರೂ. ಮಾತ್ರ ಡಿಪಾಸಿಟ್ ಎಂಬಂತೆ ಲೆಕ್ಕ ತೋರಿಸಲಾಗುತ್ತದೆ. ವಿದ್ಯಾರ್ಥಿ ಪ್ರವೇಶ ಸಂದರ್ಭದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ದೂರಿದರು.

    ವಿದ್ಯಾರ್ಥಿಗಳು ಹಾಸ್ಟೆಲ್ ತೊರೆಯುವ ಸಂದರ್ಭದಲ್ಲಿ ಅರ್ಜಿ ಶುಲ್ಕ 150. ರೂ., ಭದ್ರತಾ ಮುಂಗಡ ಠೇವಣಿ ಎರಡು ಸಾವಿರ ರೂ., ನಿಲಯದ ಅಭಿವೃದ್ಧಿ ಶುಲ್ಕ 1,430 ರೂ. ಕೊಠಡಿ ಬಾಡಿಗೆ (10 ತಿಂಗಳಿಗೆ) 1,500 ರೂ., ನೌಕರರ ಕಲ್ಯಾಣ ನಿಧಿ (10ತಿಂಗಳಿಗೆ) 1 ಸಾವಿರ ರೂ., ಮಿಸಲೇನಿಯಸ್​ಗೆ (10 ತಿಂಗಳಿಗೆ) 3 ಸಾವಿರ ರೂ. ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕುವೆಂಪು ವಿವಿ ಕುಲಪತಿ ಈ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ತಪ್ಪಿಸಬೇಕು. ವಿದ್ಯಾರ್ಥಿಗಳಿಗೆ ಪೂರಕ ನಿರ್ಧಾರ ಕೈಗೊಳ್ಳದೇ ಇದ್ದರೆ ಡಿ.3ರಂದು ನಡೆಯುವ ವಿವಿಯ ಸಿಂಡಿಕೇಟ್ ಸಭೆ ವೇಳೆ ವಿವಿಗೆ ಮುತ್ತಿಗೆ ಹಾಕಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

    ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಬಿ.ಲೋಕೇಶ್, ಇ.ಟಿ.ನಿತಿನ್ ರಾವ್, ಎಸ್.ಕುಮರೇಶ್, ಪುಷ್ಪಕ್ ಕುಮಾರ್, ಪದಾಧಿಕಾರಿಗಳಾದ ರಾಕೇಶ್ ಮುತ್ತಿಗೆ, ಕೆ.ಎಂ.ಪವನ್, ಗಗನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts