More

    ಪಿಡುಗಿನಂತೆ ಕಾಡುತ್ತಿದೆ ಡಯಾಲಿಸಿಸ್: ತೇಜಸ್ವಿ ಸೂರ್ಯ ಕಳವಳ

    ಶಿವಮೊಗ್ಗ: ಮನುಷ್ಯ ಜೀವನದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಅದೇ ಆರೋಗ್ಯ ಭಾಗ್ಯ. ಸದಾ ಕ್ರಿಯಾಶೀಲರಾಗಿದ್ದರೆ ಯಾವ ಆರೋಗ್ಯ ಸಮಸ್ಯೆಗಳೂ ಹತ್ತಿರ ಸುಳಿಯಲ್ಲ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.
    ಕುವೆಂಪು ನಗರದಲ್ಲಿ ಭಾನುವಾರ ಹೊಯ್ಸಳ ಫೌಂಡೇಶನ್‌ನ ಡಯಾಲಿಸಿಸ್ ಹಾಗೂ ಆರೋಗ್ಯ ಕೇಂದ್ರಕ್ಕೆ ಶಾರದಮ್ಮ ಮತ್ತು ಮೋಟಾರ್ ಮಂಜಪ್ಪ ಅವರ ಹೆಸರು ನಾಮಕರಣಗೊಳಿಸಿ ಮಾತನಾಡಿದ ಅವರು, ಇಂದು ಆಸ್ತಿ, ಹಣಕ್ಕಾಗಿ ಓಡಾಡುವುದನ್ನು ಬಿಟ್ಟು ಆರೋಗ್ಯ ಸಂಪಾದನೆಗೆ ಒತ್ತು ನೀಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ನಮ್ಮ ಪೂರ್ವಿಕರು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುತ್ತಿದ್ದರು. ಹೊಲ-ಜಮೀನುಗಳಲ್ಲಿ ಸಾಕಷ್ಟು ಶ್ರಮ ಹಾಕುತ್ತಿದ್ದರು. ಆದರೆ ಇಂದು ಶ್ರಮ ಸಾಧನೆ ಬಿಟ್ಟು ಹಣ ಗಳಿಕೆಗೆ ಒತ್ತು ನೀಡುತ್ತಿದ್ದೇವೆ. ಹಾಗಾಗಿ ಮಾನಸಿಕ ಮತ್ತು ಶಾರೀರಿಕವಾಗಿ ದುರ್ಬಲರಾಗುತ್ತಿದ್ದೇವೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.
    ಡಯಾಲಿಸಿಸ್ ಮಾಡಿಸಿಕೊಳ್ಳುವುದೇ ದೊಡ್ಡ ಪಿಡುಗಾಗುತ್ತಿದೆ. ಬಡವರು, ಹಿಂದುಳಿದ ವರ್ಗದವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಹಾಗೆಂದಮಾತ್ರಕ್ಕೆ ಶ್ರೀಮಂತರಿಗೆ ಈ ಸಮಸ್ಯೆ ಇಲ್ಲ ಎಂದರ್ಥವಲ್ಲ. ಅವರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತೆರಳಬಹುದು ಅಥವಾ ಮನೆಗಳಲ್ಲೇ ಯಂತ್ರಗಳನ್ನು ಹೊಂದಿರಲೂಬಹುದು. ಆದರೆ ಹಿಂದುಳಿದವರಿಗೆ ಮೂತ್ರಪಿಂಡ ವೈಫಲ್ಯದ ಸಮಸ್ಯೆ ಒಮ್ಮೆ ಎದುರಾದರೆ ದುಪ್ಪಟ್ಟು ಹೊರೆಯಾಗುತ್ತಿದೆ. ಆರ್ಥಿಕ ಮತ್ತು ಶಾರೀರಿಕವಾಗಿ ನಷ್ಟ ಎದುರಿಸುವಂತಾಗಿದೆ. ಇದು ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.
    ಹೊಯ್ಸಳ ಫೌಂಡೇಶನ್ ಅಧ್ಯಕ್ಷ ಎಂ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಸಿ.ನಟರಾಜ್ ಭಾಗವತ್, ಎಂ.ಎಚ್.ಪ್ರಭಾಕರ್, ಕೇಶವಮೂರ್ತಿ, ಶ್ರೀದೇವಿ ವೇಣುಗೋಪಾಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts