More

    ಕುವೆಂಪು ಸಾಹಿತ್ಯ ಸರ್ವಕಾಲಕ್ಕೂ ಅನ್ವಯ

    ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಎಲ್ಲ ಪ್ರಕಾರಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ಉಡುಪಿ ಜಿಲ್ಲೆಯ ಮಧ್ಯಾಹ್ನ ಉಪಾಹಾರ ಯೋಜನೆಯ ಶಿಕ್ಷಣಾಧಿಕಾರಿ ಪಿ.ನಾಗೇಂದ್ರಪ್ಪ ಹೇಳಿದರು.

    ಚಾಲುಕ್ಯನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನಿಂದ ಭಾನುವಾರ ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಸಾಹಿತ್ಯ ಸರ್ವಕಾಲಕ್ಕೂ ಅನ್ವಯ ಆಗುವಂತಹ ಅರ್ಥಪೂರ್ಣ ಶ್ರೇಷ್ಠತೆಯಿಂದ ಕೂಡಿದೆ. ಕುವೆಂಪು ಅವರು ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ಹೇಳಿದರು.

    ಯುವ ಬರಹಗಾರರು ಹಾಗೂ ಬರಹಗಾರ್ತಿಯರಲ್ಲಿ ಕುವೆಂಪು ಸಾಹಿತ್ಯದ ಶ್ರೇಷ್ಠತೆ ಬಗ್ಗೆ ಅಧ್ಯಯನ ಮಾಡುವ ಮತ್ತು ಅರ್ಥ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಹೆಚ್ಚು ಪ್ರಯತ್ನ ಆಗಬೇಕಿದೆ ಎಂದು ತಿಳಿಸಿದರು.

    ಆಶಯ ಭಾಷಣ ಮಾಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ, ಕನ್ನಡ ಭಾಷೆಯ ಕೆಲಸಗಳಿಗೆ ಸದಾ ಬೆಂಬಲಿಸುವ ಮನಸ್ಸು ನಾಡಿನ ಜನರಲ್ಲಿದೆ. ಕನ್ನಡದ ವಿಷಯ ಬಂತೆಂದರೆ ಅತ್ಯಂತ ಉತ್ಸಾಹ, ವಿಶೇಷವಾಗಿ ಕೈಜೋಡಿಸುವ ಮನಸ್ಸುಗಳು ಇರುವುದರಿಂದಲೇ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿದೆ. ಕನ್ನಡದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ವಿಶೇಷ ಅಭಿಮಾನವಿದೆ ಎಂದರು.

    ದತ್ತಿ ದಾನಿ ಡಿ.ಆರ್.ರತ್ನಾಕರ್ ಅವರು ಕುವೆಂಪು ಅವರ ಸಂಬಂಧಿಯಾಗಿದ್ದು, ಕುವೆಂಪು ಸಾಹಿತ್ಯದ ಬಗ್ಗೆ ಉಪನ್ಯಾಸ ಆಯೋಜಿಸಲು ದತ್ತಿ ನೀಡಿದ್ದಾರೆ. ಅದರಂತೆ ಪ್ರತಿ ವರ್ಷವೂ ಕುವೆಂಪು ಸಾಹಿತ್ಯದ ಬಗ್ಗೆ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಯುವ ಬರಹಗಾರರಲ್ಲಿ ಕುವೆಂಪು ಸಾಹಿತ್ಯದ ಬಗ್ಗೆ ತಿಳಿವಳಿಕೆ ಮೂಡುತ್ತಿದೆ ಎಂದು ಹೇಳಿದರು.

    ಸಾಹಿತ್ಯ ಪರಿಷತ್ ಆಯೋಜಿಸುವ ಕವಿಗೋಷ್ಠಿ ಯುವಬರಹಗಾರರಿಗೆ ಅತ್ಯುತ್ತಮ ವೇದಿಕೆ. ಕವಿಗೋಷ್ಠಿಗಳಲ್ಲಿ ಯುವಕ ಯುವತಿಯರು ಭಾಗವಹಿಸುವುದರಿಂದ ಅವಕಾಶದ ಜತೆಗೆ ಬರವಣಿಗೆ ಕೌಶಲ್ಯ ವೃದ್ಧಿಸಿಕೊಳ್ಳಲು ಸಹ ಅನುಕೂಲವಾಗುತ್ತದೆ ಎಂದರು.

    ‘ಕುವೆಂಪು ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದ ಬಾಪೂಜಿನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಗಾಯತ್ರಿ, ಕುವೆಂಪು ಸಾಹಿತ್ಯ ಕಾಲಮಿತಿಯಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲ. ಅವರ ಸಾಹಿತ್ಯದ ಒಂದೊಂದು ಪ್ರಕಾರದ ಬಗ್ಗೆಯೂ ಅಧ್ಯಯನ ಮಾಡಲು, ಅವಲೋಕನ ನಡೆಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಸೃಜನಾತ್ಮಕ, ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕಥೆ, ಕಾದಂಬರಿ ಕ್ಷೇತ್ರಗಳಿಗೆ ಕುವೆಂಪು ಸಾಹಿತ್ಯದ ಕೊಡುಗೆ ಅಪಾರ ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಎನ್.ಎಸ್.ಕುಮಾರ್ ಮಾತನಾಡಿ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯದ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಒಂದೇ ಬಗೆಯ ಯಶಸ್ಸಿನ ಉತ್ತುಂಗ ತಲುಪಿದವರು. ವಿಶ್ವದ ಯಾವುದೇ ಭಾಷೆಯಲ್ಲಿಯೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಈ ರೀತಿ ಸಾಹಿತ್ಯ ಸಾಧನೆ ಮಾಡಿದವರು ಇಲ್ಲ ಎಂದು ಅಭಿಪ್ರಾಯಪಟ್ಟರು.

    ಸಾಹಿತಿ ಬಸವರಾಜಪ್ಪ ಎಂ.ಬೀರನಕೆರೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ಎನ್.ಸುಂದರ್​ರಾಜ್, ರುದ್ರಮುನಿ ಸಜ್ಜನ್, ಚನ್ನಬಸಪ್ಪ ನ್ಯಾಮತಿ, ಜಿ.ಎಸ್.ಅನಂತ್, ಹಸನ್ ಬೆಳ್ಳಿಗನೂಡು, ಜಯಣ್ಣ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts