More

    ಕನ್ನಡವನ್ನು ವಿಶ್ವಮಟ್ಟಕ್ಕೇರಿಸಿದ ಕುವೆಂಪು

    ಬೆಟ್ಟದಪುರ: ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ರಚಿಸುವ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು, ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಏರಿಸಿದ ಮೇರು ಸದೃಶ ಸಾಹಿತಿ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್ ಅಭಿಪ್ರಾಯಪಟ್ಟರು.

    ತಾಲೂಕಿನ ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಟ್ಟದಪುರ ಹೋಬಳಿ ಘಟಕ ಮತ್ತು ಅಮೋಘ ವರ್ಷ, ಅಮೃತ ವರ್ಷಿಣಿ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಪ ಹೇಳಿದ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ನುಡಿಯಂತೆ ಬಾಳಿ ಬದುಕಿ ಪಂಚಮಂತ್ರಗಳಾದ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಟಿಯ ಹೊಸಬೆಳಕನ್ನು ತಮ್ಮ ಮೇರುಕೃತಿಗಳಲ್ಲಿ ಮೂಡಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಯುಗದ ಕವಿ ಜಗದ ಕವಿ ಆಗಿದ್ದಾರೆ ಎಂದು ಹೇಳಿದರು.
    ನುಡಿದಂತೆ ನಡೆದ, ಬರೆದಂತೆ ಬದುಕಿದ ಅವರು ತಮ್ಮ ಮಂತ್ರ ಮಾಂಗಲ್ಯ ಕೃತಿಯ ಮೂಲಕ ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಿ ಮೌಢ್ಯತೆ ಧಿಕ್ಕರಿಸಿದರು. ದೇವಮಾನವನಾಗಿ ಹುಟ್ಟಿದ ಮನುಷ್ಯ ಅಲ್ಪ ಮಾನವನಾಗದೆ ವಿಶ್ವಮಾನವನಾಗಿ ಬಾಳಬೇಕು ಎಂದು ಹೇಳಿದರು.
    ಶಿಕ್ಷಣ ತಜ್ಞ ಬಿ.ವಿ.ಮಂಜುನಾಥ್ ಮಾತನಾಡಿ, ಕುವೆಂಪು ಅವರ ಕೃತಿಗಳು ಬದುಕಿಗೆ ದಾರಿದೀಪ ಆಗಿದ್ದು, ಅವುಗಳ ಅಧ್ಯಯನದ ಮೂಲಕ ಆದರ್ಶ ಜೀವನ ನಡೆಸಲು ಸಾಧ್ಯ. ಅವರ ಆದರ್ಶಗಳನ್ನು ಇಂದಿನ ಯುವ ಪಿಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಜಯಂತಿ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಕುವೆಂಪು ಅವರ ಬದುಕು ಬರಹ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬೆಟ್ಟದಪುರದ ಸರ್ಕಾರಿ ಪ್ರೌಢಶಾಲೆಯ ಕೋಮಲ, ಡಿಟಿಎಂಎನ್ ಶಾಲೆಯ ತನು, ಎಸ್.ಎಂ.ಎಸ್ ಶಾಲೆಯ ಲಕ್ಷ್ಮೀ ಅವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಎಸ್.ಎಂ.ಎಸ್ ವಿದ್ಯಾಸಂಸ್ಥೆಯ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕುವೆಂಪು ವೃತ್ತದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.
    ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ನವೀನ್‌ಕುಮಾರ್, ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಆಲೂರು ಮಹೇಶ್, ಗೌರವಾಧ್ಯಕ್ಷ ಸಣ್ಣಸ್ವಾಮಿಗೌಡ, ಪದಾಧಿಕಾರಿಗಳಾದ ಬಿ.ಜೆ.ದೇವರಾಜ್, ಬೆಕ್ಕರೆ ಮನೋಹರ್, ಮಲ್ಲೇಶ್, ಅಂದಾನೆಯ, ನಂಜುಂಡಸ್ವಾಮಿ, ರವಿ, ಮುರುಳಿ ಮತ್ತಿತರರಿದ್ದರು.

    31ಬಿಟಪಿ01: ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ನಡೆದ ಕುವೆಂಪು ಅವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರದ ಕೋಮಲ, ಡಿ.ಟಿ.ಎಂ.ಎನ್ ಶಾಲೆಯ ತನು, ಎಸ್.ಎಂ.ಎಸ್ ಶಾಲೆಯ ಲಕ್ಷ್ಮೀ ಅವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಗೊರಳ್ಳಿ ಜಗದೀಶ್, ನವೀನ್ ಕುಮಾರ್, ಬಿ.ವಿ.ಮಂಜುನಾಥ್, ಸಣ್ಣಸ್ವಾಮಿಗೌಡ, ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts